Site icon Vistara News

Gautam Gambhir : ಭಾರತ ಕ್ರಿಕೆಟ್ ತಂಡದ ನೂತನ ಕೋಚ್ ಆಗಿ ಗೌತಮ್ ಗಂಭೀರ್ ನೇಮಕ

Gautam Gambhir

ಮುಂಬೈ: ಎಲ್ಲರ ನಿರೀಕ್ಷೆಯಂತೆ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ (Gautam Gambhir) ನೇಮಕಗೊಂಡಿದ್ದಾರೆ. ಅವರ ಆಯ್ಕೆಯನ್ನು ಬಿಸಿಸಿಐ ಗೌರವ ಕಾರ್ಯದರ್ಶಿ ಜಯ್ ಶಾ ಮಂಗಳವಾರ ಪ್ರಕಟಿಸಿದ್ದಾರೆ. 2024 ರ ಟಿ 20 ವಿಶ್ವಕಪ್ ಮುಕ್ತಾಯದ ನಂತರ ರಾಹುಲ್ ದ್ರಾವಿಡ್ ಅವರ ಅವಧಿ ಮುಗಿದ ಹಿನ್ನೆಲೆಯಲ್ಲಿ ಹೊಸ ಕೋಚ್​ ಆಯ್ಕೆ ಮಾಡಲಾಗಿದೆ. ಗಂಭೀರ್ ಶೀಘ್ರವೇ ತಂಡದ ನೇತೃತ್ವ ವಹಿಸಿಕೊಳ್ಳುವ ನಿರೀಕ್ಷೆಯಿದೆ. ಈ ಹಿಂದೆ ಬಹುತೇಕ ಅವರೇ ಆಯ್ಕೆಯಾಗುತ್ತಾರೆ ಎಂದು ಹೇಳಲಾಗಿದ್ದ ಕಾರಣ ಘೋಷಣೆ ಕೇವಲ ಔಪಚಾರಿಕವಾಗಿದೆ.

“ಭಾರತೀಯ ಕ್ರಿಕೆಟ್ ತಂಡದ ನೂತನ ಮುಖ್ಯ ಕೋಚ್ ಆಗಿ ಗೌತಮ್​ ಗಂಭೀರ್​ ಅವರನ್ನು ಸ್ವಾಗತಿಸಲು ನನಗೆ ತುಂಬಾ ಸಂತೋಷವಾಗುತ್ತಿದೆ. ಆಧುನಿಕ ಕ್ರಿಕೆಟ್ ವೇಗವಾಗಿ ವಿಕಸನಗೊಂಡಿದೆ ಮತ್ತು ಗೌತಮ್ ಈ ಬದಲಾವಣೆಯನ್ನು ಹತ್ತಿರದಿಂದ ನೋಡಿದ್ದಾರೆ. ತಮ್ಮ ವೃತ್ತಿಜೀವನದುದ್ದಕ್ಕೂ ವಿವಿಧ ಪಾತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ ಗೌತಮ್, ಭಾರತೀಯ ಕ್ರಿಕೆಟ್ ಅನ್ನು ಮುನ್ನಡೆಸಲು ಸೂಕ್ತ ವ್ಯಕ್ತಿ ಎಂದು ನನಗೆ ವಿಶ್ವಾಸವಿದೆ. ಭಾರತ ಕ್ರಿಕೆಟ್ ತಂಡದ ಬಗ್ಗೆ ಅವರ ಸ್ಪಷ್ಟ ದೃಷ್ಟಿಕೋನ, ಅವರ ಅಪಾರ ಅನುಭವ ಹೊಸ ಭಾಷ್ಯ ಸೃಷ್ಟಿಸಲಿದೆ. ಹೊಸ ಪ್ರಯಾಣವನ್ನು ಪ್ರಾರಂಭಿಸುವ ಅವರಿಗೆ ಬಿಸಿಸಿಐ ಸಂಪೂರ್ಣವಾಗಿ ಬೆಂಬಲಿಸುತ್ತದೆ” ಎಂದು ಜಯ್​ ಶಾ ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್​​ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: PM Modi Russia Visit : ಮೋದಿಗೆ ರಷ್ಯಾದ ಅತ್ಯುನ್ನತ ನಾಗರಿಕ ಗೌರವ ‘ಆರ್ಡರ್ ಆಫ್ ಸೇಂಟ್ ಆಂಡ್ರ್ಯೂ ದಿ ಅಪೊಸ್ಟಲ್’ ಪ್ರದಾನ

