Site icon Vistara News

Chandrayaan-3 : ಪುರಾಣದ ಪ್ರಕಾರ ಚಂದ್ರ ಹುಟ್ಟಿದ್ದಾದರೂ ಹೇಗೆ? ಜ್ಯೋತಿಷ್ಯ ಶಾಸ್ತ್ರ ಹೇಳುವುದೇನು?

chandra in astrology

ಭಾರತೀಯ ಬಾಹ್ಯಾಕಾಶ ಸಂಸ್ಥೆ ʻಇಸ್ರೊʼ (ISRO) ಚಂದ್ರಯಾನ ಸರಣಿಯ (moon mission) ಮೂರನೇ ಚಂದ್ರಯಾನ-3 (Chandrayaan-3) ಉಡಾವಣೆ ಇಂದು ನಡೆಯಲಿದೆ. ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವದಲ್ಲಿ (south pole) ಹೆಜ್ಜೆಯೂರಲಿದ್ದು, ಚಂದ್ರನ ಕುರಿತು ಅಧ್ಯಯನ ನಡೆಸಲಿದೆ.

ಭಾರತೀಯರ ಪಾಲಿಗೆ ಚಂದ್ರ ಜೀವನದ ಅವಿಭಾಜ್ಯ ಅಂಗ. ʻಚಂದ ಮಾಮʼನ ಕತೆಗಳನ್ನು ಕೇಳಿಕೊಂಡೇ ಬೆಳೆದ ನಮಗೆಲ್ಲಾ ಚಂದ್ರನ ಕುರಿತು ಕುತೂಹಲ ಇದ್ದಿದ್ದೇ. ಈ ಕುತೂಹಲ ತಣಿಸುವ ಕೆಲಸವನ್ನು ಇಸ್ರೊ ಮಾಡಿಕೊಂಡು ಬಂದಿದೆ, ಮಾಡುತ್ತಲೇ ಇದೆ. ಹೀಗಾಗಿ ಇಂದಿನ ಚಂದ್ರಯಾನ-3 ಕ್ಕೆ ಸಾಕಷ್ಟು ಮಹತ್ವವಿದೆ.

ನಮ್ಮ ಜ್ಯೋತಿಷ್ಯ ಶಾಸ್ತ್ರದಲ್ಲಿ ಚಂದ್ರನಿಗೆ ಎಲ್ಲಿಲ್ಲದ ಪ್ರಾಮುಖ್ಯತೆ. ಏಕೆಂಧರೆ ಎಲ್ಲರ ಜನ್ಮ ರಾಶಿಯನ್ನು ನಿರ್ಧರಿಸುವವನು ಚಂದ್ರ. ನವಗ್ರಹಗಳಲ್ಲಿ ಚಂದ್ರನಿಗೆ ವಿಶೇಷ ಸ್ಥಾನ ನೀಡಲಾಗಿದೆ. ಪಾಶ್ಚಾತ್ಯ ಜ್ಯೋತಿಷ್ಯವು ಸೂರ್ಯ ಆಧಾರಿತವಾಗಿದೆ ಆದರೆ ಭಾರತೀಯ ಜ್ಯೋತಿಷ್ಯವು ಚಂದ್ರ ಆಧಾರಿತವಾಗಿದೆ. ಭಾರತದ ಬಹುತೇಕ ಹಬ್ಬಗಳು ಚಂದ್ರನ ಚಲನೆಯನ್ನು ಆಧರಿಸಿವೆ.

ಅತ್ಯಂತ ವೇಗವಾಗಿ ಸಂಚರಿಸುವ ಗ್ರಹ ಕೂಡ ಚಂದ್ರ. ಹೀಗಾಗಿ ಯಾವುದೇ ರಾಶಿಯಲ್ಲಿ ಕಡಿಮೆ ಅವಧಿ ಇರುವ ಗ್ರಹ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಚಂದ್ರನು ಸುಮಾರು ಎರಡೂವರೆ ದಿನಗಳಲ್ಲಿ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಂಚರಿಸುತ್ತಾನೆ. ಜಾತಕಗಳಲ್ಲಿ ಸೂರ್ಯನ ಸ್ಥಾನಕ್ಕೆ ಅತ್ಯಂತ ಹೆಚ್ಚಿನ ಪ್ರಾಮುಖ್ಯತೆ ನೀಡಿದರೆ, ನಂತರದ ಸ್ಥಾನ ಚಂದ್ರನಿಗೆ ನೀಡಲಾಗುತ್ತದೆ.

