ಬೆಂಗಳೂರು: ರೈತರಿಗೆ ಬೆಳೆ ನಷ್ಟ ಪರಿಹಾರ ನೀಡುವಲ್ಲಿ ಕಾಂಗ್ರೆಸ್ ಸರ್ಕಾರ ರೈತರಿಗೆ ಮೋಸ ಮಾಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಟಿ. ಎ. ಶರವಣ ಆರೋಪಿಸಿದ್ದಾರೆ. ವಿಧಾನಪರಿಷತ್ ಕಲಾಪದಲ್ಲಿ (Karnataka Budget Session 2024) ಮಾತನಾಡಿದ ಅವರು, ಬೆಳೆ ನಷ್ಟವಾದ ರೈತರಿಗೆ ಸೂಕ್ತ ಪರಿಹಾರ ಧನ ನೀಡದಿರುವ ಕುರಿತಂತೆ ಗಣಿ ಮತ್ತು ಭೂ ವಿಜ್ಞಾನ ತೋಟಗಾರಿಕೆ ಸಚಿವರ ಕ್ರಮವನ್ನು ಪ್ರಶ್ನಿಸಿದರು.
ಸರಕಾರ ಕೊಟ್ಟಿರುವ ಉತ್ತರದಲ್ಲಿ ಒಂದೊಂದು ಎಕರೆಗೆ ಒಂದೊಂದು ದರ ನಿಗದಿ ಮಾಡಲಾಗಿದೆ. 5, 11, 208 ಎಕರೆ ಪ್ರದೇಶದ ಇಡೀ ತೋಟಗಾರಿಕೆ ಬೆಳೆ ನಾಶ ಆಗಿದೆ. ಆದರೆ ಸರ್ಕಾರ ಸೂಕ್ತ ಪರಿಹಾರ ನೀಡುತ್ತಿಲ್ಲ ಎಂದು ಆಕ್ಷೇಪಿಸಿದ್ದಾರೆ. ಎನ್.ಡಿ.ಆರ್.ಆಫ್ ನಿಗದಿ ಮಾಡಿರುವ ರೀತಿಯಲ್ಲಿ ಮಳೆಯಾಶ್ರಿತ ತೋಟಗಾರಿಕೆ ಬೆಳೆಗೆ 8,500 ರೂಪಾಯಿ, ನೀರಾವರಿ ಬೆಳೆಗೆ 17 ಸಾವಿರ, ಬಹುವಾರ್ಷಿಕ ಬೆಳೆಗೆ 22500 ರೂಪಾಯಿ ಪರಿಹಾರ ನೀಡಬೇಕಾಗಿದೆ. ಆದರೆ ಸರ್ಕಾರ ರೈತರಿಗೆ ಭಿಕ್ಷೆ ಎಂಬಂತೆ ಕೇವಲ ಒಬ್ಬೊಬ್ಬರಿಗೆ 2 ಸಾವಿರ ರೂಪಾಯಿ ನೀಡಿದೆ. ಈ ಮೂಲಕ ರೈತರಿಗೆ ಮೋಸ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಭಾಗ್ಯಗಳನ್ನು ನೀಡುವ ಮೂಲಕ ಸರ್ಕಾರದ ಬೊಕ್ಕಸದ ಹಣವನ್ನು ಖಾಲಿ ಮಾಡಲಾಗಿದೆ. ರೈತರಿಗೆ ಅನ್ಯಾಯ ಮಾಡಲಾಗುತ್ತಿದೆ. ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಟಿ. ಎ. ಶರವಣ ಅವರು ಪ್ರಶ್ನಿಸಿದ್ದಾರೆ.
ಸದನದಲ್ಲಿ ರಾಮನಗರ ಗದ್ದಲ; ಪಿಎಸ್‌ಐ ಸಸ್ಪೆಂಡ್‌ಗೆ ಬಿಜೆಪಿ – ಜೆಡಿಎಸ್ ಪಟ್ಟು!
