ಬೆಂಗಳೂರು: ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ (ನೋಂದಾಯಿತ) ಬೆಂಗಳೂರು ವತಿಯಿಂದ ಉಡುಪಿ ಜಿಲ್ಲೆಯ 350 ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಉಚಿತ 41,000 ಜೊತೆ ಶಾಲಾ ಸಮವಸ್ತ್ರಗಳ ವಿತರಣೆ ಕಾರ್ಯಕ್ರಮ ಆಯೋಜನೆಗೊಂಡಿದೆ. ಜುಲೈ 6ರಂದು ಬೈಂದೂರು ತಾಲೂಕಿನಲ್ಲಿ ಸಾಗುವ ರಾಷ್ಟ್ರೀಯ ಹೆದ್ದಾರಿ 66ರ ಬಳಿಯ ಜೆ.ಎನ್.ಆರ್. ಸಭಾ೦ಗಣದಲ್ಲಿ ಕಾರ್ಯಕ್ರಮ ನಡೆಯಲಿದೆ. ಸಮೃದ್ಧ ಜನಸೇವಾ ಚಾರಿಟೇಬಲ್ ಟ್ರಸ್ಟ್ ಬೈಂದೂರು ಹಾಗೂ ಉಡುಪಿ ಜಿಲ್ಲೆಯು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಇಲಾಖೆ ಸಹಯೋಗದೊಂದಿಗೆ ಈ ಬೃಹತ್ ಸಮಾರಂಭ ನಡೆಯಲಿದೆ.
ವಿಧಾನ ಸಭೆ ಸ್ಪೀಕರ್ ಯು. ಟಿ ಖಾದರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷರಾದ ಡಾ. ಹೆಚ್.ಎಸ್.ಶೆಟ್ಟಿ (Dr HS Shetty ) ಅವರು ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ. ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಶುಭಾಂಶಸನೆ ಮಾಡಲಿದ್ದಾರೆ. ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ ಸಮವಸ್ತ್ರ ವಿತರಣೆ ಮಾಡಲಿದ್ದು, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀ ಗುರುರಾಜ್ ಗಂಟಿಹೊಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ, ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಯಶಪಾಲ್ ಸುವರ್ಣ, ಸಮೃದ್ಧ ಜನಸೇವಾ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಬಿ.ಎಸ್. ಸುರೇಶ್ ಶೆಟ್ಟಿ, ಶಿಕ್ಷಣ ಇಲಾಖೆ, ಉಡುಪಿ ಜಿಲ್ಲೆಯ ಉಪ ನಿರ್ದೇಶಕ ಬೈಂದೂರು ಶ್ರೀ ಕೆ. ಗಣಪತಿ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.
ಪ್ರಶಸ್ತಿ ಪ್ರಧಾನ ಸಮಾರಂಭ
ಕಾರ್ಯಕ್ರಮದಲ್ಲಿ ‘ಹೆಗ್ಗು೦ಜೆ ರಾಜೀವ ಶೆಟ್ಟಿ ವಿದ್ಯಾ ಪೋಷಕ್ ಪ್ರಶಸ್ತಿ’ ಪ್ರಧಾನ ಸಮಾರಂಭ ನಡೆಯಲಿದೆ. ಹಿರಿಯ ಶಿಕ್ಷಕರು ಹಾಗೂ ಯಕ್ಷಗಾನ ಪ್ರಸಂಗಕರ್ತರಾದ ಕಂದಾವರ ರಘುರಾಮ ಶೆಟ್ಟಿ ಅವರಿಗೆ ಈ ಬಾರಿ ಪ್ರಶಸ್ತಿ ಪ್ರದಾನವಾಗಲಿದ್ದು, ಶಿವಮೊಗ್ಗ ಸಂಸದ ಬಿ. ವೈ ರಾಘವೇಂದ್ರ ಪ್ರಶಸ್ತಿ ನೀಡಿ ಸನ್ಮಾನಿಸಲಿದ್ದಾರೆ.
ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷರಾದ ಎಚ್. ಎಸ್. ಶೆಟ್ಟಿ ,ಉಪಾಧ್ಯಕ್ಷರಾದ ಹಾಲಾಡಿ ನಾಗರಾಜ ಶೆಟ್ಟಿ, ಕಾರ್ಯದರ್ಶಿ ಡಾ. ಸುಮನಾ ಶೆಟ್ಟಿ ಅವರು ಬೃಹತ್ ಕಾರ್ಯಕ್ರಮಕ್ಕೆ ಸರ್ವರಿಗೂ ಸ್ವಾಗತ ಕೋರಿದ್ದಾರೆ. ಮೈಸೂರು ಮರ್ಕಂಟೈಲ್ ಕಂಪನಿ ಲಿಮಿಟೆಡ್ ಬೆಂಗಳೂರು, ಮೈಸೂರು ಗ್ರೀನ್ ಕಂಪನಿ ಪ್ರೈವೇಟ್ ಲಿಮಿಟೆಡ್ ಬೆಂಗಳೂರು ಮೈಸೂರು ಸೈನ್ಸ್ & ಟಿಕ್ನಾಲಜಿ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಕಾರ್ಯಕ್ರಮದ ಪೋಷಕ ಸಂಸ್ಥೆಗಳಾಗಿವೆ.
ಕಾರ್ಯಕ್ರಮದ ರೂವಾರಿ ಡಾ.ಎಚ್.ಎಸ್.ಶೆಟ್ಟಿ
ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಹಾಲಾಡಿಯಲ್ಲಿ ಜನಿಸಿದ ಡಾ.ಎಚ್.ಎಸ್.ಶೆಟ್ಟಿ ಅವರು ಹೋಟೆಲ್ ಉದ್ಯಮಿಯಾಗಿ ಹೆಸರು ಮಾಡಿದ್ದಾರೆ. ಜತೆಗೆ ಬಟ್ಟೆ ಮತ್ತು ಖಾದ್ಯ ತೈಲ ವಹಿವಾಟು, ಕೃಷಿ ಸಂಬಂಧಿ ಉತ್ಪನ್ನಗಳ ಮಾರಾಟ, ವಿದ್ಯುತ್ ಉತ್ಪಾದನೆ ಹೀಗೆ ಹಲವು ಕ್ಷೇತ್ರಗಳಲ್ಲಿ ಯಶಸ್ವೀ ಉದ್ಯಮಿ ಎನಿಸಿಕೊಂಡಿದ್ದಾರೆ.
ಇದನ್ನೂ ಓದಿ: Job Alert: 10ನೇ ತರಗತಿ ಪಾಸಾದವರಿಗೆ ಗುಡ್‌ನ್ಯೂಸ್; SSCಯಿಂದ ಬರೋಬ್ಬರಿ 8,326 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ಮೈಸೂರು ಮರ್ಕೆಂಟೈಲ್ ಕಂಪನಿ ಲಿಮಿಟೆಡ್ ಸ್ಥಾಪಿಸಿ, ಕೃಷಿ ಉತ್ಪನ್ನಗಳನ್ನು ರಫ್ತು ಮಾಡುತ್ತ ರೈತರಿಗೆ ನೆರವಾಗುತ್ತಿರುವ ಇವರಿಗೆ ಆರು ಬಾರಿ ಬೆಸ್ಟ್ ಎಕ್ಸ್‌ಪೋರ್ಟ್ ಅವಾರ್ಡ್ ಲಭಿಸಿದೆ. ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಿ, ಸರ್ಕಾರಿ ಶಾಲೆ ಮತ್ತು ಆಸ್ಪತ್ರೆಗಳ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡುತ್ತಿದ್ದಾರೆ. ಡಾ. ಎಚ್.ಎಸ್. ಶೆಟ್ಟಿ (Dr HS Shetty) ಅವರಿಗೆ ಇತ್ತೀಚೆಗೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 23ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗಿತ್ತು.