Site icon Vistara News

Delhi Organ Racket : ಅಂಗಾಂಗ ಮಾರಾಟ ಜಾಲ ಪತ್ತೆ: ವೈದ್ಯ ಸೇರಿ 6 ಮಂದಿ ಬಂಧನ; ಕಿಂಗ್​ಪಿನ್ ಬಾಂಗ್ಲಾದೇಶದವ

Delhi organ racket

ನವದೆಹಲಿ: ಮಾನವ ಅಂಗಾಂಗಗಳನ್ನು ಅನಧಿಕೃತವಾಗಿ ಪಡೆದು ಕಸಿ ದಂಧೆ ನಡೆಸುತ್ತಿದ್ದ (Delhi Organ Racket) ಜಾಲವೊಂದನ್ನು ದೆಹಲಿ ಪೊಲೀಸರು ಭೇದಿಸಿದ್ದಾರೆ. ಈ ಪ್ರಕರಣದಲ್ಲಿ ವೈದ್ಯರು ಸೇರಿದಂತೆ ಏಳು ಜನರನ್ನು ಬಂಧಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್ಐ ಮಂಗಳವಾರ ವರದಿ ಮಾಡಿದೆ. ಬಾಂಗ್ಲಾದೇಶ ಮೂಲದ ವ್ಯಕ್ತಿ ಈ ಜಾಲದ ಮಾಸ್ಟರ್​ ಮೈಂಡ್​ ಎಂದು ದೆಹಲಿ ಪೊಲೀಸ್ ಆಯುಕ್ತ ಅಮಿತ್ ಗೋಯೆಲ್ ಹೇಳಿದ್ದಾರೆ. ಈ ಪ್ರಕರಣದಲ್ಲಿ ದಾನಿಗಳು ಮತ್ತು ಸ್ವೀಕರಿಸುವವರು ಇಬ್ಬರೂ ಬಾಂಗ್ಲಾದೇಶದರಾಗಿದ್ದಾರೆ. ಈ ದಂಧೆಯಲ್ಲಿರುವ ಎಲ್ಲ ಜನರು ಬಾಂಗ್ಲಾದೇಶದೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬುದಾಗಿ ಶಂಕಿಸಲಾಗಿದೆ.

ರೋಗಿಗಳು ಮತ್ತು ದಾನಿಗಳನ್ನು ವ್ಯವಸ್ಥೆ ಮಾಡುತ್ತಿದ್ದ ರಸೆಲ್ ಎಂಬ ವ್ಯಕ್ತಿಯನ್ನು ನಾವು ಬಂಧಿಸಿದ್ದೇವೆ ಮತ್ತು ಅನಧಿಕೃತವಾಗಿ ಅಂಗಾಂಗ ಕಸಿ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವ ಮಹಿಳಾ ವೈದ್ಯರನ್ನು ಸಹ ಬಂಧಿಸಲಾಗಿದೆ ಎಂದು ಡಿಸಿಪಿ ಗೋಯೆಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ಬಂಧಿಸಲಾದ ಏಳು ಜನರ ತನಿಖೆ ಇನ್ನೂ ನಡೆಯುತ್ತಿದೆ. 2019 ರಿಂದ ಅಂಗಾಂಗ ಕಸಿ ದಂಧೆ ನಡೆಯುತ್ತಿತ್ತು ಎಂದು ಹೇಳಿದ ಗೋಯೆಲ್, ಅವರು ಪ್ರತಿ ಕಸಿಗೆ 25-30 ಲಕ್ಷ ರೂ.ಗಳನ್ನು ಪಡೆಯುತ್ತಿದ್ದರು ಎಂದು ಮಾಹಿತಿ ನೀಡಿದ್ದಾರೆ. ಬಂಧಿತ ವೈದ್ಯನಿಗೆ ಎರಡು ಅಥವಾ ಮೂರು ಆಸ್ಪತ್ರೆಗಳೊಂದಿಗೆ ಸಂಪರ್ಕವಿದೆ ಎಂದೂ ಹೇಳಿದ್ದಾರೆ.

ಇದನ್ನೂ ಓದಿ: Love Case: ಸಿನಿಮೀಯ ಲವ್‌ ಸ್ಟೋರಿ; ಜೀವ ಉಳಿಸಿಕೊಳ್ಳಲು ಎಸ್‍ಪಿ ಕಚೇರಿಗೆ ಓಡಿದ ಪ್ರೇಮಿಗಳು! ವಿಡಿಯೊ ನೋಡಿ

ದಾನಿ ಮತ್ತು ಸ್ವೀಕರಿಸುವವರು ರಕ್ತ ಸಂಬಂಧಿಗಳಲ್ಲ ಎಂದು ತಿಳಿದಿದ್ದರೂ ವೈದ್ಯೆ ಕಸಿಗೆ ಅನುಕೂಲ ಮಾಡಿಕೊಡುತ್ತಿದ್ದಳು. ಭಾರತದ ಮಾನವ ಅಂಗಾಂಗಗಳ ಕಸಿ ಕಾಯ್ದೆ (2014) ಪ್ರಕಾರ, ಅಂಗಾಂಗ ದಾನವನ್ನು ಪೋಷಕರು ಮತ್ತು ಒಡಹುಟ್ಟಿದವರಂತಹ ತಕ್ಷಣದ ರಕ್ತ ಸಂಬಂಧಗಳಿಂದ ಮಾತ್ರ ಅನುಮತಿಸಲಾಗಿದೆ. ಯಾವುದೇ ಭಾರತೀಯ, ಜೀವಂತ ವ್ಯಕ್ತಿಯಿಂ ಅಂಗಾಂಗ ದಾನ ಸ್ವೀಕರಿಸುವವರ ಹತ್ತಿರದ ಸಂಬಂಧಿಯಾಗದ ಹೊರತು ವಿದೇಶಿಯರಿಗೆ ನೀಡುವಂತಿಲ್ಲ. ವಿದೇಶಿಯರು ಪಡೆಯುವಾಗಲೂ ರಾಯಭಾರ ಕಚೇರಿಯಿಂದ ಅನುಮತಿ ಪಡೆಯಬೇಕು. ಅದೂ ಅಂಗಾಂಗ ದಾನಕ್ಕೆ ಅರ್ಹರಾದ ಯಾವುದೇ ಭಾರತೀಯ ರೋಗಿ ಇಲ್ಲದಿದ್ದರೆ ಮಾತ್ರ ನೀಡಬಹುದು ಎಂದು ಕಾನೂನು ಇದೆ. ಆದರೆ ಈ ಜಾಲ ಎಲ್ಲ ನಿಯಮಗಳನ್ನು ಮೀರಿ ಅಂಗಾಂಗಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿತ್ತು.

Exit mobile version