Site icon Vistara News

ಕನ್ನಡ ರಾಜ್ಯೋತ್ಸವ | ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂಬ ಹೆಸರಿಟ್ಟ ದೇವರಾಜ ಅರಸರು ಅಂದು ಹೇಳಿದ್ದೇನು?

ಕನ್ನಡ ರಾಜ್ಯೋತ್ಸವ

ನಮಗೆಲ್ಲಾ ತಿಳಿದಿರುವಂತೆ ಭಾರತ ಸ್ವಾತಂತ್ರ್ಯಗೊಂಡ ನಂತರ ಕನ್ನಡ ಭಾಷಿಕರಿರುವ ವಿವಿಧ ಪ್ರದೇಶಗಳನ್ನು ಒಂದುಗೂಡಿಸಿ “ಮೈಸೂರು ರಾಜ್ಯʼʼವನ್ನು ರಚಿಸಲಾಗಿತ್ತು. ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕ ಪ್ರದೇಶಗಳು ಈ ರಾಜ್ಯದಲ್ಲಿ ವಿಲೀನವಾಗಿದ್ದವು. ಆದರೆ ಈ ಪ್ರದೇಶದ ಜನರಿಗೆ ರಾಜ್ಯಕ್ಕೆ “ಮೈಸೂರು ರಾಜ್ಯʼʼ ಎಂದು ನಾಮಕರಣ ಮಾಡಿರುವುದು ಇಷ್ಟವಾಗಿರಲಿಲ್ಲ. ಈ ಹೆಸರಲ್ಲಿ ಬದಲಾವಣೆ ಮಾಡಬೇಕೆಂದು ಒತ್ತಾಯಿಸುತ್ತಿದ್ದರು.

ಈ ಕುರಿತು ಆಗ ರಾಜ್ಯದಲ್ಲಿ ಸುದೀರ್ಘ ಚರ್ಚೆಯ ಬಳಿಕ ೧೯೭೩ರ ನವೆಂಬರ್ ೧ರಂದು ರಾಜ್ಯಕ್ಕೆ “ಕರ್ನಾಟಕʼʼವೆಂದು ಪುನರ್ ನಾಮಕರಣ ಮಾಡಲಾಯಿತು. ಆಗಿನ ಮುಖ್ಯಮಂತ್ರಿಯಾಗಿದ್ದ ದೇವರಾಜ್ ಅರಸು ಅವರು ಈ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದರು.

ಮೈಸೂರು ರಾಜ್ಯಕ್ಕೆ ‘ಕರ್ನಾಟಕ’ ಎಂದು ನಾಮಕರಣ ಮಾಡಿದ ಶುಭದಿನದಂದು ರಾಜ್ಯವನ್ನು ಉದ್ದೇಶಿಸಿದ ಮಾತನಾಡಿದ ಅರಸರು ಈ ಬೆಳವಣಿಗೆಯನ್ನು ಹೀಗೆ ವಿವರಿಸಿದ್ದರು; ಕರ್ನಾಟಕದ ಏಕೀಕರಣದ ಹಂಬಲಕ್ಕೆ ಸ್ಫುಟವಾದ ರೂಪು ದೊರೆಕಿದ್ದು ೧೯೧೬ರಲ್ಲೇ. ಧಾರವಾಡದಲ್ಲಿ ಕರ್ನಾಟಕ ಸಭೆ ಸ್ಥಾಪನೆಯಾದಾಗ, ಏಕೀಕರಣ ಸಮ್ಮೇಳನವು ಧಾರವಾಡದಲ್ಲಿ ಮೊಟ್ಟ ಮೊದಲಿಗೆ ನಡೆಯಿತು. ೧೯೨೦ರಲ್ಲಿ ನಾಗಪುರ ಕಾಂಗ್ರೆಸ್ಸಿನ ಅಧಿವೇಶನದಲ್ಲಿ ಭಾಷಾವಾರು ಪ್ರಾಂತ್ಯರಚನೆ ಸ್ಪಷ್ಟವಾದ ರೂಪುರೇಷೆ ಪಡೆಯಿತು. ಆದರೆ ಕನ್ನಡಿಗರ ಕನಸು ನನಸಾಗಲು ಮುವತ್ತಾರು ವರ್ಷಗಳೇ ಬೇಕಾಯಿತು.

೧೯೫೬ರ ನವೆಂಬರ್ ಒಂದರಂದು ಕನ್ನಡನಾಡು ಉದಯಿಸಿತು. ಆದರೆ ಈ ನಾಡಿನ ಹಿರಿಮೆ, ಸಂಸ್ಕೃತಿ ಮತ್ತು ಒಗ್ಗಟ್ಟಿನ ಸಂಕೇತವಾದ ಹೆಸರು ಇರದೇ ಇದ್ದುದು ಜನಮನದ ಅಂತರಾಳವನ್ನು ಕಲಕಿತ್ತು. ಮತ್ತೆ ೧೭ ವರ್ಷಗಳ ನಂತರ ಕಾಲಮಾನ ಪರಿಸ್ಥಿತಿಗೆ ಅನುಗುಣವಾಗಿ ನಡೆದ ಪ್ರಾಮಾಣಿಕ ಪ್ರಯತ್ನದ ಫಲವಾಗಿ ಈಗ ಜನತೆಯ ಮಹತ್ವಾಕಾಂಕ್ಷೆ ಈಡೇರಿದೆ. ಹಲವಾರು ದಶಕಗಳ ಕಾಲ ನಾಡು-ನುಡಿಯ ಉತ್ಕಟ ಪ್ರೇಮಿಗಳ ತ್ಯಾಗ ಶ್ರಮದ ಸಾಕ್ಷಾತ್ಕಾರ ಈ ನಾಮಕರಣ. ಆ ಪ್ರಾತಃಸ್ಮರಣೀಯರಿಗೆಲ್ಲ ರಾಜ್ಯದ ಜನತೆಯ ಪರವಾಗಿ ಕೃತಜ್ಞತೆಗಳು ಎಂದು ಹೇಳಿದ್ದರು.

