Site icon Vistara News

Gautam Gambhir : ಟೀಮ್ ಇಂಡಿಯಾಗೆ ಈಗ ಆಕ್ರಮಣಕಾರಿ ‘ಗಂಭೀರ’ ಕೋಚ್!

gautam Gambhir

ಸನತ್ ರೈ ಬೆಂಗಳೂರು

ಗೌತಮ್ ಗಂಭೀರ್…! (Gautam Gambhir ) ಹೆಸರಿಗೆ ತಕ್ಕಂತೆ ಗೌತಮ ಗಂಭೀರ್ ‘ಗಂಭೀರ’ ವದನ. ಮುಖದಲ್ಲಿ ಮಂದಹಾಸ ಬೀರುವುದು ಬಲೂ ಅಪರೂಪ. ಸೋಲನ್ನಂತೂ ಒಪ್ಪಿಕೊಳ್ಳಲು ಒಂಚೂರು ಇಷ್ಟಪಡಲ್ಲ. ಇನ್ನು, ಗೆಲುವನ್ನು ಅಷ್ಟೇ ಯಾವತ್ತೂ ಸಂಭ್ರಮಪಡುವ ಜಾಯಮಾನದವರಲ್ಲ. ಅಷ್ಟೇ ಯಾಕೆ ಶತಕ, ದ್ವಿಶತಕ ದಾಖಲಿಸಿದ್ರೂ ಮುಖ ಸಿಂಡರಿಸಿಕೊಂಡೇ ಖುಷಿಪಡುವ ಆಟಗಾರ.

ಒಂದು ರೀತಿಯಲ್ಲಿ ಗಂಭೀರ್ ಅವರನ್ನು ಅರ್ಥಮಾಡಿಕೊಳ್ಳುವುದು ತುಸು ಕಷ್ಟವಾದ್ರೂ ಮಹಾನ್ ದೇಶಪ್ರೇಮಿ. ತಂಡಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡೋ ಮನೋಭಾವನೆಯ ವ್ಯಕ್ತಿತ್ವ. ಕಟ್ಟಕಡೆಯ ತನಕ ಹೋರಾಟ ಮಾಡೋ ಛಲದಂಕ ಮಲ್ಲ. ಮುಂಗೋಪಿಯಾದ್ರೂ ತನ್ನತನವನ್ನು ಯಾವತ್ತೂ ಬಿಟ್ಟುಕೊಡಲ್ಲ. ಆತ್ಮಾಭಿಮಾನಕ್ಕೆ ಭಂಗವಾದ್ರೆ ಹಿಂದೆ ಮುಂದೆ ನೋಡದೇ ಕಿರಿಕ್ ಮಾಡೋದಕ್ಕೂ ಹಿಂಜರಿಯುವುದಿಲ್ಲ.

ಅದು ಮೈದಾನ ಇರಲಿ…ಮೈದಾನದ ಹೊರಗಡೆ ಇರಲಿ.. ಇದ್ದಿದ್ದನ್ನು ಇದ್ದಂಗೆ ಹೇಳುವುದು ಗಂಭೀರ್ ಸ್ವಭಾವ. ಒಂದು ರೀತಿ ನಿಷ್ಠುರವಾದಿ. ತನಗೆ ಅನ್ನಿಸಿದ್ದನ್ನು ಮುಲಾಜಿ ಇಲ್ಲದೇ ನೇರವಾಗಿ ಹೇಳ್ತಾರೆ. ಅಪ್ಪಿ ತಪ್ಪಿ ಗಂಭೀರ್ ಅವರನ್ನು ಕೆಣಕಿದ್ರೆ ಕಥೆ ಅಷ್ಟೇ. ಅಲ್ಲಿ ಬಾಯಿ ಮಾತಿನ ಆರ್ಭಟದ ಜೊತೆ ಬೆಂಕಿ ಚೆಂಡುಗಳನ್ನು ಧೂಳಿಪಟ ಮಾಡುವಂತೆ ರೌದ್ರ ಅವಾತಾರವನ್ನು ಕಾಣಬಹುದು. ದೇಶ ಪ್ರೇಮ, ಕಾಳಜಿ ಆಕ್ರಮಣಕಾರಿ ಪ್ರವೃತ್ತಿ, ಮುಂಗೋಪ, ಗೆಲ್ಲುವ ಹಠ, ಸೋಲಿನ ರಿವೇಂಜ್‌, ಸವಾಲಿಗೆ ಪ್ರತಿ ಸವಾಲು, ಜೊತೆಗೆ ಬ್ಯಾಟಿಂಗ್ ಕೌಶಲ್ಯತೆ. ಇದೆಲ್ಲವೂ ಸೇರಿಕೊಂಡಾಗ ಗೌತಮ್ ಗಂಭೀರ್‌ನ ಗಂಭೀರ ಆಟ ಮತ್ತು ವ್ಯಕ್ತಿತ್ವ ಅನಾವರಣಗೊಳ್ಳುತ್ತದೆ.

