ನವದೆಹಲಿ: ಜನವರಿ 22ರಂದು ನಡೆದ ಅಯೋಧ್ಯಾ ರಾಮ ಮಂದಿರ (Ayodhya Ram Mandir) ಪ್ರಾಣ ಪ್ರತಿಷ್ಠಾಪನೆಯಲ್ಲಿ (Pran Pratishtha) ಪಾಲ್ಗೊಂಡ ಮುಸ್ಲಿಮ್ ಧರ್ಮ (Muslim cleric) ಗುರುಗಳೊಬ್ಬರ ವಿರುದ್ಧ ಫತ್ವಾ (Fatwa) ಹೊರಡಿಸಲಾಗಿದೆ! ಹೌದು, ಅಖಿಲ ಭಾರತ ಇಮಾಮ್ ಸಂಘಟನೆಯ ಇಮಾಮ್ ಆಗಿರುವ, ಡಾ. ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ ಅವರು ಕಟ್ಟರ್ ಇಸ್ಲಾಮಿಸ್ಟ್‌ಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಫತ್ವಾ ಹೊರಡಿಸಿರುವ ವಿಷಯವನ್ನು ಡಾ ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ ಅವರು ಖಚಿತಪಡಿಸಿದ್ದಾರೆ. “ಮುಖ್ಯ ಇಮಾಮ್ ಆಗಿ, ನಾನು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದಿಂದ ಆಹ್ವಾನವನ್ನು ಸ್ವೀಕರಿಸಿದ್ದೇನೆ. ನಾನು ಎರಡು ದಿನ ಆಲೋಚಿಸಿ ನಂತರ ದೇಶಕ್ಕಾಗಿ ಸೌಹಾರ್ದತೆಗಾಗಿ ಅಯೋಧ್ಯೆಗೆ ಹೋಗಲು ನಿರ್ಧರಿಸಿದೆ” ಎಂದು ಅವರು ತಿಳಿಸಿದ್ದಾರೆ.
ನಿನ್ನೆ ಫತ್ವಾ ಹೊರಡಿಸಲಾಗಿದೆ. ಆದರೆ ಜನವರಿ 22 ರ ಸಂಜೆಯಿಂದ ನನಗೆ ಬೆದರಿಕೆ ಕರೆಗಳು ಬರುತ್ತಿವೆ. ನಾನು ಕೆಲವು ಕರೆಗಳನ್ನು ರೆಕಾರ್ಡ್ ಮಾಡಿದ್ದೇನೆ, ಅದರಲ್ಲಿ ಕರೆ ಮಾಡಿದವರು ನನಗೆ ಜೀವ ಬೆದರಿಕೆ ಹಾಕಿದ್ದಾರೆ. ನನ್ನನ್ನು ಪ್ರೀತಿಸುವವರು, ರಾಷ್ಟ್ರವನ್ನು ಪ್ರೀತಿಸುವವರು, ನನ್ನನ್ನು ಬೆಂಬಲಿಸುತ್ತಾರೆ. ಸಮಾರಂಭದಲ್ಲಿ ಭಾಗವಹಿಸಿದ್ದಕ್ಕಾಗಿ ನನ್ನನ್ನು ದ್ವೇಷಿಸುವವರು ಬಹುಶಃ ಪಾಕಿಸ್ತಾನಕ್ಕೆ ಹೋಗಬೇಕು. ನಾನು ಪ್ರೀತಿಯ ಸಂದೇಶವನ್ನು ನೀಡಿದ್ದೇನೆ, ನಾನು ಯಾವುದೇ ಅಪರಾಧ ಮಾಡಿಲ್ಲ, ನಾನು ಕ್ಷಮೆಯಾಚಿಸುವುದಿಲ್ಲ ಅಥವಾ ರಾಜೀನಾಮೆ ನೀಡುವುದಿಲ್ಲ, ಅವರು ಏನು ಬೇಕಾದರೂ ಮಾಡಬಹುದು ಇಮಾಮ್ ಅವರು ಹೇಳಿದ್ದಾರೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಜ್ಯಪಾಲ ಆನಂದಿಬೆನ್ ಪಟೇಲ್ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರ ಸಮ್ಮುಖದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆ ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆಯನ್ನು ನೆರವೇರಿಸಿದ್ದರು.
ಈ ಸುದ್ದಿಯನ್ನೂ ಓದಿ: Ram Mandir: 2,500 ವರ್ಷಗಳಿಗೊಮ್ಮೆ ಸಂಭವಿಸುವ ಭೀಕರ ಭೂಕಂಪಕ್ಕೂ ರಾಮ ಮಂದಿರ ಜಗ್ಗಲ್ಲ!