Site icon Vistara News

Farooq Abdullah : ಗಡಿಯಲ್ಲಿನ ಭಯೋತ್ಪಾದನಾ ಕೃತ್ಯಗಳಲ್ಲಿ ಉಗ್ರರು, ಸೇನೆ ಶಾಮೀಲು; ವಿವಾದದ ಕಿಡಿ ಹೊತ್ತಿಸಿದ ಫಾರೂಕ್ ಅಬ್ದುಲ್ಲಾ

Farooq Abdullah

ನವದೆಹಲಿ: ಭಾರತ ಮತ್ತು ಪಾಕಿಸ್ತಾನ ಗಡಿ ಹಾಗೂ ಜಮ್ಮಿ ಕಾಶ್ಮೀರ ನೆಲದಲ್ಲಿ ಭಯೋತ್ಪಾದನಾ ಕೃತ್ಯಗಳು ಹೆಚ್ಚಲು ಉಗ್ರರೊಂದಿಗೆ ಸೇನೆ ಶಾಮೀಲಾಗಿರುವುದೇ ಕಾರಣ ಎಂದು ನ್ಯಾಷನಲ್ ಕಾನ್ಫರೆನ್ಸ್ (NC) ಮುಖ್ಯಸ್ಥ ಮತ್ತು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ (Farooq Abdullah) ಭಾನುವಾರ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಗಡಿಯಲ್ಲಿ ನುಸುಳುವ ಭಯೋತ್ಪಾದಕರೊಂದಿಗೆ ಸೇನೆಯು ಕೈ ಜೋಡಿಸಿದೆ ಎಂದು ಅವರು ನೇರವಾಗಿ ಆರೋಪಿಸಿದ್ದಾರೆ.

ಸೇನಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಒಳ ಒಪ್ಪಂದ ಇದೆ. ಹೀಗಾಗಿಯೇ ಗಡಿಯಲ್ಲಿ ಭಾರಿ ಸಂಖ್ಯೆಯ ಸಿಬ್ಬಂದಿಯ ನಿಯೋಜನೆಯ ಹೊರತಾಗಿಯೂ ಅವರು ಉಗ್ರರು ಭಾರತವನ್ನು ಪ್ರವೇಶಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ನಮ್ಮ ಗಡಿಗಳಲ್ಲಿ ಬೃಹತ್ ಸೈನ್ಯ ನಿಯೋಜನೆ ಇದೆ. ಇದು ವಿಶ್ವದಲ್ಲೇ ಅತಿದೊಡ್ಡದು. ಆದರೂ ಭಯೋತ್ಪಾದಕರು ಭಾರತೀಯ ಭೂಪ್ರದೇಶಕ್ಕೆ ನುಸುಳುತ್ತಲೇ ಇದ್ದಾರೆ. ಮಾದಕವಸ್ತುಗಳನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ. ಗಡಿಯಲ್ಲಿ ಸೇನೆಯನ್ನು ದೊಡ್ಡ ಪ್ರಮಾಣದಲ್ಲಿ ನಿಯೋಜಿಸಿದರೂ ಇದು ಹೇಗೆ ಸಾಧ್ಯ? ಅವರ ನಡುವೆ ಒಳಸಂಚು ಇದೆ ಎಂದು ಅಬ್ದುಲ್ಲಾ ಹೇಳಿದರು.

ಅಬ್ದುಲ್ಲಾ ಅವರು ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್​​ ಜಿಲ್ಲೆಯಲ್ಲಿ ತಮ್ಮ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವಾಗ ಈ ಗಂಭೀರ ಆರೋಪ ಮಾಡಿದ್ದಾರೆ. ಭಾರೀ ಪ್ರಮಾಣದ ಮಾದಕವಸ್ತುಗಳು ಮತ್ತು ಭಯೋತ್ಪಾದಕರು ದೇಶವನ್ನು ಹೇಗೆ ಪ್ರವೇಶಿಸುತ್ತಿದ್ದಾರೆ ಎಂಬುದರ ಬಗ್ಗೆ ಉತ್ತರ ಮಾತ್ರ ಬಯಸುತ್ತೇನೆ ಎಂದು ಅಬ್ದುಲ್ಲಾ ಕೇಳಿದ್ದಾರೆ.