ವಿಧಾನ ಮಂಡಲ ಅಧಿವೇಶನದ (Karnataka Budget Session 2024) ಶೂನ್ಯ ವೇಳೆಯಲ್ಲಿ ರಾಮನಗರ ವಿಚಾರ ಪ್ರಸ್ತಾಪವಾಗಿದೆ. ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ (R Ashok) ಅವರು ಈ ವಿಷಯವನ್ನು ಪ್ರಸ್ತಾಪ ಮಾಡಿ, ರಾಮನಗರದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಸೂಕ್ಷ್ಮ ಪ್ರದೇಶವಾಗಿದೆ. ಈ ವಿಚಾರವಾಗಿ ಚಾಂದ್ ಪಾಶ ಎಂಬ ವ್ಯಕ್ತಿ ಸೋಷಿಯಲ್ ಮೀಡಿಯಾದಲ್ಲಿ ಜಡ್ಜ್ ಬಗ್ಗೆಯೇ ಅವಹೇಳನಕಾರಿಯಾಗಿ ಬರೆದಿದ್ದರಿಂದ ದೂರು ಕೊಡಲಾಗಿತ್ತು. ಆದರೆ, ಲಾಯರ್‌ಗಳ ಚೇಂಬರ್‌ಗೆ ಕೆಲವರು ನುಗ್ಗಿ ಗಲಾಟೆ ಮಾಡಿದ್ದಾರೆ. ಈ ಬಗ್ಗೆ ದೂರು ದಾಖಲು ಮಾಡದ ಪೊಲೀಸರು, ವಕೀಲರ ವಿರುದ್ಧ ಎಫ್‌ಐಆರ್ ದಾಖಲು ಮಾಡಿದ್ದಾರೆ. ಹೀಗಾಗಿ ಸರಿಯಾಗಿ ಕಾರ್ಯನಿರ್ವಹಣೆ ಮಾಡದ ಪಿಎಸ್‌ಐಯನ್ನು ವಜಾ ಮಾಡಿ ಎಂದು ಆಗ್ರಹಿಸಿದರು. ಇದಕ್ಕೆ ಗೃಹ ಸಚಿವರಿಂದ ಸಮರ್ಪಕ ಉತ್ತರ ಸಿಕ್ಕಿಲ್ಲ ಎಂದು ಆಕ್ರೋಶಗೊಂಡು ಸದನದ ಬಾವಿಗಿಳಿದು ಪ್ರತಿಭಟನೆಯನ್ನು ನಡೆಸಲಾಗಿದೆ.
ಇದನ್ನೂ ಓದಿ : ಸಿದ್ದಗಂಗಾ ಮಠದಿಂದ ಅಕ್ಕಿ ಎರವಲು ಪ್ರಕರಣ; ಕಲ್ಯಾಣಾಧಿಕಾರಿ ಗೀತಮ್ಮ ತಲೆದಂಡ
ಸದನದ ಶೂನ್ಯ ವೇಳೆಯಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಿದ ಆರ್. ಅಶೋಕ್, ಚಾಂದ್ ಪಾಶ ಎಂಬ ವ್ಯಕ್ತಿ ಜ್ಞಾನವಾಪಿ ಮಸೀದಿಯಲ್ಲಿ ಪೂಜೆಗೆ ಅವಕಾಶ ಕೊಟ್ಟಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಜಡ್ಜ್ ಬಗ್ಗೆ ಅವಹೇಳನಕಾರಿಯಾಗಿ ಬರೆದಿದ್ದಾರೆ. ಅವರ ವಿರುದ್ಧ ಠಾಣೆಗೆ ಹಾಗೂ ಬಾರ್ ಅಸೋಸಿಯೇಷನ್‌ಗೆ ದೂರು ಕೊಡಲಾಗಿತ್ತು. ಆದರೆ, ಕೆಲವರು ಲಾಯರ್‌ಗಳ ಚೇಂಬರ್‌ಗೆ ನುಗ್ಗಿ ಗಲಾಟೆ ಮಾಡಿದ್ದಾರೆ. ಅವರ ವಿರುದ್ಧ ವಕೀಲರು ದೂರು ಕೊಟ್ಟರೂ ಪೊಲೀಸರು ದೂರು ದಾಖಲು ಮಾಡಿಲ್ಲ. ಆದರೆ, ಚಾಂದ್ ಪಾಶಾ ಕಡೆಯಿಂದ ದೂರನ್ನು ಪಡೆದುಕೊಂಡು ವಕೀಲರ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗುತ್ತದೆ. ಹೀಗಾಗಿ ವಕೀಲರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಹೇಳಿದರು.
