ನವ ದೆಹಲಿ: ಬೆಂಗಳೂರಿನಲ್ಲಿ 24 ಕ್ಯಾರಟ್‌ನ ಪ್ರತಿ 10 ಗ್ರಾಮ್ ಬಂಗಾರದ ದರ ಶುಕ್ರವಾರ 55,580 ರೂ. ಇತ್ತು. ಮಧ್ಯಾಹದ ವೇಳೆಗೆ ಬೆಲೆಯಲ್ಲಿ 430 ರೂ. ಇಳಿದಿದ್ದರೂ, ಇತ್ತೀಚಿನ ಟ್ರೆಂಡ್ ಪ್ರಕಾರ ಏರುಗತಿಯಲ್ಲಿದೆ. ಮಾತ್ರವಲ್ಲದೆ ಹಲವು ತಜ್ಞರುಗಳ ಪ್ರಕಾರ 2023ರಲ್ಲಿ ಬಂಗಾರದ ದರ 61,000 ರೂ.ಗೆ ಏರಿಕೆಯಾಗುವ ನಿರೀಕ್ಷೆ ಇದೆ. ಅಂದರೆ ಈವತ್ತಿನ ದರಕ್ಕೆ ಹೋಲಿಸಿದರೆ 5,420 ರೂ.ಗಳ ಏರಿಕೆ ಆಗಬಹುದು. (Gold price) ಹೀಗಿದ್ದರೂ, ಚಿನ್ನದ ದರದ ಮುನ್ನೋಟವನ್ನು ಖಚಿತವಾಗಿ ಹೇಳಲು ಅಸಾಧ್ಯ. ದರಗಳಲ್ಲಿ ವ್ಯತ್ಯಾಸ ಸಹಜ.
ಕಳೆದ 2022 ಚಿನ್ನದ ಹೂಡಿಕೆದಾರರಿಗೆ ಅಂಥ ಉತ್ತಜನಾತ್ಮಕ ವರ್ಷ ಆಗಿರಲಿಲ್ಲ. 2022ರ ಮಾರ್ಚ್‌ನಲ್ಲಿ ಚಿನ್ನದ ದರ ಪ್ರತಿ ಔನ್ಸಿಗೆ 2,000 ಡಾಲರ್ ಮಟ್ಟಕ್ಕೆ ಏರಿದ್ದರೂ, ಹಣದುಬ್ಬರ ಇದ್ದರೂ, ಬಂಗಾರದ ದರ ಬಳಿಕ ಇಳಿದಿತ್ತು. ಹೀಗಿದ್ದರೂ, ಕಳೆದ ಕೆಲವು ತಿಂಗಳುಗಳಿಂದ ದರ ಏರುಗತಿಯಲ್ಲಿದೆ. ಜತೆಗೆ 2023ರಲ್ಲಿ ಏರುಗತಿ ದಾಖಲಾದರೆ ಹೂಡಿಕೆದಾರರಿಗೆ ಲಾಭದಾಯಕವಾಗಲಿದೆ.
ಎಲ್‌ಬಿಎಂಎ ವರದಿಯ ಪ್ರಕಾರ ಚಿನ್ನದ ದರ ಪ್ರತಿ ಔನ್ಸಿಗೆ 1800 ಡಾಲರ್ ಆಸುಪಾಸಿನಲ್ಲಿದೆ. 2022ರ ಮಧ್ಯಭಾಗದಲ್ಲಿ 1615 ಡಾಲರ್ ಇತ್ತು.
ಅಮೆರಿಕದಲ್ಲಿ 1973ರಿಂದೀಚೆಗೆ 7 ಸಲ ಆರ್ಥಿಕ ಹಿಂಜರಿತ ಉಂಟಾಗಿದೆ. ಆಗ 5 ಸಲ ಬಂಗಾರದ ದರ ಏರಿಕೆಯಾಗಿತ್ತು. ಹಿಂಜರಿತದ ವೇಳೆ ಬಂಗಾರ ಬೇಡಿಕೆ ಗಳಿಸುತ್ತದೆ ಎಂಬುದನ್ನು ಇದು ಬಿಂಬಿಸಿದೆ. 2023ರಲ್ಲಿ ಅಮೆರಿಕದಲ್ಲಿ ಮತ್ತೆ ಆರ್ಥಿಕ ಹಿಂಜರಿತ ನಿರೀಕ್ಷಿಸಲಾಗಿದೆ.