ಅಂದ ಹಾಗೇ, ಗೌತಮ್ ಗಂಭೀರ್ ಅಂದ ಕ್ಷಣ ತಕ್ಷಣ ನೆನಪಾಗೋದು 2007ರ ಟಿ-20 ವಿಶ್ವಕಪ್ ಫೈನಲ್ ಪಂದ್ಯ. ಪಾಕ್ ವಿರುದ್ಧ ಅಮೋಘ 75 ರನ್‌ ಹಾಗೂ 2011ರ ಏಕದಿನ ವಿಶ್ವಕಪ್‌ನ ಮನಮೋಹಕ 97 ರನ್‌ಗಳ ಆಟ ಇಂದಿಗೂ ಕಣ್ಣ ಮುಂದೆ ಹಾದು ಹೋಗುತ್ತದೆ. ಹಾಗಂತ ಇನ್ನುಳಿದ ಪಂದ್ಯಗಳಲ್ಲೂ ಅದ್ಭುತವಾದ ಪ್ರದರ್ಶನವನ್ನೇ ನೀಡಿದ್ದಾರೆ. ಹಾಗೇ ನೋಡಿದ್ರೆ ಗೌತಮ್ ಗಂಭೀರ್ ಸೆಹ್ವಾಗ್‌ಗಿಂತಲೂ ಹೆಚ್ಚು ಆಕ್ರಮಣಕಾರಿ ಬ್ಯಾಟ್ಸ್‌ಮೆನ್. ಸ್ಥಿರ ಪ್ರದರ್ಶನದ ಜೊತೆಗೆ ತಂಡವನ್ನು ಗೆಲುವಿನ ದಡ ಸೇರಿಸುವುದರಲ್ಲೂ ಗಂಭೀರ್ ನಿಪುಣ ಎಂಬುದರಲ್ಲಿ ಎರಡು ಮಾತಿಲ್ಲ.

2007ರ ಟಿ -20 ವಿಶ್ವಕಪ್‌, 2011ರ ಏಕದಿನ ವಿಶ್ವಕಪ್ ಗೆದ್ದ ತಂಡದಲ್ಲಿ ಪ್ರಮುಖ ಆಟಗಾರನಾಗಿದ್ದ ಗಂಭೀರ್, ನಾಯಕನಾಗಿ ಐಪಿಎಲ್‌ನಲ್ಲಿ ಎರಡು ಬಾರಿ ಕೆಕೆಆರ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ. ಹಾಗೇ 2024ರ ಐಪಿಎಲ್‌ನಲ್ಲಿ ಕೆಕೆಆರ್ ತಂಡದ ಮೆಂಟರ್‌ ಆಗಿ ಮತ್ತೆ ಚಾಂಪಿಯನ್‌ಪಟ್ಟಕ್ಕೇರುವಂತೆ ಮಾಡಿದ್ದಾರೆ. ಸವಾಲನ್ನು ಸ್ವೀಕರಿಸಿ ಗೆಲುವು ಸಾಧಿಸುವ ತನಕ ಗಂಭೀರ್ ಹಠವನ್ನು ಬಿಡುವುದಿಲ್ಲ. ಅದಕ್ಕಾಗಿ ಎಲ್ಲ ತ್ಯಾಗಕ್ಕೂ ಸಿದ್ಧರಿರುತ್ತಾರೆ.

