Site icon Vistara News

Election Commission : ಚುನಾವಣಾ ಆಯುಕ್ತ ಅರುಣ್ ಗೋಯಲ್ ದಿಢೀರ್​ ರಾಜೀನಾಮೆ!

Arun Goel

ನವದೆಹಲಿ: ಲೋಕಸಭಾ ಚುನಾವಣೆಗೆ ಕೆಲವೇ ವಾರಗಳು ಬಾಕಿ ಇದ್ದು, ಕೆಲವೇ ದಿನಗಳಲ್ಲಿ ದಿನಾಂಕಗಳು ಪ್ರಕಟಗೊಳ್ಳಲಿವೆ ಎಂದು ಹೇಳಲಾಗುತ್ತಿದೆ. ಏತನ್ಮಧ್ಯೆ ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಚುನಾವಣಾ ಆಯುಕ್ತರಲ್ಲಿ (Election Commission) ಒಬ್ಬರಾದ ಅರುಣ್ ಗೋಯೆಲ್ (Arun Goel) ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆಯನ್ನು ರಾಷ್ಟ್ರಪತಿಗಳು ಅಂಗೀಕರಿಸಿದ್ದಾರೆ. ಭಾರತದ ಚುನಾವಣಾ ಆಯೋಗದಲ್ಲಿ ಈಗಾಗಲೇ ಒಂದು ಹುದ್ದೆ ಖಾಲಿ ಇದೆ. ಇದೀಗ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಮಾತ್ರ ಉಳಿದುಕೊಂಡಿದ್ದಾರೆ.

ಮುಂದಿನ ವಾರ ಲೋಕಸಭಾ ಚುನಾವಣಾ ದಿನಾಂಕಗಳನ್ನು ಘೋಷಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿತ್ತು. ಗೋಯೆಲ್ ಅವರ ರಾಜೀನಾಮೆಯಿಂದ ಆ ಸಮಯದ ಮೇಲೆ ಪರಿಣಾಮ ಬೀರುತ್ತದೆಯೇ ಎಂದು ನೋಡಬೇಕಾಗಿದೆ.

1985ರ ಬ್ಯಾಚ್ ನ ಪಂಜಾಬ್ ಕೇಡರ್ ನ ನಿವೃತ್ತ ಐಎಎಸ್ ಅಧಿಕಾರಿ ಅರುಣ್ ಗೋಯೆಲ್ ಅವರು ಬೃಹತ್ ಕೈಗಾರಿಕಾ ಸಚಿವಾಲಯದ ಕಾರ್ಯದರ್ಶಿಯಾಗಿ ತಮ್ಮ ಅಧಿಕಾರಾವಧಿಯನ್ನು ಡಿಸೆಂಬರ್ 31ಕ್ಕೆ ಮುಕ್ತಾಯಗೊಳಿಸಬೇಕಿತ್ತು. ಆದಾಗ್ಯೂ, ನಿಗದಿತ ನಿವೃತ್ತಿಗೆ ಸುಮಾರು ಆರು ವಾರಗಳ ಮೊದಲು ಗೋಯೆಲ್ ಸೇವೆಯಿಂದ ಸ್ವಯಂ ನಿವೃತ್ತಿಯನ್ನು (ವಿಆರ್​ಎಸ್​) ಪಡೆದುಕೊಂಡಿದ್ದರು. ನಂತರ ಅವರನ್ನು ಚುನಾವಣಾ ಆಯುಕ್ತರಾಗಿ ನೇಮಿಸಲಾಯಿತು. ಅವರು ಸುಶೀಲ್ ಚಂದ್ರ ಅವರ ನಿವೃತ್ತಿಯಿಂದ ತೆರವಾದ ಸ್ಥಾನವನ್ನು ತುಂಬಿದ್ದರು.

ಇದನ್ನೂ ಓದಿ : Lok Sabha Election : ತಮಿಳುನಾಡಿನಲ್ಲಿ ಕಾಂಗ್ರೆಸ್​ಗೆ 9 ಕ್ಷೇತ್ರ ಬಿಟ್ಟುಕೊಟ್ಟ ಡಿಎಂಕೆ

“ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ (ನೇಮಕಾತಿ, ಸೇವಾ ಷರತ್ತುಗಳು ಮತ್ತು ಅಧಿಕಾರಾವಧಿ) ಕಾಯ್ದೆ, 2023 ರ ಸೆಕ್ಷನ್ 11 ರ ಷರತ್ತು (1) ಕ್ಕೆ ಅನುಸಾರವಾಗಿ, ಚುನಾವಣಾ ಆಯುಕ್ತ ಶ್ರೀ ಅರುಣ್ ಗೋಯೆಲ್ ಅವರು ಸಲ್ಲಿಸಿದ ರಾಜೀನಾಮೆಯನ್ನು 2024 ರ ಮಾರ್ಚ್ 09 ರಿಂದ ಜಾರಿಗೆ ಬರುವಂತೆ ರಾಷ್ಟ್ರಪತಿಗಳು ಸ್ವೀಕರಿಸಿದ್ದಾರೆ ಎಂದು ಕಾನೂನು ಸಚಿವಾಲಯ ಶನಿವಾರ ಹೊರಡಿಸಿದ ಗೆಜೆಟ್ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ದೇಶಾದ್ಯಂತ ಭದ್ರತಾ ಸಿಬ್ಬಂದಿಯ ನಿಯೋಜನೆ ಮತ್ತು ಸಂಚಾರ ವ್ಯವಸ್ಥೆ ಕುರಿತು ಚರ್ಚಿಸಲು ಚುನಾವಣಾ ಆಯೋಗವು ಶುಕ್ರವಾರ ಕೇಂದ್ರ ಗೃಹ ಸಚಿವಾಲಯ ಮತ್ತು ರೈಲ್ವೆ ಅಧಿಕಾರಿಗಳೊಂದಿಗೆ ಭದ್ರತಾ ಸಭೆ ನಡೆಸಿತು. ಲೋಕಸಭಾ ಚುನಾವಣೆಯ ಜೊತೆಗೆ ಆಂಧ್ರಪ್ರದೇಶ, ಒಡಿಶಾ, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶ ರಾಜ್ಯಗಳ ಚುನಾವಣೆಯನ್ನೂ ಆಯೋಗ ನಡೆಸಲಿದೆ.

Exit mobile version