Site icon Vistara News

Nandi Hills : ಬೆಂಗಳೂರಿಗರ ವಾರಾಂತ್ಯದ ವಿನೋದಕ್ಕೆ ಅಡಚಣೆ; ಮರದ ಟೊಂಗೆ ಬಿದ್ದು ನಂದಿ ಹಿಲ್ಸ್​ನಲ್ಲಿ 5 ಕಿ.ಮೀ ಟ್ರಾಫಿಕ್ ಜಾಮ್​

Nandi Hills

ಚಿಕ್ಕಬಳ್ಳಾಪುರ: ಬೆಂಗಳೂರು ನಗರಕ್ಕೆ ಹತ್ತಿರದಲ್ಲಿರುವ ಗಿರಿಧಾಮ ನಂದಿ ಬೆಟ್ಟದಲ್ಲಿ (Nandi Hills) ಭಾನುವಾರ ಬೆಳಗ್ಗೆ ರಸ್ತೆಯ ಮೇಲೆ ಮರದ ಟೊಂಗೆಯೊಂದು ಮುರಿದು ಬಿದ್ದ ಕಾರಣ ನಗರದ ಮಂದಿಯ ವಾರಾಂತ್ಯದ ವಿನೋದಕ್ಕೆ ಅಡಚಣೆ ಉಂಟಾಯಿತು. ರಸ್ತೆಯಲ್ಲಿ ಬೆಟ್ಟದ ಮೇಲಕ್ಕೆ ಸಾಗಲು ಸಾಧ್ಯವಾಗದ ಕಾರಣ ಅವರೆಲ್ಲರೂ 5 ಕಿಲೋ ಮೀಟರ್​​ಗೂ ಹೆಚ್ಚು ದೂರ ಉಂಟಾಗಿದ್ದ ಟ್ರಾಫಿಕ್ ಜಾಮ್​ನಲ್ಲಿ ನಲುಗಿದರು.

https://vistaranews.com/wp-content/uploads/2024/08/WhatsApp-Video-2024-08-18-at-7.07.31-AM.mp4

ಭಾನುವಾರ ನಂದಿ ಬೆಟ್ಟಕ್ಕೆ ದೊಡ್ಡ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಮುಂಜಾನೆಯ ಮಂಜಿನ ದೃಶ್ಯಗಳನ್ನು ನೋಡಲು ಕಾರು, ಬೈಕ್​ ಎನ್ನದೇ ಸಿಕ್ಕ ಸಿಕ್ಕ ವಾಹನಗಳಲ್ಲಿ ಬೆಟ್ಟದ ಮೇಲಕ್ಕೆ ನುಗ್ಗುತ್ತಾರೆ. ಆದರೆ, ಶನಿವಾರ ರಾತ್ರಿ ವೇಳೆ ಬೆಟ್ಟದ ಹಾದಿಯ 26ನೇ ತಿರುವಿನಲ್ಲಿ ಮರದ ಟೊಂಗೆಯೊಂದು ರಸ್ತೆ ಮೇಲೆ ಬಿದ್ದಿತ್ತು. ಹೀಗಾಗಿ ಬೆಟ್ಟದ ಮೇಲಕ್ಕೆ ಏರುತ್ತಿದ್ ನೂರಾರು ವಾಹನಗಳು ನಡುವೆ ಸಿಲುಕಿಕೊಂಡವು. ಹಿಂದಕ್ಕೆ ತಿರುಗಲಾರದೆ, ಮುಂದಕ್ಕೆ ಹೋಗಲಾರದೆ ಸಮಸ್ಯೆ ಎದುರಿಸಿದವು. ಮುಂಜಾನೆಯ ಮಂಜಿನಲ್ಲಿ ಸಂಭ್ರಮಿಸುವ ಅವರೆಲ್ಲರ ಖುಷಿ ಕಾರಿನೊಳಗೆ ಮುಗಿದು ಹೋಗಿಯಿತು.

