ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) 224 ಸ್ಥಾನಗಳ ಪೈಕಿ 135ರಲ್ಲಿ ಗೆಲುವು ಸಾಧಿಸಿ ಬೀಗುತ್ತಿರುವ ಕಾಂಗ್ರೆಸ್ ತನ್ನ ಗೆಲುವಿನ ಅಭಿಯಾನವನ್ನು (Congress politics) ಲೋಕಸಭಾ ಚುನಾವಣೆಗೂ (Loksabha Election 2024) ಮುಂದುವರಿಸಲು ಕಾರ್ಯತಂತ್ರ ರೂಪಿಸಿದೆ. ವಿಧಾನಸಭಾ ಚುನಾವಣೆಯಲ್ಲಿ ಸಾಕಷ್ಟು ಮೊದಲೇ ಕಾರ್ಯತಂತ್ರಗಳನ್ನು ರೂಪಿಸಿ ಜನರ ಮನಸ್ಸಿನಲ್ಲಿ ಅಚ್ಚೊತ್ತುವ ಮೂಲಕ ಗೆಲುವನ್ನು ದಾಖಲಿಸಿದ ಪಕ್ಷ ಲೋಕಸಭಾ ಚುನಾವಣೆಗೂ ಈಗಿನಿಂದಲೇ ತಯಾರಿಗೆ ಮುಂದಾಗಿದೆ. ಅದರಲ್ಲೂ ಮುಖ್ಯವಾಗಿ ಕ್ಷೇತ್ರವಾರು ಯಾರ ವಿರುದ್ಧ ಯಾರನ್ನು ನಿಲ್ಲಿಸಬೇಕು ಎಂಬ ವಿಚಾರದಲ್ಲಿ ಚರ್ಚೆಗಳು ಆರಂಭವಾಗಿವೆ.
2019ರ ಲೋಕಸಭಾ ಚುನಾವಣೆಯಲ್ಲಿ 28 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 25ರಲ್ಲಿ ಗೆಲುವು ಸಾಧಿಸಿತ್ತು. ಹಾಸನದಲ್ಲಿ ಜೆಡಿಎಸ್‌ನ ಎಚ್.ಡಿ. ರೇವಣ್ಣ, ರಾಮನಗರದಲ್ಲಿ ಕಾಂಗ್ರೆಸ್‌ನ ಡಿ.ಕೆ. ಸುರೇಶ್, ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ಗೆಲುವು ಸಾಧಿಸಿದರು. ಸುಮಲತಾ ಈಗ ಬಿಜೆಪಿ ಬೆಂಬಲಿಸುತ್ತಿದ್ದು, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದಲೇ ಕಣಕ್ಕಿಳಿಯುವ ಸಾಧ್ಯತೆ ಇದೆ.
ರಾಜ್ಯದಲ್ಲಿ ಜನರಿಂದ ಮೂಡಿಬಂದಿರುವ ಉತ್ತಮ ಅಭಿಪ್ರಾಯವನ್ನು ಮತವಾಗಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ನಡೆಸುವಂತೆ ಈಗಾಗಲೇ ಕಾಂಗ್ರೆಸ್ ನಾಯಕರು ಸೂಚನೆ ನೀಡಿದ್ದಾರೆ. ಇದು ಎಲ್ಲಿವರೆಗೆ ಹೋಗಿದೆ ಎಂದರೆ ಸಚಿವ ಸಂಪುಟ ವಿಸ್ತರಣೆಯಲ್ಲೂ ಮುಂದಿನ ಲೋಕಸಭಾ ಚುನಾವಣೆಯದ್ದೇ ಜಪ ಮಾಡಲಾಗಿದೆ.
