ಮುಂಬಯಿ: ಉದ್ಯಮಿ ಕಿಶೋರ್ ಬಿಯಾನಿ ನೇತೃತ್ವದ ಫ್ಯೂಚರ್ ಸಮೂಹದ ಭಾಗವಾಗಿರುವ ಫ್ಯೂಚರ್ ರಿಟೇಲ್ ದಿವಾಳಿಯಾಗಿದ್ದು, ಮುಂದಿನ ಕ್ರಮಗಳನ್ನು ಕೈಗೊಳ್ಳಲು ರಾಷ್ಟ್ರೀಯ ಕಂಪನಿಗಳ ಕಾನೂನು ನ್ಯಾಯಾಧೀಕರಣ (ಎನ್‌ಸಿಎಲ್‌ಟಿ) ತನ್ನ ಅನುಮತಿ ನೀಡಿದೆ. ಫ್ಯೂಚರ್ ರಿಟೇಲ್, ತನ್ನ ಬಿಗ್ ಬಜಾರ್ ಶಾಪಿಂಗ್ ಮಾಲ್‌ಗಳ ಸರಣಿಗೆ ಪ್ರಸಿದ್ಧವಾಗಿದೆ.
ಸಾಲ ಮರು ಪಾವತಿಸುವಲ್ಲಿ ವಿಫಲವಾಗಿರುವ ಫ್ಯೂಚರ್ ರಿಟೇಲ್ ವಿರುದ್ಧ ದಿವಾಳಿತನದ ಪ್ರಕ್ರಿಯೆಯನ್ನು ಆರಂಭಿಸಬೇಕು ಎಂದು ಬ್ಯಾಂಕ್ ಆಫ್ ಇಂಡಿಯಾ, ಎನ್‌ಸಿಎಲ್‌ಟಿಯಲ್ಲಿ ಅರ್ಜಿ ಸಲ್ಲಿಸಿತ್ತು. ದಿವಾಳಿ ಪ್ರಕ್ರಿಯೆಗೆ ಆಕ್ಷೇಪಿಸಿದ್ದ ಅಮೆಜಾನ್‌ನ ಅರ್ಜಿಯನ್ನು ಎನ್‌ಸಿಎಲ್‌ಟಿ ತಿರಸ್ಕರಿಸಿದೆ.
ಎನ್‌ಸಿಎಲ್‌ಟಿಯು ದಿವಾಳಿತನದ ಪ್ರಕ್ರಿಯೆಯನ್ನು ಕೈಗೊಳ್ಳಲು ವಿಜಯ್ ಕುಮಾರ್ ಐಯ್ಯರ್ ಅವರನ್ನು ನೇಮಿಸಿದೆ. ಈ ವರ್ಷ ಏಪ್ರಿಲ್‌ನಲ್ಲಿ ಬ್ಯಾಂಕ್ ಆಫ್ ಇಂಡಿಯಾ ಫ್ಯೂಚರ್ ರಿಟೇಲ್ ವಿರುದ್ಧ ದಿವಾಳಿ ಪ್ರಕ್ರಿಯೆ ಆರಂಭಿಸಲು ಕೋರಿತ್ತು. ಮೇ ೧೨ರಂದು ಅಮೆಜಾನ್ ಇದಕ್ಕೆ ಆಕ್ಷೇಪಿಸಿತ್ತು. ಇದರಿಂದ ಅಮೆಜಾನ್‌ನ ಹಕ್ಕುಗಳನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಇ-ಕಾಮರ್ಸ್ ದಿಗ್ಗಜ ವಾದಿಸಿತ್ತು.
ಈ ಹಿಂದೆ ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್, ಫ್ಯೂಚರ್ ರಿಟೇಲ್ ಸೇರಿದಂತೆ ಫ್ಯೂಚರ್ ಗ್ರೂಪ್‌ನ ರಿಟೇಲ್, ಹೋಲ್‌ಸೇಲ್ ಮತ್ತು ವೇರ್ ಹೌಸಿಂಗ್ ಆಸ್ತಿಗಳನ್ನು ೨೪,೭೧೩ ಕೋಟಿ ರೂ.ಗೆ ಖರೀದಿಸಲು ಒಪ್ಪಂದ ಮಾಡಿಕೊಂಡಿತ್ತು. ಆದರೆ ಫ್ಯೂಚರ್ ರಿಟೇಲ್‌ಗೆ ಸಾಲ ಕೊಟ್ಟಿದ್ದ ಬ್ಯಾಂಕ್‌ಗಳು ಇದಕ್ಕೆ ವಿರೋಧಿಸಿದ್ದರಿಂದ ರಿಲಯನ್ಸ್ ಇಂಡಸ್ಟ್ರೀಸ್ ಈ ಡೀಲ್‌ನಿಂದ ಹಿಂದೆ ಸರಿದಿತ್ತು. ಈ ಡೀಲ್ ವಿರುದ್ಧ ಇ-ಕಾಮರ್ಸ್ ದಿಗ್ಗಜ ಅಮೆಜಾನ್ ಕೂಡ ಆಕ್ಷೇಪಿಸಿತ್ತು.