ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಬುಧವಾರ (ಮೇ 22) ನಡೆದ ಐಪಿಎಲ್ 2024 (IPL 2024) ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಸೋಲುಕಂಡಿತು. ಇದರೊಂದಿಗೆ ಆರ್ಸಿಬಿಯ ಅಭಿಯಾನ ಕೊನೆಗೊಂಡಿತು. ಸೋಲಿನ ನಡುವೆಯೂ ಹೆಚ್ಚು ಚರ್ಚೆಗೆ ಒಳಗಾಗಿದ್ದು ಐಪಿಎಲ್ 2024 ರಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ (Glenn Maxwell) ಅವರ ಕೆಟ್ಟ ಅಭಿಯಾನ.
ಆರ್‌ಸಿಬಿ ತನ್ನ ಹಿಂದಿನ ಲೀಗ್ ಹಂತದ ಆರು ಪಂದ್ಯಗಳಲ್ಲಿ ಮೇಲುಗೈ ಸಾಧಿಸಿದ ನಂತರ ಎಲಿಮಿನೇಟರ್‌ನಲ್ಲಿ ಗೆಲ್ಲುವ ನೆಚ್ಚಿನ ತಂಡವಾಗಿತ್ತು. ಮತ್ತೊಂದೆಡೆ, ರಾಜಸ್ಥಾನ್ ತನ್ನ ಹಿಂದಿನ ನಾಲ್ಕು ಪಂದ್ಯಗಳನ್ನು ಕಳೆದುಕೊಂಡಿತ್ತು. ಮೇ ತಿಂಗಳಲ್ಲಿ ಒಂದೇ ಒಂದು ಪಂದ್ಯವನ್ನು ಗೆದ್ದಿರಲಿಲ್ಲ. ಹೀಗಾಗಿ ಆರ್‌ಸಿಬಿ ಫೇವರಿಟ್ ಆಗಿತ್ತು. ಆದಾಗ್ಯೂ, ಸಂಜು ಸ್ಯಾಮ್ಸನ್ ನೇತೃತ್ವದ ಆರ್‌ಸಿಬಿಯನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಿ ಎರಡನೇ ಕ್ವಾಲಿಫೈಯರ್‌ನಲ್ಲಿ ತಮ್ಮ ಸ್ಥಾನ ಕಾಯ್ದಿರಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 172 ರನ್ ಗಳಿಸಿತು. ಆರ್‌ಸಿಬಿ ಬ್ಯಾಟರ್‌ಗಳು ಉತ್ತಮ ಆರಂಭ ಪಡೆದರೂ ಅವರಲ್ಲಿ ಯಾರೂ ದೊಡ್ಡ ಸ್ಕೋರ್ ಆಗಿ ಪರಿವರ್ತಿಸಲಿಲ್ಲ. ರಜತ್ ಪಾಟಿದಾರ್ 34 ರನ್ ಗಳಿಸಿದ್ದೇ ಗರಿಷ್ಠ. ಉತ್ತರವಾಗಿ, ಆರ್‌ಆರ್ 19 ಓವರ್‌ಗಳಲ್ಲಿ ಮೊತ್ತವನ್ನು ಬೆನ್ನಟ್ಟಿ ಎರಡನೇ ಕ್ವಾಲಿಫೈಯರ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ನೊಂದಿಗಿನ ಹಣಾಹಣಿಯನ್ನು ನಿಕ್ಕಿ ಮಾಡಿಕೊಂಡಿತು.