ಮಂಗಳಕರ ಗ್ರಹ ಚಂದ್ರ

ಚಂದ್ರನನ್ನು ಮಂಗಳಕರ ಗ್ರಹವೆಂದು ಪರಿಗಣಿಸಲಾಗಿದೆ. ಕಟಕ ರಾಶಿಯ ಅಧಿಪತಿ ಚಂದ್ರ. ಇದರೊಂದಿಗೆ ರೋಹಿಣಿ, ಹಸ್ತ ಮತ್ತು ಶ್ರವಣ ನಕ್ಷತ್ರದ ಅಧಿಪತಿಯೂ ಹೌದು. ಚಂದ್ರನನ್ನು ನೀರಿನ ಅಂಶದ ದೇವರು ಎಂದು ಪರಿಗಣಿಸಲಾಗುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಚಂದ್ರನು ಅತ್ರಿ ಋಷಿ ಮತ್ತು ತಾಯಿ ಅನುಸೂಯಾ ಅವರ ಮಗ.
ಚಂದ್ರ ಗ್ರಹದಲ್ಲಿ ಹದಿನಾರು ಗುಳಿಗಳಿವೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ವಾಯುವ್ಯ ದಿಕ್ಕಿನ ದೇವತೆ ಎಂದು ಚಂದ್ರನನ್ನು ಪರಿಗಣಿಸಲಾಗುತ್ತದೆ.

ಭೂಮಿಗೆ ಅತ್ಯಂತ ಹತ್ತಿರವಾಗಿರುವ ಗ್ರಹ ಚಂದ್ರ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಚಂದ್ರನು ನಮ್ಮ ಮನಸ್ಸು ಪ್ರತಿನಿಧಿಸುತ್ತಾನೆ. ಚಂದ್ರನು ನಮ್ಮ ತಾಯಿಯ ರೂಪದಲ್ಲಿ ನಮ್ಮನ್ನೆಲ್ಲಾ ಪ್ರೀತಿಯಿಂದ ಕಾಣುವ ದೇವತೆ. ಇದು ಸ್ತ್ರೀತ್ವ, ಮಾತೃತ್ವ, ಕಾಳಜಿ, ಸಹಾನುಭೂತಿ, ಪ್ರೀತಿ ಮತ್ತು ಸೂಕ್ಷ್ಮತೆಯ ಪ್ರಾತಿನಿಧ್ಯವಾಗಿದೆ.
ಚಂದ್ರನ ದಿಕ್ಕು ವಾಯುವ್ಯ, ಲೋಹ-ಬೆಳ್ಳಿ, ರತ್ನ-ಮುತ್ತು, ದಿನ-ಸೋಮವಾರ, ಬಣ್ಣ-ಬಿಳಿ, ಲಿಂಗ-ಹೆಣ್ಣು, ಸ್ನೇಹಿತರು-ಸೂರ್ಯ, ಮಂಗಳ, ಗುರು.

ಜಾತಕದಲ್ಲಿ ಚಂದ್ರನು ಧನಾತ್ಮಕ ಸ್ಥಾನದಲ್ಲಿದ್ದರೆ ಆ ವ್ಯಕ್ತಿಯು ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಬಲಶಾಲಿಯಾಗಿರುತ್ತಾನೆ. ಜನರೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿರುತ್ತಾನೆ. ಉತ್ತಮ ಏಕಾಗ್ರತೆ ಮತ್ತು ಎಲ್ಲ ರೀತಿಯ ಸಾಮರ್ಥ್ಯವನ್ನು ಹೊಂದಿರುತ್ತಾನೆ. ಜಾತಕದಲ್ಲಿ ಚಂದ್ರನು ದುರ್ಬಲ ಸ್ಥಾನದಲ್ಲಿದ್ದರೆ ವ್ಯಕ್ತಿಯು ಮಾನಸಿಕವಾಗಿ ದುರ್ಬಲವಾಗಿರುತ್ತಾನೆ. ಅಳುವುದು, ನಗುವುದು ಮಾಡುತ್ತಿರುತ್ತಾನೆ. ಜನರೊಂದಿಗೆ ವ್ಯವಹರಿಸುವಲ್ಲಿ ಎಡುವುತ್ತಿರುತ್ತಾನೆ.