ಪೊಲೀಸರ ನಿರ್ಲಕ್ಷ್ಯ

ಬೆಳಗ್ಗಿನ ಅವಧಿಯಲ್ಲಿ ನಂದಿ ಬೆಟ್ಟದ ಗೇಟ್​​ ತೆರೆದು ವಾಹನಗಳನ್ನು ಒಳಕ್ಕೆ ಬಿಡಲಾಗುತ್ತದೆ. ಅಂತೆಯೇ ಪೊಲೀಸರು ಗೇಟ್ ತೆಗೆದು ವಾಹನವನ್ನು ಬಿಟ್ಟಿದ್ದರು. ಅವರಿಗೆ ತಕ್ಷಣವೇ ಮರವೊಂದು ಬಿದ್ದಿರುವ ಸಂಗತಿ ಗೊತ್ತಾಗಿದೆ. ಆದರೆ, ಯಾರೂ ಆ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಕೆಳಗಿನಿಂದಲೇ ವಾಹನಗಳನ್ನು ತಡೆಯುವ ಕೆಲಸವಾಗಲಿ, ಅಲ್ಲಿಗೆ ಬರುತ್ತಿದ್ದ ವಾಹನಗಳನ್ನಾಗಲಿ ವಾಪಸ್ ಕಳುಹಿಸುವ ಕೆಲಸ ಮಾಡಲಿಲ್ಲ. ಹೀಗಾಗಿ ಟ್ರಾಫಿಕ್ ಜಾಮ್ ದೊಡ್ಡ ಪ್ರಮಾಣದಲ್ಲಿ ಉಂಟಾಯಿತು.

ಇದನ್ನೂ ಓದಿ: Physical assault : ಹೆಣ್ಣು ಮಕ್ಕಳಿಗೆ ಅಶ್ಲೀಲ ಚಿತ್ರ ತೋರಿಸುತ್ತಿದ್ದ ಶಿಕ್ಷಕ; ಸಿಟ್ಟಿಗೆದ್ದು ಶಾಲೆಯನ್ನೇ ಸುಟ್ಟು ಹಾಕಿದ ಗ್ರಾಮಸ್ಥರು

ಮುಂಜಾನೆ ವೇಳೆ ಬೆಟ್ಟಕ್ಕೆ ಹತ್ತಲು ಮುಂದಾಗಿದ್ದ ಜನರು ತಮ್ಮ ತಮ್ಮ ವಾಹನಗಳ ಒಳಗೆ ಸಿಲುಕಿಕೊಂಡು ಪೊಲೀಸರಿಗೆ ಹಿಡಿಶಾಪ ಹಾಕಿದರು. ಸಣ್ಣ ಟೊಂಗೆಯೊಂದನ್ನು ತೆರವು ಮಾಡಿ ಜನರಿಗೆ ಮೇಲಕ್ಕೆ ಹೋಗಲು ದಾರಿ ಮಾಡಿಸಿಕೊಡದ ಅವರ ನಿರ್ಲಕ್ಷ್ಯಕ್ಕೆ ಛೀಮಾರಿ ಹಾಕಿದರು. ಬಳಿಕ ಪ್ರವಾಸಕ್ಕೆ ತೆರೆಳಿದ್ದ ಕೆಲವು ಯುವಕರು ಮರವನ್ನು ಬದಿಗೆ ಎಳೆದು ಹಾಕಿದರು. ಅಷ್ಟರಲ್ಲಿ ಸೂರ್ಯ ಮೇಲಕ್ಕೆ ಏರಿದ್ದ. ಆದಾಗ್ಯೂ ಅಲ್ಲಿ ತನಕ ಬಂದಿದ್ದ ಪ್ರವಾಸಿಗರು ಬೆಟ್ಟ ಹತ್ತಿದ ಬಳಿಕವೇ ತಮ್ಮ ತಮ್ಮ ಊರುಗಳಿಗೆ ತೆರಳಿದರು. ಆದಾಗ್ಯೂ ಕೆಲವು ವಾಹನಗಳು ನಿರಾಸೆಯಿಂದ ವಾಪಸ್ ತೆರಳಿದವು.

Exit mobile version