ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಬಕಾರಿ ನೀತಿ ಜಾರಿ ವೇಳೆ ನಡೆದಿದೆ ಎನ್ನಲಾದ ಹಗರಣಕ್ಕೆ (Delhi Liquor Policy Case) ಸಂಬಂಧಿಸಿದಂತೆ ಬಂಧಿತರಾಗಿರುವ ಭಾರತ ರಾಷ್ಟ್ರ ಸಮಿತಿ (BRS) ನಾಯಕಿ, ವಿಧಾನ ಪರಿಷತ್ ಸದಸ್ಯೆ (MLC) ಕೆ. ಕವಿತಾ (K Kavitha) ಅವರ ನ್ಯಾಯಾಂಗ ಬಂಧನವನ್ನು ಏಪ್ರಿಲ್ 23ರವರೆಗೆ ವಿಸ್ತರಿಸಿದೆ. ಹಾಗಾಗಿ, ಇನ್ನೂ ಒಂದು ವಾರ ಕೆ. ಕವಿತಾ ಅವರು ಜೈಲಿನಲ್ಲೇ ಕಾಲ ಕಳೆಯಬೇಕಾಗಿದೆ. ಪ್ರಕರಣದಲ್ಲಿ ಸಿಬಿಐ ಕೂಡ ಕವಿತಾ ಅವರನ್ನು ಬಂಧಿಸಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಇದರ ಮಧ್ಯೆಯೇ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ತೆಲಂಗಾಣ ಮಾಜಿ ಸಿಎಂ ಕೆ. ಚಂದ್ರಶೇಖರ್ ರಾವ್ ಪುತ್ರಿಯಾಗಿರುವ ಕೆ.ಕವಿತಾ ಅವರ ನ್ಯಾಯಾಂಗ ಬಂಧನದ ಅವಧಿ ಮುಗಿದ ಹಿನ್ನೆಲೆಯಲ್ಲಿ ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯಕ್ಕೆ ಸೋಮವಾರ (ಏಪ್ರಿಲ್ 15) ಹಾಜರುಪಡಿಸಲಾಯಿತು. ನೂರಾರು ಕೋಟಿ ರೂ. ಹಗರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆ ನಡೆಸುವ ಅಗತ್ಯವಿದೆ. ಹಾಗಾಗಿ, ಇನ್ನೂ 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಬೇಕು ಎಂಬುದಾಗಿ ಇ.ಡಿ ಮನವಿ ಮಾಡಿತು. ಆದರೆ, ನ್ಯಾಯಾಲಯವು ಒಂದು ವಾರ ನ್ಯಾಯಾಂಗ ಬಂಧನಕ್ಕೆ ವಹಿಸಿತು. ಕೆ.ಕವಿತಾ ಅವರನ್ನು ತಿಹಾರ ಜೈಲಿನಲ್ಲಿ ಇರಿಸಲಾಗಿದೆ.
#WATCH | Excise case: BRS leader K Kavitha being taken from Delhi's Rouse Avenue Court after hearing.
— ANI (@ANI) April 15, 2024
K Kavitha was sent to judicial custody till April 23. pic.twitter.com/AzCHRHTEoP
ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಮಾರ್ಚ್ 15ರಂದು ಹೈದರಾಬಾದ್‌ನಲ್ಲಿರುವ ಕೆ. ಕವಿತಾ ಅವರ ನಿವಾಸದಲ್ಲಿ ಇ.ಡಿ ಅಧಿಕಾರಿಗಳು ಸುಮಾರು 4 ತಾಸು ಪರಿಶೀಲನೆ ನಡೆಸಿದರು. ಇದಾದ ಬಳಿಕ ಅವರು ಕೆ. ಕವಿತಾ ಅವರನ್ನು ಬಂಧಿಸಿದರು. ನ್ಯಾಯಾಲಯವು ಅವರನ್ನು ನ್ಯಾಯಾಂಗ ಬಂಧನಕ್ಕೆ ವಹಿಸಿದ ಕಾರಣ ಜಾಮೀನು ಕೋರಿ ಕೆ. ಕವಿತಾ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಆದರೆ, ಜಾಮೀನು ನೀಡಲು ಸರ್ವೋಚ್ಚ ನ್ಯಾಯಾಲಯವು ನಿರಾಕರಿಸಿತ್ತು.
ಸೌತ್ ಗ್ರೂಪ್ ಎಂಬ ಕಂಪನಿಯನ್ನು ಕೆ. ಕವಿತಾ ಸೇರಿ ಹಲವರನ್ನು ಮುನ್ನಡೆಸುತ್ತಿದ್ದು, ದೆಹಲಿಯಲ್ಲಿ ಅಬಕಾರಿ ನೀತಿ ಜಾರಿ ಬಳಿಕ ಇದೇ ಕಂಪನಿಗೆ ಗುತ್ತಿಗೆ ಪಡೆಯಲು ಆಮ್ ಆದ್ಮಿ ಪಕ್ಷದ ನೇತೃತ್ವದ ಸರ್ಕಾರಕ್ಕೆ ಲಂಚ ನೀಡಿದೆ ಎಂಬ ಆರೋಪ ಕೇಳಿಬಂದಿದೆ. ಇದೇ ಕಾರಣಕ್ಕಾಗಿ ಇ.ಡಿ ಹಾಗೂ ಸಿಬಿಐ ಕೂಲಂಕಷ ತನಿಖೆ ನಡೆಸುತ್ತಿದೆ. ಇನ್ನು. ಕೆ. ಕವಿತಾ ಅವರನ್ನು ಬಂಧಿಸುತ್ತಲೇ, ಬಿಆರ್‌ಎಸ್ ನಾಯಕರು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಹಾಗೂ ತೆಲಂಗಾಣದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದೇ ಪ್ರಕರಣದಲ್ಲಿಯೇ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಕೂಡ ಬಂಧಿಸಲಾಗಿದೆ.
ಇದನ್ನೂ ಓದಿ: Delhi excise policy Case: ಆಪ್‌ಗೆ 25 ಕೋಟಿ ಲಂಚ ನೀಡಲು ಒತ್ತಾಯಿಸಿದ್ದ ಕವಿತಾ: ಸಿಬಿಐ ಆರೋಪ