Site icon Vistara News

China Flag: ಇಸ್ರೋ ರಾಕೆಟ್‌ನಲ್ಲಿ ಚೀನಾ ಧ್ವಜ; ʼಸಣ್ಣ ತಪ್ಪುʼ ಎಂದ ತಮಿಳುನಾಡು ಸಚಿವ

narendra modi mk stalin china flag

ತೂತುಕುಡಿ: ತಮಿಳುನಾಡಿನಲ್ಲಿ ಇಸ್ರೋದ (ISRO) ಹೊಸ ಉಪಗ್ರಹ ಉಡಾವಣಾ ಸಂಕೀರ್ಣಕ್ಕೆ (Satellite launch complex) ಸಂಬಂಧಿಸಿದ ಜಾಹೀರಾತಿನಲ್ಲಿ (DMK advertisement) ಚೀನಾ ಧ್ವಜ (china flag) ಪ್ರಕಟಿಸಿರುವ ತಮಿಳುನಾಡು ಸರ್ಕಾರದ ತಪ್ಪು ಇದೀಗ ಟ್ರೋಲ್‌ ಆಗಿದೆ. ತಮಿಳುನಾಡಿನ ಸಚಿವರೊಬ್ಬರು ʼಇದೊಂದು ಸಣ್ಣ ತಪ್ಪುʼ ಎಂದು ಹಾರಿಕೆಯ ಉತ್ತರ ನೀಡಿದ್ದಾರೆ.

ʼಇದು ಜಾಹೀರಾತು ವಿನ್ಯಾಸಗಾರರ ಕುಚೋದ್ಯದಿಂದ ಉಂಟಾಗಿರುವುದು. ಇದೊಂದು ಸಣ್ಣ ತಪ್ಪು. ಡಿಎಂಕೆಗೆ ಇದರಲ್ಲಿ ಬೇರೆ ಯಾವುದೇ ಉದ್ದೇಶಗಳಿಲ್ಲ” ಎಂದು ಡಿಎಂಕೆ ನಾಯಕ, ಮೀನುಗಾರಿಕಾ ಸಚಿವ ಅನಿತ ಆರ್. ರಾಧಾಕೃಷ್ಣನ್ ಹೇಳಿದ್ದಾರೆ.

“ಜಾಹೀರಾತಿನಲ್ಲಿ ಒಂದು ಸಣ್ಣ ತಪ್ಪಾಗಿದೆ. ನಮಗೆ ಬೇರೆ ಉದ್ದೇಶವಿಲ್ಲ. ನಮ್ಮ ಹೃದಯದಲ್ಲಿ ಭಾರತದ ಬಗ್ಗೆ ಪ್ರೀತಿ ಮಾತ್ರ ಇದೆ. ಭಾರತವು ಜಾತಿ ಅಥವಾ ಧರ್ಮದ ಆಧಾರದಲ್ಲಿ ಯಾವುದೇ ಘರ್ಷಣೆಗೆ ಅವಕಾಶ ನೀಡದೆ ಒಗ್ಗಟ್ಟಿನಿಂದ ಇರಬೇಕೆಂಬುದು ತಮ್ಮ ಪಕ್ಷದ ನಿಲುವಾಗಿದೆ” ಎಂದು ಅವರು ಹೇಳಿದ್ದಾರೆ.

