Site icon Vistara News

Citizenship Law CAA: ಅಂಗೀಕಾರಗೊಂಡ 4 ವರ್ಷ ಬಳಿಕ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಮಾಡಿದ ಮೋದಿ ಸರ್ಕಾರ

CAA

ನವದೆಹಲಿ: ಸಂಸತ್ತಿನಲ್ಲಿ ಅಂಗೀಕರಿಸಲ್ಪಟ್ಟ ನಾಲ್ಕು ವರ್ಷಗಳ ನಂತರ ಕೇಂದ್ರದ ನರೇಂದ್ರ ಮೋದಿ ಸರ್ಕಾರವು ಸೋಮವಾರ ಪೌರತ್ವ ತಿದ್ದುಪಡಿ ಕಾಯಿದೆಯನ್ನು (Citizenship Law CAA) ಜಾರಿ ಮಾಡಿದೆ. ಭಾರತದ ಚುನಾವಣಾ ಆಯೋಗವು ಲೋಕಸಭಾ ಚುನಾವಣೆಯ ದಿನಾಂಕಗಳನ್ನು ಘೋಷಿಸುವ ಮೊದಲು ಈ ಅಧಿಸೂಚನೆ ಪ್ರಕಟವಾಗಿದೆ.

ಕಳೆದ ತಿಂಗಳು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿಕೆ ನೀಡಿದ್ದರು. ಈ ವರ್ಷದ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಸಿಎಎಯನ್ನು ಜಾರಿಗೆ ತರಲಾಗುವುದು ಎಂದು ಹೇಳಿದ್ದರು.

ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ ವಲಸೆ ಬಂದಿರುವ ಹಿಂದೂ, ಸಿಖ್, ಜೈನ, ಪಾರ್ಸಿ, ಬೌದ್ಧ ಮತ್ತು ಕ್ರಿಶ್ಚಿಯನ್ ಸಮುದಾಯಗಳಿಗೆ ಪೌರತ್ವ ನೀಡುವ ಕಾಯಿದೆ ಇದಾಗಿದೆ. ಅವರ ದೇಶದಲ್ಲಿ ಧಾರ್ಮಿಕ ಕಿರುಕುಳವನ್ನು ಎದುರಿಸುತ್ತಿರುವ ಕಾರಣ 2014ರ ಡಿಸೆಂಬರ್ 31 ರಂದು ಅಥವಾ ಅದಕ್ಕೂ ಮೊದಲು ಭಾರತಕ್ಕೆ ಪ್ರವೇಶಿಸಿದ್ದ ಮೇಲಿನ ಧರ್ಮದವರಿಗೆ ಭಾರತೀಯ ಪೌರತ್ವಕ್ಕೆ ತ್ವರಿತವಾಗಿ ಒದಗಿಸುವ ಸಿಎಎ 1955ರ ಪೌರತ್ವ ಕಾಯ್ದೆಯನ್ನು ತಿದ್ದುಪಡಿ ಮಾಡಲಾಗಿದೆ.

ಸಂಸತ್​ನಲ್ಲಿ ಅಂಗೀಕಾರಗೊಂಡಾಗ ದೆಹಲಿಯ ಶಾಹೀನ್ ಬಾಗ್​ನಲ್ಲಿ ಧರಣಿಗಳು ಮತ್ತು ಅಸ್ಸಾಂನ ಗುವಾಹಟಿಯಲ್ಲಿ ಪ್ರತಿಭಟನಾ ಸಭೆಗಳು ನಡೆದಿದ್ದವು. ಕೋವಿಡ್-ಪ್ರೇರಿತ ನಿರ್ಬಂಧಗಳು ಮತ್ತು ಲಾಕ್​ಡೌನ್ ಕಾರಣಕ್ಕೆ ಎಲ್ಲಾ ಪ್ರತಿಭಟನೆಗಳು ವಿಫಲಗೊಂಡಿದ್ದವು.

ಸಂಸತ್ತಿನಲ್ಲಿ ಅಂಗೀಕಾರವಾಗಿ ನಾಲ್ಕು ವರ್ಷಗಳ ನಂತರವೂ, ಸಿಎಎ ನಿಯಮಗಳು ಮತ್ತು ಪ್ರಕ್ರಿಯೆಯನ್ನು ಅಂತಿಮಗೊಳಿಸಬೇಕಾಗಿರುವುದರಿಂದ ಜಾರಿಗೆ ಬಂದಿರಲಿಲ್ಲ. ಇದೀಗ ಸರ್ಕಾರ ಎಲ್ಲ ಸಿದ್ಧತೆಗಳ ಬಳಿಕ ಜಾರಿಗೆ ತಂದಿದೆ.

