ನವ ದೆಹಲಿ: ತೈವಾನ್ ಮೂಲದ ಎಲೆಕ್ಟ್ರಾನಿಕ್ಸ್ ದಿಗ್ಗಜ ಫಾಕ್ಸ್‌ಕಾನ್ (Foxconn), ಉದ್ಯಮಿ ಅನಿಲ್ ಅಗರವಾಲ್ ನೇತೃತ್ವದ ವೇದಾಂತ ಸಮೂಹದ 1.61 ಲಕ್ಷ ಕೋಟಿ ರೂ.ಗಳ ಮಹತ್ತ್ವಾಕಾಂಕ್ಷೆಯ ಸೆಮಿಕಂಡಕ್ಟರ್ ಘಟಕ ಸ್ಥಾಪನೆಯ ಯೋಜನೆಯಿಂದ ಹಿಂದೆ ಸರಿದಿದೆ. ( Foxconn-Vedanta deal) ಇದರೊಂದಿಗೆ ಉಭಯ ಕಂಪನಿಗಳ ಜಾಯಿಂಟ್ ವೆಂಚರ್ ಈಗ ಮುಗಿದ ಅಧ್ಯಾಯವಾಗಿದೆ. ಹೀಗಿದ್ದರೂ ಫಾಕ್ಸ್‌ಕಾನ್ ಭಾರತದಲ್ಲಿ ಮುಂಬರುವ ಹೂಡಿಕೆಗಳಿಗೆ ಬದ್ಧವಿರುವುದಾಗಿ ತಿಳಿಸಿದೆ.
ಈ ನಿರ್ಧಾರ ಕೈಗೊಳ್ಳಲು ಕಾರಣವೇನು ಎಂಬುದನ್ನು ಮಾತ್ರ ಫಾಕ್ಸ್‌ಕಾನ್ ತಿಳಿಸಿಲ್ಲ. ವೇದಾಂತ ಗ್ರೂಪ್ ಹೊಂದಿರುವ ಭಾರಿ ಸಾಲ ಹಾಗೂ ಅದರ ಆರ್ಥಿಕ ವ್ಯವಸ್ಥೆಯ ಬಗ್ಗೆ ಫಾಕ್ಸ್‌ಕಾನ್ ಹೊಂದಿರುವ ಕಳವಳ ಮತ್ತು ಆತಂಕವೇ ಒಪ್ಪಂದ ಮುರಿದು ಬೀಳಲು ಕಾರಣ ಎಂದು ವರದಿಯಾಗಿದೆ. ಗಣಿ ಉದ್ದಿಮೆಯಲ್ಲಿ ದಿಗ್ಗಜನಾಗಿರುವ ವೇದಾಂತ ಕಂಪನಿಯು ಫಾಕ್ಸ್‌ಕಾನ್ ಜತೆಗೂಡಿ ಸೆಮಿಕಂಡಕ್ಟರ್ ಚಿಪ್ ತಯಾರಿಕೆಗೆ ಮುಂದಾಗಿತ್ತು.
