Site icon Vistara News

CM Award : ಕಳಂಕಿತ ಡಿವೈಎಸ್ಪಿಜಾವೀದ್​ಗೆ ಸಿಎಂ ಪದಕ ನೀಡುವಂತೆ ಶಿಫಾರಸು; ಶಾಸಕ ಕಂದಕೂರ ವಿರೋಧ

CM Award

ಬೆಂಗಳೂರು: ಚಿನ್ನ ಕಳ್ಳತನ ಪ್ರಕರಣದ ಆರೋಪ ಹೊತ್ತಿರುವ ಡಿವೈಎಸ್ಪಿ ಜಾವೀದ್​ ಇನಾಮ್ದಾರ್​ಗೆ ಮುಖ್ಯಮಂತ್ರಿಗಳ ಉತ್ತಮ ಸಾಧನೆ ಪ್ರಶಸ್ತಿ (CM Award) ನೀಡುವಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಶಿಫಾರಸು ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ. ಸುರಪುರ ಉಪವಿಭಾಗದ ಡಿವೈಎಸ್ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಜಾವೀದ್ ಇನಾಮ್ದಾರ್ ವಿರುದ್ಧ ಚಿನ್ನ ಕಳ್ಳತನದ ಆರೋಪವಿದೆ. ಇಂಥವರಿಗೆ ಪ್ರಶಸ್ತಿ ಶಿಫಾರಸು ಮಾಡಿರುವುದು ಅಚ್ಚರಿಗೆ ಮೂಡಿಸಿದೆ ಎಂದು ಶಾಸಕ ಶರಣಗೌಡ ಕಂದಕೂರ ವಿರೋಧ ವ್ಯಕ್ತಪಡಿಸಿ ಸಿಎಂಗೆ ಪತ್ರ ಬರೆದಿದ್ದಾರೆ.

2023ರ ಸಿಎಂ ಪದಕಕ್ಕೆ ಡಿವೈಎಸ್​​ಪಿ ಇನಾಮ್ದಾರ್ ಹೆಸರನ್ನು ಹಿರಿಯ ಅಧಿಕಾರಿಗಳು ಶಿಫಾರಸು ಮಾಡಿರುವುದು ಸರಿಯಲ್ಲ. ಕಳಂಕಿತರಿಗೆ ಸಿಎಂ ಪದಕ ನೀಡಿದರೆ ಪ್ರಾಮಾಣಿಕ ಅಧಿಕಾರಿಗಳ ಆತ್ಮಸ್ಥೈರ್ಯ ಕುಗ್ಗಿಸಿದಂತಾಗುತ್ತದೆ ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ

ಶಾಸಕ ಶರಣಗೌಡ ಕಂದಕೂರ ಪತ್ರದ ಸಾರ ಈ ಕೆಳಗೆ ಇದೆ

ಯಾದಗಿರಿ ಜಿಲ್ಲೆಯ ಸುರಪುರ ಪೊಲೀಸ್ ಉಪ ವಿಭಾಗದ ಉಪಾಧೀಕ್ಷರಾದ (ಡಿವೈಎಸ್‌ಪಿ) ಜಾವೀದ್​ ಇನಾಂದಾರ್​ ಇವರಿಗೆ 2023ನೇ ಸಾಲಿನ ಗೌರವಾನ್ವಿತ ಮುಖ್ಯಮಂತ್ರಿಗಳ ಪದಕಕ್ಕೆ ಈ ಭಾಗದ ಇಲಾಖೆಯ ಹಿರಿಯ ಅಧಿಕಾರಿಗಳು ಶಿಫಾರಸ್ಸು ಮಾಡಿದ್ದಾರೆ. ಮಾನ್ಯ ಪೊಲೀಸ್ ಮಹಾ ನಿರ್ದೇಶಕರಿಗೆ (ಡೈರೆಕ್ಟರ್ ಜನರಲ್ ಆಫ್ ಪೊಲೀಸ್) ಕಳುಹಿಸಿದ್ದಾರೆ ಎಂಬ ಮಾಹಿತಿಗಳು ಬಂದಿವೆ. ಜಾವೀದ್​ ಇನಾಂದಾರ್​ ಅವರ ವಿರುದ್ಧ ಭ್ರಷ್ಟಾಚಾರದ ಸೇರಿದಂತೆ ಹಲವಾರು ಆರೋಪಗಳಿವೆ. ಸರ್ಕಾರವು ಬಡವರಿಗೆ ನೀಡುವ ಆಹಾರಧಾನ್ಯಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವಂತಹ ದಂಧೆಕೋರರ ಜೊತೆಗೆ ಶಾಮೀಲಾಗಿರುವ ಗಂಭೀರ ಆರೋಪಗಳಿವೆ. ಅವೆಲ್ಲವನ್ನೂ ಮರೆಮಾಚಿ ಪದಕಕ್ಕೆ ಶಿಫಾರಸು ಮಾಡಿದ್ದು ದುರದೃಷ್ಟಕರ ಎಂದು ಕಂದಕೂರ ಅವರು ಹೇಳಿದ್ದಾರೆ.

