Site icon Vistara News

Surrogacy Leaves: ಬಾಡಿಗೆ ತಾಯ್ತನದ ನಿಯಮ ಬದಲಿಸಿದ ಕೇಂದ್ರ; ಇನ್ನು ಸಿಗಲಿದೆ 6 ತಿಂಗಳು ರಜೆ!

Surrogacy Leaves

Centre amends surrogacy rules, maternity leaves to govt employees extended to 180 day

ನವದೆಹಲಿ: ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆಯುವವರು, ಬಾಡಿಗೆ ತಾಯಿಯಾಗುವವರಿಗೆ ಅನುಕೂಲವಾಗುವ ದಿಸೆಯಲ್ಲಿ ಕೇಂದ್ರ ಸರ್ಕಾರವು ಮಹತ್ವದ ತಿದ್ದುಪಡಿ ಮಾಡಿದೆ. ಕೇಂದ್ರ ಸರ್ಕಾರವು (Central Government) ಕೇಂದ್ರೀಯ ನಾಗರಿಕ ಸೇವೆಗಳ (ರಜೆ) ನಿಯಮಗಳಿಗೆ (1972) ತಿದ್ದುಪಡಿ (Central Civil Services (Leave) Rules) ತಂದಿದ್ದು, ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆದ ಮಹಿಳೆ, ಬಾಡಿಗೆ ತಾಯಿಯಾದವರು ಕೇಂದ್ರ ಸರ್ಕಾರಿ ನೌಕರರಾಗಿದ್ದರೆ, ಅವರಿಗೆ 180 ದಿನ ಅಂದರೆ, 6 ತಿಂಗಳು ರಜೆ (Surrogacy Leaves) ಪಡೆಯುವ ಅವಕಾಶವನ್ನು ನೀಡಿದೆ.

ಬಾಡಿಗೆ ತಾಯ್ತನದ ರಜೆ ಕುರಿತು ತಿದ್ದುಪಡಿ ತಂದಿರುವ ಬಗ್ಗೆ ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ಜೂನ್‌ 18ರಂದು ಅಧಿಸೂಚನೆ ಹೊರಡಿಸಿದೆ. ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆಯುವ ಮಹಿಳೆಯು ಕೇಂದ್ರ ಸರ್ಕಾರಿ ನೌಕರರಾಗಿದ್ದರೆ, ಅವರಿಗೆ ಇನ್ನು ಮುಂದೆ 6 ತಿಂಗಳು ಹೆರಿಗೆ ರಜೆ ಸಿಗಲಿದೆ. ಇನ್ನು, ಬಾಡಿಗೆ ತಾಯಿಯಾಗುವವರು ಕೇಂದ್ರ ಸರ್ಕಾರಿ ನೌಕರರಾಗಿದ್ದು, ಇಬ್ಬರು ಅಥವಾ ಒಂದೇ ಮಗು ಇದ್ದರೆ, ಅವರು ಕೂಡ 6 ತಿಂಗಳು ರಜೆ ಪಡೆಯಲಿದ್ದಾರೆ. ಅಷ್ಟೇ ಅಲ್ಲ, ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆಯುವ ವ್ಯಕ್ತಿಯು ಮಗು ಜನಿಸಿದ 6 ತಿಂಗಳೊಳಗೆ 15 ದಿನ ಪಿತೃತ್ವ ರಜೆ ಪಡೆಯಬಹುದಾಗಿದೆ.

ಬಾಡಿಗೆ ತಾಯ್ತನ ಎಂದರೇನು?