ವೇದಾಂತ ಸಮೂಹದ ಸಾಲವೆಷ್ಟು? ವೇದಾಂತ ಲಿಮಿಟೆಡ್‌ನ ಮಾತೃಸಂಸ್ಥೆಯು ಲಂಡನ್ ಮೂಲದ ವೇದಾಂತ ರಿಸೋರ್ಸಸ್ 2.2 ಶತಕೋಟಿ ಡಾಲರ್ (16 ಲಕ್ಷ ಕೋಟಿ ರೂ.) ಸಾಲವನ್ನು ಹೊಂದಿದೆ. ಈ ಸಾಲದ ಹೊರೆಯೇ ಫಾಕ್ಸ್ ಕಾನ್ ಡೀಲ್‌ನಿಂದ ನಿರ್ಗಮಿಸಲು ಕಾರಣ ಎನ್ನಲಾಗುತ್ತಿದೆ. ಸರ್ಕಾರದಿಂದ ಇನ್ಸೆಂಟಿವ್ ವಿತರಣೆಯಲ್ಲೂ ವಿಳಂಬ ಆಗುವ ಸಾಧ್ಯತೆ ಬಗ್ಗೆ ಕಂಪನಿ ಕಳವಳ ಹೊಂದಿತ್ತು ಎಂದೂ ವರದಿಯಾಗಿದೆ. ಕಳೆದ ವರ್ಷ ಒಪ್ಪಂದಕ್ಕೆ ಉಭಯ ಕಂಪನಿಗಳು ಸಹಿ ಹಾಕಿತ್ತು. ಉಭಯ ಕಂಪನಿಗಳು ಪರಸ್ಪರ ಸಮ್ಮತಿಯೊಡನೆ ಜಂಟಿ ಸಹಭಾಗಿತ್ವದಿಂದ ಹೊರ ಬಂದಿವೆ ಎಂದು ಫಾಕ್ಸ್ ಕಾನ್ ಹೇಳಿದೆ.
ಭಾರತದಲ್ಲಿ ಸೆಮಿಕಂಡಕ್ಟರ್ ಮಾರುಕಟ್ಟೆ ಮೌಲ್ಯ 2026ರ ವೇಳೆಗೆ 63 ಶತಕೋಟಿ ಡಾಲರ್‌ಗೆ ಏರಿಕೆಯಾಗುವ ಸಾಧ್ಯತೆ ಇದೆ. ಫಾಕ್ಸ್‌ಕಾನ್ ಮತ್ತು ವೇದಾಂತ 2022ರ ಸೆಪ್ಟೆಂಬರ್‌ನಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ್ದವು. ಗುಜರಾತ್‌ನಲ್ಲಿ ಘಟಕ ಬರಬೇಕಿತ್ತು. ವೇದಾಂತ ಸಮೂಹವೂ ಬೇರೆ ಪಾಲುದಾರನನ್ನು ಹುಡುಕುತ್ತಿರುವುದಾಗಿ ತಿಳಿಸಿದೆ.
ಉಭಯ ಕಂಪನಿಗಳಿಗೆ ಸೆಮಿಕಂಡಕ್ಟರ್ ಚಿಪ್‌ನಲ್ಲಿ ಅನನುಭವ: ಫಾಕ್ಸ್‌ಕಾನ್ ಮತ್ತು ವೇದಾಂತ ಈ ಹಿಂದೆ ಸೆಮಿಕಂಡಕ್ಟರ್ ಚಿಪ್ ತಯಾರಿಸಿದ ಅನುಭವವನ್ನು ಇದುವರೆಗೆ ಹೊಂದಿಲ್ಲ. ತಂತ್ರಜ್ಞಾನಕ್ಕೆ ಮತ್ತೊಂದು ಪಾಲುದರರನ್ನು ಹೊಂದುವ ನಿರೀಕ್ಷೆ ಇತ್ತು.
ಇದನ್ನೂ ಓದಿ: karnataka budget 2023 : ಬೆಂಗಳೂರಿನಲ್ಲಿ 100 ಎಕರೆ ಸೆಮಿಕಂಡಕ್ಟರ್ ಪಾರ್ಕ್ ಸ್ಥಾಪನೆ
ಭಾರತದ ಸೆಮಿಕಂಡಕ್ಟರ್ ಯೋಜನೆಗಳಲ್ಲಿ ಭಾಗವಹಿಸಲು ಹಾಗೂ ಇನ್ಸೆಂಟಿವ್ ಪ್ರಯೋಜನ ಪಡೆಯಲು ಸಿದ್ಧವಿರುವುದಾಗಿ ಉಭಯ ಕಂಪನಿಗಳು ತಿಳಿಸಿವೆ. ಹೀಗಾಗಿ ಎರಡೂ ಕಂಪನಿಗಳು ಮತ್ತೊಂದು ಪ್ಲಾನ್ ಜತೆ ಬರುವ ಸಾಧ್ಯತೆ ಇದೆ.