ಬೆಂಗಳೂರು: ಕನ್ನಡ ಮಾಧ್ಯಮ ಲೋಕದ ಬಹು ನಿರೀಕ್ಷಿತ ವಿಸ್ತಾರ ನ್ಯೂಸ್ ಚಾನೆಲ್‌ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಸಂಜೆ ನಡೆದ ಭವ್ಯ ಸಮಾರಂಭದಲ್ಲಿ (Vistara news launch) ವಿಧ್ಯುಕ್ತ ಚಾಲನೆ ನೀಡಿದರು.
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಸಿಎಂ ಬೊಮ್ಮಾಯಿ ಅವರು ನೂತನ ವಿಸ್ತಾರ ನ್ಯೂಸ್ ಚಾನೆಲ್‌ಗೆ ಚಾಲನೆ ನೀಡಿದರು. ಈ ಸಂಭ್ರಮದ ಕ್ಷಣಗಳನ್ನು ವಿಸ್ತಾರ ಕನ್ನಡ ಸಂಭ್ರಮವಾಗಿ ಆಚರಿಸಲಾಯಿತು. ಖ್ಯಾತ ಪತ್ರಕರ್ತ ಹರಿ ಪ್ರಕಾಶ್ ಕೋಣೆಮನೆ ಅವರ ನೇತೃತ್ವದಲ್ಲಿ, ನಿಖರ, ಜನಪರ ಎಂಬ ಘೋಷಾ ವಾಕ್ಯದೊಂದಿಗೆ ವಿಸ್ತಾರ ನ್ಯೂಸ್ ಲೋಕಾರ್ಪಣೆಯಾಯಿತು.
ವಿಸ್ತಾರ ನ್ಯೂಸ್ ಚಾನೆಲ್ ಅನಾವರಣದ ಪ್ರಯುಕ್ತ ದಿನವಿಡೀ ರವೀಂದ್ರ ಕಲಾಕ್ಷೇತ್ರದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಿತು. ನಾನಾ ಕ್ಷೇತ್ರಗಳಲ್ಲಿ ಅನುಪಮ ಸಾಧನೆ ಮಾಡಿರುವ 32 ಸಾಧಕರನ್ನು ನಾಡಿನ ಶ್ರೇಷ್ಠ ಸಂತರ ಸಮ್ಮುಖದಲ್ಲಿ ಗೌರವಿಸಲಾಯಿತು.
ಸಮಾರಂಭದಲ್ಲಿ ಕೇಂದ್ರ ಸಂಸದೀಯ ವ್ಯವಹಾರ ಪ್ರಲ್ಹಾದ ಜೋಶಿ, ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆ ಸಹಾಯಕ ಸಚಿವ ಎಲ್. ಮುರುಗನ್, ವಿಧಾನಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಸಹಕಾರ ಸಚಿವ ಎಸ್.ಟಿ ಸೋಮಶೇಖರ್, ಕಂದಾಯ ಸಚಿವ ಆರ್. ಅಶೋಕ್, ಆರೋಗ್ಯ ಸಚಿವ ಡಾ.ಕೆ. ಸುಧಾಕರ್, ವಿಧಾನಪರಿಷತ್ ಸದಸ್ಯ ಪಿ.ಸಿ ಮೋಹನ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಪ್ರದೇಶ ಕಾಂಗ್ರೆಸ್ ಕಾರ್ಯಾಧ್ಯಕ್ಷ ಆರ್. ಧ್ರುವ ನಾರಾಯಣ್, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್ ಷಡಕ್ಷರಿ ಭಾಗವಹಿಸಿದ್ದರು.
ವಿಸ್ತಾರ ಮೀಡಿಯಾ ಪ್ರೈವೇಟ್ ಲಿಮಿಟೆಡ್‌ನ ಸಿಇಒ ಹಾಗೂ ಪ್ರಧಾನ ಸಂಪಾದಕ ಹರಿ ಪ್ರಕಾಶ್ ಕೋಣೆಮನೆ, ಚೇರ್ಮನ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ಎಚ್.ವಿ ಧರ್ಮೇಶ್, ನಿರ್ದೇಶಕ ಶ್ರೀನಿವಾಸ್ ಎಸ್. ಹೆಬ್ಬಾರ್ ಭಾಗವಹಿಸಿದ್ದರು. ದಾವಣಗೆರೆಯ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಗುರು ಪೀಠದ ವಚನಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ರಾಜ್ಯದ 220ಕ್ಕೂ ಹೆಚ್ಚು ಸ್ಥಳಗಳಲ್ಲಿ ವಿಸ್ತಾರ ನ್ಯೂಸ್ ಚಾನೆಲ್‌ನ ಮೆಗಾ ಲಾಂಚ್ ಮತ್ತು ವಿಸ್ತಾರ ಕನ್ನಡ ಸಂಭ್ರಮ ನಡೆಯಿತು. ಬೆಂಗಳೂರಿನಲ್ಲಿ ದಿನಪೂರ್ತಿ ಸಂಭ್ರಮ, ಸಡಗರಗಳಿಂದ ನೂತನ ವಿಸ್ತಾರ ನ್ಯೂಸ್ ಚಾನೆಲ್ ಲೋಕಾರ್ಪಣೆಯಾಗಿ ಮನಸೂರೆಗೊಂಡಿತು.