ಐಪಿಎಲ್​ 2024 ರ ಋತುವಿನ ದ್ವಿತೀಯಾರ್ಧದಲ್ಲಿ ಗೌತಮ್ ಗಂಭೀರ್ ಮುಖ್ಯ ಕೋಚ್ ಪಾತ್ರವನ್ನು ವಹಿಸಿಕೊಳ್ಳುವ ಬಗ್ಗೆ ಚರ್ಚೆಗಳು ಜೋರಾಗಿದ್ದವು. ಆ ಸಮಯದಲ್ಲಿ, ಯಾವುದೇ ಔಪಚಾರಿಕ ಸಭೆ ನಡೆದಿರಲಿಲ್ಲ. ಗಂಭೀರ್ ಅವರಿಗೆ ಉನ್ನತ ಮಟ್ಟದಲ್ಲಿ ಈ ಹಿಂದೆ ಯಾವುದೇ ಕೋಚಿಂಗ್ ಅನುಭವ ಹೊಂದಿಲ್ಲ. ಆದರೆ ಐಪಿಎಲ್​​ನಲ್ಲಿ ಮಾರ್ಗದರ್ಶಕರಾಗಿ ಅವರು ಕಂಡ ಯಶಸ್ಸು ಭಾರತ ತಂಡವನ್ನು ಮುನ್ನಡೆಸಲು ಸೂಕ್ತವಾಗಿದೆ.

ಲಕ್ನೊ ತಂಡದ ಮೂಲಕ ಕೋಚಿಂಗ್ ಹುದ್ದೆಗೆ ಇಳಿದಿದ್ದ ಗಂಭೀರ್​

ಗಂಭೀರ್ ಅವರ ಮೊದಲ ಕೋಚಿಂಗ್ ಕರ್ತವ್ಯ 2022 ರಲ್ಲಿ ಲಕ್ನೋ ಐಪಿಎಲ್ ಫ್ರಾಂಚೈಸಿಯೊಂದಿಗೆ ಆರಂಭಗೊಂಡಿತ್ತು. ಅಲ್ಲಿ ಅವರು ಮಾರ್ಗದರ್ಶಕರಾಗಿ ಕೆಲಸ ಮಾಡಿದ್ದರು. ಆ್ಯಂಡಿ ಫ್ಲವರ್ ತರಬೇತುದಾರರಾಗಿದ್ದರು. ಎಲ್ಎಸ್​ಜಿ ಆ ಎರಡು ವರ್ಷಗಳ ಅಧಿಕಾರಾವಧಿಯಲ್ಲಿ ಪ್ಲೇಆಫ್​ಗೆ ಪ್ರವೇಶಿಸಿತ್ತು . 2017 ರಲ್ಲಿ ಫ್ರಾಂಚೈಸಿಯನ್ನು ತೊರೆದ ನಂತರ ಗಂಭೀರ್ ಕೆಕೆಆರ್​ಗೆ ಮರಳಿದರು. ಎರಡು ಬಾರಿ ಪ್ರಶಸ್ತಿ ವಿಜೇತ ನಾಯಕನನ್ನು ಫ್ರಾಂಚೈಸಿಯ ಮಾರ್ಗದರ್ಶಕರಾಗಿ ನೇಮಿಸಲಾಯಿತು. ಅರು ತಕ್ಷಣದ ಪರಿಣಾಮ ಬೀರಿದರು. ಮೇ 26 ರಂದು ಕೆಕೆಆರ್ ತಮ್ಮ ಮೂರನೇ ಐಪಿಎಲ್ ಕಿರೀಟವನ್ನು ಮುಡಿಗೇರಿಸಿಕೊಂಡಿತು. ಎಲ್ಲಗೂ ಗಂಭೀರ್ ಅವರ ಕೋಚಿಂಗ್ ಸಾಮರ್ಥ್ಯ ಹಾಗೂ ಕಾರ್ಯತಂತ್ರದಿಂದಲೇ ಆಯಿತು ಎಂಬುದು ಕ್ರಿಕೆಟ್ ಪಂಡಿತರ ಅಂಬೋಣ.

ವಿವಿಎಸ್ ಲಕ್ಷ್ಮಣ್ ಮಾರ್ಗದರ್ಶನದಲ್ಲಿ ಭಾರತ ತಂಡ ಪ್ರಸ್ತುತ ಜಿಂಬಾಬ್ವೆ ವಿರುದ್ಧ 5 ಪಂದ್ಯಗಳ ಟಿ 20 ಐ ಸರಣಿಯನ್ನು ಆಡುತ್ತಿದೆ. 3 ಟಿ 20 ಮತ್ತು 3 ಏಕದಿನ ಪಂದ್ಯಗಳನ್ನು ಒಳಗೊಂಡ ಶ್ರೀಲಂಕಾ ಸರಣಿಯ ಜವಾಬ್ದಾರಿಯನ್ನು ಗಂಭೀರ್ ವಹಿಸಿಕೊಳ್ಳಲಿದ್ದಾರೆ. ಪ್ರವಾಸವು ಜುಲೈ 27 ರಿಂದ ಪ್ರಾರಂಭವಾಗುತ್ತದೆ ಮತ್ತು ಆಗಸ್ಟ್ 7 ರಂದು ಕೊನೆಗೊಳ್ಳುತ್ತದೆ

Exit mobile version