ನವದೆಹಲಿ: ಕ್ರಿಕೆಟ್ ಅಸೋಸಿಯೇಷನ್ ಆಫ್ ಬಂಗಾಳದ (ಸಿಎಬಿ) ಮೊದಲ ಡಿವಿಷನ್ ಲೀಗ್ನ ಪಂದ್ಯವೊಂದನ್ನು ಫಿಕ್ಸ್ (Match fIxing) ಮಾಡಲಾಗಿದೆ ಎಂದು 2008 ರ ಅಂಡರ್ 19 ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಶ್ರೀವತ್ಸ್ ಗೋಸ್ವಾಮಿ ಗುರುವಾರ ಆರೋಪಿಸಿದ್ದಾರೆ. ಗೋಸ್ವಾಮಿ ಆರ್ಸಿಬಿ ತಂಡದ ಪರವಾಗಿಯೂ ಆಡಿದ್ದರು.
ಮಹಮ್ಮದನ್ ಸ್ಪೋರ್ಟಿಂಗ್ ಮತ್ತು ಟೌನ್ ಕ್ಲಬ್ ನಡುವಿನ ಪಂದ್ಯದ ವೀಡಿಯೊಗಳನ್ನು ಗೋಸ್ವಾಮಿ ತಮ್ಮ ಫೇಸ್ಬುಕ್ ಪುಟದಲ್ಲಿ ಹಂಚಿಕೊಂಡಿದ್ದಾರೆ. ಪ್ರಸ್ತುತ ಸಿಎಬಿ ಕಾರ್ಯದರ್ಶಿಯಾಗಿರುವ ಟೀಮ್ ಇಂಡಿಯಾದ ಮಾಜಿ ಮ್ಯಾನೇಜರ್ ದೇಬಬ್ರತಾ ದಾಸ್ ಅವರೊಂದಿಗೆ ಸಂಬಂಧ ಹೊಂದಿರುವ ಟೌನ್ ಕ್ಲಬ್ಗೆ ಏಳು ಅಂಕಗಳನ್ನು ಬಿಟ್ಟುಕೊಡಲು ಮಹಮ್ಮದನ್ ಸ್ಪೋರ್ಟಿಂಗ್ ಬ್ಯಾಟರ್ಗಳು ಉದ್ದೇಶಪೂರ್ವಕವಾಗಿ ಔಟ್ ಆಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ದಾಸ್ 2022 ರಲ್ಲಿ ಇಂಗ್ಲೆಂಡ್ ಪ್ರವಾಸದ ಸಮಯದಲ್ಲಿ ಭಾರತೀಯ ತಂಡದ ಆಡಳಿತ ವ್ಯವಸ್ಥಾಪಕರಾಗಿಯೂ ಕೆಲಸ ಮಾಡಿದ್ದಾರೆ.
“ಇದು ಕೋಲ್ಕತಾ ಕ್ಲಬ್ ಕ್ರಿಕೆಟ್ನ ತುಣುಕು. ಸೂಪರ್ ಡಿವಿಷನ್ ಪಂದ್ಯ, ಎರಡು ದೊಡ್ಡ ತಂಡಗಳು ಇದನ್ನು ಮಾಡುತ್ತಿವೆ. ಇಲ್ಲಿ ಏನು ನಡೆಯುತ್ತಿದೆ ಎಂದು ಏನಾದರೂ ತಿಳಿದಿದೆಯೇ? ಎಂದು ಗೋಸ್ವಾಮಿ ಪೋಸ್ಟ್ ಮಾಡಿದ್ದಾರೆ. ಮೊದಲ ವೀಡಿಯೊದಲ್ಲಿ, ಬಲಗೈ ಬ್ಯಾಟರ್ ಚೆಂಡನ್ನು ನೇರವಾಗಿ ಬಿಟ್ಟು ಬೌಲ್ಡ್ ಆಗುವುದನ್ನು ಕಾಣಬಹುದು. ಎರಡನೇ ವೀಡಿಯೊದಲ್ಲಿ, ಎಡಗೈ ಬ್ಯಾಟರ್ ಒಬ್ಬರು ವೈಡ್ ಎಸೆತಕ್ಕೆ ಸ್ಟಂಪ್ ಆಗಲು ಕ್ರೀಸ್ನಿಂದ ಹೊರಬಂದಿದ್ದರು.
