Site icon Vistara News

David Johnson : ಬದುಕಿನ ಆಟ ಮುಗಿಸಿದ ‘ವೇಗ ದೂತ’

David Johnson

ಸನತ್ ರೈ, ಬೆಂಗಳೂರು

ಯಾರೋ ಕರೆದಂತೆ ಭಾಸವಾಗುತ್ತಿದೆ.. ಬಾ, ಬಾ, ಬಾ, ಅಂತ ಕೂಗಿ ಕರೆಯುವ ಧ್ವನಿ ಕೇಳುತ್ತಿದೆ. ನನಗೆ ತುಂಬಾನೇ ಭಯವಾಗುತ್ತಿದೆ. ನಾನು ಜಾಸ್ತಿ ದಿನ ಬದುಕಲ್ಲ ಅಂತ ಅನ್ನಿಸುತ್ತಿದೆ… ಹೀಗೆ ತನ್ನ ಜೀವನದ ಕೊನೆಯ ದಿನಗಳಲ್ಲಿ ತನ್ನ ಪತ್ನಿ ಜೊತೆ ಹೇಳಿಕೊಂಡಿದ್ದವ, ಕೊನೆಗೂ ‘ಕಾಲ’ನ ಕರೆಗೆ ಓಗೊಟ್ಟು ಈ ಲೋಕದ ಯಾತ್ರೆ ಮುಗಿಸಿದ. ಹೌದು.. ಆತನ ಹೆಸರು ಡೇವಿಡ್ ಜಾನ್ಸನ್ (David Johnson). 90ರ ದಶಕದ ಭಾರತದ ಘಾತಕ ವೇಗಿ. ಯಾಕಂದ್ರೆ, ಅದು ಗಂಟೆಗೆ 157.8 ಕಿಲೋ ಮೀಟರ್ ವೇಗದಲ್ಲಿ ನುಗ್ಗಿ ಬರುತ್ತಿದ್ದಂತಹ ಬೆಂಕಿ ಎಸೆತಗಳು.

ಡೇವಿಡ್‌ ಅವರ ಡೆವಿಲ್ ಎಸೆತಗಳಲ್ಲಿ ಸ್ಥಿರತೆ ಇರಲಿಲ್ಲ. ಆದ್ರೂ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾದ ಬ್ಯಾಟರ್‌ಗಳ ಎದೆಯಲ್ಲಿ ನಡುಕ ಹುಟ್ಟಿಸಿದವರು ನಮ್ಮ ಕರ್ನಾಟಕದ ವೇಗ ದೂತ. ಇನ್ನು ರಣಜಿ ಕ್ರಿಕೆಟ್‌ನಲ್ಲಂತೂ ಡೇವಿಡ್ ಜಾನ್ಸನ್ ಕರ್ನಾಟಕದ ಬ್ರಹ್ಮಾಸ್ತ್ರವಾಗಿದ್ದರು. ಸ್ಪೀಡ್ ಗನ್ ಎಂದೇ ಫೇಮಸ್ ಆಗಿದ್ದ ಡೇವಿಡ್‌ ಜಾನ್ಸನ್‌ ಅವರು ಸಚಿನ್ ತೆಂಡುಲ್ಕರ್ ಅವರನ್ನೇ ಕ್ಲೀನ್ ಬೌಲ್ಡ್ ಮಾಡಿದ್ದರು. ನೆಟ್ ಬೌಲರ್ ಆಗಿ ಸಚಿನ್‌ಗೆ ಬೌಲಿಂಗ್ ಮಾಡಿದ್ದ ಡೇವಿಡ್ ಜಾನ್ಸನ್‌, ಕ್ರಿಕೆಟ್ ಜೀನಿಯಸ್‌ನ ಮನ ಗೆದ್ದಿದ್ದರು.