ರಾಜ್ಯದ ಹೆಸರನ್ನು ‘ಕರ್ನಾಟಕ’ ಎಂದು ಮಾರ್ಪಡಿಸುವ ಕುರಿತು ಸರ್ಕಾರದ ತೀರ್ಮಾನವನ್ನು ವಿಧಾನಸಭೆಯಲ್ಲಿ ಸ್ವತಃ ಮುಖ್ಯಮಂತ್ರಿ ದೇವರಾಜ ಅರಸು ಅವರೇ ಮಂಡಿಸಿದ್ದರು. ಆ ದಿನವನ್ನು ಅವರು ಇತಿಹಾಸದಲ್ಲಿ ಒಂದು ಹೊಸ ಅಧ್ಯಾಯದ ದಿವಸ ಎಂದು ಬಣ್ಣಿಸಿದ್ದರಲ್ಲದೆ, ‘ಕರ್ನಾಟಕ’ ಎನ್ನುವ ಹೆಸರನ್ನು ಹಿಂದೆ ರಾಜ್ಯ ಗುರುಗಳು ಉಪಯೋಗಿಸುತ್ತಿದ್ದರು. ಕರ್ನಾಟಕ ಸಿಂಹಾಸನಾಧೀಶ್ವರ ಎಂದು ಒಂದು ಕಾಲದಲ್ಲಿ ಮೈಸೂರು ರಾಜರು ಹೆಸರು ಇಟ್ಟುಕೊಂಡಿದ್ದರು. ಹೊಯ್ಸಳರು, ಕದಂಬರರೂ ಇಟ್ಟುಕೊಂಡಿದ್ದರು. ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಈ ಹೆಸರು ಬರುತ್ತಲೇ ಇತ್ತು. ಸಾಹಿತಿಗಳು ಸಾಹಿತ್ಯದಲ್ಲಿ ‘ಕರ್ನಾಟಕ’ ಎಂಬ ಹೆಸರನ್ನು ಇಡಬಹುದು ಎಂದು ಹೇಳಿದ್ದಾರೆ. ಅದರಂತೆ ಇಲ್ಲಿ ನಿರ್ಣಯವನ್ನು ಮಂಡಿಸಿದ್ದೇನೆ ಎಂದು ವಿವರಣೆಯನ್ನೂ ನೀಡಿದ್ದರು.

ನಿರ್ಣಯ ಮಂಡಿಸಿ ಅಂದು ದೇವರಾಜ ಅರಸು ಮಾಡಿದ ಭಾಷಣ ಐತಿಹಾಸಿಕ.
ಭಾಷಣದ ಮುಖ್ಯಾಂಶಗಳು ಇಂತಿದೆ;
ಈ ರೀತಿಯ ಬದಲಾವಣೆ ಮನುಷ್ಯನಿಗೆ ಆನಂದವನ್ನು ತರುವ ಒಂದು ಸಂಗತಿಯಾಗಿದೆ. ಇಂತಹ ಒಂದು ಆನಂದವನ್ನು ಅನುಭವಿಸುತ್ತಿರುವ ಸದಸ್ಯರಗಳನ್ನು ನೋಡಿ ನಾವೂ ಆ ಆನಂದಲ್ಲಿ ಭಾಗಿಯಾಗಬೇಕು. ನಮ್ಮ ರಾಜ್ಯದ ಹೆಸರಿನ ಬದಲಾವಣೆಯಿಂದಾಗಿ ಬಹುಜನರಿಗೆ ಆನಂದ ಹಾಗೂ ಸಂತೋಷ ಉಂಟಾಗುತ್ತದೆ. ಬಹುಜನರು ಎಂದರೆ ಈ ದೇಶದಲ್ಲಿರುವ ಬೇರೆ ಬೇರೆ ವರ್ಗದವರೂ ಸೇರುತ್ತಾರೆ. ಅನೇಕ, ಸಾಹಿತಿಗಳು ಕರ್ನಾಟಕದಲ್ಲಿ ಇದ್ದಾರೆ. ಇಂತಹ ಸಾಹಿತಿಗಳಲ್ಲಿ ಹಿರಿಯರಿಂದ ಕಿರಿಯರ ವರೆಗೂ ಎಂದರೆ ಶ್ರೀಮಾನ್ ಬೇಂದ್ರೆಯವರು ಹಾಗೂ ರಾಷ್ಟ್ರದ ದೊಡ್ಡ ಕವಿಗಳಾದ ಶ್ರೀಮಾನ್ ಕೆ.ವಿ.ಪುಟ್ಟಪ್ಪನವರು ಮತ್ತೆ ಇನ್ನಿತರ ಎಲ್ಲ ಸಾಹಿತಿಗಳೂ ಈಗಿರುವ ಹೆಸರನ್ನು ಬದಲಾವಣೆ ಮಾಡಿ, ‘ಕರ್ನಾಟಕ’ ಎಂದು ಮಾಡಬೇಕೆಂದು ಸತತವಾಗಿ ಒತ್ತಾಯ ಮಾಡುತ್ತಾ ಬಂದಿದ್ದಾರೆ. ಬುದ್ಧಿಜೀವಿಗಳು, ಮಧ್ಯಮ ವರ್ಗದ ಜನರೂ, ಬದಲಾವಣೆಯಾಗಬೇಕೆಂದು ಹೇಳಿಕೊಂಡು ಬರುತ್ತಿದ್ದಾರೆ. ಅದೇ ರೀತಿ ಆಡಳಿತ ಹಾಗೂ ಕೈಗಾರಿಕಾ ಕ್ಷೇತ್ರದಲ್ಲಿರತಕ್ಕ ಜನ ಅಭಿಪ್ರಾಯಪಟ್ಟಿದ್ದಾರೆ.

