ನವದೆಹಲಿ: ಸಂಭಾವ್ಯ ಬೆದರಿಕೆಗಳನ್ನು ಗಮನದಲ್ಲಿಟ್ಟುಕೊಂಡು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ (Rajeev Kumar) ಅವರಿಗೆ ಸಶಸ್ತ್ರ ಕಮಾಂಡೋಗಳ ಝಡ್-ವರ್ಗದ (Z- plus) ವಿಐಪಿ ಭದ್ರತೆಯನ್ನು ಒದಗಿಸಲಾಗಿದೆ ಎಂದು ಅಧಿಕೃತ ಮೂಲಗಳು ಮಂಗಳವಾರ ತಿಳಿಸಿವೆ. ಅಂತಾರಾಷ್ಟ್ರೀಯ ಬೆದರಿಕೆಗಳಿಂದಾಗಿ ಕುಮಾರ್ ಅವರ ಭದ್ರತೆ ಹೆಚ್ಚಿಸಲಾಗಿದೆ” ಎಂದು ಮೂಲಗಳು ತಿಳಿಸಿವೆ.
“ಕೇಂದ್ರ ಗೃಹ ಸಚಿವಾಲಯವು ಈ ಕಾರ್ಯಕ್ಕಾಗಿ ಸುಮಾರು 40-45 ಸಿಬ್ಬಂದಿಯ ತುಕಡಿಯನ್ನು ಒದಗಿಸುವ ಜವಾಬ್ದಾರಿಯನ್ನು ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್ಗೆ) ಗೆ ವಹಿಸಿದೆ” ಎಂದು ಅವರು ಹೇಳಿದರು. ಸಿಆರ್ಪಿಎಫ್ ಕಮಾಂಡೋಗಳು ಶೀಘ್ರದಲ್ಲೇ ಅವರ ಭದ್ರತೆ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಮೂರು ಡಜನ್ ಗೂ ಹೆಚ್ಚು ಸಶಸ್ತ್ರ ಸಿಆರ್ ಪಿಎಫ್ ಕಮಾಂಡೋಗಳು ಕುಮಾರ್ ಅವರಿಗೆ ಕಾವಲು ಕಾಯಲಿದ್ದಾರೆ.
ಕುಮಾರ್ ಅವರು ದೇಶಾದ್ಯಂತ ಪ್ರಯಾಣಿಸುವಾಗ, ದಿನದ 24 ಗಂಟೆಯೂ ಮತ್ತು ದೆಹಲಿಯಲ್ಲಿ ಮತ್ತು ಅವರ ಕಚೇರಿಯಲ್ಲಿ ತಂಗುವ ಸಮಯದಲ್ಲಿ ವಿಸ್ತೃತ ಭದ್ರತಾ ರಕ್ಷಣೆಯನ್ನು ಒದಗಿಸಲಾಗುವುದು. ” ಆಯುಕ್ತರು ದೇಶಾದ್ಯಂತ ಪ್ರಯಾಣಿಸುವಾಗ ಸಶಸ್ತ್ರ ಕಮಾಂಡೋಗಳು ಅವರೊಂದಿಗೆ ಇರಲಿದ್ದಾರೆ” ಎಂದು ಮೂಲಗಳು ಹೇಳಿವೆ.
ಕೇಂದ್ರ ಭದ್ರತಾ ಸಂಸ್ಥೆಗಳು ಸಿದ್ಧಪಡಿಸಿದ ಬೆದರಿಕೆ ಗ್ರಹಿಕಾ ವರದಿಯ ಪ್ರಕಾರ ಮುಖ್ಯ ಚುನಾವಣಾ ಆಯುಕ್ತರಿಗೆ ಹಲವು ಹಂತದ ರಕ್ಷಣೆಯನ್ನು ಶಿಫಾರಸು ಮಾಡಲಾಗಿದೆ. 2024 ರ ಲೋಕಸಭಾ ಚುನಾವಣೆಗೆ ಸ್ವಲ್ಪ ಮುಂಚಿತವಾಗಿ ಕುಮಾರ್ ಅವರಿಗೆ ಝಡ್-ವರ್ಗದ ಭದ್ರತೆಯನ್ನು ನೀಡಲಾಯಿತು.
ಇದನ್ನೂ ಓದಿ: Arvind Kejriwal: ಮತ್ತಷ್ಟು ದಿನ ಕೇಜ್ರಿವಾಲ್‌ಗೆ ತಿಹಾರ್ ಜೈಲೇ ಗತಿ!
ಲೋಕ ಸಭಾ ಚುನಾವಣೆ ಏಳು ಹಂತಗಳಲ್ಲಿ ನಡೆಯಲಿದೆ. ಏಪ್ರಿಲ್ 19ರಂದು ಮತದಾನ ಆರಂಭವಾಗಲಿದ್ದು, ಜೂನ್ 4ರಂದು ಫಲಿತಾಂಶ ಹೊರಬೀಳಲಿದೆ. ಮಾದರಿ ನೀತಿ ಸಂಹಿತೆ ಈಗಾಗಲೇ ಜಾರಿಯಲ್ಲಿದೆ. ಕುಮಾರ್ ಅವರು 1984ರ ಬ್ಯಾಚ್ ನ ನಿವೃತ್ತ ಐಎಎಸ್ ಅಧಿಕಾರಿ. ಅವರು ಮೇ 15, 2022 ರಂದು 25 ನೇ ಮುಖ್ಯ ಚುನಾವಣಾ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡರು. ಅವರನ್ನು ಸೆಪ್ಟೆಂಬರ್ 1, 2020 ರಂದು ಚುನಾವಣಾ ಆಯುಕ್ತರಾಗಿ ನೇಮಿಸಲಾಗಿತ್ತು.