ಮಕ್ಕಳಾಗದ ದಂಪತಿ, ಪುರುಷ ಅಥವಾ ಮಹಿಳೆಗಾಗಿ ಇನ್ನೊಬ್ಬ ಮಹಿಳೆಯು ಗರ್ಭ ಧರಿಸಿ, ಮಕ್ಕಳಾಗದವರಿಗೆ ಮಗುವನ್ನು ಹೆತ್ತುಕೊಡುವ ಪ್ರಕ್ರಿಯೆಯನ್ನೇ ಬಾಡಿಗೆ ತಾಯ್ತನ ಎಂದು ಕರೆಯುತ್ತಾರೆ. ನಾನಾ ಕಾರಣಗಳಿಂದ ಮಕ್ಕಳಾಗದವರು ಮಗುವನ್ನು ಹೊಂದುವ ಆಸೆಯನ್ನು ಬಾಡಿಗೆ ತಾಯ್ತನದ ಮೂಲಕ ಈಡೇರಿಸಿಕೊಳ್ಳುತ್ತಾರೆ. ಬಾಡಿಗೆ ತಾಯಿಯ ಅಂಡಾಣು, ಮಗುವನ್ನು ಪಡೆಯಲು ಬಯಸಿದ ವ್ಯಕ್ತಿ ಅಥವಾ ವೀರ್ಯ ದಾನಿಯಿಂದ ಪಡೆದ ವೀರ್ಯವನ್ನು ಬಳಸಿ ಮಗುವನ್ನು ಪಡೆಯುತ್ತಾರೆ. ಅಲ್ಲದೆ, ಮಗುವನ್ನು ಬಯಸಿದ ತಂದೆ ಹಾಗೂ ತಾಯಿಯ ವೀರ್ಯಾಣು-ಅಂಡಾಣುವನ್ನು ಬಳಸಿ, ಬೇರೊಬ್ಬ ಮಹಿಳೆಯ ಗರ್ಭದಲ್ಲಿ ಭ್ರೂಣವನ್ನು ಬೆಳೆಸುವ ಪದ್ಧತಿಯೂ ಇದೆ. ಬಾಡಿಗೆ ತಾಯಿಯಾಗುವವರು ಹಣ ಸೇರಿ ಯಾವುದೇ ರೀತಿಯ ಲಾಭಕ್ಕಾಗಿ ಬೇರೆಯವರಿಗೆ ಮಗು ಹೆತ್ತು ಕೊಡಬಾರದು ಎಂಬ ನಿಯಮ ಇದೆ.

ದೇಶದಲ್ಲಿ ಬಾಡಿಗೆ ತಾಯ್ತನವನ್ನು 2002ರಲ್ಲಿ ಕಾನೂನುಬದ್ಧ ಎಂಬುದಾಗಿ ಘೋಷಿಸಲಾಗಿದೆ. ಆದರೆ, 2022ರಲ್ಲಿ ಬಾಡಿಗೆ ತಾಯ್ತನ (ನಿಯಂತ್ರಣ) ನಿಯಮಗಳನ್ನು ಜಾರಿಗೆ ತರುವವರೆಗೂ ಬಾಡಿಗೆ ತಾಯ್ತನಕ್ಕೆ ನಿಯಂತ್ರಣ ಎಂಬುದು ಇರಲಿಲ್ಲ. ಅಷ್ಟೇ ಅಲ್ಲ, 2024ರ ಫೆಬ್ರವರಿಯಲ್ಲಿ ಕೇಂದ್ರ ಸರ್ಕಾರವು ನಿಯಮಗಳಿಗೆ ತಿದ್ದುಪಡಿ ಮಾಡಿದೆ. ವೈದ್ಯಕೀಯ ಕಾರಣಗಳಿಗಾಗಿ ದಾನಿಯ ವೀರ್ಯಾಣುವನ್ನು ಬಳಸಬಹುದು ಎಂಬ ನಿಯಮವನ್ನು ಸರ್ಕಾರ ಜಾರಿಗೆ ತಂದಿದೆ.

ಇದನ್ನೂ ಓದಿ: Surrogacy : 57-46 ವರ್ಷದ ದಂಪತಿ ಬಾಡಿಗೆ ತಾಯಿ ಮೂಲಕ ಮಗು ಪಡೆಯಲು 3 ಷರತ್ತು

Exit mobile version