ತಮಿಳುನಾಡಿನ ಸಮೀಪದ ಕುಲಶೇಖರಪಟ್ಟಿಣಂನಲ್ಲಿ ಇಸ್ರೋದ ಹೊಸ ಉಡಾವಣಾ ಸಂಕೀರ್ಣದ ಬೇಡಿಕೆಯನ್ನು ಮೊದಲು ಮಂಡಿಸಿದವರು ಡಿಎಂಕೆ ಪಕ್ಷದ ದಿವಂಗತ ಎಂ. ಕರುಣಾನಿಧಿ. ಅಲ್ಲದೆ, ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮತ್ತು ತೂತುಕುಡಿ ಲೋಕಸಭಾ ಸಂಸದೆ ಕನಿಮೊಳಿ ಅವರು ರಾಜ್ಯದಲ್ಲಿ ಉಡಾವಣಾ ಸಂಕೀರ್ಣವನ್ನು ಸ್ಥಾಪಿಸಲು ಕೇಂದ್ರವನ್ನು ಒತ್ತಾಯಿಸಿದ್ದರು. ಹೀಗಾಗಿ, ತಮಿಳುನಾಡಿಗೆ ಯೋಜನೆಯನ್ನು ತರಲು ಡಿಎಂಕೆ ನಾಯಕರು ಮಾಡಿದ ಪ್ರಯತ್ನಗಳನ್ನು ಎತ್ತಿ ತೋರಿಸಲು ಈ ಜಾಹೀರಾತು ನೀಡಲಾಯಿತು. ಜಾಹೀರಾತಿನ ವಿನ್ಯಾಸವನ್ನು ಅಂತಿಮಗೊಳಿಸುವ ಮುನ್ನ ಈ ತಪ್ಪು ಯಾರ ಗಮನಕ್ಕೂ ಬರಲಿಲ್ಲ ಎಂದು ಸಚಿವರು ಹೇಳಿದರು.

ಆದರೆ, ಆ ಜಾಹೀರಾತನ್ನು ಪ್ರಕಟಿಸಿದ್ದಕ್ಕಾಗಿ ಡಿಎಂಕೆ ಜನರಲ್ಲಿ ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ಮುಖಂಡ ಮತ್ತು ಕೇಂದ್ರ ಸಚಿವ ಎಲ್ ಮುರುಗನ್ ಆಗ್ರಹಿಸಿದ್ದಾರೆ. “ಭಾರತೀಯ ಧ್ವಜವನ್ನು ಜಾಹೀರಾತಿನಲ್ಲಿ ಹಾಕುವುದು ನಮ್ಮ ಕರ್ತವ್ಯ. ಈ ತಪ್ಪು ಎಸಗಿದ ಡಿಎಂಕೆ ಜನರಲ್ಲಿ ಕ್ಷಮೆಯಾಚಿಸಬೇಕು. ಭಾರತದ ಸಾಧನೆಗಳನ್ನು ಪ್ರದರ್ಶಿಸಬೇಕು” ಎಂದಿದ್ದಾರೆ.

ಫೆಬ್ರವರಿ 28ರಂದು ಪ್ರಧಾನಿ ನರೇಂದ್ರ ಮೋದಿ ಅವರು ಕುಲಶೇಖರಪಟ್ಟಿಣಂನಲ್ಲಿ ಇಸ್ರೋದ ಹೊಸ ಉಡಾವಣಾ ಸಂಕೀರ್ಣಕ್ಕೆ ಶಂಕುಸ್ಥಾಪನೆ ಮಾಡಿದರು, ಇದರ ಮೌಲ್ಯ ಸುಮಾರು ₹986 ಕೋಟಿ. ವರ್ಷಕ್ಕೆ 24 ಉಡಾವಣೆಗಳಿಗೆ ಅವಕಾಶ ಕಲ್ಪಿಸುವ ಈ ಸಂಕೀರ್ಣವು 35 ಸೌಲಭ್ಯಗಳನ್ನು ಒಳಗೊಂಡಿದೆ. ಬಾಹ್ಯಾಕಾಶ ಪರಿಶೋಧನೆ ಸಾಮರ್ಥ್ಯಗಳನ್ನು ಹೆಚ್ಚಿಸುವ ಚೆಕ್‌ಔಟ್ ಕಂಪ್ಯೂಟರ್‌ಗಳೊಂದಿಗೆ ಮೊಬೈಲ್ ಉಡಾವಣಾ ರಚನೆಗಳನ್ನು (MLS) ಒಳಗೊಂಡಿದೆ.

