Site icon Vistara News

Farmers Protest: ಲೋಕಸಭೆ ಚುನಾವಣೆ ಹೊತ್ತಲ್ಲೇ ದೆಹಲಿ ಸಮೀಪ ಮತ್ತೆ ಶುರು ರೈತರ ಪ್ರತಿಭಟನೆ, ಸರ್ಕಾರಕ್ಕೆ ತಲೆಬೇನೆ

Farmers Protest In Haryana

Farmers Protest In Haryana's Kurukshetra For Grant MSP

ಚಂಡೀಗಢ: ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳು ಇವೆ. ಈಗಾಗಲೇ ದೆಹಲಿಯಲ್ಲಿ ಕುಸ್ತಿಪಟುಗಳು ಪ್ರತಿಭಟನೆ ಮೂಲಕ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸುತ್ತಿದ್ದಾರೆ. ಇದರ ಬೆನ್ನಲ್ಲೇ, ಹರಿಯಾಣದಲ್ಲಿ ರೈತರು ಬೃಹತ್‌ ಪ್ರತಿಭಟನೆ (Farmers Protest) ನಡೆಸಿದ್ದು, ಚಂಡೀಗಢ-ದೆಹಲಿ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್‌ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದ ಹರಿಯಾಣ ಸರ್ಕಾರಕ್ಕೆ ಮಾತ್ರವಲ್ಲ, ಕೇಂದ್ರ ಸರ್ಕಾರಕ್ಕೂ ಬಿಸಿ ಮುಟ್ಟಲಿದೆ ಎಂದೇ ಹೇಳಲಾಗುತ್ತಿದೆ.

ಸೂರ್ಯಕಾಂತಿ ಬೆಳೆಗೆ ಬೆಂಬಲ ಬೆಲೆ ನೀಡಬೇಕು ಎಂದು ಆಗ್ರಹಿಸಿ ರೈತ ಮುಖಂಡ ರಾಕೇಶ್‌ ಟಿಕಾಯತ್‌ ನೇತೃತ್ವದಲ್ಲಿ ಹರಿಯಾಣದ ಕುರುಕ್ಷೇತ್ರ ಜಿಲ್ಲೆಯಲ್ಲಿ ಸಾವಿರಾರು ರೈತರು ಸೋಮವಾರ ಪ್ರತಿಭಟನೆ ನಡೆಸಿದರು. ಹರಿಯಾಣ ಮುಖ್ಯಮಂತ್ರಿ ಮನೋಹರ ಲಾಲ್‌ ಖಟ್ಟರ್‌ ಅವರು ಸೂರ್ಯಕಾಂತಿ ಬೆಳೆದ 8,528 ರೈತರಿಗೆ 29.13 ಕೋಟಿ ರೂಪಾಯಿ ಮಧ್ಯಂತರ ಪರಿಹಾರ ವಿತರಣೆ ಮಾಡಿದ್ದಾರೆ. ಆದರೂ, ಪರಿಹಾರದಿಂದ ಸಮಾಧಾನಗೊಳ್ಳದ ರೈತರು ಬೃಹತ್‌ ಪ್ರತಿಭಟನೆ ನಡೆಸಿದ್ದಾರೆ.

ಹೀಗಿತ್ತು ರೈತರ ಪ್ರತಿಭಟನೆ

ಹರಿಯಾಣ ರೈತರಿಗೆ ಪಂಜಾಬ್‌, ಉತ್ತರ ಪ್ರದೇಶ ಸೇರಿ ನೆರೆರಾಜ್ಯದ ಹಲವು ರೈತ ಮುಖಂಡರು ಕೂಡ ಬೆಂಬಲ ಸೂಚಿಸಿದ್ದಾರೆ. ಹಾಗಾಗಿ, ರೈತರ ಪ್ರತಿಭಟನೆ ಈಗ ಸರ್ಕಾರಕ್ಕೆ ಗಂಭೀರ ವಿಷಯವಾಗಿದೆ. ಹೆದ್ದಾರಿ ಬಂದ್‌ ಮಾಡಿ ಪ್ರತಿಭಟನೆ ನಡೆಸಿದ ರೈತರು, “ಬೆಂಬಲ ಬೆಲೆ ನೀಡಿ, ರೈತರನ್ನು ಉಳಿಸಿ” (MSP Dilao, Kisan Bachao) ಸೇರಿ ಹಲವು ಘೋಷಣೆಗಳನ್ನು ಕೂಗಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ, ಮಹಾಪಂಚಾಯತ ನಡೆಸಿ ಹಲವು ವಿಷಯಗಳನ್ನು ಚರ್ಚಿಸಿದರು.

ಇದನ್ನೂ ಓದಿ: Sugar Cane | ಟನ್ ಕಬ್ಬಿಗೆ 5500 ರೂಪಾಯಿ ನೀಡಲು ಆಗ್ರಹಿಸಿ ಸುವರ್ಣಸೌಧದೆದುರು ರೈತರ ಪ್ರತಿಭಟನೆ

ಬಂಧಿತ ರೈತರನ್ನು ಬಿಡಿ: ಟಿಕಾಯತ್‌

ರೈತರ ಪ್ರತಿಭಟನೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ರೈತ ಮುಖಂಡ ರಾಕೇಶ್‌ ಟಿಕಾಯತ್‌, “ನಾವು ಹೆದ್ದಾರಿಯನ್ನು ಬಂದ್‌ ಮಾಡಿಲ್ಲ. ಹೆದ್ದಾರಿ ಬಂದ್‌ ಮಾಡಿ ಪ್ರತಿಭಟನೆ ನಡೆಸುವುದು ಸರಿಯಲ್ಲ” ಎಂದು ಹೇಳಿದರು. “ಸರ್ಕಾರಕ್ಕೆ ನಾವು ಎರಡೇ ಬೇಡಿಕೆಗಳನ್ನು ಇಡುತ್ತಿದ್ದೇವೆ. ನಮಗೆ ಬೆಂಬಲ ಬೆಲೆ ನೀಡಬೇಕು ಹಾಗೂ ಬಂಧಿತರ ರೈತರನ್ನು ಕೂಡಲೇ ಬಿಡುಗಡೆಗೊಳಿಸಬೇಕು. ಇಲ್ಲದಿದ್ದರೆ ಇನ್ನಷ್ಟು ಉಗ್ರವಾಗಿ ನಾವು ಪ್ರತಿಭಟನೆ ನಡೆಸುತ್ತೇವೆ” ಎಂದು ಎಚ್ಚರಿಕೆ ನೀಡಿದರು.

ದೇಶದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Exit mobile version