ಇದು ಅವರೆಲ್ಲರ ಹಿರಿದಾದ ಆಸೆ; ನಾವು ಜನತಾ ಪ್ರತಿನಿಧಿಗಳಾಗಿರುವುದರಿಂದ ಅವರ ಆಸೆಗೆ ಅಡ್ಡಿ ತರತಕ್ಕದ್ದು ಸೂಕ್ತವಲ್ಲ. ಇಷ್ಟೊಂದು ಜನಕ್ಕೆ ಸಂತೋಷವಾಗುತ್ತಿರುವಾಗ ಅಂತಹ ಸಂತೋಷವಾಗಿರುವ ಜನತೆಯಲ್ಲಿ ನಾವೂ ಸಹ ಭಾಗಿಯಾಗೋಣ. ನಮ್ಮ ಕೈಯಲ್ಲಾದ ಅಲ್ಪ ಸೇವೆಯನ್ನು ಸಲ್ಲಿಸೋಣ ಎನ್ನುವ ಒಂದು ಸಂತೋಷದಿಂದ ನಾನು ಇಲ್ಲಿ ಇಂತಹ ಒಂದು ನಿರ್ಣಯವನ್ನು ತರುವ ಕಾಲ ಬಂತಲ್ಲ ಎಂದು ಸಂತೋಷಿಸುತ್ತೇನೆ ಮತ್ತು ಇದರಲ್ಲಿ ನಮ್ಮ ಜವಾಬ್ದಾರಿಯೂ ಇದೆ ಎನ್ನುವ ಮಾತನ್ನು ಹೇಳಿ ಇಂತಹ ಒಂದು ನಿರ್ಣಯ ಇಲ್ಲಿ ಬಂದಿದೆ. ಇದನ್ನು ತಮ್ಮ ಅಪ್ಪಣೆ ಪಡೆದು ನಮ್ಮ ಈ ಸಭೆಯ ಮುಂದೆ ಇಟ್ಟಿದ್ದೇನೆ.

ಹಳೆಯ ಮೈಸೂರಿನ ಭಾಗದಿಂದ ಬಂದ ಜನರಿಗೆ ಮೈಸೂರು ರಾಜ್ಯದ ಹೆಸರಿನ ಬಗ್ಗೆ ಹಿಂದಿನಿಂದಲೂ ಚಾರಿತ್ರಿಕವಾಗಿ ಒಂದು ಅಭಿಮಾನ ಬೆಳೆದು ಬಂದಿದೆ. ಮೈಸೂರು ರಾಜ್ಯ ಎಂಬುದು ಇಡೀ ಇಂಡಿಯಾ ದೇಶದಲ್ಲಿ ಕೀರ್ತಿ ಪಡೆದಿರುವುದಲ್ಲದೆ, ಹೊರ ದೇಶಗಳಲ್ಲಿಯೂ ಸಹ ಕೀರ್ತಿ ಪಡೆದಿದೆ. ಮೈಸೂರು ಜನತೆಯ ವಿಚಾರದಲ್ಲಿ, ಮೈಸೂರು ಸಾಮಾನುಗಳ ವಿಚಾರದಲ್ಲಿ ತಿಳಿದಂತಹ ಜನರು ಹೊರ ದೇಶಗಳಲ್ಲಿ ಇದ್ದಾರೆ. ಅದಕೋಸ್ಕರ ಮೈಸೂರು ರಾಜ್ಯ ಹೆಚ್ಚಿನ ಗೌರವ ಹಾಗೂ ಕೀರ್ತಿ ಪಡೆದುಕೊಂಡಿದೆ. ಮೈಸೂರು ಎಂಬ ಹೆಸರಿಗೆ ಶಕ್ತಿ ಇದೆ.