ಕಾಂಗ್ರೆಸ್ ಟಾರ್ಗೆಟ್ 20 ಸೀಟು
ಕಳೆದ ಬಾರಿ ಒಂದೇ ಸ್ಥಾನದಲ್ಲಿ ಗೆದ್ದಿದ್ದ ಕಾಂಗ್ರೆಸ್ ಈ ಬಾರಿ 20 ಸ್ಥಾನಗಳಲ್ಲಿ ಗೆಲ್ಲಬೇಕು ಎನ್ನುವ ಪ್ಲ್ಯಾನ್ ಹಾಕಿಕೊಂಡಿದೆ. ಈ ಬಾರಿ ಅದು 42% ಮತಗಳನ್ನು ಪಡೆದುಕೊಂಡಿರುವುದು ನೋಡಿದರೆ, ವಿಧಾನಸಭಾ ಕ್ಷೇತ್ರವಾರು ನೋಡಿದರೆ ಇದು ಕಷ್ಟಸಾಧ್ಯವಲ್ಲ. ಆದರೆ, ಕರ್ನಾಟಕಕ್ಕೆ ಮತ್ತು ಕೇಂದ್ರಕ್ಕೆ ಪ್ರತ್ಯೇಕವಾದ ಯೋಚನೆಗಳೊಂದಿಗೆ ಜನರು ಮತ ಹಾಕುವುದರಿಂದ ಅಷ್ಟರ ಮಟ್ಟಿಗೆ ಸೀಟು ಬರಬಹುದೇ ಎನ್ನುವ ಸಂಶಯ ಕಾಂಗ್ರೆಸ್‌ನ ಒಳಗೂ ಇದೆ. ಆದರೆ, ಪ್ರಯತ್ನ ಪಟ್ಟರೆ ಕನಿಷ್ಠ 15 ಸೀಟು ಆದರೂ ಬರಬಹುದು ಎನ್ನುವ ನಿರೀಕ್ಷೆ ಪಕ್ಷದ್ದು. ಕಳೆದ ಬಾರಿ ಜೆಡಿಎಸ್ ಜತೆಗೂ ಸಂಸತ್ ಚುನಾವಣೆಗೆ ಸ್ಪರ್ಧಿಸಿದ್ದ ಕಾಂಗ್ರೆಸ್ ಅದು ಕೂಡಾ ಹಿನ್ನಡೆಯಾಯಿತು ಎಂಬ ಅಭಿಪ್ರಾಯದಲ್ಲಿದೆ. ಹೀಗಾಗಿ ಈ ಬಾರಿ ಸ್ವತಂತ್ರವಾಗಿ ಕಣಕ್ಕಿಳಿಯುವುದು ಕೂಡಾ ಲಾಭ ತರಲಿದೆ ಎಂಬ ನಿರೀಕ್ಷೆ ಹೊತ್ತಿದೆ.
ಕ್ಷೇತ್ರವಾರು ಫೈಟ್
ಈ ಬಾರಿ ಕಾಂಗ್ರೆಸ್ ಒಟ್ಟಾರೆಯಾಗಿ ಸ್ಪರ್ಧೆ ಮಾಡದೆ ಕ್ಷೇತ್ರವಾರು ಪ್ಲ್ಯಾನಿಂಗ್ ಮಾಡಲು ನಿರ್ಧರಿಸಿದೆ. ಈಗಿನಿಂದಲೇ ಹಾಲಿ ಸಂಸದರದ ಬಲ ಮತ್ತು ದೌರ್ಬಲ್ಯಗಳನ್ನು ಅಧ್ಯಯನ ಮಾಡಲಾಗುತ್ತಿದೆ. ಜತೆಗೆ ಅವರ ವಿರುದ್ಧ ಕಾಂಗ್ರೆಸ್ ನಿಂದ ಯಾರನ್ನು ಕಣಕ್ಕಿಳಿಸಬಹುದು ಎಂಬ ಚರ್ಚೆಯೂ ಆರಂಭಗೊಂಡಿದೆ.