ಚಂದ್ರ ಹುಟ್ಟಿದ್ದು ಹೇಗೆ?
ಚಿತ್ರಕೂಟ ಅರಣ್ಯದಲ್ಲಿ ಸಪ್ತರ್ಷಿಗಳಲ್ಲಿ ಒಬ್ಬರಾದ ಅತ್ರಿ ಮಹರ್ಷಿಗಳು ತಮ್ಮ ಧರ್ಮಪತ್ನಿ ಅನುಸೂಯಾದೇವಿಯೊಂದಿಗೆ ವಾಸವಾಗಿದ್ದರು. ಅನುಸೂಯ ಪರಮ ಪತಿವ್ರತೆ. ಅತ್ರಿ ಮುನಿಗಳ ತಪೋನುಷ್ಠಾನಗಳು ಮತ್ತು ಅನುಸೂಯಾಳ ಪರಮ ಪತಿವ್ರತವು ಎಲ್ಲ ಲೋಕವನನು ತಲೂಪಿತ್ತು. ಇಂದ್ರಾದಿ ದೇವತೆಗಳು ಎಲ್ಲಿ ಇವರಿಬ್ಬರು ತಮ್ಮ ಪುಣ್ಯದ ಪ್ರಭಾವದಿಂದ ಸ್ವರ್ಗದ ಅಧಿಪತಿಗಳಾಗುತ್ತಾರೋ ಎಂದು ಹೆದರಿ, ತ್ರಿಮೂರ್ತಿಗಳ ಹತ್ತಿರ ಹೋಗಿ ಈ ಬಗ್ಗೆ ಹೇಳಿದರು. ಅನುಸೂಯಾಳನ್ನು ಅತಿಯಾಗಿ ಪ್ರಶಂಸಿಸಿ ತ್ರಿಮೂರ್ತಿಗಳಿಗೆ ಕೋಪ ಬರುವಂತೆ ಮಾಡಿದರು. ಆಕೆಯ ವ್ರತಭಂಗ ಮಾಡದಿದ್ದರೆ ಮೂರು ಲೋಕವನ್ನೂ ಆಕ್ರಮಣಮಾಡಿಕೊಂಡು ಬಿಡುತ್ತಾಳೆ ಎಂದು ಹೆದರಿಸಿದರು.
ಹೀಗಾಗಿ ತ್ರಿಮೂರ್ತಿಗಳು ಆಕೆಯ ಪತಿವ್ರತವನ್ನು ಪರೀಕ್ಷಿಸಲು ಕಾರಣಿಕ ವೇಷ ಹಾಕಿಕೊಂಡು ಅನಸೂಯಳಿದ್ದ ಆಶ್ರಮಕ್ಕೆ ಬಂದು ಭಿಕ್ಷೆಬೇಡಿದರು. ಈ ಸಂದರ್ಭದಲ್ಲಿ ಅತ್ರಿ ಮಹರ್ಷಿಗಳು ತಪಸ್ಸಿಗೆಂದು ಹೊರ ಹೋಗಿದ್ದರು. ʼʼಸಾದ್ವೀಮಣಿಯೇ, ನಾವು ಮೂವರೂ ಇಚ್ಛಾಭೋಜನ ಮಾಡುವ ಆಸೆಯಿಂದ ಇಲ್ಲಿಗೆ ಬಂದಿದ್ದೇವೆ. ನಿಮಗೆ ನಮಗೆ ಭೋಜನ ವ್ಯವಸ್ಥೆ ಮಾಡಲು ಸಾಧ್ಯವೇʼʼ ಎಂದು ಕೇಳಲು ಅನುಸೂಯ ಸಂತೋಷದಿಂದ ಒಪ್ಪಿದಳು.
ಆಗ ಅತಿಥಿಗಳ ವೇಷದಲ್ಲಿದ್ದ ತ್ರಿಮೂರ್ತಿಗಳು , ʼʼನೀನು ನಗ್ನಳಾಗಿ ಬಂದು ಬಡಿಸಿದರೆ ಮಾತ್ರ ನಾವು ಭೋಜನ ಮಾಡುತ್ತೇವೆʼʼ ಎಂದು ಹೇಳಿದರು.
