Site icon Vistara News

Amit Shah: ರಾಮಮಂದಿರ ಆಹ್ವಾನವನ್ನು ಕಾಂಗ್ರೆಸ್‌ ತಿರಸ್ಕರಿಸಿದ್ದೇಕೆ? ಕಾರಣ ಕೊಟ್ಟ ಅಮಿತ್‌ ಶಾ

Amit Shah

Congress rejected Ayodhya Ram Mandir event invite because: Amit Shah at BJP meeting

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ಭಾರತ ಮಂಟಪದಲ್ಲಿ ಎರಡು ದಿನಗಳ ಬಿಜೆಪಿ ರಾಷ್ಟ್ರೀಯ ಸಮಾವೇಶ (BJP National Council Meeting) ನಡೆಯುತ್ತಿದ್ದು, ಲೋಕಸಭೆ ಚುನಾವಣೆಗೆ (Lok Sabha Election 2024) ರಣತಂತ್ರ ರೂಪಿಸಲಾಗುತ್ತಿದೆ. ಸಭೆಯಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ಅವರು, ಕಾಂಗ್ರೆಸ್‌ (Congress) ವಿರುದ್ಧ ವಾಗ್ದಾಳಿ ನಡೆಸಿದರು. ಹಾಗೆಯೇ, “ಓಲೈಕೆ ರಾಜಕಾರಣಕ್ಕಾಗಿಯೇ ಅಯೋಧ್ಯೆ ರಾಮಮಂದಿರ ಉದ್ಘಾಟನೆಯ ಆಹ್ವಾನವನ್ನು ಕಾಂಗ್ರೆಸ್‌ ತಿರಸ್ಕರಿಸಿತು” ಎಂದು ಹೇಳಿದರು.

ಕಾಂಗ್ರೆಸ್‌ ಹಾಗೂ ಇಂಡಿಯಾ ಒಕ್ಕೂಟದ ವಿರುದ್ಧ ಅಮಿತ್‌ ಶಾ ವಾಗ್ದಾಳಿ ನಡೆಸಿದರು. “ಇಂಡಿಯಾ ಒಕ್ಕೂಟದ ರಾಜಕೀಯಕ್ಕೆ ಯಾವ ಗುರಿ, ಉದ್ದೇಶ ಇದೆ? ನರೇಂದ್ರ ಮೋದಿ ಅವರು ಭಾರತವನ್ನು ಸ್ವಾವಲಂಬಿ ದೇಶವನ್ನಾಗಿ ರೂಪಿಸಲು ಶ್ರಮಿಸುತ್ತಿದ್ದಾರೆ. ಆದರೆ, ಸೋನಿಯಾ ಗಾಂಧಿ ಅವರ ಗುರಿಯು ಮಗ ರಾಹುಲ್‌ ಗಾಂಧಿ ಅವರನ್ನು ಪ್ರಧಾನಿ ಸ್ಥಾನದಲ್ಲಿ ಕೂರಿಸುವುದಾಗಿದೆ. ಶರದ್‌ ಪವಾರ್‌ ಅವರಿಗೆ ಪುತ್ರಿಯನ್ನು ಮುಖ್ಯಮಂತ್ರಿಯನ್ನಾಗಿ ಮಾಡುವ ಕನಸಿದೆ. ಇಂಡಿಯಾ ಒಕ್ಕೂಟದ ನಾಯಕರಿಗೆ ತಮ್ಮ ಮಕ್ಕಳು, ಸಂಬಂಧಿಕರಿಗೆ ಹುದ್ದೆ ನೀಡುವುದೇ ಆಗಿದೆ” ಎಂದು ಕುಟುಕಿದರು.

“ಮಮತಾ ಬ್ಯಾನರ್ಜಿ ಅವರಿಗೆ ತಮ್ಮ ಸಂಬಂಧಿಯನ್ನು ಮುಖ್ಯಮಂತ್ರಿ ಮಾಡುವ ಉಮೇದಿ ಇದೆ. ಎಂ.ಕೆ. ಸ್ಟಾಲಿನ್‌ ಅವರಿಗೂ ಸಿಎಂ ಸ್ಥಾನದಲ್ಲಿ ತಮ್ಮ ಮಗನನ್ನು ಕೂರಿಸಬೇಕು ಎಂಬ ಉತ್ಕಟ ಬಯಕೆ ಇದೆ. ಅಷ್ಟೇ ಅಲ್ಲ, ಲಾಲು ಪ್ರಸಾದ್‌ ಯಾದವ್‌, ಉದ್ಧವ್‌ ಠಾಕ್ರೆ, ಮುಲಾಯಂ ಸಿಂಗ್‌ ಅವರಿಗೂ ಮಕ್ಕಳನ್ನು ಸಿಎಂ ಗಾದಿಯಲ್ಲಿಯೇ ನೋಡಬೇಕು ಎಂಬ ಆಸೆ ಇದೆ. ಇದೊಂದೇ ಕಾರಣಕ್ಕಾಗಿ ಅವರು ರಾಜಕೀಯ ಮಾಡುತ್ತಿದ್ದಾರೆ. ಇದರಿಂದ ದೇಶಕ್ಕೆ ಯಾವುದೇ ಉಪಯೋಗವಿಲ್ಲ” ಎಂದು ಟೀಕಿಸಿದರು.

ಇದನ್ನೂ ಓದಿ: VISTARA TOP 10 NEWS : 400 ಸೀಟ್‌ ಟಾರ್ಗೆಟ್‌ ಕೊಟ್ಟ ಮೋದಿ, ಚುನಾವಣೆ ಕಹಳೆ ಮೊಳಗಿಸಿದ ಕಾಂಗ್ರೆಸ್‌

“ಇಂಡಿಯಾ ಒಕ್ಕೂಟಕ್ಕೆ, ಅದರಲ್ಲೂ ಕಾಂಗ್ರೆಸ್‌ಗೆ ಓಲೈಕೆ ರಾಜಕಾರಣ ಚಾಳಿ ಹೆಚ್ಚಿದೆ. ಇದೇ ಕಾರಣಕ್ಕಾಗಿ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಕಾಂಗ್ರೆಸ್‌ ಬರಲಿಲ್ಲ. ಇನ್ನು, ಕುಟುಂಬವನ್ನೇ ಆಧಾರವನ್ನಾಗಿಟ್ಟುಕೊಂಡಿರುವ ಇಂತಹ ನಾಯಕರು ಬಡವರ ಬಗ್ಗೆ ಯೋಚಿಸಲು ಹೇಗೆ ಸಾಧ್ಯವಾಗುತ್ತದೆ? ಭಾರತದ ಪ್ರಜಾಪ್ರಭುತ್ವಕ್ಕೆ ಕಾಂಗ್ರೆಸ್‌ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಓಲೈಕೆ ಹಾಗೂ ಜಾತಿವಾದದ ಬಣ್ಣ ಬಳಿದಿತ್ತು. ಆದರೆ, ಕಳೆದ 10 ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಿರ್ಮೂಲನೆ ಮಾಡಿದ್ದಾರೆ. ಇದೇ ಕಾರಣಕ್ಕಾಗಿ ಭಾರತವು ಅಭಿವೃದ್ಧಿಯ ಹಾದಿ ಹಿಡಿದಿದೆ. ಮೋದಿ ಆಡಳಿತದ ಮೂರನೇ ಅವಧಿಯಲ್ಲಿ ದೇಶವು ಭಯೋತ್ಪಾದನೆ ಹಾಗೂ ಮಾವೋವಾದದಿಂದ ಮುಕ್ತವಾಗಲಿದೆ” ಎಂದು ತಿಳಿಸಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version