ಇದನ್ನೂ ಓದಿ: BS Yediyurappa : ಲೈಂಗಿಕ ಕಿರುಕುಳ ಕೇಸ್; ಹೈಕೋರ್ಟ್​ನಲ್ಲಿ ಇಂದು ಯಡಿಯೂರಪ್ಪಗೆ ಜಾಮೀನು ಸಿಗದಿದ್ದರೆ ಬಂಧನ

ಜಾವೀದ್​ ಇನಾಂದಾರ್​ ಅವರು ಈ ಹಿಂದೆ (2021ರಲ್ಲಿ) ಬೆಳಗಾವಿ ಜಿಲ್ಲೆ ಗೋಕಾಕ ಉಪ ವಿಭಾಗದ ಪೊಲೀಸ್ ಉಪಾಧೀಕ್ಷರಾಗಿದ್ದ ಸಂದರ್ಭದಲ್ಲಿ, ಹುಕ್ಕೇರಿ ತಾಲೂಕಿನ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ನಡೆದಿದ್ದ 4.9 ಕೆ.ಜಿ. ಚಿನ್ನದ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದವು. ಚಿನ್ನದ ಕಳ್ಳ ಸಾಗಣೆ ತಡೆಗಟ್ಟಬೇಕಾದ ಪೊಲೀಸ್ ಅಧಿಕಾರಿ ಕಳ್ಳರ ಜೊತೆ ಭಾಗಿಯಾಗಿ ಸುಮಾರು 4.9 ಕೆ.ಜಿಯಷ್ಟು ಚಿನ್ನ ಲಪಟಾಯಿಸಿದ್ದರು. ರಾಜ್ಯ ಸರ್ಕಾರ ಈ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿದ್ದು ತನಿಖೆ ಕೊನೆಗೊಂಡಿಲ್ಲ. ಅಂದಿನ ಗೋಕಾಕ್​ ಡಿವೈಎಸ್‌ಪಿಯಾಗಿದ್ದ ಜಾವೀದ್​ ಇನಾಂದಾರ್​ ಅವರನ್ನು ಸರ್ಕಾರ ವರ್ಗಾವಣೆ ಮಾಡಿತ್ತು ಎಂದು ಕಂದಕೂರ ಅವರು ಪತ್ರದಲ್ಲಿ ಬರೆದಿದ್ದಾರೆ.

ಕಾಳಸಂತೆಯಲ್ಲಿ ಆಹಾರ ಧಾನ್ಯ ಮಾರಿದ ಶಹಾಪುರದ ಚಾಮನಾಳದ ಮಲ್ಲಿಕ್ ಎಂಬಾತನ ಜೊತೆ ಡಿವೈಎಸ್ಪಿ ಜಾವೀದ್​ ನಿಕಟ ಸಂಪರ್ಕ ಹೊಂದಿದ್ದಾರೆ. ಆರೋಪಿಗೆ ಖುದ್ದು ಡಿವೈಎಸ್‌ಪಿ ಜಾವೀದ್​ ಇನಾಂದಾರ್​​ ಸನ್ಮಾನ ಮಾಡಿ ಇಲಾಖೆಗೆ ಮಜುಗರ ತಂದಿದ್ದರು. ಅಕ್ಕಿ ಅಕ್ರಮ ಮಾರಾಟ ಪ್ರಕರಣದಲ್ಲಿ ಮಲ್ಲಿಕ್​ನನ್ನು ಪಾರು ಮಾಡಲು ಡಿವೈಎಸ್‌ಪಿ ಜಾವೀದ್​ ​ ಇನಾಂದಾರ್​ ಅವರು ಅಮಾಯಕ ವ್ಯಾಪಾರಿಗಳನ್ನು ಸಿಲುಕಿಸಿದ್ದರು. ಈ ಹಿಂದೆ ನಡೆದ ಅಧಿವೇಶನದಲ್ಲಿ ನಾನು ಇದನ್ನು ಸರ್ಕಾರದ ಗಮನಕ್ಕೆ ತಂದಿರುತ್ತೇನೆ ಎಂದು ಕಂದಕೂರ ಅವರ ಪತ್ರದಲ್ಲಿ ತಿಳಿಸಿದ್ದಾರೆ.

ಅವರ ಬಗ್ಗೆ ಹಿರಿಯ ಅಧಿಕಾರಿಗಳು ನೀಡಿರುವ ಶಿಫಾರಸು ಪತ್ರದಲ್ಲಿ ಎಫ್‌ಡಿಎ ಪರೀಕ್ಷೆಯಲ್ಲಿ ಬ್ಲೂಟೂತ್ ಆಕ್ರಮದ ಪ್ರಕರಣವನ್ನು ಜಾವೀದ್​ ಪತ್ತೆ ಹಚ್ಚಿದ್ದಾರೆ ಎಂದು ಬರೆಯಲಾಗಿದೆ. ವಾಸ್ತವದಲ್ಲಿ, ಕಲಬುರಗಿ ಹಿರಿಯ ಅಧಿಕಾರಿಗಳು ನೀಡಿದ ಮಾಹಿತಿ ಮೇರೆಗೆ ಈ ಪ್ರಕರಣ ಬಯಲಾಗಿದೆ. ಇನ್ನೂ ಅನೇಕ ಪ್ರಕರಣಗಳನ್ನು ಬಗೆ ಹರಿಸಿದ್ದಾರೆ ಎಂದು ಪತ್ರದಲ್ಲಿ ತಿಳಿಸಿರುವ ಅಂಶಗಳು ಬಹುತೇಕ ಸತ್ಯಕ್ಕೆ ದೂರವಾಗಿದೆ. ಈ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಮುಖ್ಯಮಂತ್ರಿ ಪದಕಕ್ಕೆ ಶಿಫಾರಸ್ಸು ಮಾಡುತ್ತಿರುವುದು ಪ್ರಾಮಾಣಿಕ ಅಧಿಕಾರಿಗಳನ್ನು ಕುಗ್ಗಿಸಿದಂತೆ ಎಂದು ಶಾಸಕರು ಹೇಳಿದ್ದಾರೆ.

Exit mobile version