Site icon Vistara News

Cholera Outbreak: ರಾಜ್ಯದಲ್ಲಿ ಕಾಲರಾ ಪ್ರಕರಣಗಳ ಸಂಖ್ಯೆ 10ಕ್ಕೇರಿಕೆ; ಜಲಮೂಲಗಳ ಪರಿಶೀಲನೆಗೆ ಸೂಚನೆ

Cholera Outbreak

ಬೆಂಗಳೂರು: ರಾಜ್ಯದಲ್ಲಿ ಪ್ರಸಕ್ತ ವರ್ಷದಲ್ಲಿ ಕಾಲರಾ ಪ್ರಕರಣಗಳ (Cholera Outbreak) ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 3, ಬೆಂಗಳೂರು ನಗರ ಜಿಲ್ಲೆ 6 ಹಾಗೂ ರಾಮನಗರ ಜಿಲ್ಲೆಯಲ್ಲಿ 1 ಕಾಲರಾ ಪ್ರಕರಣ ಪತ್ತೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕೃತ ಮಾಹಿತಿ ನೀಡಿದೆ.

ಏಪ್ರಿಲ್ 4ರವರೆಗೆ ಒಟ್ಟು 06 (ಬಿಬಿಎಂಪಿ-3, ಬೆಂಗಳೂರು ನಗರ-02, ರಾಮನಗರ-01) ಕಾಲರಾ ಪ್ರಕರಣಗಳು ದೃಢಪಟ್ಟಿದ್ದವು ಎಂದು ಶುಕ್ರವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಡಿ. ರಂದೀಪ್ ಮಾಹಿತಿ ನೀಡಿದ್ದರು. ಇದರ ಬೆನ್ನಲ್ಲೇ ಬೆಂಗಳೂರು ಮೆಡಿಕಲ್‌ ಕಾಲೇಜು ಹಾಸ್ಟೆಲ್‌ನ 47 ವಿದ್ಯಾರ್ಥಿನಿಯರು ಶುಕ್ರವಾರ ಅತಿಸಾರ ಹಾಗೂ ನಿರ್ಜಲೀಕರಣದಿಂದ ಅಸ್ವಸ್ಥಗೊಂಡು ವಿಕ್ಟೋರಿಯಾ ಆಸ್ಪತ್ರೆ ಸೇರಿದ್ದರು. ಈ ಪೈಕಿ ಇಬ್ಬರಿಗೆ ಕಾಲರಾ ಇರುವುದು ಪತ್ತೆಯಾಗಿತ್ತು, ಮತ್ತೊಬ್ಬ ವಿದ್ಯಾರ್ಥಿನಿಯ ವರದಿ ಬರಬೇಕಿದೆ. ಏಪ್ರಿಲ್‌ ತಿಂಗಳಲ್ಲಿ 4 ಪ್ರಕರಣಗಳು ಬೆಂಗಳೂರಿನಲ್ಲಿ ಪತ್ತೆಯಾಗಿರುವುದರಿಂದ ರಾಜ್ಯದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 10ಕ್ಕೇರಿದೆ.

ಜಲಮೂಲಗಳ ಪರಿಶೀಲನೆಗೆ ಪತ್ರ

ಸಿಲಿಕಾನ್ ಸಿಟಿಯಲ್ಲಿ ಕಾಲರಾ ಹರಡುವಿಕೆಗೆ ಕಡಿವಾಣ ಹಾಕಲು ಬಿಬಿಎಂಪಿ ಅಲರ್ಟ್ ಆಗಿದ್ದು, ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೆತ್ತಿಕೊಳ್ಳುತ್ತಿದೆ. ಈ ನಡುವೆ ಸಾಂಕ್ರಾನಿಕ ರೋಗ ತಡೆಯಲು ಜಲಮಂಡಳಿ ವ್ಯಾಪ್ತಿಯ ಜಲಮೂಲಗಳ ಪರಿಶೀಲನೆ ಮಾಡುವಂತೆ ಜಲಮಂಡಳಿಗೆ ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತರು ಸೂರಳ್ಕರ್ ವಿಕಾಸ್ ಕಿಶೋರ್ ಪತ್ರ ಬರೆದಿದ್ದಾರೆ.

