Site icon Vistara News

Manish Sisodia : ಕೇಜ್ರಿವಾಲ್ ಜತೆಗಾರ ಮನೀಶ್ ಸಿಸೊಡಿಯಾ ಮತ್ತಷ್ಟು ದಿನ ಜೈಲಿನಲ್ಲೇ; ಜಾಮೀನು ಅರ್ಜಿ ವಜಾ

Manish Sisodia

ನವದೆಹಲಿ: ಪ್ರಸ್ತುತ ರದ್ದುಪಡಿಸಲಾದ ದೆಹಲಿ ಮದ್ಯ ಅಬಕಾರಿ ನೀತಿ 2021-22 ರ ತನಿಖೆಗೆ ಸಂಬಂಧಿಸಿದಂತೆ ಸಿಬಿಐ ಮತ್ತು ಇಡಿ ದಾಖಲಿಸಿದ ಪ್ರಕರಣಗಳಲ್ಲಿ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ (Manish Sisodia) ಸಲ್ಲಿಸಿದ್ದ ಎರಡನೇ ಜಾಮೀನು ಅರ್ಜಿಯನ್ನುದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯ ಏಪ್ರಿಲ್ 30 ರಂದು ವಜಾಗೊಳಿಸಿದೆ. ಕೇಂದ್ರ ತನಿಖಾ ದಳ (CBI) ಮತ್ತು ಜಾರಿ ನಿರ್ದೇಶನಾಲಯ (ED) ಪ್ರಕರಣಗಳಲ್ಲಿ ಸಿಸೋಡಿಯಾ ಜಾಮೀನು ಕೋರಿದ್ದರು. ಹೀಗಾಗಿ ಅವರು ಜೈಲಿನಲ್ಲೇ ಉಳಿಯುವಂತಾಗಿದೆ. ಅರವಿಂದ್ ಕೇಜ್ರಿವಾಲ್ ಕೂಡ ಇದೇ ಪ್ರಕರಣದಲ್ಲಿ ಜೈಲಿನಲ್ಲಿದ್ದಾರೆ. ಹೀಗಾಗಿ ಇಬ್ಬರೂ ಇನ್ನಷ್ಟು ದಿನ ಜೈಲಿನಲ್ಲೇ ದಿನ ಕಳೆಯುಂತಾಗಿದೆ.

ಈ ಹಿಂದೆ ಕೆಳ ನ್ಯಾಯಾಲಯ, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಸಿಸೋಡಿಯಾ ಅವರಿಗೆ ಜಾಮೀನು ನೀಡಲು ನಿರಾಕರಿಸಿದ್ದವು. ಜಾಮೀನು ಅರ್ಜಿಯನ್ನು ವಿರೋಧಿಸಿದ ತನಿಖಾ ಸಂಸ್ಥೆ, “ಸಿಸೋಡಿಯಾ ಹಗರಣದ ಕಿಂಗ್​​ಪಿನ್. ಆದ್ದರಿಂದ ಅವರಿಗೆ ಜಾಮೀನು ನೀಡಬಾರದು. ಅವರಿಗೆ ಜಾಮೀನು ನೀಡಿದರೆ, ಅವರು ಸಾಕ್ಷ್ಯಗಳನ್ನು ತಿರುಚಬಹುದು ಮತ್ತು ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು ಎಂದು ವಾದ ಮಾಡಿತ್ತು.

ಸಿಸೋಡಿಯಾ ಫೆಬ್ರವರಿ 26, 2023 ರಿಂದ ಬಂಧನದಲ್ಲಿದ್ದಾರೆ. ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಸಿಬಿಐ ಮತ್ತು ಇಡಿ ಎರಡೂ ತನಿಖೆ ನಡೆಸುತ್ತಿವೆ. ಲಂಚಕ್ಕಾಗಿ ದೆಹಲಿ ಸರ್ಕಾರಿ ಅಧಿಕಾರಿಗಳು ಕೆಲವು ವ್ಯಾಪಾರಿಗಳಿಗೆ ಮದ್ಯದ ಪರವಾನಗಿ ನೀಡಿರುವ ಪ್ರಕರಣದಲ್ಲಿ ಸಿಸೊಡಿಯಾ ಶಾಮೀಲಾಗಿದ್ದಾರೆ ಎಂಬ ಆರೋಪಗಳಿವೆ. ಕೆಲವು ಮದ್ಯ ಮಾರಾಟಗಾರರಿಗೆ ಅನುಕೂಲವಾಗುವಂತೆ ಅಧಿಕಾರಿಗಳು ಅಬಕಾರಿ ನೀತಿಯನ್ನು ತಿರುಚಿದ್ದಾರೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: Revanth Reddy : ಅಮಿತ್​ ಶಾ ತಿರುಚಿದ ವಿಡಿಯೊ ಪ್ರಕರಣ; ತೆಲಂಗಾಣ ಸಿಎಂಗೆ ಡೆಲ್ಲಿ ಪೊಲೀಸರಿಂದ ಸಮನ್ಸ್​

