ನವದೆಹಲಿ: ಸಾಮಾಜಿಕ ಜಾಲತಾಣವು ಪ್ರಬಲ ಎಂಬುದು ಯಾವಾಗ ಗೊತ್ತಾಯಿತೋ, ಅಲ್ಲಿಂದ ನಕಲಿ ಸುದ್ದಿಗಳು, ತಿರುಚಿದ ಫೋಟೊಗಳು, ತಪ್ಪು ಮಾಹಿತಿ ಪಸರಿಸುವ ಚಾಳಿ ಜಾಸ್ತಿಯಾಯಿತು. ಇದಕ್ಕೆ ನಿದರ್ಶನ ಎಂಬಂತೆ, ಅಕ್ಟೋಬರ್ 8ರಂದು ಚೆನ್ನೈ ಮಾರುಕಟ್ಟೆಗೆ ತೆರಳಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈರುಳ್ಳಿ ಖರೀದಿಸಿದರು ಎಂಬ ಸುದ್ದಿ ಹಾಗೂ ಫೋಟೊ ಜಾಲತಾಣಗಳಲ್ಲಿ ಹರಿದಾಡಿವೆ. ಈ ಕುರಿತು ಮಹಾರಾಷ್ಟ್ರ ಕಾಂಗ್ರೆಸ್ ಫೋಟೊ ಶೇರ್ ಮಾಡಿದೆ. ಆದರೆ, ಇದೆಷ್ಟು ನಿಜ ಎಂಬ ಪ್ರಶ್ನೆ (Fact Check) ಮೂಡಿದೆ.
ಈರುಳ್ಳಿ ಖರೀದಿ ಏಕೆ ಸುದ್ದಿ?
ದೇಶದಲ್ಲಿ ಈರುಳ್ಳಿ ಬೆಲೆ ಜಾಸ್ತಿಯಾಗಿದೆ ಎಂಬ ಆರೋಪ ಕೇಳಿಬಂದಾಗ ಅಂದರೆ, 2019ರಲ್ಲಿ ಸಂಸತ್ತಿನಲ್ಲಿ ಮಾತನಾಡಿದ್ದ ನಿರ್ಮಲಾ ಸೀತಾರಾಮನ್, “ನಾನು ಈರುಳ್ಳಿ ಸೇವಿಸುವುದಿಲ್ಲ” ಎಂಬುದಾಗಿ ಹೇಳಿದ್ದರು. ಇದನ್ನೇ ಟೀಕೆಯ ದಾಳವಾಗಿಸಿಕೊಂಡ ಕಾಂಗ್ರೆಸ್, ನಿರ್ಮಲಾ ಸೀತಾರಾಮನ್ ಅವರು ಈರುಳ್ಳಿ ಖರೀದಿಸುತ್ತಿರುವ ಫೋಟೊವನ್ನು ಟ್ವೀಟ್ ಮಾಡಿ, ಈರುಳ್ಳಿಯೇ ತಿನ್ನದ ಸೀತಾರಾಮನ್ ಅವರು ಖರೀದಿಸಿದ್ದೇಕೆ ಎಂದು ಪ್ರಶ್ನಿಸಿದೆ.
ವಾಸ್ತವಾಂಶ ಏನು?
ನಿರ್ಮಲಾ ಸೀತಾರಾಮನ್ ಅವರು ಚೆನ್ನೈ ಮಾರುಕಟ್ಟೆಗೆ ಭೇಟಿ ನೀಡಿ, ಅಲ್ಲಿನ ವ್ಯಾಪಾರಿಗಳೊಂದಿಗೆ ಮಾತುಕತೆ ನಡೆಸಿದ ಫೋಟೊ ಹಾಗೂ ವಿಡಿಯೊವನ್ನು ಅವರ ಸಚಿವಾಲಯವು ಟ್ವೀಟ್ ಮಾಡಿದೆ. ಆದರೆ, ಎಲ್ಲಿಯೂ ಅವರು ಈರುಳ್ಳಿ ಖರೀದಿಸಿದ ದೃಶ್ಯವಿಲ್ಲ. ಹಾಗೆಯೇ, ಕಾಂಗ್ರೆಸ್ ಟ್ವೀಟ್ ಬಗ್ಗೆ ಹಲವು ಮಾಧ್ಯಮಗಳು ಪರಿಶೀಲನೆ ನಡೆಸಿದ್ದು, ಎಲ್ಲಿಯೂ ಈರುಳ್ಳಿ ಖರೀದಿ ಕುರಿತು ಪ್ರಸ್ತಾಪವಿಲ್ಲ. ಹಾಗಾಗಿ, ಇದು ನಕಲಿ ಸುದ್ದಿ ಎಂಬುದಾಗಿ ಸಾಬೀತಾಗಿದೆ.
ಇದನ್ನೂ ಓದಿ | ಆರೋಗ್ಯ ವಿಚಾರಣೆ: ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿ ಮಾಡಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್