Site icon Vistara News

IPL 2024 : ಮುಂಬೈ ತಂಡಕ್ಕೆ ಮೊದಲ ಜಯ, ಡೆಲ್ಲಿಗೆ ಮತ್ತೊಂದು ಸೋಲು

IPL 2024

ಮುಂಬಯಿ: ಬ್ಯಾಟಿಂಗ್ ಹಾಗೂ ಬೌಲಿಂಗ್​ನಲ್ಲಿ ಭರ್ಜರಿ ಪ್ರದರ್ಶನ ನೀಡಿದ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬಯಿ ಇಂಡಿಯನ್ಸ್ (Mumbai Indians)​ ತಂಡ ಐಪಿಎಲ್​ 17ನೇ ಆವೃತ್ತಿಯಲ್ಲಿ (IPL 2024) ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ವಿರುದ್ಧ 29 ರನ್​ಗಳ ಗೆಲುವು ದಾಖಲಿಸಿದೆ. ಐದು ಬಾರಿಯ ಚಾಂಪಿಯನ್ ತಂಡಕ್ಕೆ ಹಾಲಿ ಆವೃತ್ತಿಯಲ್ಲಿ ಇದು ಮೊದಲ ಗೆಲುವು. ಆದರೆ, ರಿಷಭ್​ ಪಂತ್ (Rishabh Pant) ನೇತೃತ್ವದ ಡೆಲ್ಲಿ ತಂಡಕ್ಕೆ ಗೆಲುವೆಂಬುದು ಮರೀಚಿಕೆಯಾಯಿತು. ಮುಂಬಯಿ ಹಾಗೂ ಡೆಲ್ಲಿ ತಂಡಗಳು ಮೊದಲ ಮೂರು ಪಂದ್ಯಗಳಲ್ಲಿ ಸೋತಿದ್ದರಿಂದ ಮಾಡು ಇಲ್ಲವೇ ಮಡಿ ಎಂಬ ಸ್ಥಿತಿಯನ್ನು ಎದುರಿಸಿದ್ದವು. ಈ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಮುಂಬಯಿ ತಂಡ ವಿಜಯ ಮಾಲೆ ತನ್ನ ಕೊರಳಿಗೆ ಹಾಕಿಕೊಂಡಿತು.

ಇಲ್ಲಿನ ಐತಿಹಾಸಿಕ ವಾಂಖೆಡೆ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟ್ ಮಾಡಿದ ಮುಂಬಯಿ ತಂಡ ನಿಗದಿತ 20 ಓವರ್​ಗಳು ಮುಕ್ತಾಯಗೊಳ್ಳುವಾಗ 5 ವಿಕೆಟ್ ನಷ್ಟಕ್ಕೆ 234 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಡೆಲ್ಲಿ ಅತ್ಯುತ್ತಮ ಹೋರಾಟ ಸಂಘಟಿಸಿದ ಹೊರತಾಗಿಯೂ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಳ್ಳುವಾಗ 8 ವಿಕೆಟ್​ ಕಳೆದುಕೊಂಡು 205 ರನ್ ಬಾರಿಸಿ ಸೋಲೊಪ್ಪಿಕೊಂಡಿತು.

ಈ ಫಲಿತಾಂಶದ ಬಳಿಕ ಮುಂಬಯಿ ಇಂಡಿಯನ್ಸ್​ ತಂಡ ಅಂಕಪಟ್ಟಿಯಲ್ಲಿ 10ರಿಂದ 7ನೇ ಸ್ಥಾನಕ್ಕೆ ಏರಿತು. ಡೆಲ್ಲಿ ತಂಡ 10ನೇ ಸ್ಥಾನಕ್ಕೆ ಇಳಿಯಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವೂ ಒಂದು ಸ್ಥಾನ ಕುಸಿತ ಕಂಡು 9ರಲ್ಲಿ ಉಳಿಯಿತು.

ಅಬ್ಬರದ ಬ್ಯಾಟಿಂಗ್

ಹಿಂದಿನ ಸೋಲುಗಳಿಂದ ಪಾಠ ಕಲಿತಿದ್ದ ಮುಂಬಯಿ ತಂಡ ಈ ಪಂದ್ಯವನ್ನು ಹೇಗಾದರೂ ಮಾಡಿ ಗೆಲ್ಲಬೇಕು ಎಂಬ ಉದ್ದೇಶದೊಂದಿಗೆ ಬ್ಯಾಟಿಂಗ್ ಮಾಡಿತು. ಮಾಜಿ ನಾಯಕ ರೋಹಿತ್ ಶರ್ಮಾ (27 ಎಸೆತಕ್ಕೆ 49 ರನ್​) ಹಾಗೂ ಇಶಾನ್​ ಕಿಶನ್​ (23 ಎಸೆತಕ್ಕೆ 42 ರನ್​) ಮೊದಲ ವಿಕೆಟ್​ಗೆ 80 ರನ್ ಜತೆಯಾಟವಾಡಿದರು. ಅವರಿಬ್ಬರ ಉತ್ತಮ ಆರಂಭವು ತಂಡಕ್ಕೆ ನೆರವಾಗುತ್ತದೆ ಎಂಬ ಹೊತ್ತಲ್ಲಿ ಹಾಲಿ ಐಪಿಎಲ್​ನಲ್ಲಿ ಮೊದಲ ಪಂದ್ಯವಾಡಿದ ಸೂರ್ಯಕುಮಾರ್ ಯಾದವ್​ ಶೂನ್ಯಕ್ಕೆ ಔಟಾದರು. ಗಾಯದ ಸಮಸ್ಯೆಯಿಂದ ಮರಳಿದ್ದ ಅವರು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು.