ಆರ್‌ಸಿಬಿ ತಂಡ ತಮ್ಮ ಅಭಿಯಾನವನ್ನು ಪರಿವರ್ತಿಸಿದ ರೀತಿ ಮತ್ತು ಎಲ್ಲಾ ಅಡೆತಡೆಗಳನ್ನು ಮೀರಿ ಪ್ಲೇಆಫ್‌ಗೆ ಅರ್ಹತೆ ಗಳಿಸಿದ್ದಕ್ಕಾಗಿ ಹಲವಾರು ಕಡೆಗಳಿಂದ ಪ್ರಶಂಸೆ ಪಡೆಯುತ್ತಿದ್ದರೆ, ಗ್ಲೆನ್ ಮ್ಯಾಕ್ಸ್‌ವೆಲ್ ಎಲ್ಲೆಡೆಯಿಂದ ತೀವ್ರ ಟೀಕೆ ಎದುರಿಸುತ್ತಿದ್ದಾರೆ. ಅವರಿಗೆ ಕೊಟ್ಟಿರುವ ಕೋಟ್ಯಂತರ ರೂಪಾಯಿ ವಾಪಸ್ ಪಡೆಯಿರಿ ಎಂಬುದಾಗಿ ಒತ್ತಾಯ ಕೇಳಿ ಬಂದಿದೆ.
ಎಲಿಮಿನೇಟರ್‌ನಲ್ಲಿ ಆರ್‌ಆರ್ ವಿರುದ್ಧ ಉತ್ತಮ ಪ್ರದರ್ಶನ ನೀಡುವ ಮೂಲಕ ಆಸ್ಟ್ರೇಲಿಯನ್ ಆಟಗಾರನಿಗೆ ತನ್ನನ್ನು ಸಮರ್ಥಿಸಿಕೊಳ್ಳುವ ಅವಕಾಶ ಇತ್ತು. ಆದರೆ ಅವರು ಗೋಲ್ಡನ್ ಡಕ್ ಆಗುವ ಮೂಲಕ ಮತ್ತೊಂದು ಬಾರಿ ಬೇಜವಾಬ್ದಾರಿ ಆಟವಾಡಿದರು. ಈ ವಿರುದ್ಧದ ವೈಫಲ್ಯವು ಐಪಿಎಲ್ 2024ರಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಮರೆಯಲಾಗದ ಅಭಿಯಾನನವಾಗಿದೆ. ಈ ಋತುವಿನ 10 ಪಂದ್ಯಗಳಲ್ಲಿ ಆಸ್ಟ್ರೇಲಿಯಾದ ಆಲ್‌ರೌಂಡರ್ 28 ರ ಗರಿಷ್ಠ ಸ್ಕೋರ್‌ನೊಂದಿಗೆ ಕೇವಲ 52 ರನ್ ಗಳಿಸಿದ್ದಾರೆ. ಅವರು ನಾಲ್ಕು ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ.
ಮನೋಜ್ ತಿವಾರಿ ವಾಗ್ದಾಳಿ
ಗ್ಲೆನ್ ಮ್ಯಾಕ್ಸ್‌ವೆಲ್ ಆರ್‌ಆರ್ ವಿರುದ್ಧ ಭಾರತದ ಮಾಜಿ ಬ್ಯಾಟ್ಸ್‌ಮನ್ ಮನೋಜ್ ತಿವಾರಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ಋತುವಿನಲ್ಲಿ ಮ್ಯಾಕ್ಸ್‌ವೆಲ್ ಅವರ ಪ್ರದರ್ಶನವನ್ನು ತಿವಾರಿ ತೀವ್ರವಾಗಿ ಟೀಕಿಸಿದ್ದಲ್ಲದೆ, ಫ್ರಾಂಚೈಸಿಗೆ ಅವರ ಬದ್ಧತೆ ಏನೆಂದು ಪ್ರಶ್ನಿಸಿದ್ದಾರೆ.