ಕಾಯಿದೆಯ ವ್ಯಾಪ್ತಿಯೇನು?

2015ಕ್ಕಿಂತ ಮೊದಲು ಭಾರತಕ್ಕೆ ಬಂದ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಮುಸ್ಲಿಮೇತರ ವಲಸಿಗರಿಗೆ ಸರ್ಕಾರ ಭಾರತೀಯ ಪೌರತ್ವ ನೀಡಬಹುದು. ನಿಯಮಗಳನ್ನು ಸಿದ್ಧಪಡಿಸಲಾಗಿದೆ ಮತ್ತು ಈಗಾಗಲೇ ಆನ್​ಲೈನ್​ ಪೋರ್ಟಲ್ ಅನ್ನು ಸ್ಥಾಪಿಸಲಾಗಿದೆ. ಅರ್ಜಿದಾರರು ಪ್ರಯಾಣದ ದಾಖಲೆಗಳಿಲ್ಲದೆ ಪ್ರವೇಶದ ವರ್ಷವನ್ನು ಬಹಿರಂಗಪಡಿಸಬಹುದು. ಯಾವುದೇ ಹೆಚ್ಚುವರಿ ದಾಖಲೆಗಳ ಅಗತ್ಯವಿಲ್ಲ ಎಂದು ಮೂಲಗಳು ತಿಳಿಸಿವೆ.

ಏಪ್ರಿಲ್/ಮೇ ತಿಂಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಸಿಎಎಯನ್ನು ಜಾರಿಗೆ ತರಲಾಗುವುದು ಎಂದು ಗೃಹ ಸಚಿವ ಅಮಿತ್ ಶಾ ಒತ್ತಿ ಹೇಳಿದ ಒಂದು ತಿಂಗಳ ನಂತರ ಈ ಬೆಳವಣಿಗೆ ನಡೆದಿದೆ.

ಸಿಎಎ ಮತ್ತು ಅಷ್ಟೇ ವಿವಾದಾತ್ಮಕ ಎನ್ಆರ್​​ಸಿ ಅಥವಾ ರಾಷ್ಟ್ರೀಯ ನಾಗರಿಕರ ನೋಂದಣಿಯನ್ನು ಅಲ್ಪಸಂಖ್ಯಾತ ಸಮುದಾಯಗಳನ್ನು ಗುರಿಯಾಗಿಸಲು ಸಂಯೋಜಿಸಲಾಗುವುದು ಎಂಬ ಭಯವನ್ನು ಅಮಿತ್ ಶಾ ಕಳೆದ ತಿಂಗಳು ನಿವಾರಿಸಿದ್ದರು. “ನಮ್ಮ ಮುಸ್ಲಿಂ ಸಹೋದರರನ್ನು ದಾರಿ ತಪ್ಪಿಸಲಾಗುತ್ತಿದೆ ಮತ್ತು ಪ್ರಚೋದಿಸಲಾಗುತ್ತಿದೆ. ಸಿಎಎ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಕಿರುಕುಳವನ್ನು ಎದುರಿಸಿದ ನಂತರ ಭಾರತಕ್ಕೆ ಬಂದವರಿಗೆ ಮಾತ್ರ ಪೌರತ್ವ ನೀಡುವ ಉದ್ದೇಶವನ್ನು ಹೊಂದಿದೆ. ಇದು ಯಾರ ಪೌರತ್ವವನ್ನೂ ಕಸಿದುಕೊಳ್ಳಲು ಅಲ್ಲ ಎಂದು ಹೇಳಿದ್ದರು.

ಬಿಜೆಪಿಯ ಚುನಾವಣಾ ಭರವಸೆ

ಸಿಎಎ ಜಾರಿಗೆ ತರಲಾಗುವುದು ಎಂಬ ಭರವಸೆಯನ್ನು 2019 ರ ಲೋಕಸಭಾ ಚುನಾವಣೆಯಲ್ಲಿ ಮತ್ತು ವಿವಿಧ ರಾಜ್ಯ ಚುನಾವಣೆಗಳಲ್ಲಿ ಬಿಜೆಪಿಯ ಪ್ರಮುಖ ಭರವಸೆಯಾಗಿತ್ತು. ಬಂಗಾಳದಲ್ಲಿ 2021 ರ ಚುನಾವಣೆ ವೇಳೆಯೂ ಪ್ರತಿಫಲಿಸಿತ್ತು.