ವಿಶೇಷವೆಂದರೆ, ವಿಚಾರಣಾ ನ್ಯಾಯಾಲಯವು ಸಿಸೋಡಿಯಾ ಅವರ ಜಾಮೀನು ಅರ್ಜಿಗಳನ್ನು ತಿರಸ್ಕರಿಸುತ್ತಿರುವುದು ಇದು ಎರಡನೇ ಬಾರಿ. ಸಿಬಿಐ ಪ್ರಕರಣದಲ್ಲಿ ಅವರ ಮೊದಲ ಜಾಮೀನು ಅರ್ಜಿಯನ್ನು ಮಾರ್ಚ್ 31, 2023 ರಂದು ತಿರಸ್ಕರಿಸಲಾಗಿತ್ತು. ಏಪ್ರಿಲ್ 28 ರಂದು ವಿಚಾರಣಾ ನ್ಯಾಯಾಲಯವು ಇಡಿ ಪ್ರಕರಣದಲ್ಲಿ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ವಿಚಾರಣಾ ನ್ಯಾಯಾಲಯದ ಆದೇಶವನ್ನು ದೆಹಲಿ ಹೈಕೋರ್ಟ್ ಎತ್ತಿಹಿಡಿದಿತ್ತು.

ವಿಚಾರಣೆಗೆ ವೇಗ ಕೊಡುವಂತೆ ಸುಪ್ರೀಂ ಕೋರ್ಟ್​ ಹೇಳಿತ್ತು

ಬಳಿಕ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಅದು ಅಕ್ಟೋಬರ್ 30, 2023 ರಂದು ಅವರಿಗೆ ಜಾಮೀನು ನಿರಾಕರಿಸಲಾಗಿತ್ತು. ಆದಾಗ್ಯೂ, ವಿಚಾರಣೆಯು ನಿಧಾನಗತಿಯಲ್ಲಿ ಮುಂದುವರಿದರೆ ಹೊಸ ಜಾಮೀನು ಅರ್ಜಿಯನ್ನು ಸಲ್ಲಿಸಬಹುದು ಎಂದು ಸುಪ್ರೀಂ ಕೋರ್ಟ್ ಆ ಸಮಯದಲ್ಲಿ ಹೇಳಿತ್ತು.

ಪ್ರಕರಣದ ವಿಚಾರಣೆಯನ್ನು ತ್ವರಿತವಾಗಿ ಮುಂದುವರಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದ್ದರೂ, ಸಿಸೋಡಿಯಾ ಅವರು ಈಗ ಒಂದು ವರ್ಷಕ್ಕೂ ಹೆಚ್ಚು ಕಾಲ ಜೈಲಿನಲ್ಲಿದ್ದಾರೆ ಎಂದು ಸಿಸಿಡಿಯಾ ಪರ ವಕೀಲರು ವಾದ ಮಾಡಿದ್ದರು.

ನಾವು ಫೆಬ್ರವರಿಯಲ್ಲಿ ಅರ್ಜಿ ಸಲ್ಲಿಸಿದ್ದೇವೆ. ಪ್ರಕರಣವನ್ನು ನಾಲ್ಕು ಬಾರಿ ಮುಂದೂಡಲಾಗಿದೆ. ಅರ್ಜಿದಾರರು ಒಂದು ವರ್ಷಕ್ಕೂ ಹೆಚ್ಚು ಕಾಲ ಜೈಲಿನಲ್ಲಿದ್ದಾರೆ ಎಂದು ವಕೀಲ ವಿವೇಕ್ ಜೈನ್ ವಾದಿಸಿದ್ದಾರೆ. ಏತನ್ಮಧ್ಯೆ, ವಿಚಾರಣೆಯ ವಿಳಂಬವು ಸಿಸೋಡಿಯಾ ಮತ್ತು ಇತರ ಸಹ ಆರೋಪಿಗಳಿಂದಾಗಿದೆಯೇ ಹೊರತು ತಮ್ಮಿಂದ ಅಲ್ಲ ಸಿಬಿಐ ಸಮರ್ಥಿಸಿಕೊಂಡಿವೆ.

ಕೆಲವು ವ್ಯಾಪಾರಿಗಳಿಗೆ ಅನುಕೂಲಕರವಾದ ದೆಹಲಿ ಅಬಕಾರಿ ನೀತಿಯನ್ನು ರೂಪಿಸುವಲ್ಲಿ ಸಿಸೋಡಿಯಾ ಪ್ರಮುಖ ವ್ಯಕ್ತಿಯಾಗಿದ್ದರು. ಪ್ರತಿಯಾಗಿ ಆಮ್ ಆದ್ಮಿ ಪಕ್ಷ (ಎಎಪಿ) ಕಿಕ್​ಬ್ಯಾಕ್​ ಪಡೆದಿದೆ ಎಂದು ಎರಡೂ ಏಜೆನ್ಸಿಗಳು ವಾದಿಸಿವೆ. ಈ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಎಎಪಿ ನಾಯಕ ಸಂಜಯ್ ಸಿಂಗ್, ಎಎಪಿ ಸಂವಹನ ಮುಖ್ಯಸ್ಥ ವಿಜಯ್ ನಾಯರ್ ಮತ್ತು ಭಾರತ್ ರಾಷ್ಟ್ರ ಸಮಿತಿ (ಬಿಆರ್​​ಎಸ್) ನಾಯಕಿ ಕೆ ಕವಿತಾ ಅವರನ್ನು ಬಂಧಿಸಲಾಗಿದೆ. ಕೇಜ್ರಿವಾಲ್ ಮತ್ತು ಕವಿತಾ ಪ್ರಸ್ತುತ ಜೈಲಿನಲ್ಲಿದ್ದರೆ, ಸಂಜಯ್ ಸಿಂಗ್ ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.

Exit mobile version