ಮುಂಬಯಿ: ಜಾಗತಿಕ ಆರ್ಥಿಕ ವ್ಯವಸ್ಥೆಯಲ್ಲಿ ಉಂಟಾಗಿರುವ ತಲ್ಲಣಗಳು ಸಹಜವಾಗಿ ಭಾರತದ ಮೇಲೆ ಕೂಡ ಪ್ರಭಾವ ಬೀರಿದೆ. ಆದರೆ ಭಾರತದ ಆರ್ಥಿಕತೆಯ ಬುನಾದಿ ಸುಭದ್ರವಾಗಿದೆ. ಬೆಲೆ ಏರಿಕೆಯ ನಿಯಂತ್ರಣಕ್ಕೆ ಸರ್ಕಾರ ಮತ್ತು ಆರ್‌ಬಿಐ ಆದ್ಯತೆ ನೀಡಿದೆ. ಮುಂಬರುವ ಕೆಲವು ತಿಂಗಳುಗಳಲ್ಲಿ ಹಣದುಬ್ಬರ ತಗ್ಗುವ ವಿಶ್ವಾಸ ಇದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಭರವಸೆ ವ್ಯಕ್ತಪಡಿಸಿದ್ದಾರೆ.
ಜಾಗತಿಕ ಹಣದುಬ್ಬರದ ಎಫೆಕ್ಟ್
ನಿರಂತರ ಆಘಾತಗಳಿಂದ ಜಾಗತಿಕ ಆರ್ಥಿಕತೆಯಲ್ಲಿ ಹಣದುಬ್ಬರದ ಬಿಕ್ಕಟ್ಟು ಉಂಟಾಗಿದೆ. ಹಣಕಾಸು ನೀತಿಯನ್ನು ಬಿಗಿಗೊಳಿಸಬೇಕಾದ ಅನಿವಾರ್ಯ ಸನ್ನಿವೇಶ ಸೃಷ್ಟಿಯಾಗಿದೆ. ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) ಕೂಡ ಜಾಗತಿಕ ಆರ್ಥಿಕ ಮಂದಗತಿ ಮತ್ತು ಹಿಂಜರಿತದ ಸಾಧ್ಯತೆ ಬಗ್ಗೆ ತನ್ನ ವರದಿಯಲ್ಲಿ ತಿಳಿಸಿದೆ. ಸಾಂಕ್ರಾಮಿಕ ರೋಗ ಮತ್ತು ಯುದ್ಧದ ಪರಿಣಾಮ ಪೂರೈಕೆಯ ಸರಣಿಗಳಲ್ಲಿ ವ್ಯತ್ಯಯ ಉಂಟಾಗಿದೆ. ಹೂಡಿಕೆಯ ಹರಿವು ಹೊರ ಹೋಗುತ್ತಿದೆ. ಈ ಜಾಗತಿಕ ಆರ್ಥಿಕ ಬಿಕ್ಕಟ್ಟು ಭಾರತದ ಆರ್ಥಿಕತೆಯ ಮೇಲೆ ಕೂಡ ಪ್ರತಿಕೂಲ ಪ್ರಭಾವ ಬೀರಿದೆ.
ಭಾರತದ ಆರ್ಥಿಕತೆಗೆ ಆಗಿರುವುದೇನು?
