Site icon Vistara News

GR vishwanath : ಬೆಂಗಳೂರು ನಗರ ವಿವಿಯಿಂದ ಕ್ರಿಕೆಟ್ ದಿಗ್ಗಜ ಗುಂಡಪ್ಪ ವಿಶ್ವನಾಥ್​ಗೆ ಗೌರವ ಡಾಕ್ಟರೇಟ್

GR Vishwnath

ಬೆಂಗಳೂರು: ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಮೂರನೇ ಘಟಿಕೋತ್ಸವದಲ್ಲಿ ಕ್ರಿಕೆಟ್ ದಿಗ್ಗಜ ಗುಂಡಪ್ಪ ವಿಶ್ವನಾಥ್ ರಿಗೆ (GR vishwanath) ಗೌರವ ಡಾಕ್ಟರೇಟ್ ಪದವಿ ನೀಡಲಾಗುತ್ತಿದೆ ಎಂದು ಕುಲಪತಿ ಲಿಂಗರಾಜ ಗಾಂಧಿ ತಿಳಿಸಿದರು. ಸೆಂಟ್ರಲ್ ಕಾಲೇಜು ಆವರಣದ ಜ್ಞಾನ ಜ್ಯೋತಿ ಸಂಭಾಂಗಣದ ಬೋರ್ಡ್ ರೂಮ್ ನಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಮೂರನೇ ಘಟಿಕೋತ್ಸವ ಜೂನ್ 29 ರಂದು ನಡೆಯಲಿದೆ. ಈ ಸಂದರ್ಭದಲ್ಲಿ ಗೌರವ ಡಾಕ್ಟರೇಟ್ ಪದವಿಯನ್ನು ಇಬ್ಬರಿಗೆ ನೀಡಲಾಗುತ್ತಿದೆ. ಶಿಕ್ಷಣ ಮತ್ತು ಸಮಾಜ ಸೇವೆಯಲ್ಲಿ ಸಾಧನೆ ಮಾಡಿರುವ ಗೋಕುಲ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ.ಆರ್. ಜಯರಾಮ್ ಒಬ್ಬರಾದರೆ ಮತ್ತೊಬ್ಬರು ಖ್ಯಾತ ಮಾಜಿ ಕ್ರಿಕೆಟ್ ಆಟಗಾರ ಜಿ.ಆರ್. ವಿಶ್ವನಾಥ್ ಆಗಿದ್ದಾರೆ ಎಂದು ತಿಳಿಸಿದರು.

ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಮೂರನೇ ವಾರ್ಷಿಕ ಘಟಿಕೋತ್ಸವ ಜೂನ್ 29 ಶನಿವಾರ ಬೆಳಿಗ್ಗೆ 11.30 ಕ್ಕೆ ನಗರದ ಅರಮನೆ ರಸ್ತೆಯ ಸೆಂಟ್ರಲ್ ಕಾಲೇಜು ಆವರಣದಲ್ಲಿರುವ ಜ್ಞಾನಜ್ಯೋತಿ ಸಭಾಂಗಣದಲ್ಲಿ ಜರುಗಲಿದೆ. ರಾಜ್ಯಪಾಲ ಹಾಗೂ ಕುಲಾಧಿಪತಿಗಳಾದ ಥಾವರ್ ಚಂದ್ ಗೆಹ್ಲೋಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಹಾಗೂ ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಸಮ ಕುಲಾಧಿಪತಿ ಡಾ. ಎಂ. ಸಿ. ಸುಧಾಕರ್ ಮತ್ತು ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್​ ಎಜುಕೇಶನ್ ಅಧ್ಯಕ್ಷ ಪ್ರೊ. ಟಿ. ಜಿ. ಸೀತಾರಾಮ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಯುನಿಫೈಡ್ ಯೂನಿವರ್ಸಿಟಿ ಕಾಲೇಜು ಮ್ಯಾನೇಜ್ಮೆಂಟ್ ಸಿಸ್ಟಮ್ ತಂತ್ರಾಂಶದ ಪ್ರಕಾರ ಸ್ನಾತಕ ಹಾಗೂ ಸ್ಟಾಂಡ್ ಅಲೋನ್ ಕೋರ್ಸುಗಳ ಪ್ರವೇಶ ಪ್ರಕ್ರಿಯೆ ಹಾಗೂ ಪರೀಕ್ಷಾ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿರ್ವಹಿಸಲಾಗುತ್ತಿದೆ. ಅಂತಹ ವಿದ್ಯಾರ್ಥಿಗಳಿಗೆ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡುತ್ತಿರುವ ರಾಜ್ಯ ಪ್ರಥಮ ವಿಶ್ವವಿದ್ಯಾನಿಲಯ ನಮ್ಮದಾಗಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.