ಇದನ್ನೂ ಓದಿ : Mission Divyastra : ಐತಿಹಾಸಿಕ ಮಿಲಿಟರಿ ಸಾಧನೆ, ದೇಶೀಯವಾಗಿ ನಿರ್ಮಿಸಿದ ಅಗ್ನಿ -5 ಕ್ಷಿಪಣಿ ಸಕ್ಸೆಸ್‌ ಘೋಷಿಸಿದ ಮೋದಿ

ಡಿಸೆಂಬರ್​ನಲ್ಲಿ ಬಂಗಾಳದಲ್ಲಿ ನಡೆದ ರ್ಯಾಲಿಯಲ್ಲಿ, ಅಮಿತ್ ಶಾ ವಿರುದ್ಧ ಇದೇ ವಿಚಾರವಾಗಿ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದರು. ನಮ್ಮ ರಾಜ್ಯದಲ್ಲಿ ಅದನ್ನು ಜಾರಿಗೆ ತರುವುದಿಲ್ಲ ಎಂದು ಹೇಳಿದ್ದರು. ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಕೂಡ ಇದೇ ರೀತಿ ಹೇಳಿಕೆ ನೀಡಿದ್ದಾರೆ.

ಕೇರಳ ಮತ್ತು ಪಂಜಾಬ್​ನಂಥ ಇತರ ರಾಜ್ಯಗಳು ಮತ್ತು ಆಗ ಕಾಂಗ್ರೆಸ್ ಆಡಳಿತದಲ್ಲಿದ್ದ ರಾಜಸ್ಥಾನ ಮತ್ತು ಛತ್ತೀಸ್​​ಗಢದಂತ ಇತರ ರಾಜ್ಯಗಳು ಸಹ ಸಿಎಎ ವಿರೋಧಿಸಿ ನಿರ್ಣಯಗಳನ್ನು ಅಂಗೀಕರಿಸಿದವು. ವಾಸ್ತವವಾಗಿ, ಬಂಗಾಳ ಮತ್ತು ಕೇರಳ ಸರ್ಕಾರಗಳು ಇದಕ್ಕೆ ಸಂಬಂಧಿಸಿದ ಕೆಲಸಗಳನ್ನು ನಿಲ್ಲಿಸಿವೆ.

ತೆಲಂಗಾಣದಲ್ಲಿ, ಆಗಿನ ಆಡಳಿತಾರೂಢ ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಭಾರತ್ ರಾಷ್ಟ್ರ ಸಮಿತಿ ಕೂಡ ಇದರ ವಿರುದ್ಧ ನಿರ್ಣಯಗಳನ್ನು ಅಂಗೀಕರಿಸಿದ್ದರು.

ಮುಸ್ಲಿಂ ಪ್ರಾಬಲ್ಯದ ದೇಶಗಳ ಅಲ್ಪಸಂಖ್ಯಾತರು ಧಾರ್ಮಿಕ ಕಿರುಕುಳದಿಂದಾಗಿ ಪಲಾಯನ ಮಾಡಿದರೆ ಪೌರತ್ವ ಪಡೆಯಲು ಪೌರತ್ವ ತಿದ್ದುಪಡಿ ಕಾಯ್ದೆ ಸಹಾಯ ಮಾಡುತ್ತದೆ ಎಂದು ಸರ್ಕಾರ ಹೇಳಿದೆ. ಆದಾಗ್ಯೂ, ಇದು ಮುಸ್ಲಿಮರ ವಿರುದ್ಧ ತಾರತಮ್ಯ ಮಾಡಲು ವಿನ್ಯಾಸಗೊಳಿಸಲಾಗಿದೆ ಮತ್ತು ಸಂವಿಧಾನದ ಜಾತ್ಯತೀತ ತತ್ವಗಳನ್ನು ಉಲ್ಲಂಘಿಸುತ್ತದೆ ಎಂದು ಕಾನೂನಿನ ವಿರೋಧಿಗಳು ಹೇಳುತ್ತಿದ್ದಾರೆ.

Exit mobile version