ಬೆಂಗಳೂರು: ಜೀವನ್ ಪ್ರಮಾಣ್ ಎನ್ನುವುದು ಪಿಂಚಣಿದಾರರಿಗೆ ಬಯೋಮೆಟ್ರಿಕ್ ಸಹಿತ ಒದಗಿಸುವ ಡಿಜಿಟಲ್ ಸೇವೆಯಾಗಿದೆ. ಅವರ ಪಿಂಚಣಿಯನ್ನು ಮುಂದುವರಿಸಲು ಬೇಕಾದ ಖಚಿತತೆಯನ್ನು ಪಡೆದುಕೊಳ್ಳಲು ಪ್ರತಿ ವರ್ಷ ನವೆಂಬರ್ ತಿಂಗಳಿನಲ್ಲಿ ಕೈಗೊಳ್ಳಬೇಕಾದ ಪ್ರಮುಖ ಚಟುವಟಿಕೆಯಾಗಿರುತ್ತದೆ. ಇದಕ್ಕೆ ಪಿಂಚಣಿದಾರರಿಗೆ ಜೀವನ್ ಪ್ರಮಾಣ್ ನೆರವು ಒದಗಿಸುತ್ತದೆ. ಆದರೆ, jeevanpraman.online ಎಂಬ ನಕಲಿ ವೆಬ್‌ಸೈಟ್ ಮೂಲಕ ಪಿಂಚಣಿದಾರರಿಗೆ ಮೋಸ ಮಾಡುತ್ತಿರುವುದು ಕಂಡು ಬಂದಿದೆ. ಹಾಗಾಗಿ, ಈ ಬಗ್ಗೆ ಎಚ್ಚರ ವಹಿಸುವುದು ಅತ್ಯಗತ್ಯವಾಗಿದೆ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಅಥವಾ ಯಾವುದೇ ಇತರ ಸರ್ಕಾರಿ ಸಂಸ್ಥೆಗಳ ಪಿಂಚಣಿದಾರರು ಜೀವನ್ ಪ್ರಮಾಣ್ ಪೋರ್ಟಲ್ ಅನ್ನು ಬಳಸಿಕೊಂಡು ಈ ಸೌಲಭ್ಯದ ಪ್ರಯೋಜನವನ್ನು ಪಡೆಯಬಹುದು(Fact Check).
ಈ ಸಂಬಂಧ ಹಲವು ಫೇಕ್ ವೆಬ್‌ಸೈಟ್‌ಗಳು ಚಾಲ್ತಿಯಲ್ಲಿದ್ದು, ಲೈಫ್ ಸರ್ಟಿಫಿಕೇಟ್ಸ್ ಪೂರೈಸುವ ನೆಪದಲ್ಲಿ ನೋಂದಣಿ ಶುಲ್ಕವನ್ನು ಪಿಂಚಣಿದಾರರಿಂದ ಸುಲಿಗೆ ಮಾಡುತ್ತಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಪಿಐಬಿ ಫ್ಯಾಕ್ಟ್ ಚೆಕ್ ಟ್ವಿಟರ್ ಪೇಜ್ ಈ ಬಗ್ಗೆ ಎಚ್ಚರಿಕೆಯನ್ನು ನೀಡಿದೆ.
http://jeevanpraman.online ಎಂಬ ನಕಲಿ ವೆಬ್‌ಸೈಟ್ ಚಾಲ್ತಿಯಲ್ಲಿದ್ದು, ಜೀವನ ಪ್ರಮಾಣಪತ್ರವನ್ನು ನೀಡುವುದಾಗಿ ಹೇಳುತ್ತಿದ್ದು, ಅದಕ್ಕಾಗಿ ನೋಂದಣಿ ಶುಲ್ಕದ ನೆಪದಲ್ಲಿ 150 ರೂ. ವಸೂಲಿಗೆ ಪ್ರಯತ್ನಿಸುತ್ತಿದೆ. ಈ ಹೆಸರಿನ ಯಾವುದೇ ವೆಬ್‌ಸೈಟ್ ಭಾರತ್ ಸರ್ಕಾರದೊಂದಿಗೆ ಸಂಯೋಜನೆಗೊಂಡಿಲ್ಲ ಎಂದು ಪಿಐಬಿ ಫ್ಯಾಕ್ಟ್ ಚೆಕ್ ತನ್ನ ಟ್ವೀಟ್‌ನಲ್ಲಿ ತಿಳಿಸಿದೆ. ಜತೆಗೆ ಅಧಿಕೃತ ವೆಬ್‌ಸೈಟ್ ಆಗಿರುವ jeevanpramaan.gov.in ಯುಆರ್‌ಎಲ್ ಕೂಡ ನಮೂದಿಸಿದೆ.
ಜೀವನ್ ಪ್ರಮಾಣ ಅಥವಾ ಡಿಜಿಟಲ್ ಲೈಫ್ ಪ್ರಮಾಣಪತ್ರವು ಬಯೋಮೆಟ್ರಿಕ್ ಬೆಂಬಲವನ್ನು ಹೊಂದಿರುವ ಡಿಜಿಟಲ್ ಸೇವೆಯಾಗಿದೆ. ಈ ಡಿಜಿಟಲ್ ಸೇವೆಯಲ್ಲಿ ಪಿಂಚಣಿದಾರರು ಕಚೇರಿಗೆ ಭೇಟಿ ನೀಡದೆ ಆನ್‌ಲೈನ್‌ನಲ್ಲಿ ಪ್ರಮಾಣಪತ್ರಗಳನ್ನು ಸಲ್ಲಿಸಬಹುದು. ಈಗ ಸರ್ಕಾರವು ಫೇಸ್ ರೆಕಗ್ನಿಷನ್ ತಂತ್ರಜ್ಞಾನ ವ್ಯವಸ್ಥೆಯನ್ನು ರಚಿಸಿದ್ದು, ಅದು ಆಂಡ್ರಾಯ್ಡ್ ಫೋನ್‌ಗಳ ಮೂಲಕ ಪ್ರವೇಶವನ್ನು ಕಲ್ಪಿಸುತ್ತದೆ. ಈ ಮೂಲಕ ಪಿಂಚಣಿದಾರರಿಗೆ ಹೆಚ್ಚಿನ ನೆರವು ಒದಗಿಸಲಾಗಿದೆ. ಆದರೆ, ಫೇಕ್ ವೆಬ್‌ಸೈಟ್ ಚಾಲ್ತಿಯಲ್ಲಿದ್ದು, ಈ ಬಗ್ಗೆ ಎಚ್ಚರಿಕೆ ವಹಿಸುವುದು ಅತ್ಯಗತ್ಯವಾಗಿದೆ.
ಇದನ್ನೂ ಓದಿ | Fact Check | 150 ರೈಲು ನಿಲ್ದಾಣಗಳನ್ನು ಖಾಸಗೀಕರಣ ಮಾಡಿತೇ ಕೇಂದ್ರ ಸರ್ಕಾರ? ರಾಹುಲ್ ಗಾಂಧಿ ಪ್ರಸ್ತಾಪ ನಿಜವೇ?