ಅತಿಥಿಗಳ ಈ ಅನಿರೀಕ್ಷಿತ ಅಪೇಕ್ಷೆ ಕೇಳಿ ಅನುಸೂಯಾದೇವಿಯು ಗೊಂದಲಕ್ಕೆ ಬಿದ್ದಳು. ಇವರ ಬೇಡಿಕೆಯನ್ನು ನೋಡಿದರೆ ನನ್ನ ಸತ್ವ ಪರೀಕ್ಷೆಗಾಗಿಯೇ ಬಂದವರಹಾಗೆ ಕಾಣಿಸುತ್ತದೆ, ಇವರು ಬಹುಶಃ ಅವತಾರ ಪುರುಷರೇ ಇರಬೇಕೆಂದುಕೊಂಡು, “ನಿಮ್ಮ ಇಚ್ಛೆಯಂತೆಯೇ ಊಟಕ್ಕೆ ಬಡಿಸುತ್ತೇನೆʼʼ ಎಂದು ಹೇಳಿ ಪಾಕ ಶಾಲೆಗೆ ಹೋದಳು. ಭೋಜನಕ್ಕೆ ತಯಾರು ಮಾಡಿದ ಬಗೆ ಬಗೆಯ ಪದಾರ್ಥಗಳನ್ನು ತೆಗದುಕೊಂಡ ಅನುಸೂಯ ಪತಿದೇವರ ಪ್ರಾರ್ಥನೆ ಮಾಡಿ; ʻʻನನಗೆ ಪರೀಕ್ಷೆಯ ಸಮಯ ಬಂದಿದೆ, ನಿಮ್ಮ ಸಹಕಾರವಿರಲಿʼʼ ಎಂದು ಕೋರಿಕೊಂಡು, ಅನ್ನಪೂರ್ಣೆಶ್ವರಿಯನ್ನು ಪ್ರಾರ್ಥಸಿ ,ನಗ್ನಳಾಗಿ ಬಡಿಸಳು ಹೋದಳು.
ಆಗ ಆಕೆಯ ಪತಿವ್ರತದ ಪ್ರಭಾವದಿಂದಾಗಿ ತ್ರಿಮೂರ್ತಿಗಳೂ ಶಿಶುಗಳಾಗಿ ಪರಿವರ್ತನೆಗೊಂಡಿದ್ದರು. ಕೂಡಲೇ ಅನುಸೂಯ ಮಾತೃಭಾವದಿಂದ ಈ ಶಿಶುಗಳನ್ನು ಎತ್ತಿಕೊಂಡು ಎದೆಹಾಲುಕುಡಿಸಿ, ತೊಟ್ಟಿಲಲ್ಲಿ ಮಲಗಿಸಿ ಜೋಗುಳ ಹಾಡಿದಳು. ಅಷ್ಟರಲ್ಲಿ ಅತ್ರಿ ಮಹರ್ಷಿಗಳು ಬಂದು ವಿಷಯವನ್ನೆಲ್ಲಾ ತಿಳಿದರು. ಅವರಿಗೆ ಶಿಶುಗಳಾಗಿರುವುದು ತ್ರಿಮೂರ್ತಿಗಳೇ ಎಂದು ತಿಳಿದು ಹೋಯಿತು. ಇಷ್ಟರಲ್ಲಿ ತ್ರಿಮೂರ್ತಿಗಳು ಪ್ರತ್ಯಕ್ಷರಾಗಿ, ಬೇಕಾದ ವರ ಕೇಳುವಂತೆ ಸೂಚಿಸಿದರು. ಆಗ ಅನುಸೂಯಾದೇವಿಯು ಈ ಮೂವರು ಶಿಶುಗಳನ್ನೂ ಬಿಟ್ಟು ಹೋಗುವಂತೆ ಕೇಳಿಕೊಳ್ಳುತ್ತಾರೆ. ಆಗ ತ್ರಿಮೂರ್ತಿಗಳು “ತಥಾಸ್ತುʼ ಎಂದು ಹೇಳಿ ತಮ್ಮ ಅಂಶದಿಂದ ಸೃಷ್ಟಿಯಾದ ಮೂವರು ಶಿಶುಗಳನ್ನು ಅಲ್ಲಿಯೇ ಬಿಟ್ಟು ಹೋಗುತ್ತಾರೆ. ಬ್ರಹ್ಮನ ಶಿಶುವಿಗೆ ಚಂದ್ರನೆಂದು, ವಿಷ್ಣುವಿನ ಶಿಶುವಿಗೆ ದತ್ತನೆಂದು, ಮಹೇಶ್ವರನ ಶಿಶುವಿಗೆ ದೂರ್ವಾಸನೆಂದು ನಾಮಕರಣ ಮಾಡಲಾಗುತ್ತದೆ. ಮುಂದೆ ತಾಯಿ ಅನುಸೂಯದೇವಿಯ ಅಪ್ಪಣೆ ಪಡೆದು ಚಂದ್ರನು ಚಂದ್ರ ಮಂಡಲಕ್ಕೆ ಹೋಗುತ್ತಾನೆ.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ಭಾವಾಶ್ರಿತ ಗ್ರಹಫಲ ಏನು ಹೇಳುತ್ತದೆ?