ಪ್ರತಿಯೊಂದು ಕ್ಷೇತ್ರದಲ್ಲಿ ಯಾರ ವಿರುದ್ಧ ಯಾರು ಎಂಬ ವಿಚಾರ ಚರ್ಚೆಯಲ್ಲಿದೆ. ಸದ್ಯಕ್ಕೆ ಬಿಜೆಪಿ ಸಂಸದರಾದ ತೇಜಸ್ವಿ ಸೂರ್ಯ, ಪ್ರತಾಪ್ ಸಿಂಹ, ಬಿ.ವೈ. ರಾಘವೇಂದ್ರ, ಪ್ರಹ್ಲಾದ ಜೋಶಿ ಅವರ ವಿರುದ್ಧ ಪ್ರಬಲ ಅಭ್ಯರ್ಥಿ ಕಣಕ್ಕೆ ಇಳಿಸಲು ಪ್ಲ್ಯಾನ್ ರೂಪಿಸಲಾಗಿದೆ. ಸುಮಲತಾ ವಿರುದ್ಧ ಅತ್ಯಂತ ಕಠಿಣ ಅಭ್ಯರ್ಥಿಯನ್ನು ಇಳಿಸುವುದು ಕಾಂಗ್ರೆಸ್ ಚಿಂತನೆ.
ಯಾರ ವಿರುದ್ಧ ಯಾರ ಸ್ಪರ್ಧೆ?
ತೇಜಸ್ವಿ ಸೂರ್ಯ ವಿರುದ್ಧ ಸೌಮ್ಯಾ ರೆಡ್ಡಿ?
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಈಗ ಬಿಜೆಪಿಯ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷರಾಗಿರುವ ತೇಜಸ್ವಿ ಸೂರ್ಯ ಅವರ ವಿರುದ್ಧ ಜಯನಗರದ ಮಾಜಿ ಶಾಸಕಿ ಸೌಮ್ಯಾ ರೆಡ್ಡಿ ಅವರನ್ನು ಕಣಕ್ಕಿಳಿಸಲು ಚಿಂತನೆ ನಡೆದಿದೆ. ಕಳೆದ ಚುನಾವಣೆಯಲ್ಲಿ ಸೌಮ್ಯ ರೆಡ್ಡಿ ಅವರು ಕೇವಲ 16 ಮತಗಳಿಂದ ಸೋಲು ಕಂಡಿದ್ದರು. ಅವರ ತಂದೆ ರಾಮಲಿಂಗಾ ರೆಡ್ಡಿ ಅವರು ಈಗ ಸಚಿವರಾಗಿದ್ದಾರೆ. ಬೆಂಗಳೂರು ದಕ್ಷಿಣ ಭಾಗದಲ್ಲಿ ಇವರಿಬ್ಬರಿಗೂ ಚೆನ್ನಾಗಿ ಹಿಡಿತ ಇರುವುದರಿಂದ ಬಿಜೆಪಿಗೆ ಪ್ರಬಲ ಸ್ಪರ್ಧೆ ಒಡ್ಡಬಹುದು ಎನ್ನುವುದು ಕಾಂಗ್ರೆಸ್ ಲೆಕ್ಕಾಚಾರ.
ಬೆಂಗಳೂರು ಉತ್ತರದಲ್ಲಿ ಸದಾನಂದ ಗೌಡ VS ಕೃಷ್ಣ ಬೈರೇಗೌಡ
ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಮಾಜಿ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅವರ ವಿರುದ್ಧವಾಗಿ ಬ್ಯಾಟರಾಯನಪುರದ ಹಾಲಿ ಶಾಸಕರಾಗಿರುವ ಕೃಷ್ಣಭೈರೇಗೌಡರನ್ನು ಕಣಕ್ಕಿಳಿಸಲು ಈಗಿನಿಂದಲೇ ಸಿದ್ಧಪಡಿಸುವ ಯೋಚನೆ ನಡೆಯುತ್ತಿದೆ. ಇದು ಒಕ್ಕಲಿಗರೇ ದೊಡ್ಡ ಪ್ರಮಾಣದಲ್ಲಿರುವ ಕ್ಷೇತ್ರವಾಗಿದೆ.
