ಕುಂದಾಪುರ: ಮಳೆಗಾಲ ಬಂತೆಂದರೆ ಒಂದಲ್ಲ ಒಂದು ಸಮಸ್ಯೆ ಕಾಡುತ್ತಿರುತ್ತದೆ. ರಸ್ತೆಯ ಸಮಸ್ಯೆ, ಬಸ್ಸಿನ ಸಮಸ್ಯೆ, ಚರಂಡಿ ಸಮಸ್ಯೆ ಹೀಗೆ ಹಲವಾರು ಸಮಸ್ಯೆಗಳು ಎದುರಾಗುತ್ತದೆ. ಇನ್ನು ಮಳೆಗಾಲದಲ್ಲಿ ಶಾಲಾ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳ ಪಾಡಂತೂ ಹೇಳತೀರದು. ಪಟ್ಟಣಗಳಿಗೆ ಹೋಲಿಸಿದರೆ ಹಳ್ಳಿಯಲ್ಲಿರುವ ವಿದ್ಯಾರ್ಥಿಗಳಿಗೆ (Student) ಈ ಮಳೆಗಾಲವೆಂದರೆ ವನವಾಸದ ಹಾಗೇ. ಕೆಲವು ಕಡೆಗಳಲ್ಲಿ ಬಸ್ಸುಗಳು ಸರಿಯಾದ ಸಮಯಕ್ಕೆ ಬರುವುದಿಲ್ಲ. ಅಲ್ಲಲ್ಲಿ ರಸ್ತೆಗಳು ಕೆಟ್ಟಿರುವ ಕಾರಣ ಬಸ್ಸು ಬರುವುದು ತಡವಾಗುತ್ತದೆ. ಇನ್ನು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಮಹಿಳೆಯರಿಗಾಗಿ ಫ್ರಿ ಬಸ್ (Free Bus Problem )ವ್ಯವಸ್ಥೆ ಮಾಡಿದೆ. ಈ ಬಿಟ್ಟಿ ಭಾಗ್ಯದ ಬಸ್ ನಿಂದ ಕೆಲವು ಭಾಗದ ವಿದ್ಯಾರ್ಥಿಗಳಿಗೆ ಸಂಕಷ್ಟ ಎದುರಾಗಿದೆ. ಈ ಅವ್ಯವಸ್ಥೆ ಕುರಿತು ವಿದ್ಯಾರ್ಥಿಗಳು ಆಕ್ರೋಶಗೊಂಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬಸ್ಸುಗಳು 5-10 ನಿಮಿಷಕ್ಕೂ ಬರುತ್ತದೆ. ಇದರಿಂದ ಯಾವುದೇ ಸಮಸ್ಯೆ ಇಲ್ಲ. ಆದರೆ ಕೆಲವು ಒಳರಸ್ತೆಯಲ್ಲಿ ಬಸ್ಸುಗಳು ಗಂಟೆಗೊಂದು ಬರುತ್ತದೆ. ಇದರಿಂದ ವಿದ್ಯಾರ್ಥಿಗಳು ಬಸ್ಸಿನ ಸಮಸ್ಯೆಯಿಂದ ಒದ್ದಾಡುತ್ತಿದ್ದಾರೆ. ಇತ್ತೀಚೆಗೆ ರಾಜ್ಯದ ಆಡಳಿತವನ್ನು ಕೈಗೆ ತೆಗೆದುಕೊಂಡ ಕಾಂಗ್ರೆಸ್ ಸರ್ಕಾರ ಮಹಿಳೆಯರಿಗಾಗಿ ಬಿಟ್ಟಿ ಭಾಗ್ಯಗಳನ್ನು ನೀಡಿದೆ. ಅದರಲ್ಲಿ ಫ್ರೀ ಬಸ್ ವ್ಯವಸ್ಥೆ ಕೂಡ ಒಂದು. ಈ ಫ್ರಿ ಬಸ್ ಭಾಗ್ಯದ ಯೋಜನೆ ಜಾರಿಗೆ ಬಂದ ಮೇಲಂತೂ ಸರ್ಕಾರ 10 ಬಸ್ಸು ಓಡಾಡುವ ಸ್ಥಳಗಳಲ್ಲಿ 3-4 ಬಸ್ಸುಗಳನ್ನು ಬಿಟ್ಟಿದ್ದಾರೆ. ಅಲ್ಲದೇ ಬಸ್ಸುಗಳಲ್ಲಿ ಸರಿಯಾದ ಸೀಟಿನ ವ್ಯವಸ್ಥೆ ಇಲ್ಲ, ಬಾಗಿಲು, ಕಿಟಕಿಗಳು ಸರಿಯಿಲ್ಲ. ಹಾಗೇ ಮಳೆಗಾಲದಲ್ಲಿ ಸೋರುವ ಬಸ್ಸುಗಳೇ ಹೆಚ್ಚು. ಬಸ್ಸಿನ ಸಮಸ್ಯೆಯಿಂದ ಸರಿಯಾದ ಸಮಯಕ್ಕೆ ಅವರಿಗೆ ಕಾಲೇಜಿಗೆ ತಲುಪಲು ಆಗುತ್ತಿಲ್ಲ. ಇದರಿಂದ ಅಂದಿನ ಕ್ಲಾಸ್ ಮಿಸ್ ಆಗಿ ಪರೀಕ್ಷೆಯಲ್ಲಿ ಓದಲು ಕಷ್ಟವಾಗುತ್ತದೆ ಎಂಬುದು ವಿದ್ಯಾರ್ಥಿಗಳ ಗೋಳು.
ಬಿಟ್ಟಿ ಭಾಗ್ಯ ಬೇಡವೇ ಬೇಡ!
ಸರ್ಕಾರದ ಇಂತಹ ಫ್ರೀ ಬಸ್ ಅವ್ಯವಸ್ಥೆಯ ವಿರುದ್ಧ ಇದೀಗ ವಿದ್ಯಾರ್ಥಿಯೊಬ್ಬಳು ಕಿಡಿಕಾರಿದ್ದಾಳೆ. ಎಳಬೇರು ಎಂಬ ಊರಿನಿಂದ ಬರುವ ವಿದ್ಯಾರ್ಥಿನಿಯೊಬ್ಬಳಿಗೆ ಬಸ್ಸು ಸರಿಯಾದ ಸಮಯಕ್ಕೆ ಸಿಗದ ಕಾರಣ ಸರ್ಕಾರಿ ಅಧಿಕಾರಿಗಳ ಕಚೇರಿಗೆ ತಮ್ಮ ಸಹಪಾಠಿಗಳ ಜೊತೆ ಹೋಗಿ ಸರ್ಕಾರದ ಆಡಳಿತ ವಿರುದ್ಧ ಕಿಡಿಕಾರಿದ್ದಾಳೆ. ಇಂತಹ ಅವ್ಯವಸ್ಥೆಯ ಫ್ರೀ ಬಸ್ ಯೋಜನೆ ನಮಗೆ ಬೇಡವೇ ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾಳೆ. ಹಾಗೆಯೇ ಈ ಬಗ್ಗೆ ಅಧಿಕಾರಿಗಳು ಸರಿಯಾದ ಕ್ರಮ ತೆಗೆದುಕೊಳ್ಳಬೇಕೆಂದು ಕೇಳಿಕೊಂಡಿದ್ದಾಳೆ.
ಇದನ್ನೂ ಓದಿ:Smartphone Charging Tips: ನಿಮ್ಮ ಸ್ಮಾರ್ಟ್ ಪೋನ್ ಬ್ಯಾಟರಿ ಹೆಚ್ಚು ಬಾಳಿಕೆ ಬರಲು ಹೀಗೆ ಮಾಡಿ
ಫೇಸ್ ಬುಕ್‌ನಲ್ಲಿ ಈ ವಿಡಿಯೋ ಪೋಸ್ಟ್ ಆಗಿದ್ದು, ಇದಕ್ಕೆ ಹಲವರು ಕಾಮೆಂಟ್ ಮಾಡಿದ್ದಾರೆ. ಹಲವರು ಆ ವಿದ್ಯಾರ್ಥಿನಿಗೆ ಬೆಂಬಲ ನೀಡಿದ್ದಾರೆ ಮತ್ತು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.