ಶುಕ್ಲಪಕ್ಷದ ಚಂದ್ರನು ಲಗ್ನದಲ್ಲಿದ್ದರೆ, ಶುಭವೇ ಆಗುತ್ತದೆ. ಈ ಜಾತಕದವರು ಸದೃಢ ಶರೀರ ಹೊಂದಿರುತ್ತಾರೆ, ದೀರ್ಘವಾದ ಆಯುಷ್ಯ ಇವರಿಗಿರುತ್ತದೆ. ಇವರು ಬಲವಂತರು ಹಾಗೂ ನಿರ್ಭಯರಾಗಿರುತ್ತಾರೆ. ಧನಸಂಪತ್ತಿನ ಕೊರತೆ ಇವರಿಗೆ ಬಾಧಿಸುವುದಿಲ್ಲ. ಆದರೆ, ಕೃಷ್ಣಪಕ್ಷದಲ್ಲಿ ಜನಿಸಿದಾಗ, ಚಂದ್ರನು ಲಗ್ನದಲ್ಲಿದ್ದರೆ, ಇದರ ವಿರುದ್ಧ ಫಲಗಳು ಉಂಟಾಗುತ್ತವೆ.

ಚಂದ್ರನು ದ್ವಿತೀಯದಲ್ಲಿದ್ದರೆ, ವಿಷಯಸುಖದಲ್ಲಿ ಆಸಕ್ತಿ ಉಂಟಾಗುತ್ತದೆ. ಈ ಜಾತಕದವರು ಸಹಜವಾಗಿ ವಿದ್ವಾಂಸರಾಗುತ್ತಾರೆ ಹಾಗೂ ಮೃದುಭಾಷಿಯಾಗಿರುತ್ತಾರೆ. ಆದರೆ, ಅಂಗವಿಕಲತೆಯ ದೋಷದಿಂದ ಬಲಳುವ ಸಾಧ್ಯತೆ ಇರುತ್ತದೆ. ತೃತೀಯ ಭಾವದಲ್ಲಿ ಚಂದ್ರನು ಮಾತೃಸುಖವನ್ನು ಪ್ರಾಪ್ತಿಸುತ್ತದೆ. ಹಾಗೂ ಕಾಮಾಂಧರಾದ ಸೋದರರು ಇವರಿಗುತ್ತಾರೆ. ಈ ಜಾತಕದವರು ಸಮಾನ್ಯವಾಗಿ ಬಲಶಾಲಿ, ಶೌರ್ಯವಂತರು, ಮತ್ತು ಅತ್ಯಂತ ಕೃಪಣರಾಗಿರುತ್ತಾರೆ.

