ನವದೆಹಲಿ: ದಲಿತರು, ಒಬಿಸಿಗಳು ಮತ್ತು ಬುಡಕಟ್ಟು ಜನರು ನಮ್ಮ ಸರ್ಕಾರದ ಬಡವರ ಪರ ಯೋಜನೆಗಳ ಅತಿದೊಡ್ಡ ಫಲಾನುಭವಿಗಳು ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಶನಿವಾರ ಹೇಳಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ 25 ಕೋಟಿ ಜನರನ್ನು ಬಡತನದಿಂದ ಹೊರ ತಂದಿರುವುವು ದೊಡ್ಡ ಸಾಧನೆಯಾಗಿದೆ ಎಂದು ಹೇಳಿಕೊಂಡಿದ್ದಾರೆ.
ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ‘ವಿಕಸಿತ್ ಭಾರತ್ ವಿಕಸಿತ್ ಗುಜರಾತ್’ ಕಾರ್ಯಕ್ರಮವನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು. ಈ ವೇಳೆ ಅವರು ಪ್ರಧಾನ ಮಂತ್ರಿ ಆವಾಸ್ ಯೋಜನೆ (ಪಿಎಂಎವೈ) ಮತ್ತು ಇತರ ವಸತಿ ಯೋಜನೆಗಳ ಅಡಿಯಲ್ಲಿ ರಾಜ್ಯದಲ್ಲಿ 1.3 ಲಕ್ಷಕ್ಕೂ ಹೆಚ್ಚು ಮನೆಗಳನ್ನು ಉದ್ಘಾಟಿಸಿದರು ಮತ್ತು ಶಂಕುಸ್ಥಾಪನೆ ನೆರವೇರಿಸಿದರು.
ನಮ್ಮ ಸರ್ಕಾರದ ಬಡವರ ಪರ ಯೋಜನೆಗಳ ಅತಿದೊಡ್ಡ ಫಲಾನುಭವಿಗಳು ದಲಿತರು, ಒಬಿಸಿಗಳು (ಇತರ ಹಿಂದುಳಿದ ಜಾತಿಗಳು) ಮತ್ತು ಬುಡಕಟ್ಟು ಜನಾಂಗದವರು ಎಂದು ಮೋದಿ ಹೇಳಿದರು. ಬಡವರು, ಯುವಕರು, ರೈತರು ಮತ್ತು ಮಹಿಳೆಯರು ಅಭಿವೃದ್ಧಿ ಹೊಂದಿದ ಭಾರತದ ಆಧಾರ ಸ್ತಂಭಗಳು ಎಂಬುದಾಗಿಯೂ ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಅವರು ವಸತಿ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು. ಇದು “ಮೋದಿ ಕಿ ಗ್ಯಾರಂಟಿ” ಯ ಈಡೇರಿಕೆ ಎಂದು ಹೇಳಿದರು. ಗುಜರಾತ್ನ ಎಲ್ಲಾ ಜಿಲ್ಲೆಗಳಲ್ಲಿ 180 ಕ್ಕೂ ಹೆಚ್ಚು ಸ್ಥಳಗಳಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು., ಮುಖ್ಯ ಕಾರ್ಯಕ್ರಮ ಬನಸ್ಕಾಂತ ಜಿಲ್ಲೆಯ ದೀಸಾದಲ್ಲಿ ನಡೆಯಿತು.