ಈ ಹೆಸರು ಅಸ್ತಂಗತದವಾದರೂ ಸಹ ಇನ್ನೊಂದು ಹೆಸರು ಉದಯವಾಗುತ್ತಿದೆ. ಹೊಸ ಹೆಸರಿನಲ್ಲಿ ಭಾವೈಕ್ಯತೆ ಇದೆ. ವಿಶ್ವಾಸವಿದೆ. ಹೆಚ್ಚಿನ ಜನರಿಗೆ ಸಂತೋಷ, ಆನಂದ ಉಂಟಾಗುತ್ತಿದೆ. ಬದಲಾವಣೆಯಲ್ಲಿ ಹಳೆಯದು ಹೋಗಿ, ಹೊಸದು ಬರುವಾಗ ತೊಂದರೆ ಇಲ್ಲ, ಆನಂದ ಬರುತ್ತದೆ. ಆದ್ದರಿಂದ ಈ ಬಗ್ಗೆ ಹೆಚ್ಚು ಚಿಂತನೆ ಮಾಡಬೇಕಿಲ್ಲ. ಹೊಸದನ್ನು ನೋಡಿ, ನಲಿದು ಸಂತೋಷ ಪಡುವ ಕಾಲ ಇದು. ಆದ್ದರಿಂದ ಈ ನಿರ್ಣಯಕ್ಕೆ ಮಾನ್ಯ ಸಭೆ ಒಪ್ಪಿಗೆ ಕೊಡುತ್ತದೆಂಬ ಪೂರ್ಣವಿಶ್ವಾಸ ನನಗೆ ಇದೆ. ಬಹುಮತದ ವಿಶ್ವಾಸವಲ್ಲ, ನಾವೆಲ್ಲರೂ ಸೇರಿ ಒಮ್ಮತದಿಂದ ಈ ಹೆಸರನ್ನು ಕರೆಯೋಣ. ಆ ರೀತಿ ನಾವು ಆನಂದದಿಂದ, ಸಂತೋಷದಿಂದ ಕರೆಯುವಾಗ ಕನ್ನಡ ಜನತೆಯ ಏಳಿಗೆಯಾಗಲಿ ಮತ್ತು ಈ ಶುಭ ಮೂಹೂರ್ತದಲ್ಲಿ ಈ ಹೆಸರನ್ನು ಕರೆದು ರಾಜ್ಯ ಉನ್ನತವಾಗಿ ಬೆಳೆದು, ಹಿಂದಿನಿಂದ ಈ ರಾಜ್ಯ ಚರಿತ್ರೆಯಲ್ಲಿ ಏನು ಒಂದು ಒಳ್ಳೆಯ ಕೀರ್ತಿ, ಹೆಸರನ್ನು ಪಡೆದಿತ್ತೋ ಅದಕ್ಕಿಂತ ಹೆಚ್ಚಿನ ಕೀರ್ತಿಯನ್ನು ಪಡೆದು ಕನ್ನಡ ಜನಕೋಟಿ ಏನಿದ್ದಾರೆ ಅವರ ಬಾಳ್ವೆ ಹಸನಾಗಬೇಕು. ಜನತೆ ಬೆಳೆಯಬೇಕು. ಎಲ್ಲರೂ ಸುಖ-ಸಮೃದ್ಧಿಯಿಂದ ಆನಂದಿತರಾಗಬೇಕು.

ನಮ್ಮ ಸಂಸ್ಕೃತಿ, ಸಾಹಿತ್ಯ, ಕಲೆ ಇವೆಲ್ಲವೂ ಬೆಳೆದು ಇಡೀ ಭಾರತದಲ್ಲಿಯೇ ಅಲ್ಲ, ಇಡೀ ಪ್ರಪಂಚದಲ್ಲಿಯೇ ಹೆಚ್ಚಿನ ಕೀರ್ತಿ ಪಡೆಯುವಂತಾಗಬೇಕು. ಅಂತಹ ಕಾರ್ಯಕ್ಕೆ ಇವೊತ್ತು ನಾವು ಅಂಕುರಾರ್ಪಣ ಮಾಡೋಣ ಎನ್ನುವ ಮಾತನ್ನು ತಿಳಿಸಿ ಠರಾವನ್ನು ತಮ್ಮ ಒಪ್ಪಿಗೆಗಾಗಿ ಮಂಡಿಸುತ್ತಿದ್ದೇನೆ.