ಚಂದ್ರನ ಚತುರ್ಥದಲ್ಲಿ ಬಲಿಷ್ಠ. ಈ ಜಾತಕದವರು ಸದಾ ಸುಖಿಯಾಗಿರುತ್ತಾರೆ. ಇವರು ಸಾಮಾನ್ಯವಾಗಿ ಭೋಗಿಯು, ತ್ಯಾಗಿಯೂ ಆಗಿರುತ್ತಾರೆ. ಇವರಿಗೆ ಮಿತ್ರರು ಮತ್ತು ವಾಹನ ಸುಖದ ಕೊರತೆ ಇರುವುದಿಲ್ಲ. ಇವರು ಜೀವನದಲ್ಲಿ ಯಶಸ್ವಿಯಾಗಿ ಬಾಳುತ್ತಾರೆ. ಪಂಚಮಭಾವದಲ್ಲಿ ಚಂದ್ರನಿದ್ದ ಜಾತಕದವರು ಮೇಧಾವಿಯಾಗಿರುತ್ತಾರೆ. ಇವರು ಉತ್ತಮ ಸಲಹೆಯನ್ನ ನಿಡುವ ಸಾಮರ್ಥ್ಯದವರಾಗಿರುತ್ತಾರೆ. ಇವರ ನಡೆ ಮಂದಗತಿಯಲ್ಲಿರುತ್ತದೆ. ಸತ್ಪುತ್ರರನ್ನು ಪಡೆದು ಸುಖವಾಗಿರುತ್ತಾರೆ.

ಷಷ್ಟಮದಲ್ಲಿ ಚಂದ್ರನಿದ್ದರೆ ಫಲಗಳು ಸಾಮಾನ್ಯವಾಗಿ ಶುಭದಾಯಕವಾಗಿರುವುದಿಲ್ಲ. ಇವರು ಉತ್ತಮ ಬುದ್ಧಿಮಟ್ಟದವರಾಗಿರುವುದಿಲ್ಲ. ಉದರ ವ್ಯಾಧಿಯಂತಹ ಖಾಯಿಲೆಯಿಂದ ಪೀಡಿತರಾಗುತ್ತಾರೆ ಹಾಗೂ ಅಲ್ಪಾಯುವಾಗಿರುತ್ತಾರೆ.

ಚಂದ್ರನಿಗೆ 27 ಹೆಂಡತಿಯರು!
ಈ ಜ್ಯೋತಿಷ್ಯದ ಪ್ರಕಾರ ನಮ್ಮಲ್ಲಿರುವುದು 27 ನಕ್ಷತ್ರಗಳು. ಬ್ರಹ್ಮನ ಮಗ ದಕ್ಷನ ಹೆಣ್ಣುಮಕ್ಕಳು ಇವರು. ಅವರನ್ನು ಚಂದ್ರನಿಗೆ ಕೊಟ್ಟು ವಿವಾಹ ಮಾಡಿದ್ದನು. ಚಂದ್ರನು ದಿನಕ್ಕೆ ಒಬ್ಬರಂತೆ ಅಶ್ವಿನಿ ಮೊದಲಾದ ಸತಿ-ನಕ್ಷತ್ರಗಳ ಜೊತೆ ಇರುತ್ತಾನೆ. (ಅವೇ ಚಂದ್ರ ನಕ್ಷತ್ರ) ಆದರೆ ಅವಲ್ಲಿ ಕೆಲವು ನಕ್ಷತ್ರಗಳನ್ನು ಪುಲ್ಲಿಂಗದಲ್ಲಿ ಕರೆಯುವ ರೂಢಿ ಇದೆ!
ಹಿಮಾಂಶು, ಚಂದ್ರಮಾ, ಇಂದು, ಕುಮುದಬಾಂಧವ, ವಿಧು, ಸುಧಾಂಶು, ಶುಭ್ರಾಂಶು, ಓಷಧೀಶ, ತುಹಿನಕರ, ನಿಶಾಪತಿ, ಅಬ್ಜ, ಜೈವಾತೃಕ, ಸೋಮ, ಗ್ಲೌ, ಮೃಗಾಂಕ, ಕಲಾನಿಧಿ, ದ್ವಿಜರಾಜ, ಶಶಧರ, ನಕ್ಷತ್ರೇಶ, ಕ್ಷಪಾಕರ, ರಜನೀಶ, ದೋಷಾಕರ ಹೀಗೆ ಚಂದ್ರನನ್ನು ವಿವಿದ ಹೆಸರುಗಳಿಂದ ಕರೆಯಲಾಗುತ್ತದೆ.

