ನವದೆಹಲಿ: ಪ್ರತಿಪಕ್ಷಗಳು ಮತ್ತು ಎನ್‌ಡಿಎ ಮಿತ್ರಪಕ್ಷವಾದ ಎಲ್‌ಜೆಪಿಯ ವಿರೋಧದ ಹಿನ್ನೆಲೆಯಲ್ಲಿ ಸಚಿವಾಲಯಗಳ ಉನ್ನತ ಹುದ್ದೆಗಳಿಗೆ ಲ್ಯಾಟರಲ್ ಎಂಟ್ರಿ (Lateral Entry ) ಕೊಡುವ ಜಾಹೀರಾತನ್ನು ರದ್ದುಗೊಳಿಸುವಂತೆ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಮಂಗಳವಾರ ಕೇಂದ್ರ ಲೋಕಸೇವಾ ಆಯೋಗಕ್ಕೆ (UPSC( ಮನವಿ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ನಿರ್ದೇಶನದ ಪ್ರಕಾರ ಜಿತೇಂದ್ರ ಸಿಂಗ್ ಯುಪಿಎಸ್ಸಿ ಅಧ್ಯಕ್ಷೆ ಪ್ರೀತಿ ಸುದನ್ ಅವರಿಗೆ ಪತ್ರ ಬರೆದಿದ್ದಾರೆ.
ಸಂವಿಧಾನದಲ್ಲಿ ಪ್ರತಿಪಾದಿಸಲಾಗಿರುವ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ತತ್ವಗಳ ಪ್ರಕಾರ ಮೀಸಲಾತಿಯ ನಿಯಮಗಳಿಗೆ ಹೊಂದಿಕೊಳ್ಳಲು ಲ್ಯಾಟರಲ್ ಎಂಟ್ರಿಯ ಅವಶ್ಯಕತೆಯಿತ್ತು ಎಂದು ಸಿಂಗ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ. ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ನೀಡುವುದರಿಂದ ಇತಿಹಾಸ ಕಂಡಿರುವ ಅನ್ಯಾಯಗಳನ್ನು ಪರಿಹರಿಸುವ ಹಾಗೂ ಒಳಗೊಳ್ಳುವಿಕೆಯನ್ನು ಹೆಚ್ಚಿಸಲು ಸಾಧ್ಯ ಎಂಬುದು ಪ್ರಧಾನಿ ಮೋದಿಯವರ ಆಶಯವಾಗಿತ್ತು ಎಂಬುದಾಗಿ ಅವರು ಬರೆದಿದ್ದಾರೆ.
ಹುದ್ದೆಗಳನ್ನು ವಿಶೇಷ ಎಂದು ಪರಿಗಣಿಸಲಾಗಿರುವುದರಿಂದ ಮತ್ತು ಏಕ-ಕೇಡರ್ ಹುದ್ದೆಗಳಾಗಿ ನಿಗದಿ ಮಾಡಿರುವ ಕಾರಣ , ಈ ನೇಮಕಾತಿಗಳಲ್ಲಿ ಮೀಸಲಾತಿಗೆ ಯಾವುದೇ ಅವಕಾಶವಿಲ್ಲ” ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಈ ಜಾಹೀರಾತನ್ನು ಕಾಂಗ್ರೆಸ್ ಪಕ್ಷ ಟೀಕಿಸಿತ್ತು. “ದಲಿತರು, ಒಬಿಸಿಗಳು ಮತ್ತು ಆದಿವಾಸಿಗಳ ಮೇಲಿನ ದಾಳಿ” ಎಂದು ತೀವ್ರವಾಗಿ ಖಂಡಿಸಿತ್ತು. ಜೈವಿಕವಲ್ಲದ ಪ್ರಧಾನಿಯ ಅಡಿಯಲ್ಲಿ ಕೆಲಸ ಮಾಡುವ ಕೇಂದ್ರ ಸಚಿವರೊಬ್ಬರು ದಿನಾಂಕವಿಲ್ಲದೆ ಸಾಂವಿಧಾನಿಕ ಪ್ರಾಧಿಕಾರಕ್ಕೆ ಬರೆದ ಪತ್ರ. ಇದು ಎಂತಹ ಕರುಣಾಜನಕ ಆಡಳಿತ” ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದರು.
