ಶರಮ್ ಎಲ್ ಶೇಖ್: ಹವಾಮಾನ ಬದಲಾವಣೆ ಕುರಿತ ವಿಶ್ವಸಂಸ್ಥೆಯ ಮಾತುಕತೆಯ (COP27) 27ನೇ ಕಲಾಪ ಶನಿವಾರ ನಡೆದಿದ್ದು, ಭಾರತ ಮಂಡಿಸಿದ ಎರಡು ಅಂಶಗಳನ್ನು ಕರಡು ಪ್ರಸ್ತಾಪದಲ್ಲಿ ಸೇರಿಸಲಾಗಿದೆ. ಇದು ಶುಕ್ರವಾರದ ಆರಂಭಿಕ ಕರಡು ಪ್ರಸ್ತಾಪದಲ್ಲಿ ಇದ್ದಿರಲಿಲ್ಲ.
ಭಾರತದ ಮೊದಲ ಅಂಶದಲ್ಲಿ ಕಲ್ಲಿದ್ದಲು ಬಳಕೆಯನ್ನು ಒಂದೇ ಸಲ ಸ್ಥಗಿತಗೊಳಿಸುವುದರ ಬದಲಿಗೆ ಹಂತಗಳಲ್ಲಿ ಕಡಿಮೆ ಮಾಡಬೇಕು ಎಂಬುದಾಗಿತ್ತು. ಎರಡನೆಯದಾಗಿ ಬಡ ಮತ್ತು ದುರ್ಬಲ ವರ್ಗಗಳಿಗೆ ನೆರವು ನೀಡುವ ಇಂಧನ ಸಬ್ಸಿಡಿ ಯೋಜನೆಗಳನ್ನು ಮುಂದುವರಿಸಬೇಕು. ಹಾಗೂ ಅದಕ್ಕೆ ಅಡ್ಡಿಪಡಿಸಬಾರದು ಎಂಬುದು ಎರಡನೇ ಅಂಶವಾಗಿತ್ತು. ಇವುಗಳನ್ನು ಕರಡು ಪ್ರಸ್ತಾಪದಲ್ಲಿ ಸೇರಿಸಲಾಯಿತು.
ಗ್ಲಾಸ್ಗೋ ಹವಾಮಾನ ಒಪ್ಪಂದದಲ್ಲಿ (COP26) ಇದ್ದ ಈ ಎರಡು ಅಂಶಗಳನ್ನು ಭಾರತ ಪುನರುಚ್ಚರಿಸಿತು. ಈ ಎರಡೂ ಅಂಶಗಳು ಮುಂದುವರಿಯಲಿವೆ.