ಮ್ಯಾಕ್ಸ್‌ವೆಲ್ ಆಸ್ಟ್ರೇಲಿಯಾ ಪರ ಉತ್ತಮ ಪ್ರದರ್ಶನ ನೀಡುತ್ತಿದ್ದರೂ, ಆರ್‌ಸಿಬಿಗೆ ಅದೇ ಪ್ರದರ್ಶನವನ್ನು ಪುನರಾವರ್ತಿಸುವುದಿಲ್ಲ ಯಾಕೆ ಎಂದು ತಿವಾರಿ ಪ್ರಶ್ನಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಿಮಗೆ ತುಂಬಾ ಅನುಭವವಿದೆ. ನೀವು ಆಸ್ಟ್ರೇಲಿಯಾ ಪರ ಆಡಿದಾಗ ನೀವು ತುಂಬಾ ಉತ್ತಮ ಪ್ರದರ್ಶನ ನೀಡುತ್ತೀರಿ. ಆದರೆ ನೀವು ಐಪಿಎಲ್‌ಗೆ ಬಂದ ತಕ್ಷಣ ಏನಾಗುತ್ತೋ ಗೊತ್ತಿಲ್ಲ. ಅವರಿಗೆ ಆಸಕ್ತಿಯಿರುವುದಿಲ್ಲ ಎಂದು ತಿವಾರಿ ಹೇಳಿದ್ದಾರೆ.
ಮ್ಯಾಕ್ಸ್‌ವೆಲ್ ಆಡದಿದ್ದರೂ ಪರ್ವಾಗಿಲ್ಲ. ಅವರ ಬ್ಯಾಂಕ್ ಬ್ಯಾಲೆನ್ಸ್ ಚೆನ್ನಾಗಿದೆ. ಚೆಕ್ ಅವರಿಗೆ ತಲುಪುತ್ತದೆ. ಅವರು ರಾತ್ರಿಯಲ್ಲಿ ಗೆಟ್-ಟುಗೆದರ್ ಮಾಡುತ್ತಾರೆ. ನಗುತ್ತಾರೆ ಮತ್ತು ಫೋಟೋಗಳನ್ನು ಕ್ಲಿಕ್ ಮಾಡಿಸಿಕೊಳ್ಳುತ್ತಾರೆ ಎಂದು ತಿವಾರಿ ಕ್ರಿಕ್‌ಬಜ್‌ಗೆ ಮಾತನಾಡುತ್ತಾ ಆರೋಪಿಸಿದ್ದಾರೆ.
ಇದನ್ನೂ ಓದಿ: IPL 2024: ಮುಂದಿನ ಆವೃತ್ತಿಯಲ್ಲಿ ಕೊಹ್ಲಿ ಈ ಫ್ರಾಂಚೈಸಿ ಪರ ಆಡಿದರೆ ಉತ್ತಮ ಎಂದ ಆರ್‌ಸಿಬಿ ಮಾಜಿ ನಾಯಕ
ಆರ್‌ಸಿಬಿ ಆರಂಭದಲ್ಲಿ ಉತ್ತಮವಾಗಿ ಪ್ರದರ್ಶನ ನೀಡದೇ ಹೋದಾಗ ನಾವು ಇಲ್ಲಿ ಕುಳಿತು ವಿಶ್ಲೇಷಿಸುತ್ತಿದ್ದೆವು. ಆದರೆ, ಕೊನೆಯಲ್ಲಿ, ಅವರು ಆರು ಗೆಲುವ ಕಂಡರು. ಅದಕ್ಕಾಗಿ ಅವರು ಸಂತೋಷಪಡಬಹುದು. ಆದರೂ ಅಂತಿಮ ಫಲಿತಾಂಶವು ಟ್ರೋಫಿಯಾಗಿರುತ್ತದೆ. ಹೀಗಾಗಿ ತಂಡದಲ್ಲಿ ಸಮಸ್ಯೆ ಇದೆ, ”ಎಂದು ತಿವಾರಿ ಹೇಳಿದ್ದಾರೆ.
ಮ್ಯಾಕ್ಸ್‌ವೆಲ್ ಮುಂಬರುವ ಟಿ20 ವಿಶ್ವಕಪ್ 2024ರಲ್ಲಿ ಆಸ್ಟ್ರೇಲಿಯಾ ತಂಡದ ಪರವಾಗಿ ಕಾಣಿಸಿಕೊಳ್ಳಲಿದ್ದಾರೆ. ಅಲ್ಲಿ ಅವರು ಹೇಗೆ ಪ್ರದರ್ಶನ ನೀಡುತ್ತಾರೆ ಎಂದು ಕಾದು ನೋಡಬೇಕು.