45 ಹುದ್ದೆಗಳ ಭರ್ತಿಗೆ ಲ್ಯಾಟರಲ್ ಎಂಟ್ರಿ ಜಾಹೀರಾತು
ಕಳೆದ ವಾರ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) 45 ಜಂಟಿ ಕಾರ್ಯದರ್ಶಿಗಳು, ನಿರ್ದೇಶಕರು ಮತ್ತು ಉಪ ಕಾರ್ಯದರ್ಶಿಗಳ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಿತ್ತು. ಕೇಂದ್ರ ಸರ್ಕಾರದ ಇಲಾಖೆಗಳಿಗೆ ಖಾಸಗಿ ವಲಯ ಸೇರಿದಂತೆ ತಜ್ಞರನ್ನು ನೇಮಿಸುವ ಗುರಿಯನ್ನು ಇದು ಹೊಂದಿತ್ತು. ಈ ವಿಧಾನವನ್ನು 2017ರಲ್ಲಿ ನೀತಿ ಆಯೋಗ ಶಿಫಾರಸ್ಸು ಮಾಡಿತ್ತು. ಕೇಂದ್ರ ಸಚಿವಾಲಯಗಳಿಗೆ ಪ್ರತಿಭೆಗಳನ್ನು ಕರೆತರುವ ಉದ್ದೇಶ ಇದಾಗಿದೆ.
ಯುಪಿಎಸಿಯ ಈ ಘೋಷಣೆಯು ರಾಜಕೀಯ ಕೋಲಾಹಲವನ್ನು ಸೃಷ್ಟಿಸಿತ್ತು. ಕನಿಷ್ಠ ಎರಡು ಎನ್‌ಡಿಎ ಪಾಲುದಾರರಾದ ಜನತಾದಳ (ಯುನೈಟೆಡ್) ಮತ್ತು ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷ (ಎಲ್ಜೆಪಿ) ಈ ಕ್ರಮವನ್ನು ವಿರೋಧಿಸಿದ್ದವು.
“ಲ್ಯಾಟರ್ ಎಂಟ್ರಿ ದಲಿತರು, ಒಬಿಸಿಗಳು ಮತ್ತು ಆದಿವಾಸಿಗಳ ಮೇಲಿನ ದಾಳಿಯಾಗಿದೆ. ಬಿಜೆಪಿಯ ರಾಮರಾಜ್ಯದ ವಿಕೃತ ಆವೃತ್ತಿಯು ಸಂವಿಧಾನವನ್ನು ನಾಶಪಡಿಸಲು ಮತ್ತು ಬಹುಜನರಿಂದ ಮೀಸಲಾತಿಯನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತದೆ” ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದರು.
ಇದನ್ನು ಓದಿ : HD Kumaraswamy : ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲು 2ನೇ ಬಾರಿ ರಾಜ್ಯಪಾಲರ ಅನುಮತಿ ಕೋರಿದ ಎಸ್‌ಐಟಿ
ಬಿಜೆಪಿ ಮಿತ್ರ ಮತ್ತು ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಕೂಡ ಮೀಸಲಾತಿ ಇಲ್ಲದೆ ಸರ್ಕಾರಿ ಹುದ್ದೆಗಳಲ್ಲಿ ನೇಮಕಾತಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು. “ಯಾವುದೇ ಸರ್ಕಾರಿ ನೇಮಕಾತಿಯಲ್ಲಿ ಮೀಸಲಾತಿ ನಿಬಂಧನೆಗಳು ಇರಬೇಕು.” ಎಂದು ಅವರು ಹೇಳಿದರು.
1970ರ ದಶಕದಿಂದಲೂ ಕಾಂಗ್ರೆಸ್ ನೇತೃತ್ವದ ಸರ್ಕಾರಗಳ ಅವಧಿಯಲ್ಲಿ ಲ್ಯಾಟರ್ ಎಂಟ್ರಿ ನಡೆಯುತ್ತಿದೆ ಎಂದು ಕೇಂದ್ರ ಸರ್ಕಾರ ಸಮರ್ಥಿಸಿಕೊಂಡಿತ್ತು. ಈ ಕ್ರಮವು ಸೇವೆಗಳಲ್ಲಿ ಎಸ್ಸಿ / ಎಸ್ಟಿಗಳ ನೇಮಕಾತಿಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದರು. ಮನಮೋಹನ್ ಸಿಂಗ್ ಅವರನ್ನು 1976 ರಲ್ಲಿ ಲ್ಯಾಟರಲ್ ಎಂಟ್ರಿ ಮಾರ್ಗದ ಮೂಲಕ ಹಣಕಾಸು ಕಾರ್ಯದರ್ಶಿಯನ್ನಾಗಿ ಮಾಡಲಾಗಿತ್ತು ಎಂದು ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಹೇಳಿದ್ದಾರೆ.