ಚೆನ್ನೈ: ವೃತ್ತಿ ಹಾಗೂ ವೈಯಕ್ತಿಕ ಜೀವನದಲ್ಲಿ ಹಿನ್ನಡೆಗಳನ್ನು ಅನುಭವಿಸಿದರೂ, ಅವುಗಳನ್ನು ಮೆಟ್ಟಿ ನಿಂತು, ಕೊನೆಗೊಂದು ಗೆಲುವಿನ ನಗೆ ಬೀರುತ್ತಿದ್ದ, ವೃತ್ತಿಜೀವನದಲ್ಲಂತೂ ಫೀನಿಕ್ಸ್‌ನಂತೆ ಎದ್ದು ಬಂದಿದ್ದ, ಫಿನೀಶರ್ ಎಂದೇ ಖ್ಯಾತಿಯಾಗಿದ್ದ ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ (Dinesh Karthik) ಎಲ್ಲ ಮಾದರಿಯ ಕ್ರಿಕೆಟ್‌ಗೆ ಶನಿವಾರ (ಜೂನ್ 1) ವಿದಾಯ ಹೇಳಿದ್ದಾರೆ. ಜನ್ಮದಿನದಂದೇ (Birthday) ಸಾಮಾಜಿಕ ಜಾಲತಾಣದಲ್ಲಿ ಭಾವುಕ ಪೋಸ್ಟ್ ಹಾಗೂ ವಿಡಿಯೊ ಮೂಲಕ ಆರ್‌ಸಿಬಿ (RCB) ಅಭಿಮಾನಿಗಳ ಪಾಲಿನ ನೆಚ್ಚಿನ ಡಿಕೆ ನಿವೃತ್ತಿ ಘೋಷಿಸಿದ್ದಾರೆ.
“ಕೆಲವು ದಿನಗಳಿಂದ ನಾನು ಯೋಚಿಸುತ್ತಿದ್ದ ಕುರಿತು ಈಗ ಅಂತಿಮ ತೀರ್ಮಾನ ತೆಗೆದುಕೊಂಡಿದ್ದೇನೆ. ನಾನು ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುತ್ತಿದ್ದೇನೆ. ಎಲ್ಲ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆದು, ಮುಂಬರುವ ಸವಾಲುಗಳನ್ನು ಎದುರಿಸಲು ನಾನು ಮುಂದಡಿ ಇಡುತ್ತಿದ್ದೇನೆ. ನನ್ನ ವೃತ್ತಿ ಜೀವನ ಪಯಣಕ್ಕೆ ಸಹಕಾರ ನೀಡಿದ ನನ್ನೆಲ್ಲ ತರಬೇತುದಾರರು, ನಾಯಕರು, ಆಯ್ಕೆದಾರರು, ತಂಡದ ಸದಸ್ಯರು, ಸಿಬ್ಬಂದಿಗೆ ಧನ್ಯವಾದಗಳು. ನಾನು ನನ್ನ ದೇಶವನ್ನು ಪ್ರತಿನಿಧಿಸಿದ್ದಕ್ಕೆ ಅದೃಷ್ಟವಂತ ಎಂದೇ ಭಾವಿಸುತ್ತೇನೆ” ಎಂಬುದಾಗಿ ಅವರು ಭಾವುಕ ಪೋಸ್ಟ್ ಮಾಡಿದ್ದಾರೆ.
It's official 💖
— DK (@DineshKarthik) June 1, 2024
Thanks
DK 🙏🏽 pic.twitter.com/NGVnxAJMQ3
19ನೇ ವಯಸ್ಸಿನಲ್ಲೇ ಪದಾರ್ಪಣೆ
19ನೇ ವಯಸ್ಸಿನಲ್ಲಿ ಅಂದರೆ 2004ರಲ್ಲಿ ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಅವರು ಪದಾರ್ಪಣೆ ಮಾಡಿದರು. 94 ಏಕದಿನ ಪಂದ್ಯಗಳನ್ನಾಡಿದ ಅವರು 9 ಅರ್ಧಶತಕಗಳೊಂದಿಗೆ 1,792 ರನ್ ಗಳಿಸಿದ್ದಾರೆ. ಟೆಸ್ಟ್‌ನಲ್ಲಿ 42 ಇನ್ನಿಂಗ್ಸ್ ಆಡಿ ಅವರು ಒಂದು ಶತಕದೊಂದಿಗೆ 1,025 ರನ್ ಗಳಿಸಿದ್ದಾರೆ. ಇನ್ನು 60 ಟಿ-20 ಪಂದ್ಯಗಳನ್ನು ಆಡಿ 686 ರನ್ ಗಳಿಸಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲೂ ಅವರು ಛಾಪು ಮೂಡಿಸಿದ್ದಾರೆ. ಸೈಯದ್ ಮುಷ್ತಾಕ್ ಅಲಿ, ರಣಜಿಯಲ್ಲೂ ಅವರು ಆಡಿದ್ದಾರೆ. ಅವರ ನಾಯಕತ್ವದಲ್ಲಿಯೇ ತಮಿಳುನಾಡು ತಂಡವು ಎರಡು ಬಾರಿ ಮುಷ್ತಾಕ್ ಅಲಿ ಟ್ರೋಫಿ ಗೆದ್ದಿದೆ.