ನಾನು ಸರಕಾರದ ವತಿಯಿಂದ ಮಂಡಿಸಿದಂಥ ನಿರ್ಣಯಕ್ಕೆ ಎಲ್ಲ ಕಡೆಯಿಂದಲೂ, ಎಲ್ಲಾ ಪಕ್ಷಗಳಿಂದಲೂ ಸರ್ವತೋಮುಖವಾದ ಬೆಂಬಲ ಬಂದಿರತಕ್ಕದ್ದು ನನಗಂತೂ, ಬಹಳ ಸಂತೋಷ ಉಂಟುಮಾಡಿದೆ. ನಾನು ಮೊದಲೇ ಈ ಸಭೆಯಲ್ಲಿ ಅರಿಕೆ ಮಾಡಿಕೊಂಡ ಹಾಗೆ ಏನಾದರೂ ಇಲ್ಲಿ ಸ್ಪಲ್ಪ ಭಿನ್ನಾಭಿಪ್ರಾಯ ಇದ್ದರೂ ಹೆಸರು ಬದಲಾವಣೆ ಅಗತಕ್ಕ ಕಾಲದಲ್ಲಿ ಮನಸ್ಸಿಗೆ ಸ್ವಲ್ಪ ನೋವು ಅದಂಥವರು ಕೂಡ ಅಂತಿಮವಾಗಿ, ನಿರ್ಣಯಕ್ಕೆ ಬೆಂಬಲ ಕೊಟ್ಟಿದ್ದಾರೆ. ಮತ್ತು ಬದಲಾವಣೆಯನ್ನು ಸ್ವಾಗತಿಸಿದ್ದಾರೆ. ನಾವು ‘ಕರ್ನಾಟಕ’ ಎಂಬ ಹೆಸರು ಇಡಬೇಕು ಎಂಬುದನ್ನು ಕೂಡ ಒಪ್ಪಿದ್ದಾರೆ. ಆದಕಾರಣ ಮೂರು ದಿವಸಗಳಿಂದ ಮಾತನಾಡಿ ತಮ್ಮ ಹೃದಯದಿಂದ ಬಂದ ಬೆಂಬಲವನ್ನು ಕೊಟ್ಟಂಥ ಮಾನ್ಯ ಸದಸ್ಯರಿಗೂ, ಈ ಚರ್ಚೆಯಲ್ಲಿ ಭಾಗವಹಿಸದೆ ಮೌನದಿಂದ ಕುಳಿತು ಮಾತುಗಳನ್ನು ಕೇಳಿದವರಿಗೂ ಮತ್ತು ಮೌನದಿಂದಲೇ ಬೆಂಬಲಕೊಟ್ಟಂಥ ಎಲ್ಲ ಸದಸ್ಯರಿಗೂ ನನ್ನ ಧನ್ಯವಾದಗಳನ್ನು ಅರ್ಪಿಸುವುದಕ್ಕೆ ನಾನು ಅಪ್ಪಣೆ ಬೇಡುತ್ತೇನೆ.

ಈ ಸಂದರ್ಭದಲ್ಲಿ ನಾನು ಈ ನಿರ್ಣಯವನ್ನು ಮಂಡಿಸುವುದಕ್ಕೆ ಮನಸ್ಸು ಮಾಡಿದ್ದಕ್ಕಾಗಿ ಅಥವಾ ತಂದಿದ್ದಕ್ಕಾಗಿ ನನ್ನ ಬಗ್ಗೆ ಕೆಲವರು ಒಳ್ಳೆಯ ಭಾಷಣವನ್ನು ಮಾಡಿದ್ದಾರೆ. ಮೆಚ್ಚಿಗೆಯನ್ನು ನನ್ನ ಮಿತ್ರು, ಎದುರು ಪಕ್ಷದಲ್ಲಿರತಕ್ಕ ನಾಯಕರು ವ್ಯಕ್ತಪಡಿಸಿದ್ದಾರೆ.

ಇಂತಹ ಮಹತ್ವದ ಕಾರ್ಯಗಳು ಆಗುವಾಗ ನಾವು ಒಂದೊಂದು ಕಾಲಕ್ಕೆ ನಿಮಿತ್ತ ಮಾತ್ರರಾಗುತ್ತೇವೆ ಅಷ್ಟೇ ಎಂದು ನಾನು ತಿಳಿದುಕೊಂಡಿದ್ದೇನೆ. ಇದು ನನಗೆ ವೈಯುಕ್ತಿಕವಾಗಿ ಹೆಮ್ಮೆ ಎಂದಲ್ಲ. ನಾನು ಒಂದು ನಿಮಿತ್ತವಾಗಿದ್ದೇನೆ, ಅದಕ್ಕೆ ಸಂದರ್ಭ ಕಾರಣ. ಇದರಿಂದ ಬರತಕ್ಕ ಕೀರ್ತಿ, ಮೆಚ್ಚಿಗೆ ಇಡೀ ಸದನಕ್ಕೆ ಸೇರಿದ್ದು, ಇದರಲ್ಲಿ ನಾನೂ ಒಬ್ಬ ಇದ್ದೇನೆ ಅಷ್ಟೇ. ವೈಯುಕ್ತಿಕವಾಗಿ ಇದರಲ್ಲಿ ನನ್ನ ಪ್ರತಿಷ್ಠೆ ಇಲ್ಲ, ಜನಮನಕ್ಕೆ ಸ್ಪಂದಿಸಿದ್ದೇನೆ. ನುಡಿದಂತೆ ನಡೆದಿದ್ದೇನೆ ಎಂಬ ನಂಬಿಕೆ. ತಿಳಿವಳಿಕೆ ಇಲ್ಲದೆ ಧೈರ್ಯ ಬರುವುದಿಲ್ಲ. ನಡೆದ ವಿಚಾರವನ್ನು ಸರಿಯಾಗಿ ತಿಳಿಯಬೇಕಾದರೆ ನಿರ್ವೀಕಾರ ಮನಸ್ಸು ಬೇಕು. ಈ ದೃಷ್ಟಿಯಿಂದ ನಡೆಯುವುದಕ್ಕೆ ಧೈರ್ಯ ಮಾಡಿದೆ ಅಷ್ಟೇ.

