Site icon Vistara News

Paris Olympics 2024 : ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಪದಕ ಗೆದ್ದ ಚೀನಾದ ಅಥ್ಲೀಟ್​ ಈಗ ರೆಸ್ಟೋರೆಂಟ್​​ನಲ್ಲಿ ವೇಟರ್​!

Paris Olympics 2024

ಬೆಂಗಳೂರು : ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ (Paris Olympics 2024) ಹಲವಾರು ಕ್ರೀಡಾಪಟುಗಳು ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿದ್ದಾರೆ. ಅವರಲ್ಲಿ ಬ್ಯಾಲೆನ್ಸ್ ಬೀಮ್ ಜಿಮ್ನಾಸ್ಟಿಕ್ಸ್ ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದ ಚೀನಾದ ಜಿಮ್ನಾಸ್ಟ್ ಝೌ ಯಾಕಿನ್ ಒಬ್ಬರು. ಒಲಿಂಪಿಕ್ ಪೋಡಿಯಂನಲ್ಲಿ ಪದಕ ಗೆದ್ದ ಬಳಿಕ ಹೇಗೆ ಪ್ರತಿಕ್ರಿಯಿಸಬೇಕು ಎಂದು ತಿಳಿಯದೇ ಪಕ್ಕದವರನ್ನು ನಕಲು ಮಾಡಿದ 18 ವರ್ಷದ ಆಟಗಾರ್ತಿಯ ವಿಡಿಯೊವೊಂದು ವೈರಲ್ ಆಗಿತ್ತು. ಅವರು ಪಕ್ಕದಲ್ಲಿದ್ದ ವಿಜೇತರು ಪದಕ ಕಚ್ಚುವುದನ್ನು ನೋಡಿ ಅದೇ ರೀತಿ ಮಾಡಿದ್ದರು. ಅದು ಅಂತರ್ಜಾಲದಾದ್ಯಂತದ ಅಭಿಮಾನಿಗಳ ಗಮನ ಸೆಳೆದಿತ್ತು. ಇದೀಗ ಮನೆಗೆ ಹಿಂದಿರುಗಿದ ಅವರ ಜೀವನದ ಇನ್ನೊಂದು ನೋಟ ವೈರಲ್ ಆಗಿದೆ. ಅದೇನೆಂದರೆ ಅವರು ರೆಸ್ಟೋರೆಂಟ್ ಒಂದರಲ್ಲಿ ಸಪ್ಲೈರ್​ ಆಗಿ ಕೆಲಸ ಮಾಡುವುದನ್ನು ಮುಂದುವರಿಸಿದ್ದಾರೆ.

ಪ್ಯಾರಿಸ್ 2024 ರಲ್ಲಿ ಇಟಲಿಯ ಇಬ್ಬರು ಜಿಮ್ನಾಸ್ಟ್​ಗಳಾದ ಆಲಿಸ್ ಡಿ’ಅಮಾಟೊ ಮತ್ತು ಮನಿಲಾ ಎಸ್ಪೊಸಿಟೊ ನಡುವಿನ ಬ್ಯಾಲೆನ್ಸ್ ಬೀಮ್ ಸ್ಪರ್ಧೆಯಲ್ಲಿ ಝೌ ಯಾಕಿನ್ ಎರಡನೇ ಸ್ಥಾನ ಪಡೆದರು. ಪೋಡಿಯಂನಲ್ಲಿ ಫೋಟೋಗಳಿಗೆ ಪೋಸ್ ನೀಡುವಾಗ ಇಟಾಲಿಯನ್ನರು ತಮ್ಮ ಪದಕಗಳನ್ನು ಕಚ್ಚುತ್ತಿದ್ದರು. ಇದು ಝೌ ಅವರ ತಮಾಷೆಯ ಸದರ್ಭಕ್ಕೆ ಕಾರಣವಾಯಿತು. ಅವರು ಸ್ವತಃ ಹಾಗೆ ಮಾಡಲು ಪ್ರಯತ್ನಿಸಿದರು. ಅದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಯಿತು.

