Site icon Vistara News

Lok Sabha: ಲೋಕಸಭೆಯಲ್ಲಿ ದಿಲ್ಲಿ ಸರ್ವೀಸ್ ಬಿಲ್ ಪಾಸ್! ಆಪ್‌ಗೆ ಭಾರೀ ಹಿನ್ನಡೆ, ಪ್ರತಿ ಪಕ್ಷಗಳು ವಾಕೌಟ್

Amit Shah in Lok Sabha

ನವದೆಹಲಿ: ಆಮ್ ಆದ್ಮಿ ಪಾರ್ಟಿ (Aam Aadmi Party) ಸೇರಿದಂತೆ ಪ್ರತಿಪಕ್ಷಗಳ (Opposition Party) ತೀವ್ರ ವಿರೋಧದ ನಡುವೆಯೇ ದಿಲ್ಲಿ ಸೇವೆಗಳ ಮೇಲೆ ಕೇಂದ್ರ ಸರ್ಕಾರಕ್ಕೆ ನಿಯಂತ್ರಣ ಒದಗಿಸುವ, ‘2023ರ ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶ (ತಿದ್ದುಪಡಿ) ವಿಧೇಯಕ’ವನ್ನು (Delhi Services Bill) ಸರ್ಕಾರವು ಲೋಕಸಭೆಯಲ್ಲಿ (Lok Sabha) ಪಾಸು ಮಾಡಿಕೊಂಡಿದೆ. ಈ ವಿಧೇಯಕ ಕುರಿತು ಇಡೀ ದಿನ ಚರ್ಚೆ ನಡೆದ ಬಳಿಕ, ಅಂಗೀಕರಿಸಲಾಯಿತು. ಈ ಮಧ್ಯೆ, ಪ್ರತಿಪಕ್ಷಗಳು ಲೋಕಸಭೆ ಕಲಾಪವನ್ನು ಬಹಿಷ್ಕರಿಸಿ ಹೊರ ನಡೆದವು. ಚರ್ಚೆಯ ವೇಳೆ, ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ವಾಗ್ವಾದ ಕೂಡ ನಡೆಯಿತು. ಈ ವೇಳೆ, ಆಪ್‌ನ ಒಬ್ಬ ಸಂಸದನನ್ನು ಅಮಾನತು ಮಾಡಲಾಯಿತು.

ರಾಷ್ಟ್ರ ರಾಜಧಾನಿ ಕುರಿತು ಯಾವುದೇ ಕಾನೂನು ಮಾಡುವ ಹಕ್ಕು ಸಂಸತ್ತಿಗೆ ಎಂದು ಸುಪ್ರೀಂ ಕೋರ್ಟ್‌ನ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ದೆಹಲಿಗೆ ಪ್ರತ್ಯೇಕ ಕಾನೂನು ಮಾಡುವ ಅಧಿಕಾರವನ್ನು ಸಂವಿಧಾನವೇ ನೀಡಿದೆ ಎಂದು ‘2023ರ ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶ (ತಿದ್ದುಪಡಿ) ವಿಧೇಯಕ’ವನ್ನು ಉಲ್ಲೇಖಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಚರ್ಚೆಯ ವೇಳೆ ಹೇಳಿದರು.

ಲೋಕಸಭೆಯು ಈ ವಿಧೇಯಕವನ್ನು ಅಂಗೀಕರಿಸುವ ಮೊದಲು ಟ್ವೀಟ್ ಮಾಡಿದ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು, ಈ ವಿಧೇಯಕವು ದಿಲ್ಲಿ ಜನರನ್ನು ಗುಲಾಮರನ್ನಾಗಿ ಮಾಡುತ್ತದೆ ಎಂದು ಆರೋಪಿಸಿದರು.

ದಿಲ್ಲಿ ಜನರ ಹಕ್ಕುಗಳನ್ನು ಕಸಿದುಕೊಳ್ಳುವ ವಿಧೇಯಕದ ಕುರಿತು ಇಂದು ಲೋಕಸಭೆಯಲ್ಲಿ ಅಮಿತ್ ಶಾ ಅವರು ಮಾತನಾಡುವುದನ್ನು ನಾನು ಕೇಳಿದ್ದೇನೆ. ವಿಧೇಯಕವನ್ನು ಬೆಂಬಲಿಸಲು ಅವರಲ್ಲಿ ಒಂದೇ ಒಂದು ಮಾನ್ಯ ಮಾಡಹುದಾದ ವಾದವಿಲ್ಲ. ಅವರು ತಪ್ಪು ಮಾಡುತ್ತಿದ್ದಾರೆ ಎಂದು ಅವರಿಗೂ ತಿಳಿದಿದೆ. ವಿಧೇಯಕವು ದಿಲ್ಲಿ ಜನರನ್ನು ಗುಲಾಮರನ್ನಾಗಿ ಮಾಡುವ ಮಸೂದೆಯಾಗಿದೆ. ಇದು ಅವರನ್ನು ಅಸಹಾಯಕರನ್ನಾಗಿ ಮಾಡುವ ವಿಧೇಯಕವಾಗಿದೆ. INDIA ಇದನ್ನು ಎಂದಿಗೂ ಮಾಡಲು ಬಿಡುವುದಿಲ್ಲ ಎಂದು ಕೇಜ್ರಿವಾಲ್ ವಿಧೇಯಕವನ್ನು ಅಂಗೀಕರಿಸುವ ಮೊದಲು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಈ ಸುದ್ದಿಯನ್ನೂ ಓದಿ: Opposition Meet: ಕೇಂದ್ರದ ‘ದಿಲ್ಲಿ ಸುಗ್ರೀವಾಜ್ಞೆ’ಗೆ ಕಾಂಗ್ರೆಸ್ ವಿರೋಧ; ಖುಷಿಯಾದ ಆಪ್!

ದಿಲ್ಲಿಯಲ್ಲಿ ಎ ದರ್ಜೆ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಅಧಿಕಾರವು ರಾಜ್ಯ ಸರ್ಕಾರಕ್ಕೆ ಇದೆ ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಸುಗ್ರೀವಾಜ್ಞೆ ಜಾರಿಗೆ ತಂದು, ಆ ಅಧಿಕಾರವನ್ನು ತನ್ನಲ್ಲೇ ಉಳಸಿಕೊಂಡಿತ್ತು. ಅದೇ ಸುಗ್ರೀವಾಜ್ಞೆಯನ್ನು ಇದೀಗ ಕಾಯ್ದೆಯಾಗಿ ಜಾರಿ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಆಪ್ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದು, ವಿಚಾರಣೆ ನಡೆಯುತ್ತಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version