ಇದನ್ನೂ ಓದಿ: Hindenburg Report : ಮೋದಿ ಹೆದರುತ್ತಿದ್ದಾರೆ; ಹಿಂಡೆನ್​ಬರ್ಗ್​ ವರದಿ ಉಲ್ಲೇಖಿಸಿ ಸೆಬಿ, ಪ್ರಧಾನಿಯನ್ನು ಟೀಕಿಸಿದ ರಾಹುಲ್ ಗಾಂಧಿ

ಗಡಿ ರಕ್ಷಣೆ ಕೇಂದ್ರ ಸರ್ಕಾರದ ವಿಷಯವಾಗಿದೆ. ನಮ್ಮ ಗೃಹ ಸಚಿವರು ಮತ್ತು ರಕ್ಷಣಾ ಸಚಿವರು ಈ ಬಗ್ಗೆ ಮಾತನಾಡಬೇಕು” ಎಂದು ಅವರು ಹೇಳಿದ್ದಾರೆ.

“ಸುಮಾರು 200ರಿಂದ300 ಉಗ್ರರು ಹೇಗೆ ಭಾರತಕ್ಕೆ ಬಂದಿದ್ದಾರೆ. ಅವರು ಎಲ್ಲಿಂದ ಬಂದರು? ಇದಕ್ಕೆ ಯಾರು ಜವಾಬ್ದಾರರು. ಕೇಂದ್ರ ಸರ್ಕಾರವು ಇಡೀ ದೇಶಕ್ಕೆ ಉತ್ತರಿಸಬೇಕು” ಎಂದು ಅವರು ಪ್ರಶ್ನಿಸಿದ್ದಾರೆ.

ಗುಲಾಂ ನಬಿ ಆಜಾದ್ ನೇತೃತ್ವದ ಡೆಮಾಕ್ರಟಿಕ್ ಪ್ರೊಗ್ರೆಸ್ಸಿವ್ ಆಜಾದ್ ಪಾರ್ಟಿ (ಡಿಪಿಎಪಿ) ಫಾರೂಕ್ ಅಬ್ದುಲ್ಲಾ ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದೆ ಆರೋಪಗಳು “ದುರದೃಷ್ಟಕರ” ಎಂದು ಹೇಳಿದೆ.

ಸೇನೆಯ ಶೌರ್ಯ ಪ್ರಶ್ನಾತೀತ

ಫಾರೂಕ್ ಅಬ್ದುಲ್ಲಾ ಹಿರಿಯ ರಾಜಕಾರಣಿ ಮತ್ತು ಅವರು ಭಾರತೀಯ ಸೇನೆಯ ಶೌರ್ಯವನ್ನು ಪ್ರಶ್ನಿಸಿರುವುದು ತುಂಬಾ ದುರದೃಷ್ಟಕರ. ಇದು ದೇಶಕ್ಕಾಗಿ ಅಂತಿಮ ತ್ಯಾಗ ಮಾಡುವ ಭಾರತೀಯ ಸೇನೆಯ ಧೈರ್ಯಶಾಲಿ ಸೈನಿಕರ ತ್ಯಾಗವನ್ನು ಪ್ರಶ್ನಿಸುವಂತಿದೆ” ಎಂದು ಹೇಳಿದ್ದಾರೆ.

ಅನಂತ್​ನಾಗ್​​ ಜಿಲ್ಲೆಯ ಅಹ್ಲಾನ್ ಗಗರ್ಮಾಂಡು ಅರಣ್ಯ ಪ್ರದೇಶದಲ್ಲಿ ಶನಿವಾರ 10,000 ಅಡಿ ಎತ್ತರದಲ್ಲಿ ಭಯೋತ್ಪಾದಕರೊಂದಿಗೆ ನಡೆದ ಭೀಕರ ಗುಂಡಿನ ಚಕಮಕಿಯಲ್ಲಿ ಇಬ್ಬರು ಸೇನಾ ಸಿಬ್ಬಂದಿ ಮತ್ತು ಒಬ್ಬ ನಾಗರಿಕ ಸಾವನ್ನಪ್ಪಿದ ಒಂದು ದಿನದ ನಂತರ ಫಾರೂಕ್ ಅಬ್ದುಲ್ಲಾ ಈ ಹೇಳಿಕೆ ನೀಡಿದ್ದಾರೆ.

ಕೊಕರ್ನಾಗ್ ಬೆಲ್ಟ್​​​ನ ದೂರದ ಅಹ್ಲಾನ್ ಗಗರ್ಮಾಂಡು ಅರಣ್ಯದಲ್ಲಿ ಭಯೋತ್ಪಾದಕರ ಉಪಸ್ಥಿತಿಯನ್ನು ಸೂಚಿಸುವ ಗುಪ್ತಚರ ವರದಿಗಳ ಆಧಾರದ ಮೇಲೆ ಭದ್ರತಾ ಪಡೆಗಳು ಪ್ರಾರಂಭಿಸಿದ ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆಯ ಸಮಯದಲ್ಲಿ ಶನಿವಾರ ಸಂಜೆ ಗುಂಡಿನ ಚಕಮಕಿ ಪ್ರಾರಂಭವಾಯಿತು.

Exit mobile version