Site icon Vistara News

CET 2024: ಸಿಇಟಿ ಔಟ್‌ ಆಫ್‌ ಸಿಲಬಸ್‌ ಪ್ರಶ್ನೆ; ಪರಿಶೀಲನೆಗೆ ತಜ್ಞರ ಸಮಿತಿ ರಚಿಸಿದ ಸರ್ಕಾರ

CET 2024

ಬೆಂಗಳೂರು: ಸಿಇಟಿ ಪರೀಕ್ಷೆಯಲ್ಲಿ (CET 2024) ಪಠ್ಯಕ್ರಮದ ಹೊರತಾದ ಪ್ರಶ್ನೆಗಳಿಂದ (Out of syllabus questions) ವಿದ್ಯಾರ್ಥಿಗಳಲ್ಲಿ ಆತಂಕ ಹಿನ್ನೆಲೆಯಲ್ಲಿ ಈ ಬಗ್ಗೆ ಪರಿಶೀಲಿಸಲು ರಾಜ್ಯ ಸರ್ಕಾರದಿಂದ ತಜ್ಞರ ಸಮಿತಿ ರಚನೆ ಮಾಡಲಾಗಿದೆ. ಪ್ರತಿ 4 ವಿಷಯಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ತಜ್ಞರ ಸಮಿತಿ ರಚಿಸಿ ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ್ದು, ತಜ್ಞರ ಸಮಿತಿಯು ವರದಿಯನ್ನು ತಕ್ಷಣವೇ ನೀಡುವಂತೆ ಇಲಾಖೆ ಸೂಚನೆ ನೀಡಿದೆ.

ಸಿಇಟಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ‘ಕೆಇಎ’ ಯು ಕಾರ್ಯನಿರ್ವಹಿಸಲಿದೆ. ತಜ್ಞರ ಸಮಿತಿಯ ವರದಿಯನ್ನು ಆಧರಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ವಿದ್ಯಾರ್ಥಿಗಳ ಹಿತಾಸಕ್ತಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಮತ್ತು ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಶಿಕ್ಷಣ ಇಲಾಖೆ (ಉನ್ನತ ಶಿಕ್ಷಣ) ಸರ್ಕಾರದ ಪ್ರಧಾನ ಕಾರ್ಯದರ್ಶಿ ಶ್ರೀಕರ್‌ ಎಂ.ಎಸ್‌ ತಿಳಿಸಿದ್ದಾರೆ.

ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು (ಸಿಇಟಿ) ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಏ.18 ಮತ್ತು 19ರಂದು ನಡೆಸಲಾಗಿತ್ತು. 4 ವಿಷಯಗಳಿಗೆ (ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರ) ನಡೆದಿದ್ದ ಸಿಇಟಿ ಪರೀಕ್ಷೆಗೆ ರಾಜ್ಯಾದ್ಯಂತ 3 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗಿದ್ದರು. ಪರೀಕ್ಷೆ ನಡೆದ ನಂತರ, ಪತ್ರಿಕೆಗಳಲ್ಲಿ ಹಲವು ಪ್ರಶ್ನೆಗಳು ಸಿಇಟಿಯ ಪಠ್ಯಕ್ರಮದ ಹೊರತಾಗಿವೆ ಎಂದು ವಿದ್ಯಾರ್ತಿಗಳು ಆರೋಪಿಸಿದ್ದರು. ಆದ್ದರಿಂದ, ಗ್ರೇಸ್ ಅಂಕಗಳನ್ನು ಒದಗಿಸುವಂತೆ ಅಥವಾ ಪರೀಕ್ಷೆಯನ್ನು ಮರು ನಡೆಸುವಂತೆ ಒತ್ತಾಯ ಕೇಳಿಬಂದಿದೆ.

ಇದನ್ನೂ ಓದಿ | CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

ಪ್ರಶ್ನೆಗಳಿಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಕೆಇಎಯು ವಿದ್ಯಾರ್ಥಿಗಳಿಗೆ ಏ.27ರವರೆಗೆ ಅವಕಾಶ ನೀಡಿದೆ. ಈ ಸಂಬಂಧ ಸರ್ಕಾರಕ್ಕೆ ವಿಸ್ತೃತ ವರದಿ ಸಲ್ಲಿಸುವಂತೆ ‘ಕೆಇಎ’ ಗೆ ಸೂಚಿಸಲಾಗಿದೆ. ಏತನ್ಮಧ್ಯೆ, ಈ ಪ್ರಕರಣದ ಬಗ್ಗೆ ಸರ್ಕಾರವು ಪರಿಶೀಲನೆ ನಡೆಸಿದೆ ಮತ್ತು ಸಿಇಟಿಯ ಪಠ್ಯಕ್ರಮದಿಂದ ಹೊರತಾಗಿರುವ ಪ್ರಶ್ನೆಗಳ ಸಂಖ್ಯೆಗಳನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಪ್ರತಿ 4 ವಿಷಯಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ತಜ್ಞರ ಸಮಿತಿಯನ್ನು ರಚಿಸಿದೆ. ತಜ್ಞರ ಸಮಿತಿಯು ತನ್ನ ವರದಿಯನ್ನು ತಕ್ಷಣವೇ ನೀಡುವಂತೆ ಆದೇಶಿಸಲಾಗಿದೆ. ಸಿಇಟಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ‘ಕೆಇಎ’ ಯು ಕಾರ್ಯನಿರ್ವಹಿಸಲಿದೆ. ತಜ್ಞರ ಸಮಿತಿಯ ವರದಿಯನ್ನು ಆಧರಿಸಿ ಈ ಬಗ್ಗೆ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ವಿದ್ಯಾರ್ಥಿಗಳ ಹಿತಾಸಕ್ತಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಮತ್ತು ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಶಿಕ್ಷಣ ಇಲಾಖೆ (ಉನ್ನತ ಶಿಕ್ಷಣ) ಸರ್ಕಾರದ ಪ್ರಧಾನ ಕಾರ್ಯದರ್ಶಿ ಶ್ರೀಕರ್‌ ಎಂ.ಎಸ್‌ ತಿಳಿಸಿದ್ದಾರೆ.

Exit mobile version