ಕುಂದಾಪುರ: ಕಳೆದ ಒಂದು ವರ್ಷದಲ್ಲಿ ದಾನ, ಧರ್ಮಗಳಿಗಾಗಿ 7 ಕೋಟಿ ರೂಪಾಯಿ ವಿನಿಯೋಗ ಮಾಡಲಾಗಿದ್ದು, ನಾವು ಬೆಳೆದು ಬಂದ ಸಮಾಜಕ್ಕೆ ನೆರವಾಗುವುದು ನಮ್ಮ ಉದ್ದೇಶ ಎಂದು ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷರಾದ ಡಾ. ಹೆಚ್.ಎಸ್.ಶೆಟ್ಟಿ (Dr HS Shetty) ಹೇಳಿದ್ದಾರೆ. ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ (ನೋಂದಾಯಿತ) ಬೆಂಗಳೂರು ವತಿಯಿಂದ ಉಡುಪಿ ಜಿಲ್ಲೆಯ 350 ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಉಚಿತ 41,000 ಜೊತೆ ಶಾಲಾ ಸಮವಸ್ತ್ರಗಳ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬೈಂದೂರಿನ ಸಮೃದ್ಧ ಜನಸೇವಾ ಚಾರಿಟೆಬಲ್ ಟ್ರಸ್ಟ್ ಮತ್ತು ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಹಕಾರದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಸಮವಸ್ತ್ರಗಳ ವಿತರಣೆ ಹಾಗೂ ಹೆಗ್ಗುಂಜೆ ರಾಜೀವ್ ಶೆಟ್ಟಿ ವಿದ್ಯಾ ಪೋಷಕ್ ಪ್ರಶಸ್ತಿಯನ್ನು ಹಿರಿಯ ಶಿಕ್ಷಕರು ಹಾಗೂ ಯಕ್ಷಗಾನ ಪ್ರಸಂಗಕರ್ತರಾದ ಕಂದಾವರ ರಘುರಾಮ್ ಶೆಟ್ಟಿ ಅವರಿಗೆ ಪ್ರದಾನ ಮಾಡಿದ ಬಳಿಕ ಅವರು ಮಾತನಾಡಿ, ನಮ್ಮ ದುಡಿಮೆಯಲ್ಲಿ ನಮಗೆ ಬೇಕಾದಷ್ಟು ಬಳಸಿಕೊಂಡು ಉಳಿದದನ್ನು ಸಮಾಜಕ್ಕೆ ವಿನಿಯೋಗ ಮಾಡುವುದೇ ಜೀವನ. ನಾನು ನನ್ನ ಜೀವನದಲ್ಲಿ ದುಡಿದ ಹಣದಲ್ಲಿಯೇ ಸಮಾಜ ಮುಖಿ ಕಾರ್ಯ ಮಾಡುತ್ತಿದ್ದೇನೆ ಎಂದು ಹೇಳಿದರು.
ದುಡಿಮೆಯ ಒಂದು ಭಾಗವನ್ನು ಸಮಾಜಕ್ಕೆ ನೀಡಬೇಕು ಎನ್ನುವ ಉದ್ದೇಶವನ್ನು ಇಟ್ಟುಕೊಂಡು ಇಂತಹ ಕಾರ್ಯಕ್ರಮವನ್ನು ರೂಪಿಸಿದ್ದೇವೆ. ನಾವು ಇದುವರೆಗೆ ಯಾರಿಂದಲೂ ಒಂದು ರೂಪಾಯಿ ಚಂದಾ ಸ್ವೀಕರಿಸಿಲ್ಲ. ಶಾಲಾ ಕಟ್ಟಡ ನಿರ್ಮಾಣ, ವಿದ್ಯಾರ್ಥಿಗಳಿಗೆ ಅಗತ್ಯ ಪರಿಕರಗಳ ವಿತರಣೆ, ಶಿಕ್ಷಕರ ನೇಮಕ ಸೇರಿದಂತೆ ಶೈಕ್ಷಣಿಕ ವಲಯದ ಅಗತ್ಯಗಳನ್ನು ಪೂರೈಸುವ ಕೆಲಸ ಮಾಡುತಿದ್ದೇವೆ ಎಂದು ನುಡಿದರು.
ಇದನ್ನೂ ಓದಿ: Tumkur News: ರೈತರು ಮೊಬೈಲ್ ಆ್ಯಪ್ ಮೂಲಕ ಬೆಳೆ ವಿವರ ದಾಖಲಿಸಬೇಕು
ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬೈಂದೂರು ನನಗೆ ಈ ಹಿಂದುನಿಂದಲೂ ಚಿರಪರಿಚಿತ ಸ್ಥಳ. ನಾನು ವಿದ್ಯಾರ್ಥಿ ನಾಯಕನಾಗಿದ್ದ ದೆಸೆಯಿಂದಲೇ ಬೈಂದೂರಿನೊಂದಿಗೆ ನಿಕಟ ಸಂಪರ್ಕ ಇರಿಸಿಕೊಂಡಿದ್ದೆ.. ಇಂದು ಬೈಂದೂರಿನಲ್ಲಿ ಡಾಕ್ಟರ್ ಎಚ್ಎಸ್ ಶೆಟ್ಟಿ ಅವರ ಸಮಾಜಮುಖಿ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರುವುದು ನನಗೆ ಸಂತಸ ತಂದಿದೆ. ನಿಜವಾದ ದೇಶಪ್ರೇಮಿ ಯಾರು ಎಂದರೆ ಶೈಕ್ಷಣಿಕವಾಗಿ ಸಹಾಯ ನೀಡುತ್ತಿರುವ ಡಾಕ್ಟರ್ ಎಚ್ಎಸ್ ಶೆಟ್ಟಿ ಅವರು ಎಂದು ಕೊಂಡಾಡಿದರು.
ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಯಶ್‌ಪಾಲ್ ಸುವರ್ಣ, ಸಮೃದ್ಧ ಜನಸೇವಾ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಬಿ.ಎಸ್.ಸುರೇಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಪ್ರಶಸ್ತಿ ಪ್ರಧಾನ
ಕಾರ್ಯಕ್ರಮದಲ್ಲಿ ‘ಹೆಗ್ಗು೦ಜೆ ರಾಜೀವ ಶೆಟ್ಟಿ ವಿದ್ಯಾ ಪೋಷಕ್ ಪ್ರಶಸ್ತಿ’ ಪ್ರಧಾನ ಸಮಾರಂಭ ನಡೆಯಿತು. ಹಿರಿಯ ಶಿಕ್ಷಕರು ಹಾಗೂ ಯಕ್ಷಗಾನ ಪ್ರಸಂಗಕರ್ತರಾದ ಕಂದಾವರ ರಘುರಾಮ ಶೆಟ್ಟಿ ಅವರಿಗೆ ಈ ಬಾರಿ ಪ್ರಶಸ್ತಿ ಪ್ರದಾನವಾಯಿತು.
ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷರಾದ ಎಚ್. ಎಸ್. ಶೆಟ್ಟಿ ,ಉಪಾಧ್ಯಕ್ಷರಾದ ಹಾಲಾಡಿ ನಾಗರಾಜ ಶೆಟ್ಟಿ, ಕಾರ್ಯದರ್ಶಿ ಡಾ. ಸುಮನಾ ಶೆಟ್ಟಿ ಈ ಸಮಾಜಸೇವೆಯ ಬೆನ್ನೆಲುಬಾಗಿ ನಿಂತಿದ್ದಾರೆ. ಮೈಸೂರು ಮರ್ಕಂಟೈಲ್ ಕಂಪನಿ ಲಿಮಿಟೆಡ್ ಬೆಂಗಳೂರು, ಮೈಸೂರು ಗ್ರೀನ್ ಕಂಪನಿ ಪ್ರೈವೇಟ್ ಲಿಮಿಟೆಡ್ ಬೆಂಗಳೂರು ಮೈಸೂರು ಸೈನ್ಸ್ & ಟಿಕ್ನಾಲಜಿ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಕಾರ್ಯಕ್ರಮದ ಪೋಷಕ ಸಂಸ್ಥೆಗಳಾಗಿವೆ.
ಸಮಾಜ ಸೇವೆಯ ರೂವಾರಿ ಡಾ.ಎಚ್ ಎಸ್ ಶೆಟ್ಟಿ
ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಹಾಲಾಡಿಯಲ್ಲಿ ಜನಿಸಿದ ಡಾ.ಎಚ್.ಎಸ್.ಶೆಟ್ಟಿ ಅವರು ಹೋಟೆಲ್ ಉದ್ಯಮಿಯಾಗಿ ಹೆಸರು ಮಾಡಿದ್ದಾರೆ. ಜತೆಗೆ ಬಟ್ಟೆ ಮತ್ತು ಖಾದ್ಯ ತೈಲ ವಹಿವಾಟು, ಕೃಷಿ ಸಂಬಂಧಿ ಉತ್ಪನ್ನಗಳ ಮಾರಾಟ, ವಿದ್ಯುತ್ ಉತ್ಪಾದನೆ ಹೀಗೆ ಹಲವು ಕ್ಷೇತ್ರಗಳಲ್ಲಿ ಯಶಸ್ವೀ ಉದ್ಯಮಿ ಎನಿಸಿಕೊಂಡಿದ್ದಾರೆ.
ಮೈಸೂರು ಮರ್ಕೆಂಟೈಲ್ ಕಂಪನಿ ಲಿಮಿಟೆಡ್ ಸ್ಥಾಪಿಸಿ, ಕೃಷಿ ಉತ್ಪನ್ನಗಳನ್ನು ರಫ್ತು ಮಾಡುತ್ತ ರೈತರಿಗೆ ನೆರವಾಗುತ್ತಿರುವ ಇವರಿಗೆ ಆರು ಬಾರಿ ಬೆಸ್ಟ್ ಎಕ್ಸ್‌ಪೋರ್ಟ್ ಅವಾರ್ಡ್ ಲಭಿಸಿದೆ. ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಿ, ಸರ್ಕಾರಿ ಶಾಲೆ ಮತ್ತು ಆಸ್ಪತ್ರೆಗಳ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡುತ್ತಿದ್ದಾರೆ. ಡಾ. ಎಚ್.ಎಸ್. ಶೆಟ್ಟಿ (Dr HS Shetty) ಅವರಿಗೆ ಇತ್ತೀಚೆಗೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 23ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗಿತ್ತು.