ಮುಂಬಯಿ: ಮಹಾರಾಷ್ಟ್ರದಲ್ಲಿ ಎರಡೂವರೆ ವರ್ಷಗಳ ಬಳಿಕ ಅಧಿಕಾರಕ್ಕೆ ಮರಳಿದ ಹಿನ್ನೆಲೆಯಲ್ಲಿ ಬಿಜೆಪಿಯ ಕಚೇರಿಯಲ್ಲಿ ಶುಕ್ರವಾರ ನಡೆದ ಪಕ್ಷದ ಸಂಭ್ರಮಾಚರಣೆಗೆ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಗೈರು ಹಾಜರಾಗಿದ್ದರು. ಇದು ರಾಜಕೀಯ ವಲಯದಲ್ಲಿ ನಾನಾ ಬಗೆಯಲ್ಲಿ ಚರ್ಚೆಗೀಡಾಗಿದೆ.
ಫಡ್ನವಿಸ್ ಗುರುವಾರ ತಾವು ಏಕನಾಥ್ ಶಿಂಧೆ ನೇತೃತ್ವದ ಸರ್ಕಾರದ ಭಾಗವಾಗುವುದಿಲ್ಲ ಎಂದು ತಿಳಿಸಿದ್ದರು. ಬಳಿಕ ಪಕ್ಷದ ಹೈಕಮಾಂಡ್ ಸೂಚನೆಯಂತೆ ಉಪ ಮುಖ್ಯಮಂತ್ರಿ ಪದವಿ ಸ್ವೀಕರಿಸಿದರು. ಆದರೆ ಒಲ್ಲದ ಮನಸ್ಸಿನಿಂದ ಡಿಸಿಎಂ ಆದರೇ? ಎಂಬ ಚರ್ಚೆ ನಡೆಯುತ್ತಿದೆ. ಈ ಚರ್ಚೆ ಸ್ವಲ್ಪ ಕಾವೇರುವಂತೆ ಪಕ್ಷದ ಸಂಭ್ರಮಾಚರಣೆಯಲ್ಲಿ ಕೂಡ ಫಡ್ನವಿಸ್ ಕಾಣಿಸಿಕೊಳ್ಳಲಿಲ್ಲ. ಫಡ್ನವಿಸ್ ಗೈರು ಉದ್ದೇಶಪೂರ್ವಕವೇ ಎಂಬ ಗುಮಾನಿ ಈಗ ಉಂಟಾಗಿದೆ.
ಆದರೆ ಫಡ್ನವಿಸ್ ಆಪ್ತರೊಬ್ಬರ ಪ್ರಕಾರ ಜುಲೈ ೩ರಿಂದ ಆರಂಭವಾಗಲಿರುವ ಎರಡು ದಿನಗಳ ವಿಶೇಷ ಅಧಿವೇಶನಕ್ಕೋಸ್ಕರ ಪೂರ್ವಸಿದ್ಧತೆಯನ್ನು ಮಾಡಿಕೊಳ್ಳುವ ನಿಟ್ಟಿನಲ್ಲಿ ಬ್ಯುಸಿಯಾಗಿದ್ದರು. ಹೀಗಾಗಿ ಸಂಭ್ರಮಾಚರಣೆಯಲ್ಲಿ ಭಾಗವಹಿಸಲಿಲ್ಲ. ಸಮಯದ ಅಭಾವದ ಪರಿಣಾಮ ಹೈದರಾಬಾದ್‌ನಲ್ಲಿ ನಡೆಯುವ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಗೂ ಫಡ್ನವಿಸ್ ಹಾಜರಾಗುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ವಿಕಾಸ ಅಘಾಡಿ ಸರ್ಕಾರ ಪತನದಲ್ಲಿ ಹಾಗೂ ಶಿವಸೇನಾವನ್ನು ವಿಭಜಿಸುವಲ್ಲಿ ಫಡ್ನವಿಸ್ ನಿರ್ಣಾಯಕ ಪಾತ್ರ ವಹಿಸಿದ್ದರು. ಅವರೇ ಸಿಎಂ ಆಗಲಿದ್ದಾರೆ ಎಂದು ಎಣಿಸಲಾಗಿತ್ತು. ಅದನ್ನು ಬಿಟ್ಟು ಬೇರೆ ಏನನ್ನೂ ಕಲ್ಪಿಸಿಕೊಳ್ಳುವುದೂ ಸಾಧ್ಯವಿಲ್ಲ ಎನ್ನುವ ಹಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಹೈಕಮಾಂಡ್ ಸಿಎಂ ಪಟ್ಟವನ್ನು ಶಿಂಧೆಯವರಿಗೆ ಒಪ್ಪಿಸಿತ್ತು.
ಕಳೆದ ಎರಡು ವಾರಗಳಿಂದ ಮಹಾರಾಷ್ಟ್ರ ರಾಜಕಾರಣದ ಮೇಲೆ ಬಿಗಿ ಹಿಡಿತ ಹೊಂದಿದವರಂತೆ ಕಾಣಿಸುತ್ತಿದ್ದ ದೇವೇಂದ್ರ ಫಡ್ನವಿಸ್ ಇದ್ದಕ್ಕಿಂದ್ದಂತೆ ಪಕ್ಷದ ವಿದ್ಯಮಾನಗಳ ಮೇಲೆ ಕಂಟ್ರೋಲ್ ಇಲ್ಲದವರಂತೆ ಕಂಡರು. ಹೀಗಾಗಿ ಈ ಘಟನೆಯನ್ನು ಬಿಜೆಪಿಯ ಗೆಲುವು ಹಾಗೂ ಫಡ್ನವಿಸ್ ಸೋಲು ಎಂದೂ ವ್ಯಾಖ್ಯಾನಿಸಲಾಗುತ್ತಿದೆ. ಆದರೆ ರಾಜಕಾರಣದಲ್ಲಿ ಯಾರು ಏನು ಬೇಕಾದರೂ ಆಗಬಹುದು. ಏರಿಳಿತಗಳು ಇಲ್ಲಿ ಹೊಸತಲ್ಲ. ಸೋತು ಹೋದರು ಎನ್ನಿಸಿದ ನಾಯಕರು ನೋಡನೋಡುತ್ತಿದ್ದಂತೆ ಫೀನಿಕ್ಸ್‌ನಂತೆ ಏಳಬಲ್ಲರು.