Site icon Vistara News

Ganesh Chaturthi 2024: ಪಿಒಪಿ ಗಣೇಶ ಮೂರ್ತಿಗೆ ನಿಷೇಧ; ಹಬ್ಬ ಆಚರಣೆಗೆ ಏನೆಲ್ಲಾ ನಿಯಮಗಳು? ಇಲ್ಲಿದೆ ವಿವರ

Ganesh Chaturthi 2024

ಬೆಂಗಳೂರು: ಸೆ.7ರಂದು ಗೌರಿ ಗಣೇಶ ಹಬ್ಬ (Ganesh Chaturthi 2024) ಆಚರಣೆ ಹಿನ್ನೆಲೆಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಮಹತ್ವದ ಸಭೆ ನಡೆಸಿದ್ದು, ಮೂರ್ತಿ ಪ್ರತಿಷ್ಠಾಪನೆ ಸೇರಿ ಹಬ್ಬ ಆಚರಣೆಗೆ ಏನೆಲ್ಲಾ ನಿಯಮಗಳನ್ನು ಜಾರಿ ಮಾಡಬೇಕು ಎಂಬ ಕುರಿತು ಚರ್ಚೆ ನಡೆಸಲಾಗಿದೆ.

ಬೆಂಗಳೂರು ಜಿಲ್ಲಾಧಿಕಾರಿ, ಬಿಬಿಎಂಪಿ, ಬೆಸ್ಕಾಂ, ಪೊಲೀಸ್ ಇಲಾಖೆ, ವಾಯು ಮಾಲಿನ್ಯ ಮಂಡಳಿಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು. ಈ ಬಾರಿ ಗಣೇಶ ಹಬ್ಬಕ್ಕೆ ಬಿಬಿಎಂಪಿಯಿಂದ ಗ್ರೀನ್ ಸಿಗ್ನಲ್ ನೀಡಲಾಗಿದ್ದು, ಪಿಒಪಿ ಗಣೇಶನ ಮೂರ್ತಿಗಳ ಮಾರಾಟ ನಿಷೇಧ ಮಾಡಲಾಗಿದೆ.

ಈಗಾಗಲೇ ಪಿಒಪಿ ಗಣೇಶಗಳನ್ನು ಸೀಜ್ ಮಾಡಲಾಗಿದೆ. ಇನ್ನು ಗಣೇಶನ ಪ್ರತಿಷ್ಠಾಪನೆ ಮಾಡುವವರಿಗೆ ಈ ಬಾರಿ ಯಾವುದೇ ನಿರ್ಬಂಧಗಳು ಇಲ್ಲ. ಮೂರ್ತಿ ಪ್ರತಿಷ್ಠಾಪನೆ ಮಾಡುವವರಿಗೆ 24 ಗಂಟೆಯೊಳಗೆ ಪರ್ಮಿಷನ್ ಕೊಡಲು ಆಯಾ ಅಧಿಕಾರಿಗಳಿಗೆ ಆಯುಕ್ತರು ಸೂಚನೆ ನೀಡಿದ್ದಾರೆ.

ಕಳೆದ ಬಾರಿ 5 ಅಡಿ ಎತ್ತರದೊಳಗಿನ ಗಣೇಶ ಮೂರ್ತಿ ಮಾತ್ರ ಪ್ರತಿಷ್ಠಾಪನೆ ಮಾಡಲು ಬಿಬಿಎಂಪಿ ಅನುಮತಿ ನೀಡಿತ್ತು. ಆದರೆ ಈ ಬಾರಿ ಮೂರ್ತಿಗಳ ಎತ್ತರಕ್ಕೆ ಯಾವುದೇ ನಿರ್ಬಂಧ ಏರಿಲ್ಲ. ಬೆಸ್ಕಾಂ ಅಧಿಕಾರಿಗಳಿಗೆ ಗಣೇಶನ ವಿಸರ್ಜನೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.

ಗಣೆಶ ವಿಸರ್ಜನೆ ಮಾಡುವ 42 ಕೆರೆ ಹಾಗೂ ಕಲ್ಯಾಣಿ ಗಳಲ್ಲಿ ಹೆಚ್ಚಿನ ಭದ್ರತೆ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ. ಇನ್ನು ಕಲ್ಯಾಣಿ ಬಳಿ‌ ಆಂಬ್ಯುಲೆನ್ಸ್ ಹಾಗೂ ಅಗ್ನಿ ಶಾಮಕದಳದ ವಾಹನ ನಿಲುಗಡೆ ಮಾಡಲು ಹಾಗೂ ನಗರದ ಮನೆ ಮನೆ ಗಣಪನ ವಿಸರ್ಜನೆಗೆ ಟ್ಯಾಂಕರ್ ವ್ಯವಸ್ಥೆ ಮಾಡಲು ಸೂಚನೆ ನೀಡಲಾಗಿದೆ.

ಪಿಒಪಿ ಮೂರ್ತಿ ಮಾರಾಟ ಮಾಡಿದರೆ ಕಠಿಣ ಕ್ರಮ: ಸಚಿವ ಈಶ್ವರ್ ಖಂಡ್ರೆ

ಬೆಂಗಳೂರು: ಈ ಬಾರಿ ಗಣೇಶ ಹಬ್ಬದಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಮೂರ್ತಿಗಳ ಮಾರಾಟ ನಿಷೇಧ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಅರಣ್ಯ ಸಚಿವ ಈಶ್ವರ್ ಬಿ ಖಂಡ್ರೆ ಅವರು ಜಿಲ್ಲಾಡಳಿತಗಳಿಗೆ ಸೂಚಿಸಿದ್ದಾರೆ.

ಇದನ್ನೂ ಓದಿ | DK Shivakumar: ಬಿಜೆಪಿಯವರ ಮಾತು ಕೇಳಿ 15 ಬಿಲ್ ವಾಪಸ್ ಕಳುಹಿಸಿದ ರಾಜ್ಯಪಾಲರು: ಕಿಡಿಕಾರಿದ ಡಿಕೆಶಿ

ಆದೇಶವನ್ನು ಉಲ್ಲಂಘಿಸುವ ಮತ್ತು ಜಲಮೂಲಗಳನ್ನು ಕಲುಷಿತಗೊಳಿಸುವವರ ವಿರುದ್ಧ ವಾಯು ಮತ್ತು ಜಲ ಕಾಯ್ದೆಯಡಿ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಲಾಗುವುದು. ಇಲ್ಲಿಯವರೆಗೆ ಕೇವಲ ನಿರ್ದೇಶನಗಳನ್ನು ನೀಡಲಾಗುತ್ತಿದೆ, ಆದರೆ ಈಗ ಸಾಕಷ್ಟು ಮುಂಚಿತವಾಗಿಯೇ ಸರ್ಕಾರಿ ಆದೇಶ ಹೊರಡಿಸಲಾಗಿದೆ. ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹಾಗೂ ಎಲ್ಲ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿರುವ ಖಂಡ್ರೆ ಅವರು, ಪರಿಸರ ಸ್ನೇಹಿ ವಿಗ್ರಹಗಳನ್ನು ಉತ್ತೇಜಿಸಲು ಮತ್ತು ಹಸಿರು ಪಟಾಕಿಗಳ ಬಳಕೆಯನ್ನು ಉತ್ತೇಜಿಸಲು ಜಿಲ್ಲಾಧಿಕಾರಿಗಳ ಅಡಿಯಲ್ಲಿ ಸಮಿತಿಗಳನ್ನು ರಚಿಸಿ ಆದೇಶ ಹೊರಡಿಸಿದ್ದಾರೆ.

Exit mobile version