ಯುಗಯುಗಾಂತರಗಳಿಂದ ಸಾಮಾಜಿಕವಾಗಿ, ಆರ್ಥಿಕವಾಗಿ ನೊಂದು, ಬೆಂದು ಹಿಂದುಳಿದಿರತಕ್ಕ ಜನ-ಜನಾಂಗಗಳ ಉದ್ದಾರ ಆಗಬೇಕು. ಆ ದಿಕ್ಕಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದೇನೆ. ಅದಕ್ಕೆ ಎಲ್ಲರ ತೆರೆದ ಹೃದಯದ ಸಹಕಾರಬೇಕು. ಆ ದಿಕ್ಕಿನಲ್ಲಿ ಅಂಜದೆ ನಾವು ನುಡಿದಂತೆ ನಡೆಯಬೇಕಾದುದ್ದು ನಮ್ಮ ಧರ್ಮ, ಕರ್ತವ್ಯ. ಅದನ್ನು ಮಾಡುತ್ತೇವೆಂದು ಹೇಳಿ ನಾನು ತಮಗೆ ಆಶ್ವಾಸನೆ ಕೊಡಬಲ್ಲೆ. ಕೆಲವು ಭಾಗಗಳಲ್ಲಿ ಕೆಲವು ತೊಂದರೆಗಳಿವೆ. ನೀರಿನ ಅಭಾವ, ಮಳೆ ಇಲ್ಲದೆ ತೊಂದರೆ. ಯಾವ ಭಾಗದವರಿಗೆ ತೊಂದರೆಯಾಗಿದ್ದರೂ ಅದನ್ನು ಪರಿಹರಿಸುವುದು ಸರಕಾರದ ಕರ್ತವ್ಯ. ಎಲ್ಲಿಯವರೆಗೆ ನಮಗೆ ಸರಕಾರ ನಡೆಸುವ ಜವಾಬ್ದಾರಿ ಇರುತ್ತದೆಯೋ ಅಲ್ಲಿಯವರೆಗೆ ಆ ಭಾಗ, ಈ ಭಾಗ ನಮ್ಮವರು, ನಿಮ್ಮವರು ಎಂಬ ಪಕ್ಷಪಾತಕ್ಕೆ ಎಡೆಯಿಲ್ಲ. ಎಲ್ಲ ಭಾಗಗಳೂ ನಮ್ಮ ರಾಜ್ಯ ನಮ್ಮ ಜನ ಎಂಬ ಒಂದೇ ಗುರಿ, ಎನ್ನುವ ಆಶ್ವಾಸನೆಯನ್ನು ಕೂಡಾ ನಾನು ಕೊಡುತ್ತೇನೆ.

ಕೊನೆಯದಾಗಿ ಒಂದು ಮಾತು. ಈ ನಿರ್ಣಯವನ್ನು ನನ್ನ ಒಂದು ಸ್ಥಾನದಿಂದ ತಂದಿರತಕ್ಕದ್ದು ಸಂತೋಷ ಎಂಬ ಅಭಿಪ್ರಾಯ. ಇವರು ಅರಸು ಮನೆತನದವರು ಆಗಿದ್ದರೂ ಇದನ್ನು ತಂದಿದ್ದಾರೆಂದು ಹೇಳಿದ್ದಾರೆ. ಇದರ ಬಗ್ಗೆ ನಾನು ಏನೂ ಹೇಳಬೇಕಾದ ಅಗತ್ಯವಿಲ್ಲ. ನಾನು ಯಾವಾಗ ರಾಜಕೀಯದಲ್ಲಿ ಕಾಲಿಟ್ಟನೋ ಆವಾಗಿನಿಂದ ನಾನು ಅರಸು ಮನೆತನಕ್ಕೆ ಸೇರಿದವನು, ‘ಜನತೆಯೇ ಬೇರೆ ನಾನೇ ಬೇರೆ’ ಎಂದು ತಿಳಿದವನಲ್ಲ. ನಾನು ಹುಟ್ಟಿದ್ದು ಹಳ್ಳಿಯಲ್ಲಿ, ಬೆಳೆದಿದ್ದು ಹಳ್ಳಿಯಲ್ಲಿ. ಇದ್ದದ್ದೂ ಹಳ್ಳಿಯಲ್ಲಿ. ದೇಶದ ವಿಚಾರ ಬಂದಾಗ ದೇಶಾಭಿಮಾನ ಇರುವಂಥವನು ಯಾವ ಜಾತಿ, ಮತ ಭೇದವಿಲ್ಲದೆ, ಯರ‍್ಯಾರಿಗೆ ಸ್ವಾತಂತ್ರಾö್ಯಭಿಮಾನ ಇದೆಯೋ, ಅವರೆಲ್ಲರೂ ದೇಶಕ್ಕಾರಿ ಹೋರಾಟವನ್ನು ಮಾಡಿದ್ದಾರೆ. ಅಂತಹ ಹೋರಾಟ ಮಾಡಿದ ಲಕ್ಷೋಪಲಕ್ಷ ಜನರಲ್ಲಿ ನಾನೂ ಒಬ್ಬ.