63 ವಿದ್ಯಾರ್ಥಿಗಳಿಗೆ ಚಿನ್ನದ ಪದಕ

ಈ ಘಟಿಕೋತ್ಸವದಲ್ಲಿ ಒಟ್ಟು 63 ವಿದ್ಯಾರ್ಥಿಗಳು ಪ್ರಥಮ ರಾಂಕ್ ಪ್ರಮಾಣ ಪತ್ರಗಳನ್ನು, ಚಿನ್ನದ ಪದಕ ಮತ್ತು ನಗದು ಬಹುಮಾನವನ್ನು ಸ್ವೀಕರಿಸಲಿದ್ದಾರೆ. ಈ ರ್ಯಾಂಕ್​ ವಿಜೇತರಲ್ಲಿ 40 ವಿದ್ಯಾರ್ಥಿಗಳು ಬೆಂಗಳೂರು ನಗರ ವಿಶ್ವವಿದ್ಯಾನಿಲಯದಿಂದ ಸ್ಥಾಪಿತ ಚಿನ್ನದ ಪದಕ ಮತ್ತು ನಗದು ಬಹುಮಾನಗಳನ್ನು ಸ್ವೀಕರಿಸಲಿದ್ದಾರೆ. ವಿವಿಧ ದಾನಿಗಳು ಸ್ಥಾಪಿಸಿರುವ ಒಟ್ಟು 15 ಚಿನ್ನದ ಪದಕಗಳನ್ನು ಸಹ ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಸ್ವೀಕರಿಸಲಿದ್ದಾರೆ. ಬಿ.ಎ. ಮ್ಯೂಸಿಕ್, ಟೂರಿಸಂ ಮ್ಯಾನೇಜ್ಮೆಂಟ್ ವಿಭಾಗಗಳಲ್ಲಿ ಅರ್ಹ ವಿದ್ಯಾರ್ಥಿಗಳು ಇಲ್ಲದ ಕಾರಣ ಈ ವರ್ಷ ಎರಡು ಚಿನ್ನದ ಪದಕ ವಿತರಿಸಲಾಗುತ್ತಿಲ್ಲ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: Paris Olympics 2024 : ಒಲಿಂಪಿಕ್ಸ್​​ ಸ್ಮರಣೆಗಾಗಿ ಜೆಎಸ್​ಡಬ್ಲ್ಯುನಿಂದ ಪ್ಯಾರಿಸ್​ನಲ್ಲಿ ವಿಶೇಷ ಪ್ರದರ್ಶನ

ಬೆಂಗಳೂರು ನಗರ ವಿಶ್ವವಿದ್ಯಾನಿಲಯ ಸ್ಥಾಪಿಸಿದ 35 ಚಿನ್ನದ ಪದಕ ಮತ್ತು ನಗದು ಬಹುಮಾನಗಳನ್ನು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಹಾಗೂ ಬಿ.ಎ., ಬಿ.ಎಸ್ಸಿ, ಬಿ.ಕಾಂ., ಬಿ.ಬಿ.ಎ. ಬಿ.ಇಡಿ., ಕೋರ್ಸುಗಳಲ್ಲಿ ಅತಿ ಹೆಚ್ಚು ಅಂಕ ಪಡೆದವರಿಗೆ ನೀಡಲಾಗುವುದು ಎಂದು ಲಿಂಗರಾಜ ಗಾಂಧಿ ಹೇಳಿದರು.

Exit mobile version