ಒಲಿಂಪಿಕ್ಸ್ ನಂತರ, ಝೌ ಯಾಕಿನ್ ಮತ್ತೊಮ್ಮೆ ವೈರಲ್ ಆಗಿದ್ದಾರೆ. ಆದಾಗ್ಯೂ, ಈ ಬಾರಿ, ಝೌ ಚೀನಾದ ಹುನಾನ್ ಪ್ರಾಂತ್ಯದ ತನ್ನ ಸ್ಥಳೀಯ ನಗರ ಹೆಂಗ್ಯಾಂಗ್ನ ಸ್ಥಳೀಯ ರೆಸ್ಟೋರೆಂಟ್​ನಲ್ಲಿ ಆಹಾರವನ್ನು ಬಡಿಸುತ್ತಾ ತನ್ನ ಕುಟುಂಬಕ್ಕೆ ಸಹಾಯ ಮಾಡುವುದನ್ನು ಕಾಣಬಹುದು.

ಝೌ ಯಾಕಿನ್ ಯಾರು?

ಕೇವಲ 18 ನೇ ವಯಸ್ಸಿನಲ್ಲಿಯೂ, ಝೌ ಯಾಕಿನ್ ಈಗಾಗಲೇ ತನ್ನ ಜಿಮ್ನಾಸ್ಟಿಕ್ಸ್ ವೃತ್ತಿಜೀವನದಲ್ಲಿ ಗಮನಾರ್ಹ ಪದಕಗಳನ್ನು ಗಳಿಸಿದ್ದಾರೆ. ಕೇವಲ ಮೂರು ವರ್ಷದವಳಿದ್ದಾಗ ಜಿಮ್ನಾಸ್ಟಿಕ್ಸ್ ಪ್ರಾರಂಭಿಸಿದ ಝೌ ಬ್ಯಾಲೆನ್ಸ್ ಬೀಮ್ ವಿಭಾಗದಲ್ಲಿ ಪರಿಣತಿ ಹೊಂದಿದ್ದಾರೆ.

ಇದನ್ನೂ ಓದಿ: Virat Kohli : ಕೊಹ್ಲಿ ಕಿಂಗ್ ಅಲ್ಲ; ಭಾರತದ ಸೂಪರ್​​ ಸ್ಟಾರ್​ ಬ್ಯಾಟರ್​​ ಬಗ್ಗೆ ಕಳಪೆ ಕಾಮೆಂಟ್ ಮಾಡಿದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ

2020ರಲ್ಲಿ ಝೌ ಚೈನೀಸ್ ಚಾಂಪಿಯನ್ಶಿಪ್​ನ ಬ್ಯಾಲೆನ್ಸ್ ಬೀಮ್​ನಲ್ಲಿ ವೈಯಕ್ತಿಕ ಚಿನ್ನ ಗೆದ್ದಿದ್ದರು. ಹಿರಿಯ ಮಟ್ಟದಲ್ಲಿ, ಝೌ ಪ್ಯಾರಿಸ್​ನಲ್ಲಿ ತನ್ನ ಮೊದಲ ಒಲಿಂಪಿಕ್ ಪದಕ ಗೆಲ್ಲುವ ಮೊದಲು ಚೀನಾದ ರಾಷ್ಟ್ರೀಯ ಕ್ರೀಡಾಕೂಟ ಮತ್ತು ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಚಿನ್ನ ಗೆದ್ದಿದ್ದಾರೆ.

ಪ್ಯಾರಿಸ್ 2024 ರಲ್ಲಿ, ಝೌ ಪ್ರಸಿದ್ಧ ಜಿಮ್ನಾಸ್ಟ್ ಸಿಮೋನ್ ಬೈಲ್ಸ್ ಅವರನ್ನು ಹಿಂದಿಕ್ಕಿ ಅರ್ಹತೆ ಪಡೆದಿದ್ದರು. ನಂತರ ಒಟ್ಟು 14.100 ಅಂಕಗಳೊಂದಿಗೆ ಬೆಳ್ಳಿ ಗೆದ್ದರು. ಇದು ಚಿನ್ನದ ಪದಕ ವಿಜೇತ ಡಿ’ಅಮಾಟೊ ಅವರ 14.366 ಕ್ಕಿಂತ ಸ್ವಲ್ಪ ಕಡಿಮೆ. ಫೈನಲ್​​ನಲ್ಲಿ ಝೌ ಮತ್ತೆ ಬೈಲ್ಸ್ ಅವರನ್ನು ಸೋಲಿಸಿದರು

Exit mobile version