ತಮಿಳುನಾಡಿಗೆ ಎರಡು ದಿನಗಳ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ (PM Narendra Modi), ಇಸ್ರೋ ಕೇಂದ್ರವನ್ನು ಉದ್ಘಾಟಿಸಿದ್ದರು. ನಂತರ ರ್ಯಾಲಿಯಲ್ಲಿ ಡಿಎಂಕೆ ಜಾಹೀರಾತನ್ನು ಟೀಕಿಸಿದ್ದರು.

“ಬಾಹ್ಯಾಕಾಶ ಕ್ಷೇತ್ರದಲ್ಲಿನ ರಾಷ್ಟ್ರದ ಸಾಧನೆಗಳ ಬಗ್ಗೆ ಡಿಎಂಕೆ ಮರೆವು ಹೊಂದಿದೆ. ಡಿಎಂಕೆ ಆಡಳಿತವು ಕೆಲಸ ಮಾಡುತ್ತಿಲ್ಲ, ಕೇವಲ ಸುಳ್ಳು ಕ್ರೆಡಿಟ್ ತೆಗೆದುಕೊಳ್ಳುತ್ತಿದೆ. ಕೇಂದ್ರದ ಯೋಜನೆಗಳ ಮೇಲೆ ಅದರ ಚೀನಾದ ಸ್ಟಿಕ್ಕರ್‌ಗಳನ್ನು ಅಂಟಿಸುತ್ತದೆ” ಎಂದು ಆರೋಪಿಸಿದ್ದರು.

“ಈಗ ಅವರು ಮಿತಿ ಮೀರಿದ್ದಾರೆ. ತಮಿಳುನಾಡಿನ ಇಸ್ರೋ ಉಡಾವಣಾ ಕೇಂದ್ರದ ಕ್ರೆಡಿಟ್ ಪಡೆಯಲು ಚೀನಾದ ಸ್ಟಿಕ್ಕರ್ ಅನ್ನು ಅಂಟಿಸಿದ್ದಾರೆ. ಇದು ನಮ್ಮ ಬಾಹ್ಯಾಕಾಶ ವಿಜ್ಞಾನಿಗಳಿಗೆ, ಬಾಹ್ಯಾಕಾಶ ಕ್ಷೇತ್ರಕ್ಕೆ, ನಿಮ್ಮ ತೆರಿಗೆ ಹಣಕ್ಕೆ ಮತ್ತು ದೇಶಕ್ಕೆ ಮಾಡಿದ ಅವಮಾನವಾಗಿದೆ” ಎಂದಿದ್ದರು.

“ಡಿಎಂಕೆಯ ಇಂದಿನ ಜಾಹೀರಾತು ಅಸಂಗತವಾಗಿದೆ. ವರು ಭಾರತೀಯ ವಿಜ್ಞಾನ ಮತ್ತು ಭಾರತೀಯ ಬಾಹ್ಯಾಕಾಶ ಕ್ಷೇತ್ರವನ್ನು ಅವಮಾನಿಸಿದ್ದಾರೆ, ಅದಕ್ಕಾಗಿ ಅವರು ಕ್ಷಮೆ ಯಾಚಿಸಬೇಕು” ಎಂದು ಪ್ರಧಾನಿ ಎಕ್ಸ್‌ನಲ್ಲಿ ಹಾಕಿದ ಪೋಸ್ಟ್‌ನಲ್ಲಿ ಟೀಕಿಸಿದ್ದರು.

ಇದನ್ನೂ ಓದಿ: DMK Advertisement: ಡಿಎಂಕೆ ಜಾಹೀರಾತಿನಲ್ಲಿ ಚೀನಾ ಧ್ವಜ; ಭಾರಿ ವಿವಾದ, ಮೋದಿ ಆಕ್ರೋಶ

Exit mobile version