ಮೈಸೂರಿನಲ್ಲಿ ಪ್ರತಾಪಸಿಂಹ ವಿರುದ್ಧ ಯತೀಂದ್ರ?
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಈಗ ಬಿಜೆಪಿ ಹಿಡಿತ ಕಡಿಮೆಯಾಗಿದೆ ಎನ್ನುವುದು ಕಾಂಗ್ರೆಸ್‌ನ ಲೆಕ್ಕಾಚಾರ. ಇದಕ್ಕೆ ಪೂರಕವಾಗಿಯೇ ಕೊಡಗಿನ ಎರಡೂ ಕ್ಷೇತ್ರಗಳನ್ನು ಅದು ಗೆದ್ದುಕೊಂಡಿದೆ. ಹೀಗಾಗಿ ಲೋಕಸಭಾ ಕ್ಷೇತ್ರವನ್ನೂ ಗೆಲ್ಲಬಹುದು ಎಂಬ ಲೆಕ್ಕಾಚಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರನ್ನು ಕಣಕ್ಕಿಳಿಸಲು ಚಿಂತನೆ ನಡೆದಿದೆ.
ಶಿವಮೊಗ್ಗದಲ್ಲಿ ರಾಘವೇಂದ್ರ ವಿರುದ್ಧ ಗೀತಾ ಶಿವರಾಜ್ ಕುಮಾರ್?
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದ ಬಿ.ವೈ. ರಾಘವೇಂದ್ರ ಅವರ ವಿರುದ್ಧ ಗೀತಾ ಶಿವರಾಜ್ ಕುಮಾರ್ ಅವರು ಕಣಕ್ಕಿಳಿಯಬೇಕು ಎನ್ನುವುದು ಕಾಂಗ್ರೆಸ್ ನಿರೀಕ್ಷೆ. ಕಳೆದ ಚುನಾವಣೆಯಲ್ಲಿ ಅವರು ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಈ ಬಾರಿ ಮಧು ಬಂಗಾರಪ್ಪ ಅವರು ಕಾಂಗ್ರೆಸ್‌ನಿಂದ ಗೆದ್ದಿದ್ದಾರೆ. ಹೀಗಾಗಿ ಇದನ್ನೇ ಬಂಡವಾಳ ಮಾಡಿಕೊಂಡು ಗೆಲುವು ಪಡೆಯುವ ಪ್ರಯತ್ನ ನಡೆಯಲಿದೆ. ಮಧು ಬಂಗಾರಪ್ಪ ಅವರಿಗೆ ಸಚಿವ ಸ್ಥಾನ ನೀಡದ ಹಿನ್ನೆಲೆಯಲ್ಲಿ ಕುಟುಂಬದಲ್ಲಿ ಸ್ವಲ್ಪ ಅಸಮಾಧಾನ ಇದೆ ಎಂಬ ಮಾತು ಕೇಳಿಬರುತ್ತಿತ್ತು. ಅದಾದ ಬಳಿಕ ಕಾಂಗ್ರೆಸ್ ನಾಯಕ, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ತಾವೇ ಶಿವರಾಜ್ ಕುಮಾರ್ ಅವರ ಮನೆಗೆ ಹೋಗಿ ಮಾತುಕತೆ ನಡೆಸಿದ್ದರು. ಈ ವೇಳೆ, ಶಿವಮೊಗ್ಗದಲ್ಲಿ ಕಣಕ್ಕಿಳಿಯಬೇಕು ಎಂಬ ವಿನಂತಿಯನ್ನೂ ಗೀತಾ ಅವರಿಗೆ ಮಾಡಿದ್ದಾರೆ ಎನ್ನಲಾಗಿದೆ.
