ರಾಂಚಿ: ಲೋಕಸಭೆ ಚುನಾವಣೆಗೆ (Lok Sabha Election 2024) ಕೆಲವೇ ತಿಂಗಳು ಬಾಕಿ ಇರುವಾಗಲೇ ಜಾರ್ಖಂಡ್‌ನಲ್ಲಿ ಕಾಂಗ್ರೆಸ್‌ಗೆ ಭಾರಿ ಹಿನ್ನಡೆಯಾಗಿದೆ. ರಾಜ್ಯದಲ್ಲಿದ್ದ ಏಕೈಕ ಕಾಂಗ್ರೆಸ್ ಸಂಸದೆ ಗೀತಾ ಕೋಡಾ (Geeta Koda) ಅವರು ಸೋಮವಾರ (ಫೆಬ್ರವರಿ 26) ಬಿಜೆಪಿ ಸೇರ್ಪಡೆಯಾಗಿದ್ದಾರೆ. ಸಿಂಗ್‌ಭೂಮ್ ಕ್ಷೇತ್ರದ ಸಂಸದೆಯಾಗಿರುವ ಇವರು, ರಾಂಚಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಾಬುಲ್ ಮರಾಂಡಿ (Babulal Marandi) ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಇವರು ಮತ್ತೆ ಸಿಂಗ್‌ಭೂಮ್ ಕ್ಷೇತ್ರದಿಂದಲೇ ಸ್ಪರ್ಧಿಸಲಿದ್ದಾರೆ ಎಂದು ತಿಳಿದುಬಂದಿದೆ.
ಗೀತಾ ಕೋಡಾ ಅವರು ಮಾಜಿ ಮುಖ್ಯಮಂತ್ರಿ ಮಧು ಕೋಡಾ ಪುತ್ರಿಯಾಗಿದ್ದಾರೆ. ಬಿಜೆಪಿ ಸೇರ್ಪಡೆಯಾದ ಬಳಿಕ ಮಾತನಾಡಿದ ಅವರು, “ಕಾಂಗ್ರೆಸ್ ದೇಶವನ್ನು ಹಾಳು ಮಾಡುತ್ತಿದೆ. ಕಾಂಗ್ರೆಸ್ ಬರೀ ಓಲೈಕೆಯ ರಾಜಕಾರಣ ಮಾಡುತ್ತಿದೆ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವುದಾಗಿ ಕಾಂಗ್ರೆಸ್ ನಾಯಕರು ಹೇಳುತ್ತಾರೆ. ಆದರೆ, ಒಂದು ಕುಟುಂಬದ ಹೊರತಾಗಿ ಬೇರೆಯವರಿಗೆ ಅಲ್ಲಿ ಆಸ್ಪದ ಇಲ್ಲ. ಹಾಗಾಗಿ, ಕಾಂಗ್ರೆಸ್‌ನಲ್ಲಿ ಇರುವುದು ಒಳ್ಳೆಯದಲ್ಲ ಎಂದು ಭಾವಿಸಿ ಬಿಜೆಪಿ ಸೇರ್ಪಡೆಯಾದೆ” ಎಂದು ತಿಳಿಸಿದ್ದಾರೆ.
#WATCH | Ranchi, Jharkhand | Geeta Koda – Congress MP from Singhbhum and wife of former CM Madhu Koda – joins the BJP in the presence of state BJP chief Babulal Marandi. pic.twitter.com/q1wP0cejdS
— ANI (@ANI) February 26, 2024
ಮೋದಿ ನಾಯಕತ್ವಕ್ಕೆ ಮೆಚ್ಚುಗೆ
ಬಿಜೆಪಿ ಸೇರ್ಪಡೆಯಾದ ಬೆನ್ನಲ್ಲೇ ಗೀತಾ ಕೋಡಾ ಅವರು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಹೊಗಳಿದ್ದಾರೆ. “ನರೇಂದ್ರ ಮೋದಿ ಅವರು ದೇಶಕ್ಕೆ ಅಪಾರವಾದ ಕೊಡುಗೆ ನೀಡುತ್ತಿದ್ದಾರೆ. ಅವರು ಅದ್ಭುತ ನಾಯಕರಾಗಿದ್ದು, ಭಾರತದ ಚಹರೆ ಬದಲಿಸುತ್ತಿದ್ದಾರೆ. ನರೇಂದ್ರ ಮೋದಿ ಅವರ ವಿಕಸಿತ ಭಾರತದ ಕನಸು ನನಸು ಮಾಡಲು ನಾನು ಯಾವ ರೀತಿ ಬೇಕಾದರೂ ಶ್ರಮಿಸಲು, ಕೊಡುಗೆ ನೀಡಲು ಸಿದ್ಧ” ಎಂದು ಗೀತಾ ಕೋಡಾ ಹೇಳಿದರು. ಗೀತಾ ಕೋಡಾ ಅವರು 2019ರಿಂದಲೂ ಜಾರ್ಖಂಡ್‌ನ ಏಕೈಕ ಕಾಂಗ್ರೆಸ್ ಸಂಸದೆಯಾಗಿದ್ದರು.
ಇದನ್ನೂ ಓದಿ: Ashok Chavan: ಕಾಂಗ್ರೆಸ್ ತೊರೆದ ಮಹಾರಾಷ್ಟ್ರ ಮಾಜಿ ಸಿಎಂ ಅಶೋಕ್ ಚವಾಣ್ ಬಿಜೆಪಿ ಸೇರ್ಪಡೆ
ಇಂಡಿಯಾ ಒಕ್ಕೂಟಕ್ಕೆ ಸಾಲು ಸಾಲು ಪೆಟ್ಟು
ಬಿಜೆಪಿಯನ್ನು ಶತಾಯ ಗತಾಯ ಸೋಲಿಸಬೇಕು ಎಂಬ ಧ್ಯೇಯದಿಂದ ಅಸ್ತಿತ್ವಕ್ಕೆ ಬಂದಿರುವ ಇಂಡಿಯಾ ಒಕ್ಕೂಟವು ಲೋಕಸಭೆ ಚುನಾವಣೆಯ ಮೊದಲೇ ಛಿದ್ರ ಛಿದ್ರವಾಗಿದೆ. ಟಿಎಂಸಿಯು ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ತೀರ್ಮಾನಿಸಿದೆ. ಪಂಜಾಬ್‌ನಲ್ಲಿ ಆಪ್ ಕೂಡ ಮೈತ್ರಿ ಇಲ್ಲದೆಯೇ ಸ್ಪರ್ಧಿಸಲು ಮುಂದಾಗಿದೆ. ಇದರ ಬೆನ್ನಲ್ಲೇ, ನಿತೀಶ್ ಕುಮಾರ್ ಅವರು ಕೂಡ ಮೈತ್ರಿಕೂಟಕ್ಕೆ ವಿದಾಯ ಹೇಳಿರುವುದು ಒಕ್ಕೂಟದ ಒಗ್ಗಟ್ಟಿಗೆ ಭಾರಿ ಪೆಟ್ಟು ಬಿದ್ದಂತಾಗಿದೆ. ಅದರಲ್ಲೂ, ನಿತೀಶ್ ಕುಮಾರ್ ಅವರ ವಿದಾಯವು ಇಂಡಿಯಾ ಒಕ್ಕೂಟಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲ, ಜಮ್ಮು-ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಕೂಡ ಸ್ವತಂತ್ರವಾಗಿ ಸ್ಪರ್ಧಿಸಲು ಮುಂದಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