ದೇಬಬ್ರತಾ ದಾಸ್ ಪ್ರತಿಕ್ರಿಯೆಗೆ ಲಭ್ಯವಿಲ್ಲದಿದ್ದರೂ, ಸಿಎಬಿ ಅಧ್ಯಕ್ಷ ಸ್ನೇಹಶಿಶ್ ಗಂಗೂಲಿ ಅವರು ಅಂಪೈರ್ಗಳು ಮತ್ತು ವೀಕ್ಷಕರ ವರದಿಯನ್ನು ಕೋರಿದ್ದಾರೆ ಎಂದು ಹೇಳಿದರು. “ಈ ವಿಷಯವನ್ನು ಚರ್ಚಿಸಲು ಮತ್ತು ತನಿಖೆ ನಡೆಸಲು ನಾವು ಮಾರ್ಚ್ 2 ರಂದು ಪಂದ್ಯಾವಳಿ ಸಮಿತಿ ಸಭೆ ಕರೆದಿದ್ದೇವೆ” ಎಂದು ಸ್ನೇಹಶಿಶ್ ಗಂಗೂಲಿ ಹೇಳಿದ್ದಾರೆ.
ಇದನ್ನೂ ಓದಿ : WPL 2024 : ಮಹಿಳಾ ಐಪಿಎಲ್‌ನಲ್ಲಿ ಬೆಟ್ಟಿಂಗ್ ಕಟ್ಟಿದ ಬುಕ್ಕಿಯೇ ಕಿಡ್ನ್ಯಾಪ್!
34 ವರ್ಷದ ಗೋಸ್ವಾಮಿ ಈ ಪಂದ್ಯವನ್ನು ‘ಗೆಟ್ ಅಪ್’ ಕ್ರಿಕೆಟ್ ಪ್ರಕರಣ ಎಂದು ಕರೆದಿದ್ದಾರೆ. ಇದು ಮೋಸದಾಟಕ್ಕೆ ಉದಾಹರಣೆ ಎಂದು ಹೇಳಿದ್ದಾರೆ.
“ನನ್ನ ಹೃದಯಕ್ಕೆ ತುಂಬಾ ಹತ್ತಿರವಾದ ಆಟವನ್ನು ಈ ರೀತಿ ಆಡಿದ್ದನ್ನು ನೋಡಿ ನನಗೆ ನಾಚಿಕೆಯಾಗುತ್ತದೆ. ನಾನು ಕ್ರಿಕೆಟ್ ಅನ್ನು ಪ್ರೀತಿಸುತ್ತೇನೆ. ನಾನು ಬಂಗಾಳದಲ್ಲಿ ಆಡಲು ಇಷ್ಟಪಡುತ್ತೇನೆ. ಆದರೆ ಇದನ್ನು ನೋಡಿ ನನ್ನ ಹೃದಯ ಒಡೆದು ಹೋಗಿದೆ ಎಂದು ಶ್ರಿವತ್ಸ ಗೋಸ್ವಾಮಿ ಹೇಳಿದ್ದಾರೆ.
“ಕ್ಲಬ್ ಕ್ರಿಕೆಟ್ ಬಂಗಾಳ ಕ್ರಿಕೆಟ್ನ ಹೃದಯ ಮತ್ತು ಆತ್ಮವಾಗಿದೆ, ದಯವಿಟ್ಟು ಅದನ್ನು ಹಾಳು ಮಾಡಬೇಡಿ. ಇದನ್ನು ‘ಗೆಟ್ ಅಪ್’ ಕ್ರಿಕೆಟ್ ಎಂದು ಕರೆಯಬಹುದು ಎಂದು ನಾನು ಭಾವಿಸುತ್ತೇನೆ. ಮಾಧ್ಯಮಗಳು ಈಗ ಎಲ್ಲಿವೆ? ಎಂದು ಪ್ರಶ್ನಸಿದ್ದಾರೆ ಗೋಸ್ವಾಮಿ. ಅವರು ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಕೋಲ್ಕತಾ ನೈಟ್ ರೈಡರ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ಪರ ಆಡಿದ್ದಾರೆ. ಸಾಲ್ಟ್ ಲೇಕ್ ನ 22 ಯಾರ್ಡ್ಸ್ ಅಕಾಡೆಮಿಯಲ್ಲಿ ಬುಧವಾರ ಮುಕ್ತಾಯಗೊಂಡ ಮೂರು ದಿನಗಳ ಪಂದ್ಯದಲ್ಲಿ ಟೌನ್ ಕ್ಲಬ್ ಏಳು ಅಂಕಗಳನ್ನು ಗಳಿಸಿದೆ.