ವಕೀಲ ಚಾಂದ್ ಪಾಶಾ ಈ ಹಿಂದೆಯೂ ವಕೀಲರು ಹಾಗೂ ನ್ಯಾಯಾಧೀಶರ ವಿರುದ್ಧ ಬರೆದಿದ್ದಾರೆ. ಅಲ್ಲದೆ, ಕ್ಷಮಾಪಣಾ ಪತ್ರವನ್ನು ಕೊಟ್ಟಿದ್ದಾರೆ. ಚಾಂದ್ ಪಾಶಾ ಪಿಎಫ್‌ಐ ಹಾಗೂ ಎಸ್‌ಡಿಪಿಐ ಸದಸ್ಯನಾಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ ಎಂದು ಆರ್. ಅಶೋಕ್ ಹೇಳಿದರು.
ಈಗ ರಾಮನಗರ ಪ್ರಕ್ಷುಬ್ಧ ಆಗಿದೆ. ಸೋಮವಾರ ನಾನು ಮತ್ತು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ರಾಮನಗರಕ್ಕೆ ಭೇಟಿ ನೀಡಿದ್ದೆವು. ಚಾಂದ್ ಪಾಶ ಅನ್ನೋ ವಕೀಲ ಜಡ್ಜ್‌ಗೆ ಕೆಟ್ಟ, ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಹಿಂದುಗಳು, ಬಿಜೆಪಿ ವಿರುದ್ಧವೂ ನಿಂದಿಸಿದ್ದಾರೆ. ಇಷ್ಟೆಲ್ಲ ಆದ ನಂತರ ಚಾಂದ್ ಪಾಷ ವಿರುದ್ಧ ಜನ ಠಾಣೆಗೆ ಹಾಗೂ ವಕೀಲರ ಸಂಘಕ್ಕೆ ದೂರು ಕೊಟ್ಟಿದ್ದಾರೆ. ವಕೀಲರ ಸಂಘದ ಸದಸ್ಯರು ಇದರ ಬಗ್ಗೆ ಚರ್ಚೆ ಮಾಡುವಾಗ ಕೆಲವರು ನುಗ್ಗಿ ವಕೀಲರಿಗೆ ಕೆಟ್ಟ ಪದಗಳಿಂದ ಬಯ್ಯುತ್ತಾರೆ. ಇದರ ವಿರುದ್ಧವೂ ವಕೀಲರು ಪೊಲೀಸರಿಗೆ ದೂರು ಕೊಡುತ್ತಾರೆ. ಆದರೆ, ಪೊಲೀಸರು ವಕೀಲರ ದೂರು ಪಡೆದು ಸುಮ್ಮನಾಗುತ್ತಾರೆ. ಯಾವುದೇ ಕ್ರಮಕ್ಕೆ ಮುಂದಾಗುವುದಿಲ್ಲ. ನಂತರ ಚಾಂದ್ ಪಾಷ ಕಡೆಯವರಿಂದಲೂ ಪೊಲೀಸರು ಒಂದು ದೂರನ್ನು ತೆಗೆದುಕೊಳ್ಳುತ್ತಾರೆ. ವಕೀಲರೇ ಚಾಂದ್ ಪಾಷ ಕಡೆಯವರ ಮೇಲೆ ಹಲ್ಲೆ ನಡೆಸಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗುತ್ತದೆ. ಆಗ ಪೊಲೀಸರು ತಕ್ಷಣವೇ ವಕೀಲರ ವಿರುದ್ಧ ಎಫ್‌ಐಆರ್ ದಾಖಲು ಮಾಡುತ್ತಾರೆ. ಇದನ್ನು ಖಂಡಿಸಿ ವಕೀಲರು ಪ್ರತಿಭಟನೆಗೆ ಇಳಿದಿದ್ದಾರೆ ಎಂದು ವಿವರವಾಗಿ ಹೇಳಿದರು.
ಚಾಂದ್‌ಪಾಷ ಜ್ಞಾನವಾಪಿ ಮಸೀದಿ ಬಗ್ಗೆ ಆದೇಶ ನೀಡಿದ್ದ ಜಡ್ಜ್ ವಿರುದ್ಧ ಲೂಟಿ ಆರೋಪ ಮಾಡಿದ್ದಾರೆ. ವಕೀಲರ ಸಂಘದ ಚುನಾವಣೆಯಲ್ಲಿ ಗೆದ್ದವರಿಗೂ ಜಾತಿ ನಿಂದನೆ ಮಾಡಿದ್ದಾರೆ ಎಂದು ಆರ್. ಅಶೋಕ್ ಹೇಳಿದರು.