ಆದ್ರೆ ಡೇವಿಡ್ ಜಾನ್ಸನ್ ಅಂದುಕೊಂಡಂತೆ ಅವರ ಕ್ರಿಕೆಟ್ ಜರ್ನಿ ಸಾಗಲಿಲ್ಲ. ಅದ್ಭುತ ಪ್ರತಿಭೆ ಇದ್ರೂ ಅವಕಾಶಗಳು ಒಲಿದು ಬರಲಿಲ್ಲ. ಸಿಕ್ಕ ಎರಡು ಅವಕಾಶಗಳಲ್ಲಿ ಮಿಂಚಿನ ವೇಗವಿದ್ರೂ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ಆಗಲಿಲ್ಲ. ಆಪ್ತ ಗೆಳೆಯರಾದ ಜಾವಗಲ್ ಶ್ರೀನಾಥ್‌, ವೆಂಕಟೇಶ್ ಪ್ರಸಾದ್‌ ಸ್ಥಿರ ಪ್ರದರ್ಶನದ ಮುಂದೆ ಡೇವಿಡ್ ಜಾನ್ಸನ್‌ ವೇಗದ ಎಸೆತಗಳು ಲೆಕ್ಕಕ್ಕೆ ಬರಲಿಲ್ಲ.

ಹೀಗಾಗಿಯೇ ಡೇವಿಡ್ ಜಾನ್ಸನ್ ಕೇವಲ ಎರಡೇ ಎರಡು ಟೆಸ್ಟ್ ಪಂದ್ಯಗಳಿಗೆ ಸೀಮಿತವಾದರು. 1996 ಅಕ್ಟೋಬರ್ 10ರಂದು ಆಸೀಸ್ ವಿರುದ್ಧ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿದರೆ, 1996 ಡಿಸೆಂಬರ್ 26ರಂದು ಕೊನೆಯ ಟೆಸ್ಟ್ ಪಂದ್ಯವನ್ನಾಡಿದ್ದರು. 2 ಪಂದ್ಯಗಳಲ್ಲಿ ಒಟ್ಟು ಮೂರು ವಿಕೆಟ್ ಪಡೆದಿದ್ದಾರೆ. ಅದರಲ್ಲೂ ಘಾತಕ ವೇಗಕ್ಕೆ ಆಸೀಸ್‌ನ ಮೈಕೆಲ್ ಸ್ಲೇಟರ್ ವಿಕೆಟ್ ಉರುಳಿಸಿದ್ದು ಇತಿಹಾಸದ ಪುಟದಲ್ಲಿ ಇಂದಿಗೂ ಉಳಿದಿದೆ.

ಸಿಗದ ಅದೃಷ್ಟ

ನಂತರ ಡೇವಿಡ್ ಜಾನ್ಸನ್‌‌ಗೆ ಭಾರತ ಕ್ರಿಕೆಟ್ ತಂಡದ ಅದೃಷ್ಟದ ಬಾಗಿಲು ತೆರೆಯಲೇ ಇಲ್ಲ. ಬಳಿಕ ಕೇವಲ ಕರ್ನಾಟಕ ರಣಜಿ ತಂಡಕ್ಕೆ ಸೀಮಿತವಾದ್ರು. 2001ರಲ್ಲಿ ತನ್ನ ಕ್ರಿಕೆಟ್ ಬದುಕಿಗೂ ವಿದಾಯ ಹೇಳಿದ್ದರು. 39 ರಣಜಿ ಪಂದ್ಯಗಳನ್ನು ಆಡಿರುವ ಡೇವಿಡ್ ಜಾನ್ಸನ್, 125 ವಿಕೆಟ್ ಕಬಳಿಸಿದ್ರು. ಕೇರಳ ವಿರುದ್ಧ 152ಕ್ಕೆ ಹತ್ತು ವಿಕೆಟ್ ಪಡೆದಿರುವುದು ಅವರ ಬೆಸ್ಟ್ ಬೌಲಿಂಗ್ ಫಿಗರ್‌. ಮತ್ತೊಂದೆಡೆ ಡೇವಿಡ್ ಜಾನ್ಸನ್ ಉತ್ತಮ ಬ್ಯಾಟರ್ ಕೂಡ ಆಗಿದ್ದರು. ಬೌಲಿಂಗ್‌ನಲ್ಲಿ ದೊಡ್ಡ ಗಣೇಶ್ ಜೊತೆ ಸೇರಿಕೊಂಡು ಎದುರಾಳಿ ತಂಡಕ್ಕೆ ಕಾಡುತ್ತಿದ್ದ ಈ ಜೋಡಿ ಬ್ಯಾಟಿಂಗ್‌ನಲ್ಲೂ ಎದುರಾಳಿ ಬೌಲರ್‌ಗಳನ್ನು ಪೀಡಿಸುತ್ತಿದ್ದರು.