ಕರ್ನಾಟಕ ಎಂಬ ಹೆಸರಿಟ್ಟಾಗ ಮಲ್ಲಿಗೆ ಸುರಿದಿದ್ದರು!
ಅಂದು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ದೇವಾರಾಜ ಅರಸು ಅವರು ನಿರ್ಣಯದ ಮೇಲೆ ಮಾತನಾಡಿದ ಮೇಲೆ ಸಭಾಧ್ಯಕ್ಷರು ‘ನಾನು ಈ ನಿರ್ಣಯವನ್ನು ಸಭೆಯ ಒಪ್ಪಿಗೆಗೆ ಹಾಕುತ್ತೇನೆ, ಅದು ಹೀಗೆದೆ; ಭಾರತದ ಸಂವಿಧಾನದಲ್ಲಿ ನಮೂದಿಸಿದ ಈ ರಾಜ್ಯದ ಹೆಸರನ್ನು ‘ಕರ್ನಾಟಕ’ ಎಂಬುದಾಗಿ ಬದಲಾಯಿಸಬೇಕೆಂದು ಈ ಸಭೆಯವರು ತಮ್ಮ ಖಚಿತ ಅಭಿಪ್ರಾಯವನ್ನು ಘೊಷಿಸಿ ಈ ಬಗ್ಗೆ ಅಗತ್ಯವಾದ ಸಂವಿಧಾನದ ತಿದ್ದುಪಡಿಗಳನ್ನು ರಾಜ್ಯ ಸರಕಾರದವರು ಪಡೆದುಕೊಳ್ಳಲು ಕ್ರಮ ಕೈಗೊಳ್ಳಬೇಕೆಂದು ಈ ಸಭೆಯವರು ಶಿಫಾರಸು ಮಾಡುತ್ತಾರೆ’
ಸಭಾಧ್ಯಕ್ಷರು ನಿರ್ಣಯವನ್ನು ಓದುತ್ತಿದ್ದಂತೆಯೇ ಎಲ್ಲ ಸದಸ್ಯರು ಜಯಕಾರ ಮಾಡಿದ್ದರು. ಆಗ ಮತ್ತೆ ಅಧ್ಯಕ್ಷರು : ನಿರ್ಣಯದ ವಿರೋಧ ಯಾರು ಇಲ್ಲವಾದ್ದರಿಂದ ನಿರ್ಣಯವು ಸರ್ವಾನುಮತದಿಂದ ಅಂಗೀಕರಿಸಲ್ಪಟ್ಟಿತು. ‘the resolution was adopted’ಎಂದು ಘೋಷಿಸಿದರು.
ಆಗ ವಾಟಾಳ್ ನಾಗರಾಜ್: ಈ ಶುಭ ಸಂತೋಷದ ಸಮಯದಲ್ಲಿ ಸಂತೋಷ ಸೂಚಕವಾಗಿ ನಾನು ಈ ಮಲ್ಲಿಗೆ ಹೂಗಳನ್ನು ಎಲ್ಲರ ಮೇಲೆಯೂ ಚೆಲ್ಲುತ್ತೇನೆ ಎಂದರು. ಅಲ್ಲದೆ ವಾಟಾಳ್ ನಾಗರಾಜ್ ಮತ್ತು ಎಸ್.ಬಂಗಾರಪ್ಪ ಮಲ್ಲಿಗೆ ಹೂಗಳನ್ನು ಸದಸ್ಯರ ಮೇಲೆ ಚೆಲ್ಲಿದರು. ಆಗ ದೇವರಾಜ ಅರಸು ಅವರು: ನಾನು ಈಗ ‘ಕರ್ನಾಟಕಕ್ಕೆ’ ಎಂದು ಹೇಳುತ್ತೇನೆ ತಾವೆಲ್ಲರೂ ಒಕ್ಕಂಠದಿAದ ‘ಜಯವಾಗಲಿ’ ಎಂದು ಹೇಳಬೇಕು ಎಂದರು.
ದೇವರಾಜು ಅರಸ್: ‘ಕರ್ನಾಟಕಕ್ಕೆ’
ಎಲ್ಲ ಸದಸ್ಯರು : ‘ಜಯವಾಗಲಿ’
ಆಗ ಎಲ್ಲ ಸದಸ್ಯರೂ ‘ಕರ್ನಾಟಕಕ್ಕೆ ಜಯವಾಗಲಿ’ ಎಂದು ಘೋಷಣೆಯನ್ನು ಮತ್ತು ಕರತಾಡವನ್ನು ಮಾಡಿದ್ದರು. ಇದೊಂದು ಐತಿಹಾಸಿಕ ಸಂದರ್ಭವಾಗಿತ್ತು.

