Site icon Vistara News

IPL 2024 : ಡೆಲ್ಲಿ ತಂಡಕ್ಕೆ ಮೊದಲ ಗೆಲುವು, ಚೆನ್ನೈಗೆ ಮೊದಲ ಸೋಲು

Delhi Capitals Team

ವಿಶಾಖಪಟ್ಟಣ: ಡೇವಿಡ್​ ವಾರ್ನರ್​ (52 ರನ್​), ನಾಯಕ ರಿಷಭ್​ ಪಂತ್​ (51 ರನ್​) ಜೋಡಿಯ ಉತ್ತಮ ಬ್ಯಾಟಿಂಗ್​ ಹಾಗೂ ಬೌಲರ್​ಗಳ ಸಾಂಘಿಕ ಹೋರಾಟದ ನೆರವಿನಿಂದ ಮಿಂಚಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ (Delhi Capitals) ಐಪಿಎಲ್​ನ (IPL 2024) 17ನೇ ಆವೃತ್ತಿಯ 13ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ (Chennai Super Kings) ವಿರುದ್ಧ 20 ರನ್​ಗಳ ಗೆಲುವು ದಾಖಲಿಸಿದೆ. ಇದು ರಿಷಭ್​ ಪಂತ್ ನೇತೃತ್ವದ ತಂಡಕ್ಕೆ ಹಾಲಿ ಆವೃತ್ತಿಯಲ್ಲಿ ಸಿಕ್ಕಿರುವ ಮೊದಲ ಗೆಲುವಾಗಿದೆ. ಈ ಹಿಂದಿನ ಎರಡು ಪಂದ್ಯಗಳಲ್ಲಿ ಪಂಜಾಬ್​ ​ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ವಿರುದ್ಧ ಡೆಲ್ಲಿ ತಂಡ ಸೋತು ನಿರಾಸೆ ಎದುರಿಸಿತ್ತು.

ಇಲ್ಲಿನ ವೈಎಸ್​ ರಾಜಶೇಖರ ರೆಡ್ಡಿ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟ್ ಮಾಡಿದ ಡೆಲ್ಲಿ ತಂಡ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ಗೆ 191 ರನ್ ಪೇರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಚೆನ್ನೈ ತಂಡ. ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 6 ವಿಕೆಟ್​ ಕಳೆದುಕೊಂಡು 131 ರನ್​ ಬಾರಿಸಿ ಸೋಲೊಪ್ಪಿಕೊಂಡಿತು. ಕೊನೇ ಹಂತದಲ್ಲಿ ಧೋನಿ 16 ಎಸೆತಕ್ಕೆ 4 ಫೋರ್​ ಹಾಗೂ 3 ಸಿಕ್ಸರ್ ಸಮೇತ 37 ರನ್ ಬಾರಿಸಿದರೂ ಸೋಲಿನಿಂದ ತಪ್ಪಿಸಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ.

ದೊಡ್ಡ ಗುರಿಯನ್ನು ಬೆನ್ನಟ್ಟಲು ಆರಂಭಿಸಿದ ಚೆನ್ನೈ ತಂಡದ ಆರಂಭ ಉತ್ತಮವಾಗಿರಲಿಲ್ಲ. ವೇಗದ ಬೌಲರ್ ಮೊಹಮ್ಮದ್ ಖಲೀಲ್​ ಎಸೆತಗಳಿಗೆ ನಾಯಕ ಋತುರಾಜ್ ಗಾಯಕ್ವಾಡ್​ (1 ರನ್​) ಹಾಗೂ ರಚಿನ್ ರವೀಂದ್ರ (2 ರನ್​ ) ಔಟಾದರು. ಈ ಹಿನ್ನಡೆಯಿಂದ ಚೇತರಿಸಿಕೊಳ್ಳುವುದಕ್ಕೆ ಅಜಿಂಕ್ಯ ರಹಾನೆ (45 ರನ್​), ಡ್ಯಾರಿಲ್ ಮಿಚೆಲ್ (34) ರನ್ ಯತ್ನಿಸಿದರು. ಆದರೆ, ಮುಖೇಶ್​ ಕುಮಾರ್ ಹಾಗೂ ಅಕ್ಷರ್ ಪಟೇಲ್ ಕ್ರಮವಾಗಿ ಇವರಿಬ್ಬರನ್ನು ಪೆವಿಲಿಯನ್​ಗೆ ಅಟ್ಟಿದರು. ಶಿವಂ ದುಬೆ 18 ರನ್ ಬಾರಿಸಿ ಮುಖೇಶ್​ಗೆ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ರವೀಂದ್ರ ಜಡೇಜಾ() ಹಾಗೂ ಧೋನಿ ಉತ್ತಮವಾಗಿ ಬ್ಯಾಟ್​ ಬೀಸಿ ಗೆಲವಿಗೆ ಯತ್ನಿಸಿದರೂ ಅವರ ಪ್ರಯತ್ನ ಫಲ ಕೊಡಲಿಲ್ಲ.