ಡೇವಿಡ್ ಜಾನ್ಸನ್ ಕ್ರಿಕೆಟ್ ಬದುಕು ಅಂದುಕೊಂಡಂತೆ ಸಾಗಲಿಲ್ಲ. ಅವಕಾಶಗಳ ಕೊರತೆಯಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದರು.vಖಿನ್ನತೆಗೆ ಒಳಗಾದ ಡೇವಿಡ್‌ ಜಾನ್ಸನ್ ಅವರು ತನ್ನ ಬದುಕಿನ ಬಂಡಿಯ ಕೀಲನ್ನು ಮುರಿದುಕೊಂಡರು. ತನ್ನ ವರ್ಣರಂಜಿತ ಕ್ರಿಕೆಟ್ ಬದುಕನ್ನು ಕೈಯ್ಯಾರೆ ಹಾಳು ಮಾಡಿಕೊಂಡರು. ಇನ್ನೊಂದೆಡೆ ಹೆಣ್ಣೂರಿನಲ್ಲಿ ಡೇವಿಡ್ ಜಾನ್ಸನ್ ಕ್ರಿಕೆಟ್ ಅಕಾಡೆಮಿ ಶುರು ಮಾಡಿದ್ರೂ ಅದು ಕೈ ಹಿಡಿಯಲಿಲ್ಲ. ಹಾಗೇ ಸರ್ಜಾಪುರದಲ್ಲಿ ಗೆಳೆಯನ ಅಕಾಡೆಮಿಯಲ್ಲಿ ಕೆಲವೊಂದು ಸಮಯ ವೇಗದ ಬೌಲಿಂಗ್ ಕೋಚ್‌ ಆಗಿ ಕಾರ್ಯ ನಿರ್ವಹಿಸಿದ್ದರು.

ಇದನ್ನೂ ಓದಿ: T20 World Cup 2024 : ಸೂಪರ್​ 8 ಹಂತದ ಪಂದ್ಯದಲ್ಲಿ ಅಫಘಾನಿಸ್ತಾನ ವಿರುದ್ಧ ಭಾರತಕ್ಕೆ47 ರನ್ ಭರ್ಜರಿ ಜಯ

ಆದ್ರೆ ಎಷ್ಟೇ ಪ್ರಯತ್ನ ಪಟ್ರೂ ಡೇವಿಡ್ ಜಾನ್ಸನ್ ಆರ್ಥಿಕವಾಗಿ ಸಾಕಷ್ಟು ಹಿನ್ನಡೆ ಅನುಭವಿಸಿದ್ದರು. ಸಾಕಷ್ಟು ಬಾರಿ ಗೆಳೆಯರು ಸಹಕಾರ ನೀಡಿದ್ರು. ಆದ್ರೆ ಮತ್ತೆ ಸಹವಾಸ ದೋಷದಿಂದ ಮತ್ತೆ ಎಡವಿ ಬಿದ್ರು. ರಾಜಪಥದಲ್ಲಿ ಸಾಗುತ್ತಿದ್ದ ತನ್ನ ಬದುಕನ್ನು ಕವಲುದಾರಿಯಲ್ಲಿ ಸಾಗುವಂತೆ ಮಾಡಿಕೊಂಡರು. ದುಡಿಯಬೇಕು ಎಂದು ಮನಸ್ಸು ಹೇಳುತ್ತಿದ್ರೂ ದೇಹ ಸ್ಪಂದಿಸುತ್ತಿರಲಿಲ್ಲ. ಆದ್ರೂ ಡೇವಿಡ್ ಜಾನ್ಸನ್ ಉತ್ಸಾಹ ಕಳೆದುಕೊಂಡಿರಲಿಲ್ಲ. ಎಲ್ಲವೂ ಅಂದುಕೊಂಡಂತೆ ಆಗುತ್ತಿದ್ರೆ ಇದೀಗ ಡೇವಿಡ್ ಜಾನ್ಸನ್, ಕರ್ನಾಟಕ ಕ್ರಿಕೆಟ್ ಅಕಾಡೆಮಿಯ ವೇಗದ ಬೌಲಿಂಗ್ ಕೋಚ್‌ ಆಗಬೇಕಾಗಿತ್ತು. ಕೆಎಸ್‌ಸಿಎ ಕೂಡ ಡೇವಿಡ್‌ಗೆ ಆರ್ಥಿಕ ಸಹಾಯ ಮಾಡಲು ಮುಂದಾಗಿತ್ತು.