ಐಪಿಎಲ್‌ನಲ್ಲಿ ಮೈಲುಗಲ್ಲು
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲೂ ದಿನೇಶ್ ಕಾರ್ತಿಕ್ ಮೈಲುಗಲ್ಲು ನೆಟ್ಟಿದ್ದಾರೆ. ಐಪಿಎಲ್‌ನಲ್ಲಿ 257 ಪಂದ್ಯಗಳನ್ನು ಆಡಿದ ದಿನೇಶ್ ಕಾರ್ತಿಕ್ 4,842 ರನ್ ಬಾರಿಸಿದ್ದಾರೆ. ಕೋಲ್ಕೊತಾ ನೈಟ್ ರೈಡರ್ಸ್, ಮುಂಬೈ ಇಂಡಿಯನ್ಸ್, ಡೆಲ್ಲಿ ಡೇರ್ ಡೆವಿಲ್ಸ್ ಪಂಜಾಬ್ ಕಿಂಗ್ಸ್ ಹಾಗೂ ಆರ್‌ಸಿಬಿ ಪರವಾಗಿ ಅವರು ಆಡಿದ್ದರು. ಅದರಲ್ಲೂ, ಆರ್‌ಸಿಬಿಯಲ್ಲಿ ಡಿ.ಕೆ. ಬೆಸ್ಟ್ ಫಿನೀಶರ್ ಎನಿಸಿದ್ದರು. ಆರ್‌ಸಿಬಿ ಅಭಿಮಾನಿಗಳು ಅವರನ್ನು ಪ್ರೀತಿಯಿಂದ ಕಾಣುತ್ತಿದ್ದರು. ಈ ಕುರಿತು ಹಲವು ಬಾರಿ ದಿನೇಶ್ ಕಾರ್ತಿಕ್ ಹೇಳಿದ್ದಾರೆ.
ದಿನೇಶ್ ಕಾರ್ತಿಕ್ ಅವರ ವೃತ್ತಿ ಬದುಕು ಇನ್ನೇನು ಮುಗಿಯಿತು ಎಂಬಷ್ಟರಲ್ಲಿಯೇ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ ಅವರು 2022ರ ಟಿ-20 ವಿಶ್ವಕಪ್‌ಗೂ ಆಯ್ಕೆಯಾಗಿದ್ದರು. ಪ್ರಸಕ್ತ ಐಪಿಎಲ್ ಟೂರ್ನಿಯಲ್ಲೂ ಡಿ.ಕೆ ಉತ್ತಮ ಆಟ ಆಡಿದ್ದರು. ಆರ್‌ಸಿಬಿ ಪರ 15 ಮ್ಯಾಚ್‌ಗಳಲ್ಲಿ ಅವರು 326 ರನ್ ಬಾರಿಸಿದ್ದರು. ಇನ್ನು ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಿ ಗೆಲುವು ತಂದುಕೊಟ್ಟಿದ್ದು ಮರೆಯಲಾಗದ ಇನ್ನಿಂಗ್ಸ್ ಆಗಿದೆ. ಅಷ್ಟೇ ಅಲ್ಲ, ಮೊದಲ ಪತ್ನಿ ಮಾಡಿದ ಮೋಸ, ಬಳಿಕ ವಿಚ್ಛೇದನ, ಅದರಿಂದಾದ ಮಾನಸಿಕ ಖಿನ್ನತೆಯಿಂದ ಎದ್ದುಬಂದ ದಿನೇಶ್ ಕಾರ್ತಿಕ್, ದೀಪಿಕಾ ಪಳ್ಳಿಕಲ್ ಅವರನ್ನು ಮದುವೆಯಾಗಿ, ಈಗ ಇಬ್ಬರು ಮಕ್ಕಳ ತಂದೆಯಾಗಿದ್ದಾರೆ. ಆ ಮೂಲಕ ಅವರು ವೈಯಕ್ತಿಕ ಜೀವನದಲ್ಲೂ ದೊಡ್ಡ ಹೋರಾಟಗಾರ ಎಂಬುದನ್ನು ಪ್ರೂವ್ ಮಾಡಿದ್ದಾರೆ. ಅಲ್ ದಿ ಬೆಸ್ಟ್ ಡಿ.ಕೆ.