ಡೆಲ್ಲಿ ತಂಡ ಪರವಾಗಿ ಮುಖೇಶ್ ಕುಮಾರ್​ 3 ವಿಕೆಟ್ ಪಡೆದರೆ, ಖಲೀಲ್ ಅಹಮದ್​ 2 ವಿಕೆಟ್ ತಮ್ಮದಾಗಿಸಿಕೊಂಡರು.

ಇದನ್ನೂ ಓದಿ: Rishabh Pant : ಕಾರು ಅಪಘಾತದ ಬಳಿಕ ಮೊದಲ ಅರ್ಧ ಶತಕ ಬಾರಿಸಿದ ಪಂತ್​​

ಡೆಲ್ಲಿ ಭರ್ಜರಿ ಬ್ಯಾಟಿಂಗ್

ಈ ಹಿಂದಿನ ಎರಡೂ ಪಂದ್ಯಗಳಲ್ಲಿ ಸೋತಿದ್ದ ಡೆಲ್ಲಿಗೆ ಈ ಪಂದ್ಯ ಗೆಲ್ಲುವುದು ಅನಿವಾರ್ಯವಾಗಿತ್ತು. ಅಂತೆಯೇ ಉತ್ತಮವಾಗಿ ಆಡಿದರು. ಡೇವಿಡ್​ ವಾರ್ನರ್​ 52 ರನ್ ಬಾರಿಸಿದರೆ ಹಾಲಿ ಆವೃತ್ತಿಯಲ್ಲಿ ಮೊದಲ ಅವಕಾಶ ಪಡೆದ ಪೃಥ್ವಿ ಶಾ 43 ರನ್ ಕೊಡುಗೆ ಕೊಟ್ಟರು. ಈ ಜೋಡಿ ಮೊದಲ ವಿಕೆಟ್​ಗೆ 93 ರನ್ ಬಾರಿಸಿತು. ವಾರ್ನರ್ ಮತ್ತು ಶಾ 93 ರನ್​​ಗಳ ಆರಂಭಿಕ ಜೊತೆಯಾಟವನ್ನು ಹಂಚಿಕೊಂಡರು. ಆದಾಗ್ಯೂ ಪಂತ್ ಅವರ ಇನಿಂಗ್ಸ್​ ಹೆಚ್ಚು ಗಮನ ಸೆಳೆಯಿತು. 2022 ರ ಡಿಸೆಂಬರ್​ನಲ್ಲಿ ರಸ್ತೆ ಅಪಘಾತದಿಂದ ಚೇತರಿಸಿಕೊಂಡ ನಂತರ ಪಂದ್ಯಾವಳಿಗೆ ಬಂದ ಪಂತ್, ಘಟನೆಯ ಬಳಿಕ 15 ತಿಂಗಳಲ್ಲಿ ತಮ್ಮ ಮೊದಲ ಅರ್ಧಶತಕ ಗಳಿಸಿದರು. ಮಿಚೆಲ್ ಮಾರ್ಷ್​ 18 ರನ್​ ಕೊಡುಗೆ ಕೊಟ್ಟರು.

Exit mobile version