ಇದನ್ನೂ ಓದಿ | Cholera Outbreak: ವಿಕ್ಟೋರಿಯಾ ಆಸ್ಪತ್ರೆಯಿಂದ 21 ವೈದ್ಯಕೀಯ ವಿದ್ಯಾರ್ಥಿನಿಯರು ಡಿಸ್ಚಾರ್ಜ್

ತಮ್ಮ ವ್ಯಾಪ್ತಿಗೆ ಬರುವ ನೀರಿನ ಶುದ್ಧೀಕರಣ ಘಟಕಗಳು ಮತ್ತು ಕೊನೆಯ ಹಂತದ ವಿತರಣ ನೀರಿನ ಮಾದರಿಗಳಲ್ಲಿ ಕ್ಲೋರಿನೇಷನ್ ಮಟ್ಟ ನಿಯಮಾನುಸಾರ ಇರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು. ಸಾಂಕ್ರಾಮಿಕ ರೋಗಗಳು ವರದಿಯಾದ ಪ್ರದೇಶಗಳಲ್ಲಿ Manholeಗಳು ಮತ್ತು ಕೊಳಚೆ ನೀರಿನಿಂದ ಮಾದರಿಗಳನ್ನು ಸಂಗ್ರಹಿಸಲು ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಅಗತ್ಯ ಸಹಕಾರ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು. ಯಾವುದಾದರೂ ನೀರಿನ ಕೊಳವೆಗಳು ಸೋರಿಕೆ ಇದ್ದಲ್ಲಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಕೋರಿದ್ದಾರೆ.

ಕಾಲರಾ ತಡೆಗೆ ಆರೋಗ್ಯ ಇಲಾಖೆ ಮಾರ್ಗಸೂಚಿ

1) ಕೈ ಶುದ್ಧವಾಗಿರಬೇಕು
2) ಕೈ ಸ್ವಚ್ಛಗೊಳಿಸಿ ಆಹಾರ ಸೇವಿಸಬೇಕು
3) ಶುದ್ಧ ಕುಡಿಯುವ ನೀರು ಬಳಸಬೇಕು
4) ಕುದಿಸಿ ಆರಿಸಿದ ನೀರನ್ನು ಕುಡಿಯಿರಿ. ಸೋಸಿದ ನೀರು ಬಳಸಿ.
5) ಚರಂಡಿ ನೀರು ಮತ್ತು ಕುಡಿಯುವ ನೀರಿನ ಪೈಪ್ ಒಟ್ಟಾಗದಂತೆ ನೋಡಿಕೊಳ್ಳಬೇಕು
6) ಹೊರಗೆ, ಬೀದಿ ಬದಿ ಆಹಾರ ಸೇವಿಸುವುದರಿಂದ ದೂರ ಉಳಿಯಿರಿ
7) ರೆಸ್ಟೋರೆಂಟ್‌ಗಳಲ್ಲಿ ಬಿಸಿ ನೀರು ಕೇಳಿ ಪಡೆಯಿರಿ.
8) ಬೀದಿ ಆಹಾರ ಸೇವಿಸುವ ಮುನ್ನ ಅಲ್ಲಿನ ಸ್ವಚ್ಛತೆ ಪರಿಶೀಲಿಸಿ.
9) ಭೇದಿ, ಹೊಟ್ಟೆನೋವು, ಜ್ವರ ಮುಂತಾದ ಲಕ್ಷಣಗಳು ಕಂಡುಬಂದರೆ ತಡಮಾಡದೆ ವೈದ್ಯರನ್ನು ಸಂಪರ್ಕಿಸಿ.

Exit mobile version