ತ್ವರಿತಗತಿಯಲ್ಲಿ ಬಡವರಿಗೆ ಮನೆ, ಕಮಿಷನ್ ದಂಧೆ ಇಲ್ಲ
2014 ರ ಹಿಂದಿನ ಅವಧಿಗೆ ಹೋಲಿಸಿದರೆ ಬಡವರಿಗೆ ಮನೆಗಳ ನಿರ್ಮಾಣವು ತ್ವರಿತಗತಿಯಲ್ಲಿ ನಡೆಯುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಬಡವರಿಗೆ ಮನೆಗಳನ್ನು ನಿರ್ಮಿಸಲು ಅನುದಾನವು ಅತ್ಯಲ್ಪವಾಗಿತ್ತು ಮತ್ತು ಹಿಂದಿನ ಕಾಲದಲ್ಲಿ ಕಮಿಷನ್ ಇತ್ಯಾದಿಗಳ ರೂಪದಲ್ಲಿ ಅನುದಾನ ಸೋರಿಕೆ ಇದ್ದವು. ಬಡವರ ಮನೆಗಳಿಗೆ ವರ್ಗಾವಣೆಯಾದ ಹಣ ಈಗ 2.25 ಲಕ್ಷ ರೂ.ಗಿಂತ ಹೆಚ್ಚಾಗಿದೆ. ಮಧ್ಯವರ್ತಿಗಳನ್ನು ತೊಡೆದುಹಾಕಿ ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ :PM Modi: ಪ್ರಧಾನಿ ನಿದ್ರಿಸುವ ಪೋಸ್ಟರ್ ಟ್ವೀಟ್; ಗಾಢ ನಿದ್ರೆಯಿಂದ ಈಗ ಎದ್ದೀರಾ ಎಂದು ಸಿಎಂಗೆ ಬೊಮ್ಮಾಯಿ ಪ್ರಶ್ನೆ
ಈಗ ಕುಟುಂಬಗಳ ಅಗತ್ಯಗಳಿಗೆ ಅನುಗುಣವಾಗಿ ಮನೆಗಳನ್ನು ನಿರ್ಮಿಸುವ ಸ್ವಾತಂತ್ರ್ಯವಿದೆ. ಆದರೆ ಶೌಚಾಲಯಗಳನ್ನು ನಿರ್ಮಿಸುವುದು, ನಲ್ಲಿ ನೀರಿನ ಸಂಪರ್ಕಗಳು, ವಿದ್ಯುತ್ ಮತ್ತು ಅನಿಲ ಸಂಪರ್ಕಗಳನ್ನು ಪೂರೈಸುವುದು ಸಹ ಸೇರಿಕೊಂಡಿದೆ ಅವರು ಹೇಳಿದರು. “ಈ ಸೌಲಭ್ಯಗಳು ಬಡವರಿಗೆ ಹಣವನ್ನು ಉಳಿಸಲು ಸಹಾಯ ಮಾಡಿವೆ” ಎಂಬುದಾಗಿ ಅವರು ಹೇಳಿದರು.
ಪಿ.ಎಂ. ಆವಾಸ್ ಯೋಜನೆಯಲ್ಲಿ ಗುಜರಾತ್ ಸಾಧಿಸಿರುವ ಪ್ರಗತಿಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ರಾಜ್ಯದ ನಗರ ಪ್ರದೇಶಗಳಲ್ಲಿ 9 ಲಕ್ಷಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಲಾಗಿದೆ ಎಂದರು. ಪಿಎಂ ಆವಾಸ್ – ಗ್ರಾಮೀಣ ಅಡಿಯಲ್ಲಿ, ಗ್ರಾಮೀಣ ಪ್ರದೇಶಗಳಲ್ಲಿ 5 ಲಕ್ಷಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಲಾಗಿದೆ. ಗುಣಮಟ್ಟ ಮತ್ತು ತ್ವರಿತ ನಿರ್ಮಾಣವನ್ನು ಖಚಿತಪಡಿಸಿಕೊಳ್ಳಲು ಹೊಸ ತಂತ್ರಜ್ಞಾನವನ್ನು ನಿಯೋಜಿಸಲಾಗುತ್ತಿದೆ ಎಂದು ಅವರು ಹೇಳಿದರು. ಲೈಟ್ ಹೌಸ್ ಯೋಜನೆಯಡಿ 1,100 ಮನೆಗಳನ್ನು ನಿರ್ಮಿಸಲಾಗಿದೆ ಎಂದು ಅವರು ಹೇಳಿದರು.