ಜಾಗತಿಕ ಆರ್ಥಿಕತೆಯ ಬಿಕ್ಕಟ್ಟಿನ ಪರಿಣಾಮ ಭಾರತದಲ್ಲೂ ಹಣದುಬ್ಬರ ಜಾಸ್ತಿಯಾಗಿದೆ. ಹಣಕಾಸು ಮಾರುಕಟ್ಟೆಯ ಬುನಾದಿ ಭದ್ರವಾಗಿದ್ದರೂ, ಭಾರಿ ಪ್ರಮಾಣದಲ್ಲಿ ಹೂಡಿಕೆಯ ಹೊರ ಹರಿವು ಸಂಭವಿಸಿದೆ. ಪ್ರಸಕ್ತ ಸಾಲಿನಲ್ಲಿ ಇದುವರೆಗೆ ಆಗಸ್ಟ್ ೩ರ ತನಕ ೧೩.೩ ಶತಕೋಟಿ ಡಾಲರ್ ಸಾಂಸ್ಥಿಕ ಹೂಡಿಕೆಯ ಹೊರ ಹರಿವು ಸಂಭವಿಸಿದೆ. (ಅಂದಾಜು ೧.೦೫ ಲಕ್ಷ ಕೋಟಿ ರೂ.) ಭಾರತ ೨೦೨೨-೨೩ರಲ್ಲಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಲಿದೆ ಎಂದು ಐಎಂಎಫ್ ವರದಿ ತಿಳಿಸಿದೆ. ಸರಕು ಮತ್ತು ಸೇವೆಗಳ ರಫ್ತು, ವಿದೇಶಗಳಿಂದ ಭಾರತಕ್ಕೆ ಹಣ ರವಾನೆಯಿಂದಾಗಿ ವಿತ್ತೀಯ ಕೊರತೆ ನಿಯಂತ್ರಣದಲ್ಲಿ ಉಳಿಯುವ ವಿಶ್ವಾಸ ಇದೆ. ಭಾರತದ ವಿದೇಶಿ ಸಾಲ ಮತ್ತು ಜಿಡಿಪಿಯ ಅನುಪಾತದಲ್ಲಿ ಇಳಿಕೆಯಾಗಿದೆ. ಭಾರತದ ವಿದೇಶಿ ವಿನಿಮಯ ಸಂಗ್ರಹವು ಜಾಗತಿಕ ಆರ್ಥಿಕ ವಿಪ್ಲವದ ಪರಿಣಾಮಗಳನ್ನು ನಿಭಾಯಿಸಲು ಅನುಕೂಲಕಾರಿಯಾಗಿದೆ.
ವಿಸ್ತಾರವಾಗುತ್ತಿದೆ ಆರ್ಥಿಕ ಚಟುವಟಿಕೆ
ಭಾರತದ ಆರ್ಥಿಕ ಚಟುವಟಿಕೆಗಳು ವಿಸ್ತಾರವಾಗುತ್ತಿದೆ. ನೈಋತ್ಯ ಮುಂಗಾರು ಚುರುಕಾಗಿದೆ. ಜಲಾಶಯಗಳು ಸಾಮಾನ್ಯ ಮಟ್ಟಕ್ಕಿಂತ ಹೆಚ್ಚು ತುಂಬಿವೆ. ಹೀಗಿದ್ದರೂ ಮಳೆಯ ಹಂಚಿಕೆ ಅಸಮಾನವಾಗಿದೆ. ನಗರಗಳಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಮಾರಾಟ, ವಾಹನಗಳ ಸಂಚಾರ, ಪ್ರಯಾಣಿಕರ ವಾಹನಗಳ ಖರೀದಿ ಸುಧಾರಿಸಿದೆ. ಗ್ರಾಮೀಣ ಮಾರುಕಟ್ಟೆಯೂ ಚೇತರಿಸುತ್ತಿದೆ. ಜೂನ್-ಜುಲೈನಲ್ಲಿ ದ್ವಿಚಕ್ರ ವಾಹನ, ಸರಕು ಸಾಗಣೆಯ ವಾಣಿಜ್ಯ ವಾಹನಗಳ ಮಾರಾಟ ಹೆಚ್ಚಿದ್ದರೂ, ಟ್ರ್ಯಾಕ್ಟರ್ ಮಾರಾಟ ಇಳಿದಿದೆ. ರೈಲ್ವೆ-ಬಂದರುಗಳಲ್ಲಿ ಸರಕು ಸಾಗಣೆ ವೃದ್ಧಿಸಿದೆ. ಬಂಡವಾಳ ಸರಕುಗಳ ಆಮದು ಹೆಚ್ಚಳ ದಾಖಲಿಸಿದೆ. ಜುಲೈನಲ್ಲಿ ಸೇವಾ ವಲಯ ಚೇತರಿಸಿದೆ. ಉತ್ಪಾದನಾ ವಲಯ ಆಶಾದಾಯಕವಾಗಿದೆ. ಪಿಎಂಐ ಉತ್ಪಾದನಾ ಸೂಚ್ಯಂಕ ಜುಲೈನಲ್ಲಿ ಕಳೆದ ೮ ತಿಂಗಳಿನಲ್ಲೇ ಗರಿಷ್ಠ ಮಟ್ಟಕ್ಕೆ ಚೇತರಿಸಿದೆ. ಜುಲೈನಲ್ಲಿ ಬ್ಯಾಂಕ್‌ಗಳಲ್ಲಿ ಸಾಲ ವಿತರಣೆ ೧೪ ಪರ್ಸೆಂಟ್ ವೃದ್ಧಿಸಿದೆ. ಮುಂಗಾರು ಮಳೆ ಉತ್ತಮ ಮಟ್ಟದಲ್ಲಿ ಆಗಿರುವುದರಿಂದ ಗ್ರಾಮೀಣ ಪ್ರದೇಶಕ್ಕೂ ಅನುಕೂಲವಾಗಲಿದೆ.