ಚಂದ್ರನು ಸಪ್ತಮ ಭಾವದಲ್ಲಿದ್ದರೆ ಸೌಭಾಗ್ಯವಂತರಾಗಿರುತ್ತಾರೆ. ಇವರು ರೂಪವಂತರು ಹಾಗೂ ಎಲ್ಲರಿಗೆ ತ್ಯಂತ ಪ್ರೀತಿಪಾತ್ರರಾಗಿರುತ್ತಾರೆ.

ಅಷ್ಟಮದಲ್ಲಿ ಚಂದ್ರನಿದ್ದಾಗ ಅಶುಭ ಫಲಗಳು ಪ್ರಧಾನವಾಗಿರುತ್ತದೆ. ಈ ಜಾತಕದವರು ರೋಗಪೀಡಿತರಾಗುತ್ತಾರೆ ಹಾಗೂ ಅಲ್ಪಾಯುವಾಗಿರುತ್ತಾರೆ.

ಚಂದ್ರನು ನವಮದಲ್ಲಿ ಸುಖವನ್ನು ನೀಡುತ್ತಾನೆ.ಈ ಜಾತಕದವರು ಧರ್ಮಾತ್ಮರಾಗಿದ್ದು, ಉತ್ತಮ ಸಂತಾನ ಸುಖವುಳ್ಳುತ್ತಾರೆ. ದಶಮಭಾವದಲ್ಲಿ ಚಂದ್ರನಿರುವ ಜಾತಕದವರು ಜೀವನದಲ್ಲಿ ಯಶಸ್ವಿಯಾಗುತ್ತಾರೆ. ಸತ್ಕರ್ಮನಿರತರಾಗಿದ್ದು, ಸಜ್ಜನರಿಗೆ ಸಹಾಯ ಮಾಡುವ ಮನೋಭಾವ ಹೊಂದಿರುತ್ತಾರೆ.

ಇದನ್ನೂ ಓದಿ: ವಿಸ್ತಾರ Explainer: Chandrayaan- 3; ಚಂದ್ರಯಾನ- 3ಕ್ಕೆ ಕ್ಷಣಗಣನೆ; ದಕ್ಷಿಣ ಧ್ರುವಕ್ಕೆ ಪ್ರಥಮ ಚುಂಬನ ಸೇರಿದಂತೆ ಹಲವು ವಿಶೇಷತೆ!

ಚಂದ್ರನು ಏಕಾದಶಸ್ಥನಾಗಿದ್ದ ಜಾತಕದಲ್ಲಿ ಆಯಸ್ಸು ದೀರ್ಘವಾಗಿರುತ್ತದೆ. ಇವರು ಧನಿಕರು ಹಾಗೂ ಸಂತತಿಯನ್ನು ಹೊಂದುತ್ತಾರೆ. ಇವರ ಕಾರ್ಯಗಳಿಗೆ ಸೇವಕರನ್ನು ಹೊಂದಿರುವ ನಾಯಕರಾಗುತ್ತಾರೆ. ದ್ವಾದಶದಲ್ಲಿ ಚಂದ್ರನಿದ್ದರೆ ಆಲಸ್ಯ ಉಂಟಾಗುತ್ತದೆ. ಈ ಜಾತಕದವರು ದುಃಖಿಯಾಗಿರುತ್ತಾರೆ ಹಾಗೂ ಪರಾಭವ ಹೊಂದಿರುತ್ತಾರೆ. ಇವರು ಸಾಮನ್ಯವಾಗಿ ಸ್ನೇಹಜೀವಿಯಾಗಿರುವುದಿಲ್ಲ, ಎಲ್ಲರನ್ನೂ ದ್ವೇಷಿಸುವ ಗುಣ ಇವರಲ್ಲಿರುತ್ತದೆ.

Exit mobile version