Site icon Vistara News

IPL 2024 : ಲಕ್ನೊ ಸೂಪರ್​ ಜೈಂಟ್ಸ್ ವಿರುದ್ಧ ಡೆಲ್ಲಿ ತಂಡಕ್ಕೆ 6 ವಿಕೆಟ್​ ವಿಜಯ

IPL 2024

ಲಖನೌ: ಕುಲ್ದೀಪ್ ಯಾದವ್​ (20 ರನ್​ಗೆ 3 ವಿಕೆಟ್) ಮಾರಕ ಬೌಲಿಂಗ್​​ ಹಾಗೂ ಜೇಕ್ ಫ್ರೇಸರ್-ಮೆಕ್ಗುರ್ಕ್ (55 ರನ್​) ಅರ್ಧ ಶತಕದ ನೆರವು ಪಡೆದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಐಪಿಎಲ್ 2024ರ (IPL 2024) 26ನೇ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ 6 ವಿಕೆಟ್​ಗಳ ಗೆಲುವು ಸಾಧಿಸಿದೆ. ಇದು ಡೆಲ್ಲಿ ತಂಡಕ್ಕೆ ಹಾಲಿ ಆವೃತ್ತಿಯಲ್ಲಿ ಲಭಿಸಿದ ಎರಡನೇ ಗೆಲುವಾಗಿದೆ. ಇದರೊಂದಿಗೆ ಅಂಕಪಟ್ಟಿಯಲ್ಲಿ ಆರ್​ಸಿಬಿಯನ್ನು ಒಂದು ಸ್ಥಾನ ಕೆಳಕ್ಕೆ ತಳ್ಳಿ 9ನೇ ಸ್ಥಾನಕ್ಕೆ ಏರಿದೆ. ಸೋಲಿನ ಹೊರತಾಗಿಯೂ ಲಕ್ನೊ ತಂಡ ನಾಲ್ಕನೇ ಸ್ಥಾನದಲ್ಲಿ ಉಳಿದಿದೆ.

ಇಲ್ಲಿನ ಅಟಲ್​ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಲಕ್ನೊ ತಂಡ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ಗೆ 167 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಡೆಲ್ಲಿ ತಂಡ ಇನ್ನೂ 11 ಎಸೆತಗಳು ಬಾಕಿ ಇರುವಂತೆಯೇ 4 ವಿಕೆಟ್​ಗೆ 170 ರನ್ ಬಾರಿಸಿ ಗೆಲುವು ಸಾಧಿಸಿತು. ಈ ಮೂಲಕ ತವರಿನ ತಂಡಕ್ಕೆ ಸೋಲುಣಿಸಿ ಗೆಲುವಿನ ಹಳಿಗೆ ಮರಳಿತು. ರಿಷಭ್ ಪಂತ್ ಕೂಡ ಬ್ಯಾಟಿಂಗ್​ನಲ್ಲಿ ಅಮೋಘ ಪ್ರದರ್ಶನ ನೀಡಿದರು. ಅವರು 24 ಎಸೆತಕ್ಕೆ 41 ರನ್ ಬಾರಿಸಿತು.

ಇದನ್ನೂ ಓದಿ: IPL 2024 : ಆನ್​ಫೀಲ್ಡ್​ ಅಂಪೈರ್​ ಜತೆ ವಾಗ್ವಾದ ನಡೆಸಿದ ರಿಷಭ್ ಪಂತ್​; ಏನಾಯಿತು ಅವರಿಗೆ?

ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಲು ಹೊರಟ ಡೆಲ್ಲಿ ತಂಡ ಉತ್ತಮ ಆರಂಭವನ್ನೇನೂ ಪಡೆಯಲಿಲ್ಲ. ಲಯ ಕಂಡುಕೊಳ್ಳುವುದಕ್ಕೆ ಶ್ರಮಿಸುತ್ತಿದ್ದ ಡೇವಿಡ್​ ವಾರ್ನರ್​ 8 ರನ್​ಗೆ ನಿರ್ಗಮಿಸಿದರು. ಇದರೊಂದಿಗೆ 24 ರನ್​ಗಳಿಗೆ ಡೆಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ಆದರೆ, ಪೃಥ್ವಿ ಶಾ ಉಪಯುಕ್ತ 32 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ಆದರೆ 63 ರನ್​ಗೆ ಎರಡನೇ ವಿಕೆಟ್​ ಉರುಳಿತು.