ಹೌದು, ಮನಸ್ಸು ಮಾಡಿದ್ರೆ ಗಂಭೀರ್‌ ಈ ಬಾರಿಯೂ ಬಿಜೆಪಿ ಸಂಸದನಾಗಿ ಸಂಸತ್‌ನಲ್ಲಿರಬಹುದಿತ್ತು. ಆದ್ರೆ ರಾಜಕೀಯ ಏನು ಎಂಬುದು ಗಂಭೀರ್‌ಗೆ ಮನದಟ್ಟು ಆಗಿತ್ತು. 2019ರಲ್ಲಿ ಮೊದಲ ಬಾರಿ ಸಂಸದರಾಗಿದ್ದ ಗಂಭೀರ್ ಈ ಬಾರಿ ರಾಜಕೀಯದಿಂದ ದೂರ ಉಳಿದ್ರು. ರಾಜಕೀಯಕ್ಕಿಂತ ಭಾರತೀಯ ಕ್ರಿಕೆಟ್‌‌ಗೆ ಇನ್ನೂ ಏನಾದ್ರೂ ಕೊಡುಗೆ ನೀಡಬೇಕು. ತನ್ನ ಬದುಕನ್ನು ಅರ್ಥಪೂರ್ಣವಾಗಿಸಿದ್ದ ಭಾರತೀಯ ಕ್ರಿಕೆಟ್ ಆಟವನ್ನು ಇನ್ನಷ್ಟು ಮೇಳೈಸಬೇಕು. ಈ ಸಂಕಲ್ಪದೊಂದಿಗೆ ರಾಜಕೀಯದಿಂದ ಅಂತರ ಕಾಯ್ದುಕೊಂಡ್ರು. ಈ ಕಾರಣದೊಂದಿಗೆ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಸಂಸದನಾಗಿದ್ದುಕೊಂಡೇ ತರಬೇತುದಾರನಾಗಿದ್ದರು. ಬಳಿಕ ಕೆಕೆಆರ್ ತಂಡದ ಮೆಂಟರ್ ಆಗಿ ಯಶ ಕೂಡ ಸಾಧಿಸಿದ್ದರು. ಅಲ್ಲದೆ ಭವಿಷ್ಯದಲ್ಲಿ ಟೀಮ್ ಇಂಡಿಯಾದ ಹೆಡ್ ಕೋಚ್ ಸ್ಥಾನದ ಮೇಲೂ ಕಣ್ಣಿಟ್ಟಿದ್ದರು. ಈ ಕಾರಣಕ್ಕಾಗಿಯೇ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಕೂಡ ಮಾಡಿರಲಿಲ್ಲ.

ಇದೀಗ ಗೌತಮ್ ಗಂಭೀರ್ ಟೀಮ್ ಇಂಡಿಯಾದ ಹೆಡ್ ಕೋಚ್ ಆಗಿ ನೇಮಕಗೊಂಡಿದ್ದಾರೆ. ರಾಹುಲ್ ದ್ರಾವಿಡ್ ಉತ್ತರಾಧಿಕಾರಿಯಾಗಿ ಆಯ್ಕೆ ಆಗಿರುವ ಗಂಭೀರ್ ಮೇಲೆ ಸಾಕಷ್ಟು ಸವಾಲುಗಳಿವೆ. 17 ವರ್ಷಗಳ ಬಳಿಕ ಐಸಿಸಿ ಪ್ರಶಸ್ತಿ ಗೆದ್ದಿರುವ ಟೀಮ್ ಇಂಡಿಯಾದ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಸಾಕಷ್ಟು ಸವಾಲುಗಳಿವೆ. ರೋಹಿತ್‌, ವಿರಾಟ್, ರವೀಂದ್ರ ಜಡೇಜಾ ಈಗಾಗಲೇ ಟಿ-20 ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಏಕದಿನ ಮತ್ತು ಟೆಸ್ಟ್ ಪಂದ್ಯಗಳಲ್ಲಿ ಆಡ್ತಾರೆ ಅಷ್ಟೇ. ಇನ್ನುಳಿದಂತೆ ತಂಡದಲ್ಲಿ ಬಹುತೇಕ ಯುವ ಆಟಗಾರರಿದ್ದಾರೆ. ಹೀಗಾಗಿ ತಂಡದಲ್ಲಿ ಅನುಭವ ಆಟಗಾರರ ಕೊರತೆ ಇದೆ. ಆದ್ರೆ ಯಂಗ್ ಇಂಡಿಯಾಗೆ ಗಂಭೀರ್ ಅವರ ಅನುಭವಗಳನ್ನು ಧಾರೆ ಎರೆದುಕೊಡಬೇಕಾಗುತ್ತದೆ.