ನನಗೆ ತನ್ನ ಜಾತಿಯೆಂದು ಏನೂ ಹೆಚ್ಚಿನ ರೀತಿಯ ಪ್ರೀತಿಯೂ ಇಲ್ಲ ಅಥವಾ ಬೇರೆ ಜಾತಿಯವರಲ್ಲಿ ಕಡಿಮೆ ರೀತಿಯ ಪ್ರೀತಿಯೂ ಇಲ್ಲ. ನಾವೆಲ್ಲರೂ ಒಂದೇ ಜಾತಿಯವರು ಎಂಬ ಭಾವನೆ. ಈ ರಾಜತತ್ವಕ್ಕೆ ನಾನು ಎಂದೂ ವಿರೋಧಿ. ಗಾಂಧೀಜಿಯವರು ಈ ರಾಜರುಗಳ ಬಗ್ಗೆ ಹೇಳಿದಾಗ ಅದು ಸರಿ ಎಂದು ನನಗೆ ತೋರಿ ಆಗಿನಿಂದಲೇ ವಿರೋಧವಾದ ಮನೋಭಾವ ಬೆಳೆದು ಬಂದಿತ್ತು. ಅದರ ವಿರುದ್ಧವಾಗಿ ಎದ್ದು ನಿಂತಿದ್ದೇನೆ.

ತಾವೆಲ್ಲರೂ ಈ ನಿರ್ಣಯವನ್ನು ವಿರೋಧ ಮಾಡದೆ ಸರ್ವಾನುಮತದ ಸ್ವಾಗತ ಮಾಡಿದ್ದಕ್ಕಾಗಿ ತಮಗೆಲ್ಲರಿಗೂ ನಾನು ಅಭಿನಂದಿಸುತ್ತೇನೆ. ಈ ನಿರ್ಣಯಕ್ಕೆ ತಮ್ಮೆಲ್ಲರ ಬೆಂಬಲವನ್ನು ಕೊಡಬೇಕೆಂದು ಪ್ರಾರ್ಥನೆಮಾಡಿಕೊಂಡು ನನ್ನ ಮಾತುಗಳನ್ನು ಮುಗಿಸುತ್ತೇನೆ.

ಹೀಗೆ ದೇವರಾಜ ಅರಸು ಅವರು ಮೈಸೂರು ರಾಜ್ಯಕ್ಕೆ ‘ಕರ್ನಾಟಕ’ ಎಂದು ಹೆಸರಿಡುವ ನಿರ್ಣಯವನ್ನು ಮಂಡಿಸಿ ಮಾತನಾಡಿದಾಗ ಶಾಸಕರೆಲ್ಲರೂ ಮೇಜುಕುಟ್ಟಿ, ಕರತಾಡವ ಮಾಡಿ ಸಂತೋಷ ವ್ಯಕ್ತಪಡಿಸಿದ್ದರು. ರಾಜ್ಯದ ಹೆಸರನ್ನು ಬದಲಾಯಿಸಬೇಕಾದ ಅನಿವಾರ್ಯತೆಯನ್ನು, ಹೆಸರು ಬದಲಾವಣೆಗೊಂಡ ರಾಜ್ಯವು ಹೇಗಿರಬೇಕೆಂಬುದನ್ನು ಅರಸರು ಈ ಭಾಷಣದಲ್ಲಿ ನೇರವಾಗಿ ಮತ್ತು ಸ್ಪಷ್ಟವಾಗಿ ಹೇಳಿದ್ದನ್ನು ನೀವು ಗಮನಿಸಬಹುದು.

ಅರಸರು ನಾಡಿಗೆ ‘ಕರ್ನಾಟಕ’ ಎಂದು ನಾಮಕರಣ ಮಾಡಿ, ಅತ್ಯಂತ ಸೂಕ್ಷವೂ, ಜಟಿಲವೂ ಆಗಿದ್ದ ಈ ಭಾವನಾತ್ಮಕ ಸಮಸ್ಯೆಯನ್ನು ತಮ್ಮ ಜಾಣ್ಮೆಯಿಂದ ಪರಿಹರಿಸಿ ಜಾಣರಾದರು, ದೂರದೃಷ್ಟಿಗೆ ಸಾಕ್ಷಿಯಾದರು. ದಿಟ್ಟತನಕ್ಕೂ ನಿದರ್ಶನವಾಗಿ ಇತಿಹಾಸದಲ್ಲಿ ಶಾಶ್ವತ ಸ್ಥಾನವನ್ನು ಗಳಿಸಿಕೊಂಡರು. ಜನತೆಯಲ್ಲಿ ನಂಬಿಕೆ, ಭರವಸೆ, ವಿಶ್ವಾಸವನ್ನು ಹುಟ್ಟಿಸಿದರು. ಈ ಒಂದು ನಿರ್ಧಾರದಿಂದ ಅವರ ವರ್ಚಸ್ಸು ಇಡೀ ರಾಜ್ಯದಲ್ಲಿ ಹರಡಿತು. ವಿಶೇಷ ಮನ್ನಣೆಯ ಜನಪ್ರಿಯತೆಗೆ ಅವರು ಪಾತ್ರರಾದರು.

ಇದನ್ನೂ ಓದಿ | ಅಮೆರಿಕದ ವಿಸ್ಕಾನ್ಸಿನ್ ರಾಜ್ಯದಲ್ಲಿ ನ.1 ಕನ್ನಡ ಭಾಷೆ ಮತ್ತು ರಾಜ್ಯೋತ್ಸವ ದಿನ; ಅಲ್ಲಿನ ರಾಜ್ಯಪಾಲರ ಘೋಷಣೆ

Exit mobile version