ಮೆಕ್ಗುರ್ಕ್- ಪಂತ್ ಜತೆಯಾಟ

ಸಣ್ಣ ಮೊತ್ತಕ್ಕೆ ಎರಡು ವಿಕೆಟ್ ಉರುಳಿದ ಕಾರಣ ಪಂತ್​ ಹಾಗೂ ಮೆಗ್​ಕುರ್ಕ್​ ಆರಂಭದಲ್ಲಿ ಎಚ್ಚರಿಕೆಯ ಆಟವಾಡಿ ಇನಿಂಗ್ಸ್​ ಕಟ್ಟಿದರು. ಈ ಜೋಡಿ ತಂಡದ ಮೊತ್ತವನ್ನು 140ಕ್ಕೆ ಕೊಂಡೊಯ್ದಿತು. ಹೀಗಾಗಿ ಡೆಲ್ಲಿ ತಂಡಕ್ಕೆ ಗೆಲುವಿನ ಭರವಸೆ ಮೂಡಿತು. ಮೆಗ್​ಕುರ್ಕ್​ 5 ಸಿಕ್ಸರ್ ಸಮೇತ 55 ರನ್ ಬಾರಿಸಿದರೆ ಪಂತ್ ಕೂಡ ಸ್ಫೋಟಕ ಬ್ಯಾಟಿಂಗ್ ಮಾಡಿದರು. ಕೊನೆಯಲ್ಲಿ ಟ್ರಿಸ್ಟಾನ್ ಸ್ಟಬ್ಸ್​ 15 ಹಾಗೂ ಶಾಯ್​ ಹೋಪ್​ 11 ರನ್ ಬಾರಿಸಿದರು.

ಬದೋನಿ ಆಸರೆ

ಮೊದಲು ಬ್ಯಾಟ್ ಮಾಡಿದ ಲಕ್ನೊ ತಂಡ ಹೆಚ್ಚು ಪರಿಣಾಮಕಾರಿಯಾಗಿ ಬ್ಯಾಟ್ ಮಾಡಲಿಲ್ಲ. ಕ್ವಿಂಟನ್ ಡಿ ಕಾಕ್​ 19 ರನ್​ಗೆ ಔಟಾದರೆ ರಾಹುಲ್ 22 ಎಸೆತಕ್ಕೆ 39 ರನ್ ಬಾರಿಸಿ ಔಟಾದರು. ನಂತರದಲ್ಲಿ ಲಕ್ನೊ ಬ್ಯಾಟಿಂಗ್ ಬಲ ಕುಸಿಯಿತು. ದೇವದತ್​​ ಪಡಿಕ್ಕಲ್​ 3, ಸ್ಟೊಯ್ನಿಸ್​ 8 ರನ್​, ಪೂರನ್​ ಶೂನ್ಯಕ್ಕೆ ಔಟಾದರು. 89 ರನ್​ಗೆ 6 ವಿಕೆಟ್​ ಕಳೆದುಕೊಂಡ ಲಖನೌ ಚಿಂತೆಗೆ ಬಿತ್ತು. ಈ ವೇಳೆ ಆಪದ್ಭಾಂದವ ಆಯುಷ್​​ ಬದೋನಿ 35 ಎಸೆತಕ್ಕೆ 55 ರನ್ ಬಾರಿಸಿ ತಂಡದ ಮರ್ಯಾದೆ ಉಳಿಸಿದರು. ಕೊನೆಯಲ್ಲಿ ಅರ್ಶದ್ ಖಾನ್​ 20 ರನ್ ಬಾರಿಸಿ ತಮ್ಮ ನೆರವು ಕೊಟ್ಟರು. ಡೆಲ್ಲಿ ಪರ ಖಲೀಲ್ ಅಹ್ಮದ್​ ಕೂಡ 2 ವಿಕೆಟ್ ಉರುಳಿಸಿದರು.

Exit mobile version