ಹುಬ್ಬಳ್ಳಿ-ಧಾರವಾಡದಲ್ಲಿ ಪ್ರಲ್ಹಾದ್ ಜೋಶಿ ವಿರುದ್ಧ ಶೆಟ್ಟರ್?
ಕೇಂದ್ರ ಸಚಿವರಾಗಿರುವ ಪ್ರಲ್ಹಾದ್ ಜೋಶಿ ಅವರ ವಿರುದ್ಧ ಹುಬ್ಬಳ್ಳಿ-ಧಾರವಾಡ ಕ್ಷೇತ್ರದಲ್ಲಿ ಜಗದೀಶ್ ಶೆಟ್ಟರ್ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಯೋಚಿಸುತ್ತಿದೆ. ಬಿಜೆಪಿಯಲ್ಲಿ ಟಿಕೆಟ್ ಸಿಗದೆ ಕಾಂಗ್ರೆಸ್‌ಗೆ ಹೋಗಿ ಸ್ಪರ್ಧಿಸಿದ್ದ ಶೆಟ್ಟರ್ ಅವರು ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದರು. ಈಗ ಪ್ರಲ್ಹಾದ್ ಜೋಶಿ ವಿರುದ್ಧ ಕಠಿಣ ಸ್ಪರ್ಧೆ ನೀಡಲು ಶೆಟ್ಟರ್ ಸೂಕ್ತವೇ ಎಂಬ ಚರ್ಚೆ ನಡೆದಿದೆ. ಒಟ್ಟಾರೆ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಈ ಬಾರಿ ಬಲ ಬಂದಿರುವುದರಿಂದ ಅದು ಸಂಸತ್ ಚುನಾವಣೆಯಲ್ಲೂ ಮತವಾಗಿ ಉಳಿದರೆ ಗೆಲುವು ಸಾಧಿಸಬಹುದು ಎನ್ನುವುದು ಕೈ ಲೆಕ್ಕಾಚಾರ.
ಮಂಡ್ಯದಲ್ಲಿ ನಡೆಯುತ್ತಾ ರಮ್ಯ ಮತ್ತು ಸುಮಲತಾ ಕದನ?
ರಾಜ್ಯಾದ್ಯಂತ ಮಾತ್ರವಲ್ಲ ದೇಶದೆಲ್ಲೆಡೆ ಕುತೂಹಲ ಕೆರಳಿಸಿದ ಕಣ ಮಂಡ್ಯ. ಇಲ್ಲಿ ಕಳೆದ ಬಾರಿ ಪಕ್ಷೇತರರಾಗಿ ಕಣಕ್ಕಿಳಿದ ಸುಮಲತಾ ಅವರು ಜೆಡಿಎಸ್‌ನ ನಿಖಿಲ್ ಕುಮಾರಸ್ವಾಮಿ ಅವರನ್ನು ದೊಡ್ಡ ಅಂತರದಿಂದ ಸೋಲಿಸಿದ್ದರು. ಬಿಜೆಪಿ ನೇರವಾಗಿ ಸುಮಲತಾ ಅವರನ್ನು ಬೆಂಬಲಿಸಿದ್ದರು ಕಾಂಗ್ರೆಸ್ ಕಾರ್ಯಕರ್ತರು ಕೂಡಾ ಬೆಂಗಾವಲಾಗಿ ನಿಂತಿದ್ದರು.