ನಾಯಕ ಹಾರ್ದಿಕ್ ಪಾಂಡ್ಯ 33 ಎಸೆತಕ್ಕೆ 39 ರನ್ ಬಾರಿಸಿದರು. ತಿಲಕ್ ವರ್ಮಾ 6 ರನ್​ಗೆ ಸೀಮಿತಗೊಂಡರು. ಆದರೆ, ಸ್ಲಾಗ್ ಓವರ್​ಗಳಲ್ಲಿ ಅಬ್ಬರದ ಬ್ಯಾಟಿಂಗ್ ಮಾಡಿದ ಟಿಮ್​ ಡೇವಿಡ್​ 21 ಎಸೆತಕ್ಕೆ 2 ಫೋರ್​, 4 ಸಿಕ್ಸರ್ ಸಮೇತ 45 ರನ್ ಪೇರಿಸಿದರು. ಅದಕ್ಕಿಂತಲೂ ಹೆಚ್ಚಾಗಿ ಆಲ್​ರೌಂಡರ್​ ರೊಮಾರಿಯೊ ಶಫರ್ಡ್​ 10 ಎಸೆತಕ್ಕೆ 39 ರನ್ ಬಾರಿಸಿತು. ಇವರ ರನ್​ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು. ಅವರು ಆ್ಯನ್ರಿಚ್​ ನೋರ್ಜೆಯ ಕೊನೇ ಓವರ್​ನಲ್ಲಿ 2 ಫೋರ್ ಹಾಗೂ 4 ಸಿಕ್ಸರ್​ ಸಮೇತ 32 ರನ್ ಬಾರಿಸಿದರು.

ಇದನ್ನೂ ಓದಿ: Rohit Sharma : ಡೆಲ್ಲಿ ವಿರುದ್ದ 49 ರನ್ ಬಾರಿಸಿ ಕೊಹ್ಲಿಯಿರುವ ಎಲೈಟ್​ ಕ್ಲಬ್ ಸೇರಿದ ರೋಹಿತ್​ ಶರ್ಮಾ

ಡೆಲ್ಲಿ ವಿಫಲ

ಬೃಹತ್​ ಮೊತ್ತವನ್ನು ಬೆನ್ನಟ್ಟಿದ ಡೆಲ್ಲಿ ತಂಡ ಡೇವಿಡ್ ವಾರ್ನರ್​ 10 ರನ್​ಗಳಿಗೆ ಔಟಾಗುವ ಮೂಲಕ ಹಿನ್ನಡೆಗೆ ಒಳಗಾಯಿತು. ಆದಾಗ್ಯೂ ಪೃಥ್ವಿ ಶಾ 66 ರನ್ ಬಾರಿಸಿ ತಂಡಕ್ಕೆ ನೆರವಾದರು. ಆದರೆ, ಮೂರನೇ ಕ್ರಮಾಂಕಕ್ಕೆ ಬಡ್ತಿ ಪಡೆದಿದ್ದ ಅಭಿಷೇಕ್ ಪೊರೆಲ್ 31 ರನ್ ಬಾರಿಸಿದ ಹೊರತಾಗಿಯೂ ನಿಧಾನಗತಿಯಲ್ಲಿ ಆಡಿದರು. ಅವರು 31 ಎಸೆತ ತೆಗೆದುಕೊಳ್ಳುವ ಮೂಲಕ ತಂಡಕ್ಕೆ ಒತ್ತಡ ತಂದರು. ಬಳಿಕ ಡೆಲ್ಲಿ ತಂಡದ ಆಟಗಾರರ ಪರೇಡ್​ ಶುರುವಾಯಿತು. ನಾಯಕ ರಿಷಭ್ ಪಂತ್​ ಬೇಜವಾಬ್ದಾರಿಯಿಂದ ಆಡಿ 1 ರನ್​ಗೆ ಔಟಾದರೆ, ಅಕ್ಷರ್ ಪಟೇಲ್​ 8 ರನ್ ಬಾರಿಸಿದರು. ಲಲಿತ್ ಯಾದವ್ 3 ರನ್​, ಕುಮಾರ್ ಕುಶಾಗ್ರ ಶೂನ್ಯ ಹಾಗೂ ಜೇ ರಿಚರ್ಡ್ಸನ್​ 2 ರನ್​ಗೆ ಔಟಾದರು. ಡೆಲ್ಲಿ ತಂಡ ಕೊನೇ ಓವರ್​ನಲ್ಲಿ ಮೂರು ವಿಕೆಟ್​ ಕಳೆದುಕೊಂಡಿತು.

ಮಾನ ಕಾಪಾಡಿದ ಸ್ಟಬ್ಸ್​

ಡೆಲ್ಲಿ ತಂಡ 200 ರನ್​ಗಳ ಗಡಿ ದಾಟಿ ಮರ್ಯಾದೆ ಉಳಿಸಿಕೊಳ್ಳಲು ನೆರವಾಗಿದ್ದ ಟ್ರಿಸ್ಟಾನ್ ಸ್ಟಬ್ಸ್​. ಕೇವಲ 25 ಎಸೆತಗಳನ್ನು ಎದುರಿಸಿದ ಅವರು 3 ಫೋರ್​ ಹಾಗೂ 7 ಸಿಕ್ಸರ್ ಸಮೇತ 71 ರನ್ ಬಾರಿಸಿದರು. ಅವರು ಆಡುವಾಗ ತಂಡಕ್ಕೆ ಗೆಲುವಿನ ಭರವಸೆ ಮೂಡಿತು. ಆದರೆ, ಉಳಿದವರು ಅದಕ್ಕೆ ನೆರವಾಗಲಿಲ್ಲ.

Exit mobile version