ಹಾಗಂತ ಟೀಮ್ ಇಂಡಿಯಾ ಆಟಗಾರರು ಗಂಭೀರ್‌ಗೆ ಪರಿಚಯಸ್ಥರೇ. ಐಪಿಎಲ್‌ನಲ್ಲಿ ಆಡಿದ ಅನುಭವ, ಯುವ ಆಟಗಾರರಿಗೆ ನೀಡಿದ ಮಾರ್ಗದರ್ಶನದ ಪರಿಚಯವಿದೆ. ಹೀಗಾಗಿ ತಂಡವನ್ನು ಒಗ್ಗಟ್ಟಿನಿಂದ ಮುನ್ನಡೆಸುವಂತೆ ಮಾಡುವುದು ಗಂಭೀರ್‌ಗೆ ಕಷ್ಟವೇನು ಅಲ್ಲ. ಹಾಗೇ ಏಕದಿನ ಮತ್ತು ಟೆಸ್ಟ್ ತಂಡದ ನಾಯಕನಾಗಿರುವ ರೋಹಿತ್ ಶರ್ಮಾ ಜತೆ ಉತ್ತಮ ಬಾಂಧವ್ಯ ಹೊಂದಿದ್ರೆ ತಂಡದಲ್ಲಿ ಯಾವುದೇ ತೊಂದರೆಯಾಗುವುದಿಲ್ಲ. ವಿರಾಟ್ ಕೊಹ್ಲಿ ಮುನಿಸನ್ನು ಮನಸ್ಸಲ್ಲಿಟ್ಟುಕೊಳ್ಳಬಾರದು. ನಾಯಕ, ಆಟಗಾರರು ಮತ್ತು ಕೋಚ್‌ ಒಂದೇ ಮನಸ್ಥಿತಿಯಲ್ಲಿ ಮುನ್ನೆಡೆದಾಗ ಮಾತ್ರ ತಂಡದ ಏಳಿಗೆ ಸಾಧ್ಯ ಎಂಬುದನ್ನು ಅರಿತುಕೊಳ್ಳಬೇಕು.

ಇದನ್ನೂ ಓದಿ: Gautam Gambhir: ಭಾರತ ತಂಡಕ್ಕೆ ನೂತನ ಕೋಚ್ ಆಯ್ಕೆ; ಕಾದಿದೆ ಗಂಭೀರ್- ಕೊಹ್ಲಿ ಕೋಳಿ ಜಗಳ? ನೀವೇನಂತೀರಿ?

ಯಾಕಂದ್ರೆ ಈ ಹಿಂದೆ ಟೀಮ್ ಇಂಡಿಯಾದ ಕೋಚ್‌ಗಳಾದ ಜಾನ್ ರೈಟ್‌ ಸಂಯಮದಿಂದಲೇ ತಂಡಕ್ಕೆ ಪಾಠ ಮಾಡಿದ್ದರು. ಗ್ಯಾರಿ ಕಸ್ಟರ್ನ್‌ ಕೂಡ ಅನುಭವ ಧಾರೆಯಿಂದ ಯಶ ಸಾಧಿಸಿದ್ರು. ರವಿಶಾಸ್ತ್ರಿ ಬಿಂದಾಸ್ ಆಗಿದ್ದುಕೊಂಡೇ ತಂಡಕ್ಕೆ ಸ್ಫೂರ್ತಿ ನೀಡಿದ್ದರು. ರಾಹುಲ್ ದ್ರಾವಿಡ್ ತಾಳ್ಮೆಯಿಂದಲೇ ತಂಡಕ್ಕೆ ಹಿತವಚನಗಳನ್ನು ನೀಡಿದ್ದರು. ಇದೀಗ ಆಕ್ರಮಣಕಾರಿ ಮನಸ್ಸಿನ ಗೌತಮ್ ಗಂಭೀರ್ ಆಕ್ರಮಣಕಾರಿ ಪ್ರವೃತ್ತಿಯನ್ನು ತಂಡದ ಆಟಗಾರರಲ್ಲಿ ಬೆಳೆಸುತ್ತಾರಾ ಅನ್ನೋದನ್ನು ಕಾದುನೋಡಬೇಕಿದೆ. ಒಂದಂತೂ ನಿಜ, ಗಂಭೀರ್ ಆಧುನಿಕ ಕ್ರಿಕೆಟ್‌ ಮತ್ತು ಯುವ ಆಟಗಾರರ ಮನಸ್ಥಿತಿಯನ್ನು ಚೆನ್ನಾಗಿ ಅರಿತುಕೊಂಡಿದ್ದಾರೆ ಎಂಬುದು ಸುಳ್ಳಲ್ಲ.

ಒಟ್ಟಿನಲ್ಲಿ ಗೌತಮ್ ಗಂಭೀರ್ ಆಟಗಾರನಾಗಿ ಟೀಮ್ ಇಂಡಿಯಾದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದೀಗ ಕೋಚ್ ಆಗಿ ಭಾರತ ತಂಡವನ್ನು ಮತ್ತೆ ವಿಶ್ವ ಕ್ರಿಕೆಟ್ ನಲ್ಲಿ ರಾರಾಜಿಸುವಂತೆ ಮಾಡುವುದು ಗೌತಮ್ ಗಂಭೀರ್ ಅವರ ಕರ್ತವ್ಯವೂ ಹೌದು.. ಜವಾಬ್ದಾರಿಯೂ ಹೌದು.
ಆಲ್ ದಿ ಬೆಸ್ಟ್ ಗೌತಿ.

Exit mobile version