ನವ ದೆಹಲಿ: ಕೇಂದ್ರ ಸರ್ಕಾರ 2022-23 ಸಾಲಿನ ವಿತ್ತೀಯ ಕೊರತೆ ನಿಯಂತ್ರಣದ ಬಜೆಟ್ ಗುರಿಯನ್ನು (Fiscal deficit ) ಸಾಧಿಸುವ ನಿರೀಕ್ಷೆ ಇದೆ. ಅಂದರೆ ವಿತ್ತೀಯ ಕೊರತೆ 16.61 ಲಕ್ಷ ಕೋಟಿ ರೂ.ಗೆ ನಿಯಂತ್ರಣವಾಗುವ ನಿರೀಕ್ಷೆ ಇದೆ.
ಜಿಡಿಪಿಯ 6.4%ಕ್ಕೆ ಪ್ರಸಕ್ತ ಸಾಲಿನ ವಿತ್ತೀಯ ಕೊರತೆಯನ್ನು ನಿಯಂತ್ರಿಸುವ ಗುರಿಯನ್ನು ಬಜೆಟ್‌ನಲ್ಲಿ ಹೊಂದಲಾಗಿತ್ತು. ತೆರಿಗೆ ಸಂಗ್ರಹ ಸುಧಾರಿಸಿರುವ ಹಿನ್ನೆಲೆಯಲ್ಲಿ ಈ ಗುರಿಗಿಂತಲೂ ಹೆಚ್ಚು ಸುಧಾರಿತ ಮಟ್ಟದಲ್ಲಿ ವಿತ್ತೀಯ ಕೊರತೆಯನ್ನು ನಿರ್ವಹಿಸುವ ನಿರೀಕ್ಷೆ ಇದೆ.
ಹಲವಾರು ಇಲಾಖೆಗಳು ತಮಗೆ ಮಂಜೂರಾಗಿರುವ ಹಣವನ್ನು ಪೂರ್ಣಪ್ರಮಾಣದಲ್ಲಿ ಬಳಕೆ ಮಾಡಲು ಸಾಧ್ಯವಾಗದೆ ಇರಬಹುದು. ಇದರಿಂದ ಹಣಕಾಸು ಸಚಿವಾಲಯಕ್ಕೆ ಆಹಾರ, ರಸಗೊಬ್ಬರ ಮತ್ತು ಪೆಟ್ರೋಲಿಯಂ ಸಬ್ಸಿಡಿ ವೆಚ್ಚ ನಿರ್ವಹಣೆಗೆ ಅನುಕೂಲವಾಗಲಿದೆ. ಭಾರತದ ವಿತ್ತೀಯ ಕೊರತೆ ಕಳೆದ ಏಪ್ರಿಲ್-ಸೆಪ್ಟೆಂಬರ್‌ನಲ್ಲಿ 6.20 ಲಕ್ಷ ಕೋಟಿ ರೂ.ಗೆ ಏರಿತ್ತು. ಬಜೆಟ್‌ನ ವಾರ್ಷಿಕ ಅಂದಾಜಿನ 37.3%ಕ್ಕೆ ಏರಿಕೆಯಾಗಿತ್ತು. ಈ ಅವಧಿಯಲ್ಲಿ ರಿಸಿಪ್ಟ್‌ಗಳು 12.04 ಲಕ್ಷ ಕೋಟಿ ರೂ. ಹಾಗೂ ಒಟ್ಟು ವೆಚ್ಚ 18.24 ಲಕ್ಷ ಕೋಟಿ ರೂ.ಗೆ ಏರಿತ್ತು. ನಿವ್ವಳ ತೆರಿಗೆ ಆದಾಯ 10.12 ಲಕ್ಷ ಕೋಟಿ ರೂ. ಹಾಗೂ ತೆರಿಗೆಯೇತರ ಆದಾಯ 1.58 ಲಕ್ಷ ಕೋಟಿ ರೂ. ಇತ್ತು.
ಹೀಗಿದ್ದರೂ, ಕೇಂದ್ರ ಸರ್ಕಾರದ ಸಾಲದ ಪ್ರಮಾಣ ಬಜೆಟ್ ಅಂದಾಜಿನ 16.6 ಲಕ್ಷ ಕೋಟಿ ರೂ.ಗಳನ್ನು ಮೀರುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರ ಬಂಡವಾಳ ವೆಚ್ಚವನ್ನು 3.42 ಲಕ್ಷ ಕೋಟಿ ರೂ.ಗೆ ಏರಿಸಿದೆ.