ಈಗ ಸುಮಲತಾ ಅವರು ಅಧಿಕೃತವಾಗಿ ಬಿಜೆಪಿಯನ್ನು ಬೆಂಬಲಿಸುತ್ತಿದ್ದು, ಮುಂದಿನ ಚುನಾವಣೆಯಲ್ಲಿ ಬಿಜೆಪಿಯಿಂದಲೇ ಸ್ಪರ್ಧಿಸುವ ಸಾಧ್ಯತೆ ಇದೆ. ಇಲ್ಲಿ ಈಗ ಸುಮಲತಾ ಅವರ ಪ್ರಭಾವ ಕಡಿಮೆಯಾಗಿದ್ದರೆ ಕಾಂಗ್ರೆಸ್ ಬಲ ಹೆಚ್ಚಾಗಿದೆ. ಹೀಗಾಗಿ, ಸುಮಲತಾ ಅವರನ್ನು ಸೋಲಿಸಬಹುದು ಎನ್ನುವುದು ಕೈ ಲೆಕ್ಕಾಚಾರ. ಒಂದು ವೇಳೆ ಹೀಗಾದರೆ ಇಲ್ಲಿ ಕಾಂಗ್ರೆಸ್-ಜೆಡಿಎಸ್-ಬಿಜೆಪಿ ತ್ರಿಕೋನ ಸ್ಪರ್ಧೆ ಏರ್ಪಡಲಿದೆ. ಇಂಥ ಪರಿಸ್ಥಿತಿಯಲ್ಲಿ ಅತ್ಯಧಿಕ ಜನರನ್ನು ಸೆಳೆಯಬಲ್ಲ ಒಬ್ಬ ತಾರೆಯನ್ನು ಸುಮಲತಾ ವಿರುದ್ಧ ಕಣಕ್ಕಿಳಿಸಬೇಕು ಎಂಬ ಲೆಕ್ಕಾಚಾದರಲ್ಲಿದೆ ಕಾಂಗ್ರೆಸ್. ಹೀಗೆ ಯೋಚಿಸಿದಾಗ ಕಂಡದ್ದೇ ಕಾಂಗ್ರೆಸ್‌ನ ಸ್ಟಾರ್ ಪ್ರಚಾರಕಿ ಹಾಗೂ ಈ ಹಿಂದೆ ಮಂಡ್ಯದ ಸಂಸದೆಯಾಗಿ ದೊಡ್ಡ ಹೆಸರು ಮಾಡಿದ್ದ ಚಿತ್ರನಟಿ ರಮ್ಯಾ. ಮಂಡ್ಯದ ಜನರ ನಡುವೆ ನಿರಂತರ ಸಂಪರ್ಕ ಇಟ್ಟುಕೊಂಡಿರುವ ರಮ್ಯಾ ಅವರಿಗೆ ದೊಡ್ಡ ಪ್ರಮಾಣದಲ್ಲಿ ಅಭಿಮಾನಿಗಳಿದ್ದಾರೆ. ಇದನ್ನು ನಗದೀಕರಿಸಿಕೊಂಡು ಗೆಲ್ಲಬಹುದು ಎಂಬುದು ಕಾಂಗ್ರೆಸ್ ಪ್ಲ್ಯಾನ್. ರಮ್ಯಾ ಅವರು ಸುಮಲತಾ ವಿರುದ್ಧ ಕಣಕ್ಕಿಳಿಯುತ್ತಾರಾ ಎನ್ನುವುದು ಕುತೂಹಲ.
ಇದೇ ರೀತಿ ಬೇರೆ ಕ್ಷೇತ್ರಗಳಲ್ಲಿ ಯಾರನ್ನು ಕಣಕ್ಕಿಳಿಸಬೇಕು ಎಂಬ ಬಗ್ಗೆ ವಿಸ್ತೃತವಾದ ಚರ್ಚೆ ನಡೆಯುತ್ತಿದೆ.
ಇದನ್ನೂ ಓದಿ : Karnataka Election: ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಅಸಾಧ್ಯ: ಸುಮಲತಾ ಅಂಬರೀಶ್
ಇದನ್ನೂ ಓದಿ: Actress Ramya : ನಾನು ಮಂಡ್ಯದ ಗೌಡ್ತಿ, ನೀವೇ ನಂಗೊಬ್ಬ ಒಳ್ಳೆ ಗೌಡ್ರ ಹುಡುಗನ್ನ ಹುಡುಕಿ ಕೊಡಿ ಪ್ಲೀಸ್ ಅಂದ್ರು ರಮ್ಯಾ