ಹಣದುಬ್ಬರ: ಹಣದುಬ್ಬರ ಸತತ ೬ ತಿಂಗಳಿನಿಂದ ಸುರಕ್ಷತೆಯ ಮಟ್ಟವಾದ ೬%ಗಿಂತ ಮೇಲೆ ಇದೆ. ಜಾಗತಿಕ ಬಿಕ್ಕಟ್ಟಿನ ಪರಿಣಾಮ ಈ ಪರಿಸ್ಥಿತಿ ಉಂಟಾಗಿದೆ. ಹೀಗಿದ್ದರೂ, ಜಾಗತಿಕ ಮಟ್ಟದಲ್ಲಿ ಕೆಲ ಆಹಾರ ವಸ್ತುಗಳ ದರ ಇಳಿಕೆಯಾಗಿದೆ. ಖಾದ್ಯ ತೈಲಗಳ ದರಗಳು ಇಳಿಕೆಯಾಗಲಿದೆ. ಆಹಾರ ಧಾನ್ಯ ಸಮೃದ್ಧವಾಗಿದ್ದರೂ, ಈ ಸಲದ ಮುಂಗಾರಿನಲ್ಲಿ ಭತ್ತದ ಬಿತ್ತನೆ ಪ್ರದೇಶ ಕಡಿಮೆ ಆಗಿರುವುದನ್ನು ಎಚ್ಚರಿಕೆಯಿಂದ ಗಮನಿಸಬೇಕಾಗಿದೆ.
ಹೆಚ್ಚುವರಿ ನಗದು ೩.೮ ಲಕ್ಷ ಕೋಟಿ ರೂ.ಗೆ ಇಳಿಕೆ
ರಿಸರ್ವ್ ಬ್ಯಾಂಕ್, ದೇಶದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ನಗದು ಲಭ್ಯತೆಯನ್ನು ಸಹಜ ಸ್ಥಿತಿಗೆ ತರಲು ಯತ್ನಿಸುತ್ತಿದೆ. ಕಳೆದ ಏಪ್ರಿಲ್-ಮೇನಲ್ಲಿ ೬.೭ ಲಕ್ಷ ಕೋಟಿ ರೂ. ಹೆಚ್ಚುವರಿ ನಗದು ವ್ಯವಸ್ಥೆಯಲ್ಲಿ ಇತ್ತು. ಅದನ್ನು ಆರ್‌ಬಿಐ ಜೂನ್-ಜುಲೈ ವೇಳೆಗೆ ೩.೮ ಲಕ್ಷ ಕೋಟಿ ರೂ.ಗೆ ಇಳಿಸಿದೆ. ರೆಪೊ ದರವನ್ನು ಹೆಚ್ಚಿಸುವುದು ಸೇರಿದಂತೆ ಕೆಲವು ಕ್ರಮಗಳ ಮೂಲಕ ಆರ್‌ಬಿಐ, ಬ್ಯಾಂಕಿಂಗ್‌ನಲ್ಲಿರುವ ಹೆಚ್ಚುವರಿ ನಗದನ್ನು ಹೀರಿಕೊಳ್ಳುತ್ತದೆ. ಈ ಪ್ರಕ್ರಿಯೆ ಮುಂದಿನ ಆರ್ಥಿಕ ವರ್ಷದಲ್ಲೂ ಮುಂದುವರಿಯಲಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದ್ದಾರೆ.