ಬೆಂಗಳೂರು: ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಇತರ ವೃತ್ತಿಪರ ಕೋರ್ಸ್‌ಗಳ (CET/NEET) ಪ್ರವೇಶ ಪ್ರಕ್ರಿಯೆ ಆರಂಭವಾದ ಮೊದಲ ದಿನವೇ (ಶನಿವಾರ) ದಾಖಲೆಯ 16 ಸಾವಿರಕ್ಕೂ ಹೆಚ್ಚು ಮಂದಿ ತಮ್ಮ ಇಚ್ಛೆಯ ಛಾಯ್ಸ್ ದಾಖಲು ಮಾಡಿದ್ದಾರೆ. 3000 ಕ್ಕೂ ಹೆಚ್ಚು ಮಂದಿ ಶುಲ್ಕ ಪಾವತಿ ಮಾಡಿ, ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಂಡಿದ್ದಾರೆ.
ಇದೇ ಮೊದಲ ಬಾರಿಗೆ ಇಂಟರ್ ನೆಟ್ ಬ್ಯಾಂಕಿಂಗ್, ಡೆಬಿಟ್/ಕೆಡಿಟ್ ಕಾರ್ಡ್ ಮೂಲಕ ಶುಲ್ಕ ಪಾವತಿಸುವುದಕ್ಕೂ ಅವಕಾಶ ಕಲ್ಪಿಸಿದ್ದರಿಂದ ಇಡೀ ಪ್ರಕ್ರಿಯೆ ಸರಳವಾಯಿತು. ಇದರಿಂದ ಪೋಷಕರಿಗೂ ಸಂತಸವಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ. ಚಲನ್ ಡೌನ್ ಲೋಡ್ ಮಾಡಿಕೊಂಡು ಬ್ಯಾಂಕಿಗೆ ಹೋಗಿ ಶುಲ್ಕ ಪಾವತಿಸುವ ವ್ಯವಸ್ಥೆ ಕೂಡ ಇದ್ದು, ಅದರ ಮೂಲಕವೂ 2000 ಮಂದಿ (ರಾತ್ರಿ 8ಕ್ಕೆ) ಶುಲ್ಕ ಪಾವತಿಸಿದ್ದಾರೆ. ಆನ್ ಲೈನ್ ಮೂಲಕ ಒಂದು ಸಾವಿರ ಮಂದಿ ಪಾವತಿಸಿದ್ದಾರೆ ಎಂದು ವಿವರಿಸಿದ್ದಾರೆ.
ವೈದ್ಯಕೀಯ ಕೋರ್ಸ್ ಪ್ರವೇಶ ಪಡೆದ ಕೆಲವರು ತಮ್ಮ ಗರಿಷ್ಠ ಮೊತ್ತದ ಶುಲ್ಕವನ್ನೂ (6.09 ಲಕ್ಷ) ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಪಾವತಿ ಮಾಡಿದ್ದಾರೆ. ಅಭ್ಯರ್ಥಿಗಳು ಅಥವಾ ಅವರ ಪೋಷಕರು ತಮ್ಮ ಬ್ಯಾಂಕಿನಿಂದ ಪಾವತಿ ಮಾಡುವ ಮಿತಿಯನ್ನು ಹೆಚ್ವಿಸಿಕೊಳ್ಳಲು ಅವಕಾಶ ಇದ್ದು, ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು. ಎಚ್ ಡಿಎಫ್ ಸಿ ಬ್ಯಾಂಕ್ ತನ್ನ ಗ್ರಾಹರಿಗೆ ಒಮ್ಮೆಗೇ ಗರಿಷ್ಠ 50 ಲಕ್ಷ ರೂಪಾಯಿ ವರೆಗೆ ವರ್ಗಾಯಿಸಲು ಅವಕಾಶ ನೀಡಿದೆ. ಇದೇ ರೀತಿ ಇತರ ಬ್ಯಾಂಕ್ ಗಳೂ ಈ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದ್ದು ಇದರಿಂದ ಎನ್ಆರ್ ಐ ಮತ್ತು ಮ್ಯಾನೇಜ್ಮೆಂಟ್ ಸೀಟುಗಳ ಶುಲ್ಕವನ್ನು ಒಮ್ನೆಗೆ ಪಾವತಿಸಲು ಅನುಕೂಲವಾಗಲಿದೆ ಎಂದಿದ್ದಾರೆ. ಹೊಸ ವ್ಯವಸ್ಥೆಯಿಂದಾಗಿ ಬ್ಯಾಂಕ್ ರಜೆ ಇತ್ಯಾದಿ ಕಾರಣಕ್ಕೆ ಶುಲ್ಕ ಪಾವತಿ ಮಾಡಲು ಸಾಧ್ಯವಾಗಲಿಲ್ಲ ಎನ್ನುವ ದೂರುಗಳು ಕಡಿಮೆ ಆಗಬಹುದು. ನಾಳೆ ಭಾನುವಾರ ಇದ್ದರೂ ಶುಲ್ಕ ಪಾವತಿಗೆ ಯಾವ ಸಮಸ್ಯೆಯೂ ಇರುವುದಿಲ್ಲ ಎಂದು ಅವರು ಹೇಳಿದ್ದಾರೆ. ಯುಪಿಐ ಪಾವತಿ ವ್ಯವಸ್ಥೆ ಮೂಲಕವೂ ಶುಲ್ಕ ಪಾವತಿ ಮಾಡಬಹುದಾಗಿದೆ. ಒಟ್ಟಾರೆ ಪಾವತಿ ವ್ಯವಸ್ಥೆಯನ್ನು ಜನಸ್ನೇಹಿ ಮಾಡಿರುವ ಕಾರಣಕ್ಕೆ ತಾಂತ್ರಿಕ ಸಮಸ್ಯೆಗಳು ಕಡಿಮೆ ಆಗುವ ವಿಶ್ವಾಸವಿದೆ ಎಂದರು.
ಸರ್ವರ್ ಸಮಸ್ಯೆ
ಚಾಯ್ಸ್ ಆಯ್ಕೆ ನಂತರ ಶುಲ್ಕ ಪಾವತಿ ಮಾಡಲು ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಒಮ್ಮೆಗೇ ಪ್ರಯತ್ನ ನಡೆಸಿದ್ದರಿಂದ ಕೆಲವೊಮ್ಮೆ ಸರ್ವರ್ ನಿಧಾನ/ ಇನ್ನು ಕೆಲವೊಮ್ಮೆ ಸ್ಥಗಿತಗೊಂಡ ಪ್ರಸಂಗ ಕೂಡ ನಡೆಯಿತು. ತಾಂತ್ರಿಕ ಸಿಬ್ಬಂದಿ ಸರಿ ಮಾಡಿ ನಂತರ ಸಹಜ ಸ್ಥಿತಿಗೆ ತಂದರು.