ಆದ್ರೆ ವಿಧಿಯಾಟ ಬೇರೆನೇ ಆಗಿತ್ತು. ಜೂನ್ 20, 2024ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಬಾಲ್ಕನಿಯಲ್ಲಿ ವಾಕ್ ಮಾಡುತ್ತಿದ್ದಾಗ ಆಯ ತಪ್ಪಿ ಕೆಳಗೆ ಬಿದ್ದು ಉಸಿರು ಚೆಲ್ಲಿದ್ರು. 53ನೇ ವಯಸ್ಸಿಗೆ ಪಯಣ ಮುಗಿಸಿದ ಡೇವಿಡ್ ಜಾನ್ಸನ್ ಸಾವಿನ ಹಿಂದೆ ಸಾಕಷ್ಟು ಅನುಮಾನಗಳು ಮೂಡಿವೆ. ಆದ್ರೆ ಡೇವಿಡ್ ಪತ್ನಿ ಅವ್ರಿಲ್ಲಾ ಸ್ಪಷ್ಟನೆ ನೀಡಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಡೇವಿಡ್ ಬಾಲ್ಕನಿಯಿಂದ ಆಯತಪ್ಪಿ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ಅದು ಏನೇ ಆಗಲಿ, ಡೇವಿಡ್ ಜಾನ್ಸನ್ ಎಂಬ ಘಾತಕ ವೇಗಿ ತನ್ನ ಬದುಕಿನ ಲೀಲೆ ಮುಗಿಸಿದ್ದಾರೆ. ಇನ್ನು ಏನಿದ್ರೂ ಅವರ ನೆನಪು ಮಾತ್ರ.

ಡೇವಿಡ್ ಜಾನ್ಸನ್ ಕ್ರಿಕೆಟ್ ಜರ್ನಿ

ಡೇವಿಡ್ ಜಾನ್ಸನ್ ಹುಟ್ಟಿದ್ದು ಅ.16,1971, ಹಾಸನದ ಅರಸೀಕೆರೆ
1992ರಲ್ಲಿ ಕರ್ನಾಟಕ ರಣಜಿ ತಂಡಕ್ಕೆ ಡೇವಿಡ್ ಜಾನ್ಸನ್ ಎಂಟ್ರಿ
19996ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಚೊಚ್ಚಲ ಟೆಸ್ಟ್ ಪಂದ್ಯ ಆಡಿದ್ದ ಜಾನ್ಸನ್
ಚೊಚ್ಚಲ ಪಂದ್ಯದಲ್ಲೇ ಮೈಕೆಲ್ ಸ್ಲೇಟರ್ ವಿಕೆಟ್ ಪಡೆದಿದ್ದ ಡೇವಿಡ್ ಜಾನ್ಸನ್‌
ಟೀಮ್ ಇಂಡಿಯಾ ಪರ ಎರಡು ಟೆಸ್ಟ್ ಪಂದ್ಯಗಳನ್ನು ಆಡಿದ್ದ ಜಾನ್ಸನ್
ಆಸೀಸ್ ವಿರುದ್ಧ 157.8 ಕಿ.ಮೀ. ವೇಗದಲ್ಲಿ ಬೌಲಿಂಗ್ ಮಾಡಿದ್ದ ಜಾನ್ಸನ್
1996ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೊನೆಯ ಟೆಸ್ಟ್ ಪಂದ್ಯವನ್ನಾಗಿದ್ದ ಡೇವಿಡ್
ಕೇರಳ ವಿರುದ್ಧ 152ಕ್ಕೆ 10 ವಿಕೆಟ್ ಪಡೆದು ಭಾರತ ತಂಡದ ಕದ ತಟ್ಟಿದ ಡೇವಿಡ್
ರಾಜ್ಯದ ಪರ 39 ರಣಜಿ ಪಂದ್ಯಗಳಲ್ಲಿ 125 ವಿಕೆಟ್ ಪಡೆದಿರುವ ಡೇವಿಡ್ ಜಾನ್ಸನ್

Exit mobile version